Thursday, October 15, 2009

ಹೊಣೆಗಾರಿಕೆ

ಮೊನ್ನೆ ಹೀಗೇ ನನ್ನ ಪರ್ಸನಲ್ ಮೇಲ್ ಬಾಕ್ಸ್ ನಲ್ಲಿ ಏನೋ ಹುಡುಕುತ್ತಿದ್ದಾಗ ನನಗೆ ಸ್ನೇಹಿತರೊಬ್ಬರು ತುಂಬಾ ಹಿಂದೆ ಕಳಿಸಿದ್ದ ಈ-ಮೇಲ್ ಒಂದು ಕಣ್ಣಿಗೆ ಬಿತ್ತು. ಪರಮಹಂಸ ಶ್ರೀ ನಿತ್ಯಾನಂದ ಎಂಬ ಮಹನೀಯರೊಬ್ಬರು ಬರೆದ ಒಂದು ಚಿಕ್ಕ ಲೇಖನ ಅದರಲ್ಲಿತ್ತು. ಅದು ಜುಲೈ 13, 2006 ರ ಎಕನಾಮಿಕ್ ಟೈಮ್ಸ್ ನ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿತ್ತಂತೆ. ಒಬ್ಬ ವ್ಯಕ್ತಿ ಜೀವನದ ಯಾವುದೇ ರಂಗದಲ್ಲಿ ಬೆಳೆಯಲು ಮೂಲಭೂತವಾದ ಮತ್ತು ಅತಿ ಅಗತ್ಯವಾದ ಅಂಶಗಳಲ್ಲಿ ನಾವು ಮಾಡುವ ಪ್ರತಿ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನಾವೇ ಹೊರುವುದು ಎಷ್ಟು ಮುಖ್ಯ ಎಂದು ಅದರಲ್ಲಿ ಅವರು ತುಂಬಾ ಚೆನ್ನಾಗಿ ವಿವರಿಸಿದ್ದರು. ಅದರಲ್ಲಿನ ಕೆಲವು ಅಣಿಮುತ್ತುಗಳು, ಇಲ್ಲಿ ನಿಮ್ಮೆಲ್ಲರಿಗಾಗಿ:

1) Responsibility is consciousness.

2) When you work with no feelings of responsibility, you will work and feel like a slave. When you work with responsibility, your capacity will expand and you will flower and radiate energy.

3) When you take up responsibility for the entire cosmos, you will expand and look like a leader!

ಹೌದಲ್ವಾ! ದಿನ ನಿತ್ಯ ನಾವು ಎಷ್ಟೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಾಗಲಿ, ಕೆಲಸದ ಮೇಲಿರಲಿ, ನಮ್ಮನ್ನು ನಂಬಿ ನಮ್ಮ ಮೇಲೆ ಒಂದಿಲ್ಲೊಂದು ಕೆಲಸವನ್ನು ವಹಿಸಿರುತ್ತಾರೆ. ಆ ಕೆಲಸವನ್ನು ನಾವು ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ; ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕೆಲಸ ಮುಗಿಸಿ ಕೈ ತೊಳೆದುಕೊಳ್ಳಲಾಗುವುದಿಲ್ಲ. ನಂತರದ ಎಲ್ಲ ಪರಿಣಾಮಗಳಿಗೂ ನಾವೇ ಹೊಣೆಗಾರರಾಗಿರಬೇಕಾಗುತ್ತದೆ. ಈ ಹೊಣೆಗಾರಿಕೆಯನ್ನೇ ನಾವು ಅಕೌಂಟಬಿಲಿಟೀ, ಉತ್ತರದಾಯಿತ್ವ ಅನ್ನೋದು. ಶ್ರೀ ನಿತ್ಯಾನಂದರು ಹೇಳಿದಂತೆ, ಜವಾಬ್ದಾರಿ ಇಲ್ಲದೇ ಕೆಲಸ ಮಾಡಿದರೆ ನಾವು ಗುಲಾಮರಂತಾಗುತ್ತೇವೆ. ಅದೇ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಉಳಿದವರಿಗೆ ಮಾದರಿಯಾಗುವ ನಾಯಕರಾಗುತ್ತೇವೆ.


ಜೀವನದಲ್ಲಿ ಬೆಳೆಯಬೇಕೆಂದರೆ ಸ್ವಲ್ಪ ಮಟ್ಟಿಗಿನ ಕ್ಯಾಲ್ಕ್ಯುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ. ನಮ್ಮ ಸ್ವಯಂ ಶಕ್ತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದರೆ ಮಾತ್ರ ಆ ತರಹದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ. ಆದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದೇ, ಯಾವುದೇ ಕೆಲಸದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಳ್ಳದೇ ಕೆಲಸ ಮಾಡುವುದು ಗುಲಾಮಗಿರಿಯಲ್ಲದೇ ಬೇರೇನಲ್ಲ. ನಾವು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದನ್ನು ಸಮರ್ಪಕವಾಗಿ ಮಾಡಿ ಮುಗಿಸಿದಾಗ ಅದರಿಂದ ಒಳ್ಳೆಯದೇ ಆಗಬಹುದು, ಅಥವಾ ಕೆಟ್ಟದ್ದೂ ಆಗಬಹುದು. ಒಳ್ಳೆಯದಾದ್ರೆ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಲು ಸ್ಪೂರ್ತಿ ಸಿಗುತ್ತದೆ ಮತ್ತು ನಮ್ಮ ಆತ್ಮ ವಿಶ್ವಾಸ (ಸೆಲ್ಫ್ ಕಾನ್ಫಿಡೆನ್ಸ್) ಹೆಚ್ಚುತ್ತದೆ. ಒಂದು ವೇಳೆ ಕೆಲಸದ ಪರಿಣಾಮ ಅನಿರೀಕ್ಷಿತವಾಗಿ ಕೆಟ್ಟದ್ದಾದರೆ ನಾವು ಒಂದು ಹೊಸ ಪಾಠ ಕಲಿತಂತಾಗುತ್ತದೆ. ಮುಂದಿನ ಸಲ ಯಾವುದೇ ಕೆಲಸ ಮಾಡುವಾಗ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ. ಹೊಣೆಗಾರಿಕೆಯೇ ಇಲ್ಲದೇ ಕೆಲಸ ಮಾಡಿದಾಗ 'ಕೆಲಸ ಮಾಡಿ ಪ್ರತಿಫಲ ಪಡೆದೆ' ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲಾಗುವುದಿಲ್ಲ. ಕಡೇತನಕ ಬೇರೆಯವರು ಹೇಳುವ ಕೆಲಸವನ್ನೇ ಮಾಡುತ್ತಾ "ನೀ ಹೇಳಿದೆ, ಅದಕ್ಕೆ ನಾ ಮಾಡಿದೆ" ಎಂಬ ಉಡಾಫೆ ಪ್ರವೃತ್ತಿ ಮೈಗೂಡುತ್ತದೆ.

ಜವಾಬ್ದಾರಿ ಬಂದಾಗ ನಿಭಾಯಿಸುವುದು ಬೇರೆ, ನಾವೇ ಜವಾಬ್ದಾರಿ ಹೊರಲು ಮುಂದಾಗುವುದು ಬೇರೆ. ಜೀವನದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ. ಜವಾಬ್ದಾರಿ ಹೊರಲು ಸಿದ್ಧನಿರದವನು ಅದು ತಾನಾಗೇ ಬಂದಾಗಲೂ ಒಂದಿಲ್ಲೊಂದು ಕಾರಣ ಹೇಳಿ ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸ್ತಾನೆ. ಹಾಗಾದಾಗ, ಆ ವ್ಯಕ್ತಿಯ ಜೀವನ ನಿಂತ ನೀರಾಗುತ್ತದೆ. ಹಳೆಯ ಸೋಲನ್ನೆಲ್ಲ ಮರೆತು, ಸಾಧ್ಯವಾದರೆ ಅವುಗಳಿಂದ ಸ್ವಲ್ಪ ಪಾಠವನ್ನೂ ಕಲಿತು, ಮೈಗೊಡವಿ ಎದ್ದು ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧನಾಗುವವನಿಗೆ ಒಂದಿಲ್ಲೊಂದು ಅವಕಾಶ ಹುಡುಕಿಕೊಂಡು ಬರುತ್ತದೆ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತುಂಬಾ ಅಗತ್ಯ ಕೂಡ.

ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ - ನಾವು ಮಾಡುವ ಕೆಲಸದ ಸಂಪೂರ್ಣ ಜವಾಬ್ದಾರಿ ಹೊರಲು ಸಿದ್ಧರಾದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಹೊಣೆಗಾರಿಕೆಯಿಂದ ಮಾಡುವ ಒಂದು ಪುಟ್ಟ ಕೆಲಸವು ನೀಡುವ ತೃಪ್ತಿ, ಆತ್ಮ ಸಂತೋಷವನ್ನು ಹೊಣೆಗಾರಿಕೆಯಿಲ್ಲದೇ ಮಾಡುವ ಎಷ್ಟೇ ದೊಡ್ಡ ಮತ್ತು ಎಷ್ಟೇ ದುಡ್ಡು ತಂದು ಕೊಡುವ ಯಾವ ಗುಲಾಮಗಿರಿ ಕೆಲಸವೂ ಕೊಡಲ್ಲ, ಅಲ್ವಾ?

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


ತಮಗೆ ಮತ್ತು ತಮ್ಮ ಕುಟುಂಬವರ್ಗದವರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಗಳ ಹಬ್ಬ ನಮ್ಮೆಲ್ಲರ ಬಾಳಿನಲ್ಲಿ ಇಂತಹ ಅನಂತ ದಿವ್ಯಜ್ಞಾನದ ಜ್ಯೋತಿಗಳನ್ನು ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.

Tuesday, September 1, 2009

ಕಟು ಸತ್ಯ

'
ನನ್ನ ಮೊಟ್ಟಮೊದಲ ಬ್ಲಾಗ್ ಪೋಸ್ಟ್ ನಲ್ಲಿ ತಮಿಳರ ಭಾಷಾ ದುರಭಿಮಾನ ಮತ್ತು ಬೆಂಗಳೂರಿನ ಬಗ್ಗೆ ಬರೆದಿದ್ದೆ. ಬೆಂಗಳೂರಿನಲ್ಲಿ ತಮಿಳರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ಸ್ವಂತ ಅನುಭವವೊಂದನ್ನು ಆಧಾರವಾಗಿಟ್ಟುಕೊಂಡು ಆ ಪುಟ್ಟ ಲೇಖನದಲ್ಲಿ ಹೇಳಿದ್ದೆ. ಆ ಕಟು ಸತ್ಯವನ್ನು ಪುಷ್ಟೀಕರಿಸುವಂತಹ ಈ-ಮೈಲ್ ಫಾರ್ವರ್ಡ್ ಒಂದು ನಿನ್ನೆ ಸ್ನೇಹಿತನೊಬ್ಬನಿಂದ ಬಂತು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಒದಗಿರುವ ದುಸ್ಥಿತಿಯನ್ನು ಬಿಂಬಿಸುವ ಈ ಚಿತ್ರವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

'ಈ ಕಾರ್ಟೂನ್ ಚಿತ್ರಿಸಿದ ರಾಮಧ್ಯಾನಿ ಅವರಿಗೆ ಧನ್ಯವಾದಗಳು.

Tuesday, August 25, 2009

ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.
ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.

ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.

ಚಿತ್ರಕೃಪೆ: ಅಂತರ್ಜಾಲ

ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Monday, August 10, 2009

ಲಾಲ್‌ಬಾಗ್ ಸುಂದರಿಯರು...

'
ಲಾಲ್‌ಬಾಗ್ ಉದ್ಯಾನವನದಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಕಳೆದ ಶನಿವಾರದಂದು ಕಂಡ ಕೆಲವು ಬೆಡಗಿಯರು...

ಹೂವು, ಚೆಲುವೆಲ್ಲಾ ತಂದೆಂದಿತು...





ಹೂವೇ ಹೂವೇ...



"ನೀವು ಬರ್ತೀರಿ ಅಂತ ನಂಗೆ ಎಷ್ಟೊಂದು ಅಲಂಕಾರ ಮಾಡಿದಾರೆ ನೋಡಿ..."


"ನಮ್ದೂ ಫೋಟೋ ತೆಗೀರೀ..."

ನನ್ನ ಚೆಲುವಿಗಾರು ಸಾಟಿ...


"ಏಕೋ ಕಾಣೆ, ನಂಗೆ ನಾಚ್ಕೆ ಆಗುತ್ತೆ..."

"ಕೆಂಪುತೋಟದ ಕಂದಮ್ಮಗಳು ನಾವು..."




ಹೂವಿನ ಬಾಣದಂತೆ...



"ನನ್ನ ಹೆಸರಷ್ಟೇ ಡೈನೋಸಾರ್.. ಮೈತುಂಬಾ ಹೂಗಳೇ... "



ಹೂವೊಂದು, ಬಳಿ ಬಂದು, ಸೋಕಿತು ನನ್ನೆದೆಯಾ...


ಬರೀ ಇಷ್ಟೇನಾ ಅನ್ಬೇಡಿ... ಇನ್ನೂ ತುಂಬಾ ಇವೆ. ಎಲ್ಲಾ ಇಲ್ಲೇ ನೋಡಿಬಿಟ್ರೆ ಹ್ಯಾಗೇ :) ... ಲಾಲ್‌ಬಾಗ್ ಪುಷ್ಪೋತ್ಸವ ಆಗಸ್ಟ್ 15, ಸ್ವಾತಂತ್ರೋತ್ಸವದ ದಿನದವರೆಗೆ ನಡೆಯುತ್ತದೆ. ಒಂದ್ಸಲ ಹೋಗಿ ನೋಡ್ಕೊಂಡು ಬನ್ನಿ.
'
ಪ್ರೀತಿಯಿಂದ,
'

Wednesday, August 5, 2009

ಸಾರೀ ಪುಟ್ಟೀ, ನೆಕ್ಸ್ಟ್ ಟೈಮ್ ಮಿಸ್ ಮಾಡ್ಕೋಳಲ್ಲ...

'


ಇವತ್ತು ರಕ್ಷಾಬಂಧನ; ನನ್ನ ತಂಗಿ ನಾವು ಮೂರು ಜನ ಅಣ್ಣಂದಿರಿಗೆ ರಾಖಿ ಕಟ್ಟಲು ಊರಲ್ಲಿ ನಮ್ಮ ಮನೆ, ಅಂದ್ರೆ ತನ್ನ ತವರು ಮನೆಗೆ ಬಂದಿರ್ತಾಳೆ. ಆದರೆ ನಾನೊಬ್ಬ ನತದೃಷ್ಟ ಅಣ್ಣ ಮಾತ್ರ ಇಲ್ಲಿ ಬೆಂಗಳೂರೆಂಬ ಕರ್ಮಭೂಮಿಯಲ್ಲಿ ಕೆಲಸದ ಬಂಧಿಯಾಗಿ ಕುಳಿತಿದ್ದೇನೆ. "ಅಣ್ಣಾ ಪ್ಲೀಸ್, ಅವತ್ತೊಂದಿನ ಊರಿಗೆ ಬಂದ್ ಹೋಗೋ, ನಿಂಗೂ ರಾಖಿ ಕಟ್ಟತೇನೀ..." ಅಂತ ತಂಗಿ ಒಂದು ವಾರ ಮುಂಚೇನೇ ಕರೆದಿದ್ರೂ, ಹೋಗಬೇಕೆನ್ನೋ ಮಹದಾಸೆ ನಂಗೂ ಇದ್ರೂ ಹೋಗಲಾಗದ ಅಸಹಾಯಕತೆ ನನ್ನದು. ಊರಲ್ಲಿರುವ ನನ್ನಿಬ್ಬರು ಸಹೋದರರೇ ಅದೃಷ್ಟವಂತರು ಅನ್ಸುತ್ತೆ. ಇರುವ ಒಬ್ಬಳು ತಂಗಿ ಕೈಯಿಂದ ರಾಖಿ ಕಟ್ಟಿಸಿಕೊಂಡು, ತಂಗಿಯ ಶುಭಾಶೀರ್ವಾದ ಪಡೆಯುವ ಅವಕಾಶಾನ ನಾನೊಬ್ಬ ಮಾತ್ರ ಮಿಸ್ ಮಾಡ್ಕೋತಿದೀನಿ. ಆದರೆ ತಂಗಿ ಕೋರಿಯರ್ ನಲ್ಲಿ ಕಳಿಸಿದ ರಾಖಿಯನ್ನೇ ಕಣ್ಣಿಗೊತ್ತಿಕೊಂಡು ನಾನೇ ಸ್ವತಃ ಕಟ್ಟಿಕೊಂಡು ಅಷ್ಟಕ್ಕೇ ತೃಪ್ತಿಪಟ್ಟುಕೊಂಡು ಕುಳಿತಿದ್ದೇನೆ. ಸಾರೀ ತಂಗ್ಯವ್ವ, ನಾನು ಈ ವರ್ಷ ನಿನ್ನ ಕೈಯ್ಯಾರೇ ರಾಖಿಯಂತೂ ಕಟ್ಟಿಸ್ಕೊಳ್ಳೋಕಾಗ್ತಿಲ್ಲ. ಆದರೆ ನಿನ್ನ ಶುಭಾಶೀರ್ವಾದ, ಹಾರೈಕೆಗಳು ನನ್ನೊಂದಿಗೆ ಸದಾ ಇರ್ತವೆ ಅಂತ ಭಾವಿಸ್ತೀನಿ.

ಹುಟ್ಟಿದ ಊರು ಬಿಟ್ಟು ಬೆಂಗಳೂರಿನಲ್ಲಿ ಇದ್ದು ಕಳೆದುಕೊಳ್ಳುತ್ತಿರುವ ಸೌಭಾಗ್ಯಗಳಲ್ಲಿ ಇದೂ ಒಂದು. ಊರಲ್ಲಿದ್ದಾಗ ಕಳೆದ ರಕ್ಷಾಬಂಧನದ ದಿನಗಳ ಮೆಲುಕೇ ಈ ದಿನ ನನ್ನ ಸಂಗಾತಿ. ಚಿಕ್ಕವಳಿದ್ದಾಗ ತಂಗಿ, "ನನಗ ಅಂಗಡಿಗೆ ಹೋಗಿ ರಾಖಿ ತರಾಕ ಗೊತ್ತಾಗುದಿಲ್ಲ, ನೀವsss ತಂದು ಕೊಟ್ರ ರಾಖಿ ಕಟ್ಟತೇನಪಾ" ಅಂತ ಮುಗ್ಧವಾಗಿ ಹೇಳಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸ್ತಿದ್ಲು. "ನಾವsss ರಾಖಿ ತಂದು ಕೊಟ್ಟು ಕಟ್ಟಸ್ಕೊಂಡು ನಿನಗ ಗಿಫ್ಟ್ ಕೊಡಬೇಕೇನವಾ, ಹೋಗೋಗ್.." ಅಂತ ನಾವು ಅಣ್ಣಂದಿರು ಅವಳಿಗೆ ಗೋಳು ಹುಯ್ಕೋತಿದ್ವಿ. ರಾಖಿ ಮತ್ತು ಪೇಢಾ ತಂದುಕೊಟ್ಟು, ನಾವು ಮೂರೂ ಜನ ಅಣ್ಣಂದಿರು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟುಕೊಂಡು ತಂಗಿ ಕೈಯಲ್ಲಿ ರಾಖಿ ಕಟ್ಟೀಸ್ಕೊಳ್ಳೋಕೆ ಸಾಲಾಗಿ ಮಣೆ ಹಾಕಿಕೊಂಡು ಕೂಡ್ತಿದ್ವಿ. ತಂಗಿ ಬಂದು ನಮ್ಮೆಲ್ಲರ ಹಣೆಗೆ ವಿಭೂತಿ ಪಟ್ಟಿ ಬಳಿದು, ಆರತಿ ತಟ್ಟೆಯಲ್ಲಿನ ಜ್ಯೋತಿಯ ಬಿಸಿಗೆ ವೀಳ್ಯದೆಲೆ ಕಾಯಿಸಿ, ನಮ್ಮ ಹಣೆಗೆ ವೀಳ್ಯದೆಲೆಯ ಕಪ್ಪು-ಕಾಡಿಗೆ ಬೊಟ್ಟು ಹಚ್ಚಿ, ತನ್ನ ಮುದ್ದಾದ ಪುಟ್ಟ-ಪುಟ್ಟ ಕೈಗಳಿಂದ ನಮ್ಮೆಲ್ಲರಿಗೂ ರಾಖಿ ಕಟ್ಟಿ, ಬಾಯಲ್ಲಿ ಪೇಢಾ ಹಾಕಿ, ಸರತಿಯಂತೆ ನಮಗೆ ಆರತಿ ಬೆಳಗುತ್ತಿದ್ದಳು. ಅಪ್ಪ ನಮಗೆ ಮೊದಲೇ ಕೊಟ್ಟಿರುತ್ತಿದ್ದ ಪುಡಿಗಾಸಿನ ಜೊತೆಗೆ ನಾವು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿರುತ್ತಿದ್ದ ಬಿಡಿಗಾಸನ್ನೂ ಸೇರಿಸಿ ಆರತಿ ತಟ್ಟೆಯಲ್ಲಿ ಹಾಕಿ ನಾವೆಲ್ಲ ತಂಗಿಯ ಶುಭಾಶೀರ್ವಾದ ಪಡೀತಿದ್ವಿ. ನಂತರ ತಂಗಿ ಕಟ್ಟಿದ್ದ ರಾಖಿಯನ್ನು ಹೆಮ್ಮೆಯಿಂದ ಪದೇ ಪದೇ ನೋಡಿಕೊಳ್ಳುತ್ತ ಶಾಲೆಯ ಕಡೆ ಹೆಜ್ಜೆ ಹಾಕ್ತಿದ್ವಿ. ನಾವು ಹೋಗುತ್ತಿದ್ದ ಶಾಲೆ ಬರೀ ಗಂಡು ಮಕ್ಕಳ ಶಾಲೆಯಾದ್ದುದರಿಂದ ಶಾಲೆಯಲ್ಲಿ ರಾಖಿ ಕಟ್ಟಲು ಬರುವ ಹುಡುಗಿಯರ ಕಾಟವಾಗಲಿ, ನಾವು ಅವರಿಂದ ತಪ್ಪಿಸಿಕೊಂಡು ಓಡುವ ಪ್ರಸಂಗವಾಗಲಿ ನಮಗೆ ಬರುತ್ತಿರಲಿಲ್ಲ ಬಿಡಿ :) ಸ್ಕೂಲಲ್ಲಿ ಓರಗೆಯ ಗೆಳೆಯರಿಗೆ ನಮ್ಮ ಕೈಯಲ್ಲಿನ ರಾಖಿ ತೋರಿಸಿ "ನಮ್ ತಂಗಿ ಕಟ್ಟಿದ ರಾಖಿ ನೋಡ್ರಲೇ, ಎಷ್ಟ್ ಛಂದ್ ಐತೀ" ಅಂತ ಜಂಭ ಕೊಚ್ಚಿಕೋತಿದ್ವಿ. ರಕ್ಷಾಬಂಧನ ಮುಗಿದು ಮೂರ್ನಾಲ್ಕು ದಿನಗಳು ಕಳೆದು, ರಾಖಿಯಲ್ಲಿನ ಚಿತ್ತಾರದ ಪಕಳೆಗಳು ಒಂದೊಂದಾಗಿ ಕಳಚಿ ಬಿದ್ದು, ಕಡೆಗೆ ದಾರವೊಂದೇ ಉಳಿಯುವವರೆಗೆ ರಾಖಿ ಬಿಚ್ಚುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ನಮಗೆಲ್ಲ ನಮ್ಮ ತಂಗಿಯ ಮೇಲೆ ಮತ್ತು ಅವಳು ಕಟ್ಟಿದ ರಾಖಿಯ ಮೇಲೆ.

ಫೂಲೋಂಕಾ ತಾರೋಂಕಾ ಸಬ್ಕಾ ಕೆಹ್ನಾ ಹೈ,
ಏಕ್ ಹಜಾರೋಂ ಮೇಂ ಮೇರಿ ಬೆಹ್ನಾ ಹೈ,
ಸಾರೀ ಉಮರ್ ಹಮೇ ಸಂಗ್ ರೆಹ್ನಾ ಹೈ...


ಮುಂದೆ ಸ್ಕೂಲು ಮುಗಿದು ಕಾಲೇಜು ಓದಲು ಹುಬ್ಬಳ್ಳಿಯಲ್ಲಿ ಇದ್ದಾಗಲೂ ತಪ್ಪದೇ ಪ್ರತಿ ವರ್ಷ ರಕ್ಷಾಬಂಧನದ ದಿನ ಊರಿಗೆ ಹೋಗಿ ಬರ್ತಿದ್ದೆ. ಮದುವೆಯಾದ ಮೇಲೆ ತಂಗಿಯೂ ಪ್ರತಿ ವರ್ಷ ತಪ್ಪದೇ ರಕ್ಷಾಬಂಧನದ ದಿನ ಊರಿಗೆ ಬರ್ತಾಳೆ. ಉನ್ನತ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದ ಮೇಲೆಯೇ ರಕ್ಷಾಬಂಧನದ ದಿನ ಊರಲ್ಲಿರಲಾಗದ ಹತಭಾಗ್ಯ ನನ್ನದಾಗಲು ಶುರುವಾಯಿತು. ಕೆಲವು ಸಲ ಊರಿಗೆ ಹೋಗಲು ಸಾಧ್ಯವಾಗಿದ್ದರೂ, ಈ ಶುಭದಿನವನ್ನು ಮಿಸ್ ಮಾಡ್ಕೊಂಡಿದ್ದೇ ಹೆಚ್ಚು ಸಲ.

ನನ್ನ ಮುದ್ದು ತಂಗ್ಯವ್ವ, ನಂಗೊತ್ತು, ಇವತ್ತು ಊರಲ್ಲಿ ಉಳಿದ ಇನ್ನಿಬ್ಬರು ಅಣ್ಣಂದಿರಿಗೆ ರಾಖಿ ಕಟ್ಟುವಾಗ ನೀ ನನ್ನನ್ನು ಖಂಡಿತ ಮಿಸ್ ಮಾಡ್ಕೊಂಡಿರ್ತೀಯಾ ಅಂತ. ಸಾರೀ ಪುಟ್ಟೀ, ಬೇಜಾರ್ ಮಾಡ್ಕೊಬೇಡ; ಇದೊಂದು ಸರ್ತಿ ಕ್ಷಮಿಸಿಬಿಡು. ನೀ ಕಳಿಸಿದ ರಾಖಿ ಇವತ್ತು ಬೆಳಿಗ್ಗೇನೇ ನನ್ನ ಕೈ ಸೇರಿದೆ. ನಿನ್ನ ಹೆಸರು ಹೇಳಿಕೊಂಡು ಅದನ್ನ ನನ್ನ ಕೈಗೆ ನಾನೇ ಕಟ್ಕೊಂಡಿದೀನಿ. ಇದೊಂದು ಸರ್ತಿ ನೀನು ಅಲ್ಲಿಂದಲೇ ನಂಗೆ ಶುಭಾಶೀರ್ವಾದ ಮಾಡಿ, "ನಿಂಗೆ ಒಳ್ಳೆಯದಾಗಲಿ ಅಣ್ಣ" ಅಂತ ಹಾರೈಸಿಬಿಡು. ಮುಂದಿನ ಸಲ ನಿನ್ನ ಕೈಯಾರೆ ರಾಖಿ ಕಟ್ಟಿಸ್ಕೊಳ್ಳೋಕೆ ತಪ್ಪದೇ ಊರಿಗೆ ಬರ್ತೀನಿ, ಮಿಸ್ ಮಾಡ್ಕೋಳಲ್ಲ, ಪ್ರಾಮೀಸ್! :)
'

ಚಿತ್ರಕೃಪೆ: ಅಂತರ್ಜಾಲ'

Monday, June 8, 2009

ಎನ್ನ ಮನ ಕಾಡುತಿಹ ಚೆಲುವ ಮಲ್ಲಿಗೆ ಹೂವೇ...



ಬೆಳದಿಂಗಳ ಬಾಲೆ,


ಕನಸಿನ ಕಣ್ಮಣಿ, ಸ್ವಪ್ನ ಸುಂದರಿ, ಕಲ್ಪನಾ ಕನ್ಯೆ, ಭಾವಿ ಬಾಳಿನ ಸುಪ್ತದೀಪ್ತೀ... ಈವರೆಗೂ ನನ್ನ ಕೈಗೆ ಸಿಗದೆ, ಕಣ್ಣಿಗೂ ಕಾಣದೆ ಇಲ್ಲೇ ಎಲ್ಲೋ ಇರುವ ನಿನ್ನನ್ನ ಏನಂತ ಕರೆಯಲಿ? ನೀ ಎಲ್ಲಿರುವೆ, ಹೇಗಿರುವೆ ಎಂಬ ಸ್ಪಷ್ಟವಾದೊಂದು ಕಲ್ಪನೆಯೂ ಇಲ್ಲದೇ ನಿನಗೀ ಪತ್ರ ಬರೆಯುತ್ತಿದ್ದೇನೆ. ನೀ ಎಲ್ಲಾದರೂ ಇರು, ಹೇಗಾದರೂ ಇರು, ನಮ್ಮಿಬ್ಬರ ಮದುವೆ ಯಾವತ್ತೋ ಸ್ವರ್ಗದಲ್ಲೇ ನೆರವೇರಿರುವುದರಿಂದ ನೀ ನನಗೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗ್ತೀಯ ಅನ್ನೋ ಆಶಾವಾದದೊಂದಿಗೆ ನಿನಗೀ ಓಲೆ.

ಚೆಲುವೆ ಎಲ್ಲಿರುವೆ,
ಮನವ ಕಾಡುವ ರೂಪಸಿಯೇ,
ಬಯಕೆಯ ಬಳ್ಳಿಯ,
ನಗುವ ಹೂವಾದ ಪ್ರೇಯಸಿಯೇ...

ನಿಂಗೊತ್ತಾ? ನಿನ್ನ ಬಗ್ಗೆ ಒಂದು ಅಮೂರ್ತ ಕಲ್ಪನೆಯಿಟ್ಟುಕೊಂಡೇ ಪ್ರತಿನಿತ್ಯ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಹುಡುಕ್ತಾ ಇರ್ತೀನಿ. ನಾ ಪ್ರತಿನಿತ್ಯ ನಡೆದುಕೊಂಡು ಹೋಗುವ ಹಾದಿಯಲ್ಲಿ ಎದಿರಾಗುವ ಪ್ರತಿ ಹುಡುಗಿಯಲ್ಲಿ, ಬಸ್ಟ್ಯಾಂಡಿನಲ್ಲಿ ನನ್ನೊಂದಿಗೆ ಬಸ್ಸಿಗೆ ಕಾಯುತ್ತಾ ನಿಲ್ಲುವ ಪ್ರತಿ ಪ್ರಮೀಳೆಯಲ್ಲಿ, ಹತ್ತಿದ ಬಸ್ಸಿನಲ್ಲಿ ಸೀಟು ಸಿಗದೆ ನಿಂತ ಪ್ರತಿ ನೀಳಕಾಯದ ಶ್ವೇತಸುಂದರಿಯಲ್ಲಿ, ಊರಿಗೆ ಹೋಗುವಾಗ ರೈಲಿನಲ್ಲಿ ಜೊತೆಯಾಗುವ ಪ್ರತಿ ಲಲನಾಮಣಿಯಲ್ಲಿ, ಗೆಳೆಯರೊಂದಿಗೆ ಬೀದಿ ಸುತ್ತುವಾಗ ನೋಡುವ ಪ್ರತಿ ಕನ್ಯಾರತ್ನದಲ್ಲಿ, ಹೊಟೇಲಿನಲ್ಲಿ ಊಟ ಮಾಡುವಾಗ ಗೆಳತಿಯರೊಂದಿಗೋ ಇಲ್ಲ ಅಪ್ಪ-ಅಮ್ಮನೊಂದಿಗೋ ಬಂದು ಎದುರಿನ ಟೇಬಲ್ಲಿನಲ್ಲಿ ಆಸೀನಳಾಗಿ ಥೇಟ್ ನನ್ ಥರಾನೇ "ತಿನ್ನೋಕೆ ಏನು ಆರ್ಡರ್ ಮಾಡೋದು?" ಎಂದು ಪೇಚಾಡುವ ಪ್ರತಿ ಪೆದ್ದುಮಣಿಯಲ್ಲಿ, ಗೆಳೆಯನೊಬ್ಬನ ಮದುವೆಯಲ್ಲಿ ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ, ವಾರಾಂತ್ಯದಲ್ಲಿ ದೇವರ ದರ್ಶನಕ್ಕಾಗಿ ನಾ ಹೋಗುವ ದೇವಸ್ಥಾನಕ್ಕೆ "ನನಗೊಬ್ಬ ಒಳ್ಳೆಯ ಗಂಡನನ್ನು ದಯಪಾಲಿಸು ತಂದೇ" ಎಂದು ದೇವರಲ್ಲಿ ಮೊರೆಯಿಡಲು ಬರುವ ಪ್ರತಿ ಭಕ್ತ ಶಿಖಾಮಣಿಯಲ್ಲಿ, ಶಾಪಿಂಗ್ ಮಾಲ್ ನಲ್ಲಿ ಕೊಳ್ಳಲು ಬಂದಿದ್ದನ್ನು ಮರೆತು ಕಣ್ಣಿನಲ್ಲೇ ಬೇರೆ ಇನ್ನೇನನ್ನೋ ಹುಡುಕುವ ಕನ್ಫ್ಯೂಸ್ಡ್ ಹುಡುಗಿಯರಲ್ಲಿ,.... ಹೀಗೆ ಪ್ರತಿನಿತ್ಯ ಎದುರಾಗುವ ಪ್ರತಿ ಸಾಧಾರಣ ಸುಂದರಿಯಲ್ಲೂ ನಿನ್ನ ಸಾಕಾರ ರೂಪ ಕಾಣೋಕೆ ಹವಣಿಸ್ತಿರ್ತೀನಿ.

ಡ್ರೀಮ್ ಗರ್ಲ್,
ಕಿಸೀ ಶಾಯರ್ ಕೀ ಗಝಲ್,

ಡ್ರೀಮ್ ಗರ್ಲ್,
ಕಿಸೀ ಝೀಲ್ ಕಾ ಕಂವಲ್,

ಕಹೀಂ ತೋ ಮಿಲೆಗೀ,
ಕಭಿ ತೋ ಮಿಲೆಗೀ,

ಆಜ್ ನಹೀ ತೋ ಕಲ್...

ಆದರೆ ಕೊನೆಗೆ, ಹೀಗೆ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಕಾಣದೆ ನಿರಾಶೆಗೊಳ್ತೀನಿ. ಪ್ರತಿಯೊಬ್ಬಳನ್ನೂ, ಛೇ! ಇವಳು ಸ್ವಲ್ಪ ಜಾಸ್ತೀನೇ ಮಾಡರ್ನ್; ನಮ್ಮ ಸಂಪ್ರದಾಯಸ್ಥ ಮನೆಗೆ ಸರಿ ಹೋಗಲ್ಲ,... ಉಹೂಂ, ಇವಳಿಗ್ಯಾಕೋ ಸ್ವಲ್ಪ ಕೊಬ್ಬು ಜಾಸ್ತಿ ಅನ್ಸುತ್ತೆ,... ಅರೆ! ಇವಳು ಈಗ ಸ್ವಲ್ಪ ಹಿಂದೆ ಅಂದುಕೊಂಡಷ್ಟು ಚೆನ್ನಾಗಿಲ್ಲ,... ಹ್ಮ್! ಇವಳ್ಯಾಕೋ ತುಂಬಾನೆ ಚೈಲ್ಡಿಶ್ ಅನ್ಸುತ್ತೆ,... ಅಯ್ಯೋ ಬೇಡಪ್ಪ - ನಾ ದುಡಿಯೋದೆಲ್ಲಾ ಇವಳ ಮೇಕಪ್ಪಿಗೇ ಸರಿ ಹೋಗುತ್ತೆ,... ಇವಳ್ಯಾಕೋ ತುಂಬಾನೆ ಚೆನ್ನಾಗಿದಾಳೆ - ಗಗನ ಕುಸುಮ!,... ಅಯ್ಯಪ್ಪ, ಇವಳು ತೀರಾ ದಪ್ಪ ಇದಾಳೆ,... ಅಯ್ಯೋ ಬೇಡ - ಇವಳ ನಖರಾ ಯಾಕೋ ಜಾಸ್ತಿಯಾಯ್ತು,... ಹ್ಮ್! ಇದು ನನಗೆ ಸಿಗದ ಹುಳಿ ದ್ರಾಕ್ಷಿ,... ಅಬ್ಬಾ! ಇವಳಾಡೋದು ನೋಡಿದ್ರೆ ಇವಳು ನನ್ನೊಂದಿಗೆ ಮತ್ತು ನಮ್ಮ ಮನೆಯವರೊಂದಿಗೆ ಹೊಂದಿಕೊಳ್ಳೋ ಚಾನ್ಸೇ ಇಲ್ಲ,... ಎಲ್ಲ ಸರಿ - ಆದ್ರೆ ಇವಳನ್ನ ನನ್ನ ಅಪ್ಪ-ಅಮ್ಮ ಒಪ್ಕೊಳ್ಳೋದು ಡೌಟು,... ಹೀಗೆ ಒಂದಿಲ್ಲೊಂದು ಕಾರಣದಿಂದ 'ಅವಳು' ನೀನಲ್ಲ ಎಂಬ ತೀರ್ಮಾನಕ್ಕೆ ಬಂದಿರ್ತೇನೆ :)

ಜಾನೆ ಜಾನ್,
ಡೂಂಡತೇ ಫಿರ್ ರಹಾ,
ಹೂಂ ತುಮ್ಹೆ ರಾತ್ ದಿನ್,
ಮೈ ಯಹಾಂ ಸೆ ವಹಾಂ.
ಮುಝ್ಕೋ ಆವಾಜ್ ದೋ,

ಚುಪ್ ಗಯೀ ಹೋ ಸನಮ್,
ತುಮ್ ಕಹಾಂ...

"ಮೈ ಯಹಾಂ" ಅಂತ ಒಂದ್ಸಲ ನಂಗೆ ಕೇಳ್ಸೋವಷ್ಟು ಜೋರಾಗಿ ಕೂಗೆ ಪ್ಲೀಸ್... :) .

ನಿನ್ನ ಬಗೆಗಿನ ನನ್ನ ಅಪಕ್ವ ಕಲ್ಪನೆಗಳೆಲ್ಲ ಒತ್ತಟ್ಟಿಗಿರಲಿ; ಅಸಲಿಗೆ ನೀನು ಇರುವುದಾದರೂ ಹೇಗೆ? ನಾನೋ ಒಬ್ಬ ಸಾಮಾನ್ಯ, ಮಧ್ಯಮ ವರ್ಗದ ಹುಡುಗ. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾವುಕ; ನಾನೇ ಹೇಳ್ಕೊಳ್ಳೋ ಹಾಗೆ - ಜೀವನದ ಪ್ರತಿ ಪುಟ್ಟ ಸಂತಸದಲ್ಲೂ ಸಂಭ್ರಮಿಸುವ ಭಾವಜೀವಿ. ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ; ಆದ್ರೆ, ತುಂಬಾ ಹತ್ತಿರದವರನ್ನ ನನ್ನನ್ನು ನಾನೇ ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸ್ತೇನೆ ಮತ್ತು ಗೌರವಿಸ್ತೇನೆ. ನೀನೂ ನನ್ನಂತೆ ನಾ? ನೀನೂ ನನ್ನಂತೆ ಭಾವಜೀವಿಯಾ? ನನ್ನಂತೆ ನೀನೂ ಅಪ್ಪ-ಅಮ್ಮನನ್ನು ಬೆಟ್ಟದಷ್ಟು ಪ್ರೀತಿಸ್ತೀಯ? ನನ್ನಂತೆ ಮಿತಭಾಷೀಯಾ ಅಥವಾ ಬಾಯಿ ಹರಿದು ಹೋಗುವಂತೆ ಇಪ್ಪತ್ನಾಲ್ಕು ಗಂಟೆನೂ ವಟವಟಾ ಅಂತ ವಟಗುಡ್ತಿರ್ತೀಯ :) ? ನನ್ನಂತೆ ನೀನೂ ಕಿಶೋರ್, ರಫಿ, ಲತಾ, ಸೋನು, ಶ್ರೇಯಾ, ಪೀ ಬೀ ಎಸ್, ರಾಜ್‌ಕುಮಾರ್, ಜಾನಕಿ, ಎಸ್ ಪೀ ಬೀ ಹಾಡುಗಳನ್ನು ಇಷ್ಟ ಪಡ್ತೀಯ? ನನ್ ಥರಾ ಆಗಾಗ ತರ್ಲೆ ಜೋಕು ಹೇಳಿ ಜೊತೆಗಿರೋರನ್ನ ನಗಿಸೋಕೆ ಪ್ರಯತ್ನಿಸ್ತಿರ್ತೀಯಾ? ಗೆಳೆಯನೋ, ಗೆಳತಿಯೋ ಮುಖ ಚಿಕ್ಕದು ಮಾಡಿಕೊಂಡು ಕುಳಿತಾಗ ಕಳವಳಗೊಂಡು"ಏನಾಯ್ತೋ" ಎಂದು ಆತ್ಮೀಯತೆಯಿಂದ ವಿಚಾರಿಸ್ತೀಯ? ನೀನೂ ನನ್ ಥರಾ ಹೀಗೆಯೇ ನಾನೆಲ್ಲಿದೀನಿ, ಹೇಗೀದೀನಿ ಅನ್ನೋ ಪುಟ್ಟದೊಂದು ಅಂದಾಜೂ ಇಲ್ಲದೇ ನಂಗೋಸ್ಕರ ಪತ್ರ, ಕವನ ಏನಾದ್ರೂ ಬರೀತಾ ಇದೀಯಾ?

ನೀನೆಂದರೆ ನನ್ನೊಳಗೆ,
ಏನೋ ಒಂದು ಸಂಚಲನ,
ನಾ ಬರೆಯದಾ ಕವಿತೆಗಳ,
ನೀನೇ ಒಂದು ಸಂಕಲನ,
ಓ ಜೀವವೇ ಹೇಳಿಬಿಡು,
ನಿನಗೂ ಕೂಡ ಹೀಗೇನಾ...

ಕೆಲವು ಸಂದರ್ಭಗಳಲ್ಲಿ ನಿನ್ನ ಅನುಪಸ್ಥಿತಿ ನನ್ನ ತುಂಬಾ ಕಾಡುತ್ತೆ ಕಣೇ
:( ... ಕಳೆದ ವರ್ಷ ಕೆಲಸದ ಮೇಲೆ ಅಮೇರಿಕಕ್ಕೆ ಹೋದಾಗ, ಅಲ್ಲಿ ಅಡುಗೆ ಮಾಡ್ಕೊಳ್ಳೋಕೆ ಪ್ರಯತ್ನ ಪಡ್ತಾ ಕೈ ಸುಟ್ಟುಕೊಂಡಾಗ, ಏನೋ ಅಡುಗೆ ಮಾಡೋಕೆ ಹೋಗಿ ಅದು ಇನ್ನೇನೋ ಆದಾಗ, ಅಲ್ಲಿ ಸಾಂತಾ ಕ್ರೂಸ್ ಬೀಚಿನ ದಂಡೆ ಮೇಲೆ ಒಬ್ಬನೇ ಅಲ್ಲೆಯುತ್ತಿದ್ದಾಗ, ಮನಮೋಹಕ ತಾಹೋ ಸರೋವರದ ಸುತ್ತಮುತ್ತ ಮಂಜಿನೊಂದಿಗೆ ಆಟವಾಡುತ್ತಿದ್ದಾಗ, ಮೊಂಟರಿ ಬೇ ಅಕ್ವೇರಿಯಮ್ ನಲ್ಲಿ ಮತ್ಸ್ಯಗಳ ಸುಂದರ ಲೋಕದಲ್ಲಿ ವಿಹರಿಸುತ್ತಿದ್ದಾಗ, ಮಿಶನ್ ಪೀಕ್ ಬೆಟ್ಟದ ತುದಿಯಲ್ಲಿದ್ದಾಗ, ಸ್ಯಾನ್ ಫ್ರಾನ್ಸ್ಸಿಸ್ಕೊ ಗೋಲ್ಡನ್ ಗೇಟ್ ಬ್ರಿಡ್ಜ್ ನ ಮೇಲೆ ಓಡಾಡುತ್ತಿದ್ದಾಗ, ಲಾಸ್ ಎಂಜೀಲಿಸ್ ನ ಡಿಸ್ನೀಲ್ಯಾಂಡ್ ನಲ್ಲಿ ಫನ್ ರೈಡ್ಸ್ ಆಡೋವಾಗ, ಹಾಲಿವುಡ್ ನ ಯೂನಿವರ್ಸಲ್ ಸ್ಟುಡಿಯೋದಲ್ಲಿ ಸ್ಟುಡಿಯೊ ಟೂರಿಗೆ ಹೋದಾಗ, ಮತ್ತೆ ಕೆಲವು ತಿಂಗಳ ಹಿಂದೆ ಕೊಡಚಾದ್ರಿ ಬೆಟ್ಟದ ಮೇಲೆ ಸೂರ್ಯೋದಯದ ಸೊಬಗು ಸವಿಯುತ್ತಿದ್ದಾಗೆಲ್ಲ ನಿನ್ನನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಂಡೆ; ನೀನೂ ಜೊತೆಗಿದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ಅಂತ.

ಮೈ, ಔರ್ ಮೇರಿ ತನಹಾಯೀ,
ಅಕ್ಸರ್ ಯೇ ಬಾತೇ ಕರ್ತೇ ಹೈ.

ತುಮ್ ಹೋತೀ ತೋ ಕೈಸಾ ಹೋತಾ,

ತುಮ್ ಯೇ ಕೆಹ್ತಿ,
ತುಮ್ ವೋ ಕೆಹ್ತಿ,
ತುಮ್ ಈಸ್ ಬಾತ್ ಪೆ ಹೈರಾನ್ ಹೋತೀ,
ತುಮ್ ಉಸ್ ಬಾತ್ ಪೆ ಕಿತ್ನೀ ಹಸ್ತೀ,
ತುಮ್ ಹೋತೀ ತೋ ಐಸಾ ಹೋತಾ,
ತುಮ್ ಹೋತೀ ತೋ ವೈಸಾ ಹೋತಾ,

ಮೈ, ಔರ್ ಮೇರಿ ತನಹಾಯೀ,

ಅಕ್ಸರ್ ಯೇ ಬಾತೇ ಕರ್ತೇ ಹೈ.

ನಾಳೆ ಮದುವೆಯಾದ ಮೇಲೆ, ನಿನ್ನ ಅಪ್ಪ-ಅಮ್ಮನನ್ನು ಕಂಡಷ್ಟೇ ಪ್ರೀತ್ಯಾದರಗಳಿಂದ ನನ್ನ ಅಪ್ಪ-ಅಮ್ಮನನ್ನೂ ಕಾಣಬಲ್ಲೆಯಾ? ನಾ ಚಿಕ್ಕದೊಂದು ಗೆಲುವಿನೊಂದಿಗೆ ಮನೆಗೆ ಬಂದಾಗ ಒಂದು ಹೆಮ್ಮೆಯ ಮುಗುಳ್ನಗೆಯೊಂದಿಗೆ ನನ್ನ ಸ್ವಾಗತಿಸ್ತೀಯಾ? ಸೋತು ಸುಣ್ಣವಾಗಿ ಬಂದಾಗ ಎರಡು ಸಾಂತ್ವನದ ನುಡಿಗಳನ್ನು ಹೇಳಿ ಮತ್ತೆ ನನ್ನನ್ನು ಚೈತನ್ಯದ ಚಿಲುಮೆಯಾಗಿಸ್ತೀಯಾ? ಕೃಷಿಯಾಧಾರಿತ, ಮಧ್ಯಮವರ್ಗದ, ಸಂಪ್ರದಾಯಸ್ಥ ಮನೆ ನಮ್ಮದು; ನಮ್ಮ ಮನೆಯ ಸಂಪ್ರದಾಯ, ಶಿಷ್ಟಾಚಾರಗಳನ್ನು ನನ್ನಷ್ಟೇ ಶ್ರದ್ಧೆಯಿಂದ ಪಾಲಿಸ್ತೀಯಾ? ಹುಣ್ಣಿಮೆ ಬೆಳದಿಂಗಳಲ್ಲಿ ನನ್ ಜೊತೆ ಕೂತ್ಕೊಂಡು ಚುಕ್ಕಿಗಳನ್ನು ಎಣಿಸೋಕೆ ಹೆಲ್ಪ್ ಮಾಡ್ತೀಯಾ? ಮತ್ತೆ, ನಾ ಆಫೀಸಿನಿಂದ ಲೇಟಾಗಿ ಬಂದಾಗ ಹುಸಿಗೋಪ ತೋರಿಸಿ "ನಾಳೆಯಿಂದ ಬೇಗ ಬರ್ದಿದ್ರೆ ನಿಮ್ಗೆ ಊಟ ಇಲ್ಲ!" ಅಂತ ಹೆದ್ರಿಸ್ತೀಯ? ಚಿಕ್ಕದೊಂದು ನಿರುಪದ್ರವಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ ನನ್ನ ಕಿವಿ ಹಿಂಡಿ "ಇನ್ನೊಂದು ಸಲ ಸುಳ್ಳು ಹೇಳಿದ್ರೆ ನಾ
ನನ್ನ ತವರು ಮನೆಗೆ ಹೊರ್ಟೋಗ್ತೀನಿ" ಅಂತ ಹೇಳಿ ನಂಗೆ ಭಯ ಬೀಳಿಸ್ತೀಯ? ಏನೋ ಒಂದು ತರ್ಲೆ ಮಾಡಿ ನನ್ಹತ್ರ ಬೈಸಿಕೊಂಡಾಗ ಪುಟ್ಟ ಮಗುವಿನಂತೆ ಗಲ್ಲ ಊದಿಸಿಕೊಂಡು ಕೂಡ್ತೀಯಾ? ಇಷ್ಟೆಲ್ಲಾ ನಿರೀಕ್ಷೆ ತುಂಬಾ ಜಾಸ್ತಿ ಅನ್ನಿಸಿದ್ರೆ, ಕಡೆ ಪಕ್ಷ ನನ್ನ ನಗುವಿಗೆ ನಗುವಾಗಿ, ಅಳುವಿಗೆ ಅಳುವಾಗಿ ಸಾಥ್ ನೀಡಬಲ್ಲೆಯಾ? ನಿನ್ನಿಂದ ನಾನು ಇಷ್ಟೇ-ಇಷ್ಟು ಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾ? ಹಾಂ! ಚಿಂತೆಬೇಡ; ಅಷ್ಟು ನಿರೀಕ್ಷೆಗಳನ್ನು ನೀನೂ ನನ್ನ ಬಗ್ಗೆ ಇಟ್ಟುಕೋಬಹುದು ಮತ್ತು ನಿನ್ನ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಬಲ್ಲೆ. ಹೇಳು, ಕಷ್ಟ-ಸುಖ ಏನೇ ಬರಲಿ, ನೀನು ನನ್ನ ಬಿಟ್ಟು ಇರಲ್ಲ ಅಲ್ಲ್ವಾ..?

ವಾದಾ ಕರ್ ಲೇ ಸಾಜನಾ,
ತೇರೆ ಬಿನಾ ಮೈ ನಾ ರಹೂ,
ಮೇರೆ ಬಿನಾ ತೂ ನಾ ರಹೆ,
ಹೋಕೇ ಜುದಾ...

ಸಾಧಾರಣ, ಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿ, ಕೃಷಿಕ ಮನೆತನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಈ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟ ಪಟ್ಟಿದ್ದೇನೆ, ಸಾಕಷ್ಟು ತ್ಯಾಗ ಮಾಡಿದ್ದೇನೆ. ಬಳಲಿ ಬೆಂಡಾಗಿ ಬಂದಾಗ ನಿನ್ನ ಮಡಿಲು ನನಗೆ ತಂಪನೀಯಬಲ್ಲುದು ಎಂದು ಆಶಿಸಿದ್ದೇನೆ; ನನಗೆ ನಿರಾಸೆ ಮಾಡಲ್ಲ ತಾನೇ?...


ಬೇಕು ಬದುಕಲಿ,
ಸಾಕು ಅನಿಸುವಷ್ಟು ಮೌನ,
ಬೇಕು ಅನಿಸುವಷ್ಟು ಮಾತು,
ಹಿಡಿ-ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ...

ಮನೆಯಲ್ಲಿ ಅಪ್ಪ-ಅಮ್ಮನ ಒತ್ತಡಕ್ಕೆ ಮಣಿದು ಇನ್ನು ಕೆಲವು ದಿನಗಳಲ್ಲಿ ನಿನ್ನ ಅಧಿಕೃತ ಅನ್ವೇಷಣೆ ಶುರುವಾಗಲಿದೆ. ಇದುವರೆಗೂ ಕಾಣದ ನಿನ್ನ ಜೊತೆಗೂಡಿ ಸುಂದರ ಬಾಳಗೊಪುರ ಕಟ್ಟುವ ಕನಸು ಕಂಡಿದ್ದೇನೆ. ಇಷ್ಟು ದಿನ ನನ್ನ ಕೈಗೆ ಸಿಗದೆ ಸತಾಯಿಸಿದ್ದಕ್ಕೆ ನಿನ್ನೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಬೇಕಿದೆ. ಸಾಂತಾ ಕ್ರೂಸ್ ಬೀಚಿನ ದಂಡೆಯ ಮೇಲಿಂದ ನಿನ್ಗೋಸ್ಕರ ವಿಧವಿಧದ ಕಪ್ಪೇಚಿಪ್ಪುಗಳನ್ನ, ಶಂಖಗಳನ್ನ ಮತ್ತು ಇನ್ನೂ ಏನೇನನ್ನೋ ತಂದಿದೀನಿ; ಅವೆಲ್ಲ ನಿಂಗೆ ಕೊಡ್ಬೇಕು. ಬೇಂದ್ರೆ ಅಜ್ಜನ ಪದ್ಯದ ಸಾಲೊಂದು ನೆನಪಾಯ್ತು; 'ಮಲ್ಲಿಗೀ ಮಂಟಪದಾಗ ಗಲ್ಲ-ಗಲ್ಲ ಹಚ್ಚಿ ಕೂತು ಮೆಲ್ಲದನೀಲೆ ಹಾಡೂನಂತ'. ನಿನ್ ಜೊತೆ ಬಹಳಷ್ಟು ಮಾತಾಡೋದಿದೆ. ತುಂಬ ಹುಡುಕಾಡಿಸಬೇಡ; ಬೇಗ ಸಿಕ್ಬಿಡು.

ನಿನ್ನ ನೋಡಲೆಂತೋ,
ಮಾತನಾಡಲೆಂತೋ,
ಮನಸ ಕೇಳಲೆಂತೋ,
ಪ್ರೀತಿ ಹೇಳಲೆಂತೋ,

ಆಹಾ ಒಂಥರಾ ಥರಾ,
ಹೇಳಲೊಂಥರಾ ಥರಾ,
ಕೇಳಲೊಂಥರಾ ಥರಾ...

ನಿನ್ನದೇ ನಿರೀಕ್ಷೆಯಲ್ಲಿರುವ,
- ನಿನ್ನವ

ವಿ. ಸೂ.: ಬ್ಲಾಗಲ್ಲಿ ಏನಾದರೂ ಬರೀಬೇಕು, ಏನು ಬರೀಲಿ ಅಂತ ಯೋಚಿಸ್ತಿದ್ದಾಗ ಹೀಗೇ ಒಂದು ತರ್ಲೆ ಐಡಿಯಾ ಹೊಳೀತು; ಮುಂದೆ ನನ್ನ ಮದ್ವೆ ಆಗಲಿರೋ ಕಲ್ಪನಾ ಕನ್ಯೆಗೆ ಒಂದು ಪತ್ರ ಬರೆದರೆ ಹೇಗೆ ಅಂತ. ಅದ್ಕೋಸ್ಕರ ಈ ಲೇಖನವೇ ಹೊರತು, ನಾನೇನೂ ನಿಜವಾಗಿಯೂ ಅಷ್ಟೊಂದು ಡೆಸ್ಪರೇಟ್ ಆಗಿ ಹುಡುಗಿ ಹುಡುಕ್ತಾ ಇಲ್ಲ :)

ಹಾಂ! ಪ್ರತಿಕ್ರಿಯೆಗೆ ಕನ್ನಡ ಲಿಪಿ ಉಪಯೋಗಿಸಿದರೆ ತುಂಬ ಸಂತೋಷ. ಕನ್ನಡದಲ್ಲಿ ಸರಳವಾಗಿ, ಶೀಘ್ರವಾಗಿ, ತಪ್ಪಿಲ್ಲದಂತೆ ಟೈಪಿಸಲು ನೀವು ಕ್ವಿಲ್‌ಪ್ಯಾಡ್ (
http://www.quillpad.com/kannada/editor.html) ಬಳಸಬಹುದು. ಧನ್ಯವಾದಗಳು :)

'

Thursday, May 28, 2009

ಆಶಾವಾದ...

ಸ್ನೇಹಿತನೊಬ್ಬ ಈ-ಮೇಲ್ ನಲ್ಲಿ ಕಳಿಸಿದ್ದು...
ಎರಡು ಗಂಡು ಕತ್ತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತವೆ:

ಒಂದು ಕತ್ತೆ: "ಗೆಳೆಯ, ನನ್ನ ಯಜಮಾನ ನನಗೆ ವಿಪರೀತ ಹೊಡೆದು ಹಿಂಸೆ ಕೊಡುತ್ತಾನೆ."
ಎರಡನೆ ಕತ್ತೆ: "ಹಾಗಿದ್ದರೆ ನೀನು ಓಡಿ ಹೋಗಬಾರದೇಕೆ?"
ಮೊದಲ ಕತ್ತೆ: "ಓಡಿ ಹೋಗಬಹುದಿತ್ತು, ಆದರೆ ಇಲ್ಲಿ ನನಗೆ ಉತ್ತಮ ಭವಿಷ್ಯವಿದೆ... ಯಜಮಾನನ ಸುಂದರ ಮಗಳು ತುಂಟತನ ಮಾಡಿದಾಗಲೆಲ್ಲ ಯಜಮಾನ ಅವಳಿಗೆ ಹೇಳುತ್ತಿರುತ್ತಾನೆ - 'ನಿನ್ನ ಮದುವೆ ಕತ್ತೆ ಜೊತೆ ಮಾಡುತ್ತೇನೆ...!' ಎಂದು. ನಾನು ಅದೇ ಆಶಾವಾದದಿಂದ ಇಲ್ಲಿಯೇ ಇದ್ದೇನೆ."
'
ಆಶಾವಾದಿಯಾಗಿರೋದ್ರಿಂದ ನಮ್ಮ ಭವಿಷ್ಯ ಉತ್ತಮವಾಗದೆ ಇರಬಹುದು. ಆದರೆ ಅದು ಸದ್ಯದ ನಮ್ಮ ಕಷ್ಟವನ್ನು ಇನ್ನಷ್ಟು ಸಹ್ಯವಾಗಿಸುತ್ತೆ.


ಆಶಾವಾದಿತನ ಅಂದ್ರೆ ಇದೇ ಇರಬಹುದೇನೋ :)

'

Friday, May 22, 2009

ಅಜ್ಜಿಮನೆ

'

ಮಕ್ಕಳ ಬಾಲ್ಯಜೀವನದ ಒಂದು ಅವಿಭಾಜ್ಯ ಅಂಗ ಅಂದ್ರೆ ಅಜ್ಜಿಮನೆ. ತಂದೆಯ ತಾಯಿಯೂ ಅಜ್ಜಿ ಆಗುತ್ತಾಳಾದರೂ ಆ ಅಜ್ಜಿಯ ಮನೆ ನಮ್ಮ ಮನೆಯೇ ಆಗಿದ್ದರಿಂದ ನಮಗೆಲ್ಲ ಅಮ್ಮನ ತವರುಮನೆಯೇ ಅಜ್ಜಿಮನೆ ಆಗಿತ್ತು.

ಬೇಸಿಗೆ ರಜೆ ಬಂತೆಂದರೆ ಸಾಕು, ಎಲ್ಲ ಮಕ್ಕಳು ಅಜ್ಜಿಮನೆ ಸೇರುತ್ತವೆ. ನಾನು ಚಿಕ್ಕವನಿದ್ದಾಗಲಂತೂ ಬೇಸಿಗೆ ರಜೆ ಬಂತೆಂದರೆ ಸಾಕು "ನಾನು ಅಜ್ಜಿ ಮನೆಗೆ ಹೊಗ್ತೇನೆ" ಅಂತ ರಚ್ಚೆ ಹಿಡಿದುಬಿಡುತ್ತಿದ್ದೆ. ಬೇಸಿಗೆ ರಜೆಯಲ್ಲಿ ಅಜ್ಜಿಮನೆಯಲ್ಲಿ ನಮ್ಮ ಚಿಕ್ಕಮ್ಮ, ದೊಡ್ಡಮ್ಮಂದಿರ ಮಕ್ಕಳೂ ಬರುತ್ತಿದ್ದರಾದ್ದರಿಂದ, ನಮಗೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ತುಂಬ ಖುಷಿ ಕೊಡುವ ವಿಷಯವಾಗಿತ್ತು.

ಅಜ್ಜಿಮನೆ ಇಷ್ಟವಾಗೋಕೆ ಹಲವಾರು ಕಾರಣಗಳಿದ್ದವು. ವರುಷಕ್ಕೆ ಒಂದ್ಸರ್ತಿ ಬೇಸಿಗೆ ರಜೆಯಲ್ಲಿ ಮಾತ್ರ ಅಜ್ಜಿ ಮನೆಗೆ ಹೋಗುತ್ತಿದ್ದುದರಿಂದ ಅಜ್ಜ-ಅಜ್ಜಿಗೆ ನಾವೆಲ್ಲ ಮೊಮ್ಮಕ್ಕಳ ಮೇಲೆ ವಿಶೇಷ ಮಮತೆ. ಆಗಿನ ನಮ್ಮ ಬೇಡಿಕೆಗಳೂ ಚಿಕ್ಕ-ಪುಟ್ಟವು ಆಗಿರುತ್ತಿದ್ದರಿಂದ ನಮಗೆ ಅವರು ಯಾವುದೇ ಕಾರಣಕ್ಕೂ ನಿರಾಶೆ ಮಾಡುತ್ತಿರಲಿಲ್ಲ. ತುಂಟಾಟ ತೀರ್ವವಾದಾಗ ಮಾವಂದಿರ ಗದರಿಕೆ ಆಗಾಗ ಕೇಳಿಬರುತ್ತಿದ್ದರೂ ಅಜ್ಜಿಯ ಶ್ರೀರಕ್ಷೆ ನಮಗೆ ಇರುತ್ತಿದ್ದುದರಿಂದ ಯಾವ ಭಯವೂ ಇಲ್ಲದೇ ಅಜ್ಜಿಮನೆಯಲ್ಲಿ ಇರಬಹುದಾಗಿತ್ತು.

ನಮ್ಮದು ಮತ್ತು ನಮ್ಮ ಅಜ್ಜಿ ಮನೆಯವರದು ಕೃಷಿ ಆಧಾರಿತ ಕುಟುಂಬವಾದ್ದರಿಂದ ಅಜ್ಜ-ಅಜ್ಜಿ ಬೆಳಿಗ್ಗೆ ಹತ್ತು ಘಂಟೆಗೆಲ್ಲ ಹೊಲಕ್ಕೆ ಹೊರಡಲು ತಯಾರಾಗುತ್ತಿದ್ದರು. ನಾವೂ ಕೆಲಸಾರಿ ಅವರ ಜೊತೆ ಹೊಲಕ್ಕೆ ಹೋಗಿ ಹೊಲದಲ್ಲಿನ ಟೊಮ್ಯಾಟೋ, ಹುಣಸೆಕಾಯಿ, ಸೌತೆಕಾಯಿ ಮೆಲ್ಲುತ್ತಾ, ಓರಗೆಯವರೊಂದಿಗೆ ಮತ್ತು ದನ-ಕರುಗಳ ಜೊತೆ ಆಟವಾಡುತ್ತಾ ದಿನ ಕಳೆಯುವುದು ತುಂಬಾ ಸಂತಸದ ವಿಷಯವಾಗಿತ್ತು. ಮಧ್ಯಾಹ್ನ ಎಲ್ಲರೊಂದಿಗೆ ಊಟ ಮಾಡಿ ಸಂಜೆ ಜೊತೆಯಾಗಿ ವಾಪಸ್ ಬರುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವ ಆಳುಗಳಿಗೆಲ್ಲ ಅಜ್ಜಿ ನಮ್ಮನ್ನು "ಇವನು ನಮ್ಮ ಬಸಕ್ಕನ ಮಗ, ಇವನು ಕಮಲಕ್ಕನ ಮಗ, .." ಎಂದು ಪರಿಚಯ ಮಾಡಿ ಕೊಡುತ್ತಿದ್ದರೆ ನಮಗೆಲ್ಲ ಶಾಲೆಯಲ್ಲಿ ಕರೆದು ಬಹುಮಾನ ಕೊಟ್ಟಷ್ಟೇ ಖುಷಿಯಾಗುತ್ತಿತ್ತು. ಸಾಯಂಕಾಲ ವಾಪಸ್ ಬರುವಾಗ ಎತ್ತಿನ ಗಾಡಿಯಲ್ಲಿ ಹುಲ್ಲಿನ ಹೊರೆ, ಕೃಷಿ ಉತ್ಪನ್ನಗಳ ಮೂಟೆಗಳ ಮೇಲೆ ಸವಾರಿ ಮಾಡುತ್ತಾ ಒಬ್ಬರ ಕಿವಿಯಲ್ಲೊಬ್ಬರು ತೆಳುವಾದ ಹುಲ್ಲು ಕಡ್ಡಿ ಆಡಿಸಿ ಕಚಗುಳಿ ಇಡುತ್ತ, ತರಲೆ ಮಾಡುತ್ತ ನಗಾಡುತ್ತ ಮನೆ ಕಡೆ ಪ್ರಯಾಣಿಸುವುದು ತುಂಬಾ ಮಜ ಕೊಡುತ್ತಿತ್ತು.

ವಾಪಸ್ ಮನೆಗೆ ಬಂದ ಮೇಲೆ ಅಜ್ಜಿ ಮಾಡಿ ಕೊಡುತ್ತಿದ್ದ ಉಸುಳಿ ಕಾಳು, ಮುದ್ದೆ ರೊಟ್ಟಿ, ಬಜ್ಜಿ-ಬೋಂಡ, ಮುಂತಾದ ತಿನಿಸುಗಳ ಮಜಾನೇ ಬೇರೆ. ರಾತ್ರಿ ಊಟ ಮಾಡಿ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ, ಮಧ್ಯೆ ಮಧ್ಯೆ ತರಲೆ ಪ್ರಶ್ನೆ ಮಾಡುತ್ತಾ ಖುಷಿಯಾಗಿ ಮಲಗುತ್ತಿದ್ದ ದಿನಗಳನ್ನು ಕಡೇತನಕ ಮರೆಯಲು ಆಗೋಲ್ಲ ಅನ್ನಿಸುತ್ತೆ.

ಪ್ರತಿ ಶನಿವಾರ ಹುಬ್ಬಳ್ಳಿಯ ಸಂತೆಗೆ ಹೋಗುತ್ತಿದ್ದ ನಮ್ಮ ಅಜ್ಜ ಪ್ರತಿಯೊಬ್ಬ ಮೊಮ್ಮಗ/ಮೊಮ್ಮಗಳನ್ನು ಪ್ರತ್ಯೇಕವಾಗಿ ಕರೆದು "ಹುಬ್ಬಳ್ಳಿ ಸಂತೆಯಿಂದ ನಿನಗೇನು ತರಲಿ ಪುಟ್ಟ?" ಎಂದು ಕೇಳಿ, ಸಂತೆಯಿಂದ ವಾಪಸ್ ಬರುವಾಗ ನಾವು ಕೇಳಿದ ಪೆಪರ್ಮಿಂಟ್, ಪೇಡ, ಆಟಿಕೆ ಸಾಮಾನು ಮುಂತಾದವನ್ನು ತಪ್ಪದೇ ತಂದು ನಮ್ಮನ್ನು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಕರೆದು ನಾವು ಕೇಳಿದ ತಿನಿಸು, ಆಟಿಕೆಗಳನ್ನು ಕದ್ದು ಕೊಡುತ್ತಿದ್ದ (ಮೊಮ್ಮಕ್ಕಳು ಪರಸ್ಪರ ಜಗಳವಾಡದಿರಲಿ ಅಂತ).

ನಾವು ಮಾಡುತ್ತಿದ್ದ ಕೀಟಲೆಗಳು ತೀರಾ ಅತಿಯಾದಾಗ ಅಜ್ಜಿ ಮೆತ್ತಗೆ ಗದರಿಸುತ್ತಿದ್ದರೂ ಆ ಬೆದರಿಕೆಯಲ್ಲೂ ಬೆಟ್ಟದಷ್ಟು ಪ್ರೀತಿ ತುಂಬಿರುತ್ತಿತ್ತು. ನಾವು ಓರಗೆಯ ಹುಡುಗರೊಂದಿಗೆ ಜಗಳವಾಡಿಕೊಂಡು ಬಂದರೆ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡಿಕೊಳ್ಳುತ್ತಿದ್ಲು. ನಮ್ಮದೇ ತಪ್ಪಿದ್ದರೂ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡೋದು ನೋಡಿ ನಮಗೆ ಜಗಳ ಕಾಯಲು ಇನ್ನಷ್ಟು ಹುರುಪು ಬರುತ್ತಿತ್ತು ಅನ್ನಿ. ಹೀಗಾಗಿ ಅಜ್ಜಿಮನೆ ಎಂದರೆ ನಮಗೆಲ್ಲ ಮೋಜಿನ, ಉಲ್ಲಾಸಮಯ ತಾಣವಾಗಿರುತ್ತಿತ್ತು. ನಾನು ಮತ್ತು ನಮ್ಮ ಮಾವನ ಮಗ ಊರ ಹೊರಗಿನ ಕೆರೆಯಲ್ಲಿ ಕದ್ದು ಈಜಾಡಲು ಹೋಗಿ, ಅದು ಮಾವನಿಗೆ ಗೊತ್ತಾಗಿ ಹತ್ತಿ ಕಟ್ಟಿಗೆಯಿಂದ ಹೊಡೆತ ತಿಂದಾಗಲಂತೂ " ಅಯ್ಯೋ, ಅಜ್ಜಿ ಇವತ್ತು ಹೊಲಕ್ಕೆ ಹೊಗದೇ ಮನೆಯಲ್ಲೇ ಇದ್ದಿದ್ದರೆ ಈಗಲೂ ನಮ್ಮನ್ನು ಡಿಫೆಂಡ್ ಮಾಡಿ ಈ ದೂರ್ವಾಸಮುನಿ ಮಾವನ ಹೊಡೆತ ತಪ್ಪಿಸುತ್ತಿದ್ದಳಲ್ಲ" ಎಂದು ಅನಿಸಿತ್ತು.

ಇವೆಲ್ಲ ಕಾರಣಗಳಿಂದಾಗಿ, ಅಜ್ಜಿಮನೆಯೆಂಬುದು ಪ್ರತಿ ಮಗುವಿನ ಬಾಲ್ಯದ ಅವಿಭಾಜ್ಯ ಅಂಗ; ಅಜ್ಜಿಮನೆ ವಾಸದ ಸಂತಸವನ್ನು ಯಾವ ಮಗುವೂ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಸ್ಪೆಶಲ್ ಕ್ಲಾಸ್, ಕಾನ್‌ವೆಂಟ್ ಅಡ್ಮಿಶನ್ ಇಂಟರ್‌ವ್ಯೂ ಅದು ಇದು ಅಂತ ನೆಪ ಹೇಳುತ್ತ ತನ್ನ ಮಗಳು, ನನ್ನ ನಾಲ್ಕು ವರ್ಷದ ಗರ್ಲ್ ಫ್ರೆಂಡ್ ನೀಲಾಳನ್ನು ಬೇಸಿಗೆ ರಜೆ ಕಳೆಯಲು ತನ್ನ ಅಜ್ಜಿ ಮನೆಗೆ ಕಳಿಸಲು ಮೀನಮೇಷ ಎಣಿಸುತ್ತಿದ್ದ ನನ್ನ ಸಹೋದರಿಗೆ ಈಗ್ಗೆ ಎರಡು ವಾರಗಳ ಹಿಂದಷ್ಟೇ ಗದರಿದ್ದೆ; ಅಜ್ಜಿಮನೆ ಆನಂದ ಅನುಭವಿಸುವುದು ಅವಳ ಜನ್ಮ ಸಿದ್ಧ ಹಕ್ಕು; ಅದನ್ನು ಯಾವ ಕಾರಣಕ್ಕೂ ಅವಳಿಂದ ಕಿತ್ತುಕೊಳ್ಳಬೇಡ. ಓದು ಬರಹ ಮುಗಿಸೋಕೆ ರಜೆ ಟೈಮೂ ಬೇಕಾ ಅಂತ ಮಕ ಮಕ ಬೈದಿದ್ದೆ. ಮಾರನೆಯ ದಿನವೇ ನನ್ನ ಕಿರಿಯ ಸಹೋದರನನ್ನು ಅವಳ ಮನೆಗೆ ಕಳಿಸಿ ಅವಳ ಅಜ್ಜಿ (ನನ್ನ ತಾಯಿ) ಮನೆಗೆ ಕರೆಸಿಕೊಂಡಿದ್ದೆ.

ಇವೆಲ್ಲ ನೆನಪಾಗಿದ್ದು ಮೊನ್ನೆ ಸೋಮವಾರ ನಮ್ಮ ಅಜ್ಜಿ ತೀರಿಕೊಂಡ ಸುದ್ದಿ ಬಂದಾಗ. ಕಳೆದ ವಾರಾಂತ್ಯ ಹುಬ್ಬಳ್ಳಿಗೆ ಹೋಗಿ ಅಣ್ಣನ ಮಗಳು ಮೇಘ ಳ ನಾಮಕರಣ ಸಮಾರಂಭ ಮುಗಿಸಿ ಸೋಮವಾರ ಬೆಳಿಗ್ಗೆ ನಾನು ಪ್ರಯಾಣಿಸುತ್ತಿದ್ದ ರೈಲು ಇನ್ನೇನು ಬೆಂಗಳೂರು ಸಿಟೀ ರೈಲು ನಿಲ್ದಾಣ ತಲುಪುವದರಲ್ಲಿದ್ದಾಗ ಮನೆಯಿಂದ ಕರೆ ಬಂತು; "ಬೆಳಿಗ್ಗೆ ಅಜ್ಜಿ ನಮ್ಮನ್ನೆಲ್ಲಾ ಬಿಟ್ಟು ಹೋದಳು" ಅಂತ.

ಬೆಳಿಗ್ಗೆ ಸಮಯಕ್ಕೆ ಇದ್ದ ಎರಡು ಎಕ್ಸ್‌ಪ್ರೆಸ್ ರೈಲುಗಳು ಆಗಲೇ ಬೆಂಗಳೂರಿನಿಂದ ಹೊರಟು ಬಿಟ್ಟಿದ್ದರಿಂದ ಮತ್ತು ಮುಂದಿನ ರೈಲು ಮಧ್ಯಾಹ್ನವಿದ್ದುದರಿಂದ, ನನಗಾಗ ವಾಪಸ್ ಹುಬ್ಬಳ್ಳಿಗೆ ಹೋಗಲು ಬಸ್ಸೇ ಗತಿಯಾಗಿತ್ತು. ತಕ್ಷಣ ಬಸ್ ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ಸಾಯಂಕಾಲ ಐದು ಘಂಟೆ ಆಗಬಹುದು ಎಂದರು. ಅಂತ್ಯ ಸಂಸ್ಕಾರವನ್ನು ಮಧ್ಯಾಹ್ನ ಎರಡು ಘಂಟೆಗೇ ಇಟ್ಟುಕೊಂಡಿದ್ದರೂ ಅಜ್ಜನ ಅಂತ್ಯ ಸಂಸ್ಕಾರವನ್ನೂ ತಪ್ಪಿಸಿಕೊಂಡಿದ್ದ ನನಗೆ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕೆಂದುಕೊಂಡೆ. ಮತ್ತೆ ವಾಪಸ್ ಹುಬ್ಬಳ್ಳಿಯ ಬಸ್ ಹಿಡಿದು ಹೊರಟೆ. ನನ್ನ ದುರಾದೃಷ್ಟ; ಕಡೆಗೂ ಅಂತ್ಯಸಂಸ್ಕಾರದ ವೇಳೆಗೆ ಸರಿಯಾಗಿ ತಲುಪಲಾಗಲಿಲ್ಲ.

ನೆರೆದಿದ್ದ ನೂರಾರು ಜನರಿಗೆ ತೊಂದರೆಯಾಗುವುದೆಂಬ ಕಾರಣವಾಗಿ ನಾನು ಹುಬ್ಬಳ್ಳಿ ತಲುಪುವಷ್ಟರಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟಿದ್ದರು. ಕಡೆಗೆ ಅಜ್ಜಿಯ ಸಮಾಧಿಯ ಹತ್ತಿರ ಹೋಗಿ ಸಮಾಧಿಯ ಮೇಲೆ ಹೂಮಾಲೆ ಹಾಕಿ "ನಿನ್ನ ಅಂತ್ಯ ಸಂಸ್ಕಾರಕ್ಕೂ ಬರಲಾಗಲಿಲ್ಲ, ನನ್ನನು ಕ್ಷಮಿಸಿಬಿಡಜ್ಜಿ, ಸಾಧ್ಯವಾದ್ರೆ ಈ ಜನ್ಮದಲ್ಲಿ ನಿನ್ನ ಋಣ ತೀರಿಸಲು ಪ್ರಯತ್ನಿಸುತ್ತೇನೆ" ಎಂದು ಬಿಕ್ಕಿ ಬಿಕ್ಕಿ ಅತ್ತು ಬಂದೆ. ಹುಟ್ಟೂರು ಬಿಟ್ಟು ಇಷ್ಟು ದೂರ ಇದ್ದು ಪ್ರೀತಿ-ಪಾತ್ರರ ಅಂತ್ಯ ಸಂಸ್ಕಾರಕ್ಕೂ ಸಮಯಕ್ಕೆ ಸರಿಯಾಗಿ ಹೋಗಲಾಗದ ನನ್ನ ಅಸಹಾಯಕತೆಗೆ ನನ್ನ ಮೇಲೆ ನನಗೇ ಜಿಗುಪ್ಸೆ ಬಂತು. ಊರು ಬಿಟ್ಟು ವಿದ್ಯಾಭ್ಯಾಸ, ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಕಳೆದುಕೊಂಡಿರುವ ಅತ್ಯಮೂಲ್ಯ ಅವಕಾಶಗಳಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಅವಕಾಶವೂ ಒಂದಾಗಿ ಹೋಯಿತು. ಅಜ್ಜಿಗೆ ಅಂತಿಮ ನಮನ ಸಲ್ಲಿಸಲಾಗದ ವಿಷಯ ತುಂಬಾ ನೋವಿನ ವಿಷಯವಾಗಿ ಕಾಡಿತು.

ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೇ ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟು ಹೋದರು. ಆ ಸಮಯದಲ್ಲಿ ನನ್ನ ಪರೀಕ್ಷೆಗಳು ಸಮೀಪಿಸುತ್ತಿದ್ದ ಕಾರಣ ಊರಿನವರ್ಯಾರೂ ನನಗೆ ಆ ಸುದ್ದಿ ತಿಳಿಸಿರಲಿಲ್ಲ. ಈಗ ಸುದ್ದಿ ತಿಳಿದರೂ ಅಜ್ಜಿಗೆ ಅಂತಿಮ ನಮನ ಸಲ್ಲಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಮನಸ್ಸಿಗೆ ಇನ್ನೂ ಖೇದವಾಗುತ್ತಿದೆ.

ಚಿತ್ರಕೃಪೆ: ಅಂತರ್ಜಾಲ

'

Monday, April 27, 2009

ಕೆಂಡಸಂಪಿಗೆಯಲ್ಲಿ 'ನಿನ್ನೊಲುಮೆಯ' ಪರಿಮಳ

'
ಇವತ್ತು ಬೆಳಿಗ್ಗೆ ಆಫೀಸಿಗೆ ಬಂದು, ಕಣ್ಣುಜ್ಜುತ್ತಾ (!) ನನ್ನ ಬ್ಲಾಗ್ ಡ್ಯಾಶ್‌ಬೋರ್ಡ್ ತೆರೆದು ಕೂತೆ. ಬ್ಲಾಗ್-ಮಿತ್ರರ ಬ್ಲಾಗುಗಳಲ್ಲಿ ಏನೇನು ಅಪ್‌ಡೇಟ್ಸ್ ಇವೆ ಅಂತ ನೋಡುತ್ತಿದ್ದಾಗ ಧರಿತ್ರಿಯವರ ಬ್ಲಾಗಿನಲ್ಲಿ ಕೆಂಡಸಂಪಿಗೆಗೆ ಥ್ಯಾಂಕ್ಯೂ ಹೇಳುವ ಬರಹವೊಂದಿತ್ತು. ಅರೆ, ಕೆಂಡ ಸಂಪಿಗೆಯಲ್ಲಿ ನಮ್ಮ ಧರಿತ್ರಿಯ ಬ್ಲಾಗಿನ ಬಗ್ಗೆ ಮಾಹಿತಿ ನೀಡಿದ್ದಾರಲ್ಲ ಅಂತ ಅಲ್ಲಿಂದ ಕೆಂಡಸಂಪಿಗೆಯ ಪರಿಮಳ ಹೀರಲು ಹೊರಟೆ. ಧರಿತ್ರಿ ಬಗ್ಗೆ ಓದಿ, ಹಾಗೆಯೇ ಇನ್ನಿತರ ಸುಮಾರು ಕನ್ನಡ ಬ್ಲಾಗುಗಳ ಬಗ್ಗೆ ಓದುತ್ತಾ ಹೋದಂತೆ ನನಗೊಂದು ಅಚ್ಚರಿ ಕಾದಿತ್ತು. ಉಮೇಶರ ನಿನ್ನೊಲುಮೆಯಿಂದಲೇ ಅನ್ನುವ ತಲೆಬರಹದಡಿಯಲ್ಲಿ ನನ್ನ ಬ್ಲಾಗಿನ ಬಗ್ಗೆಯೂ ಚಿಕ್ಕದಾದ ಚೊಕ್ಕದಾದ ಪರಿಚಯವಿತ್ತು! ಬ್ಲಾಗು ಲೋಕದ ಅತಿರಥ ಮಹಾರಥರ ಬ್ಲಾಗುಗಳ ಪರಿಚಯದ ನಡುವೆ ಏನಪ್ಪಾ ನನ್ನ ಬ್ಲಾಗಿನಂತ ಕೂಸುಮರಿಯ ಪರಿಚಯ ಅಂತ ಆಶ್ಚರ್ಯವಾಗಿ ಮತ್ತೊಂದು ಸಲ ಕಣ್ಣುಜ್ಜಿ ನೋಡಿದೆ. ಹೌದು, ನನ್ನ ಬ್ಲಾಗಿನ ಬಗ್ಗೆಯೇ!



ದಿನನಿತ್ಯ ಕಾಣುವ ಆಸಕ್ತಿಕರ ಸಂಗತಿಗಳನ್ನು, ಮನದ ಭಾವನೆಗಳನ್ನು, ನಾನೇ ಕ್ಲಿಕ್ಕಿಸುವ ಕೆಲವು ಛಾಯಾಚಿತ್ರಗಳನ್ನು ಮತ್ತು ಇನ್ನಿತರ ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ನಾನು ಈ ಬ್ಲಾಗುಲೋಕಕ್ಕೆ ಕಾಲಿಟ್ಟೆ. ನನ್ನ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ, ಮೆಚ್ಚಿ, ಪ್ರೋತ್ಸಾಹಿಸಿದ ಕೆಂಡಸಂಪಿಗೆಗೆ ಅನಂತಾನಂತ ಧನ್ಯವಾದಗಳು.

http://www.kendasampige.com/article.php?id=1774
'

Monday, April 6, 2009

ಸೋತು ಗೆಲ್ಲುವವರು...

'
ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲ ಪಕ್ಷಗಳ ಚುನಾವಣಾ ತಯಾರಿ ಜೋರಾಗಿಯೇ ನಡೆದಿರಬೇಕು. ಜಾಗೋ ರೇ, ಲೀಡ್ ಇಂಡಿಯಾ ಮುಂತಾದ ಕ್ಯಾಂಪೇನ್ ಗಳು "ವೋಟ್ ಮಾಡಿ, ವೋಟ್ ಮಾಡಿ" ಅಂತ ಮತದಾನದ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮತ ಚಲಾಯಿಸುವುದು ನಮ್ಮ ಹಕ್ಕು ಮತ್ತು ಆದ್ಯ ಕರ್ತವ್ಯ ಎರಡೂ ಹೌದು. ಆದರೆ ನಮ್ಮ ಈ ಮತದಾನದ ವ್ಯವಸ್ಥೆಯಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ. ಅದೇನಂದ್ರೆ "ಸೋತು ಗೆಲ್ಲುವ" ಅಭ್ಯರ್ಥಿಗಳದು.

"ಸೋತು ಗೆಲ್ಲುವವರು" ಅಂದ್ರೆ ಯಾರು ಅಂತೀರಾ? ಒಂದು ಉದಾಹರಣೆ ಸಮೇತ ಹೇಳಲು ಪ್ರಯತ್ನಿಸುತ್ತೇನೆ.

ಒಂದು ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರಿದ್ದಾರೆ ಮತ್ತು ಅಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯುತ್ತೆ ಎಂದಿಟ್ಟುಕೊಳ್ಳೋಣ. ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ತಲಾ ಮೂವತ್ತು ಸಾವಿರ ಮತಗಳು ಮತ್ತು ಮೂರನೆಯವನಿಗೆ ನಲವತ್ತು ಸಾವಿರ ಮತಗಳು ಲಭಿಸಿದವು ಎಂದಿಟ್ಟುಕೊಳ್ಳೋಣ. ಈಗ ನಮ್ಮ ಚುನಾವಣಾ ವ್ಯವಸ್ಥೆ ಗೆದ್ದವರು ಯಾರೆಂದು ಘೋಷಿಸುತ್ತೆ? ಮೂರನೆಯವನನ್ನು ತಾನೇ?

ಇಲ್ಲಿ ಗಮನಿಸತಕ್ಕ ಅಂಶವೆಂದರೆ, ಈ ಮೂರನೆಯ ಅಭ್ಯರ್ಥಿ ಆ ಕ್ಷೇತ್ರದ 60% ಮತದಾರರಿಂದ ತಿರಸ್ಕರಿಸಲ್ಪಟ್ಟವನು. ಅವನಿಗೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತು ಅವನು ವಿಜಯಿಶಾಲಿಯೇ ಆಗಿರಬಹುದು. ಆದರೆ, ಅವನು ತನಗೆ ಮತ ಹಾಕದ 60 ಪ್ರತಿಶತ ಮತದಾರರಿಂದ ತಿರಸ್ಕರಿಸಲ್ಪಟ್ಟವನು ಎಂಬ ಅಂಶ ಮಾತ್ರ ಸುಳ್ಳಲ್ಲ ತಾನೇ? ಇಂಥವರನ್ನೇ ನಾನು "ಸೋತು ಗೆಲ್ಲುವವರು" ಅಂತ ಸಂಭೋದಿಸಿದ್ದು.

ಇದು ನಮ್ಮ ಚುನಾವಣಾ ವ್ಯವಸ್ಥೆಯ ಲೊಪವೇ? ಹೌದಾಗಿದ್ದರೆ, ಇದಕ್ಕೆ ಪರಿಹಾರವೇನು?
'

Monday, March 30, 2009

ನಲ್ಮೆಯ ಪೋರಿಗೆ ಹ್ಯಾಪೀ ಬರ್ತ್ ಡೇ!

'

ಈಕೆ ನನ್ 'ಗರ್ಲ್-ಫ್ರೆಂಡು'; ಹೆಸ್ರು "ನೀಲಾ" ಅಂತ; ನನ್ನ ಒಡಹುಟ್ಟಿದ ಸಹೋದರಿಯ ಮಗಳು. ಈಕೆಯ ಇತ್ತೀಚಿನ ಭಾವಚಿತ್ರ ಸಿಗದ ಕಾರಣ ಈಕೆ ಎರಡು ವರ್ಷದ ಮಗುವಾಗಿದ್ದಾಗಿನ ಫೋಟೋನೇ ಹಾಕಿದೀನಿ.

ನೋಡೋದಕ್ಕೆ ಒಳ್ಳೇ ಪ್ರಿನ್ಸೆಸ್ ಥರಾ ಇದಾಳಲ್ವಾ?

ನಾವಿಬ್ರೂ ಪರಸ್ಪರ ತುಂಬಾ ಪ್ರೀತಿಸ್ತಿದೀವಿ; ನಾನು ಮದ್ವೆ ಅಂತ ಆದ್ರೆ ಇವಳನ್ನೇ ಅಂತ ಡಿಸೈಡ್ ಮಾಡಿದೀನಿ. ನೋಡೋಕೂ ಚೆನ್ನಾಗಿದಾಳೆ. ನನ್ನ ಒಡಹುಟ್ಟಿದ ಸಹೋದರಿಯ ಮಗಳಾದ್ದರಿಂದ ಜಾತಿ ಸಮಸ್ಯೆಯೂ ಇಲ್ಲ. ನಾನು ಇವಳನ್ನ ಮದ್ವೆ ಆಗೋಕೆ ನಂ ಮನೇಲಿ ಯಾರ ಅಭ್ಯಂತರವೂ ಇಲ್ಲ. ಸೋ ನಂ ಇಬ್ರ ಮದ್ವೇಗೆ ಯಾವುದೇ ಆತಂಕಾನೂ ಇರಲ್ಲ ಅಂದ್ಕೊಂಡಿದ್ದೆ.

ನನ್ನ ಮದ್ವೆ ಆಗೋಕೆ ಎರಡು ವರ್ಷದವಳು ಇದ್ದಾಗಿಂದಲೇ ಕೈಯಲ್ಲಿ ಹೂ ಹಿಡಿದು ಕಾಯ್ತಿದಾಳೆ...

ಎಲ್ಲಾ ಓಕೇ .. ಆದ್ರೆ ಇವಳ ಮನೇಲಿ ಇವಳ ಅಪ್ಪನದು ಒಬ್ಬನದೇ ತಕರಾರು; "ಬೇಡ, ಇಬ್ಬರಿಗೂ ವಯಸ್ಸಿನ ಅಂತರ ಜಾಸ್ತಿ" ಅಂತಿದಾನೆ. ಪ್ರೀತಿಗೆ ವಯಸ್ಸಿನ ಹಂಗು ಬೇಕೇ? ನೀವಾದ್ರೂ ಅವಳ ಅಪ್ಪನಿಗೆ ಸ್ವಲ್ಪ ಬುದ್ಧಿ ಹೇಳ್ತೀರಾ ಪ್ಲೀಸ್...

"ನನ್ನ ಮತ್ತು ಉಮಿ ಮಾಮಾನ ಮದ್ವೇಗೆ ಅಪ್ಪನನ್ನು ಹೆಂಗೆ ಒಪ್ಸೋದು?"

ಅಂದ್ ಹಾಗೆ ಇವತ್ತು ಈಕೆಯ ನಾಲ್ಕನೆಯ ವರ್ಷದ ಹ್ಯಾಪೀ ಬರ್ತ್‌ಡೇ; ವಿಶ್ ಯೂ ಅ ವೆರೀ ಹ್ಯಾಪೀ ಬರ್ತ್ ಡೇ ಪುಟ್ಟಾ! ಆದಷ್ಟು ಬೇಗ ಆ ದೇವ್ರು ನಿಮ್ ಅಪ್ಪನ್ಗೆ ಒಳ್ಳೇ ಬುದ್ಧಿ ಕೊಟ್ಟು, ನಮ್ಮಿಬ್ಬರ ಮದ್ವೇಗೆ ಒಪ್ಪೋ ತರ ಆಗ್ಲೀ ಅಂತ ಬೇಡ್ಕೋತೀನಿ :) .

ನೀವೂ ವಿಶ್ ಮಾಡ್ತೀರಾ ಅಲ್ವಾ ? :)
'

Thursday, March 26, 2009

ಯುಗ-ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ

'
ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು

'

Tuesday, March 17, 2009

ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

'
ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಸಾಯಂಕಾಲ ಕಛೇರಿಯಿಂದ ಬಂದ ಮೇಲೆ,
ಹೆಂಡತಿ ಅಡುಗೆ ಮಾಡುತ್ತಿರುತ್ತಾಳೆ,
ನನಗೆ ಅಡುಗೆ ಮನೆಯಲ್ಲಿನ ಪಾತ್ರೆಗಳ ಶಬ್ದ ಕೇಳುತ್ತಿರುತ್ತದೆ,
ನಾನು ಕಳ್ಳ ಹೆಜ್ಜೆ ಇಡುತ್ತಾ ಮನೆ ಪ್ರವೇಶಿಸುತ್ತೇನೆ,
ನನ್ನ ಕಪ್ಪು ಕಪಾಟಿ ನಿಂದ ಬಾಟಲಿಯನ್ನು ಹೊರತೆಗೆಯುವೆ,
ಶಿವಾಜಿ ಮಹಾರಾಜರು ಚಿತ್ರ ಪಟದಿಂದ ನನ್ನೆಡೆಗೆ ನೋಡುತ್ತಿದ್ದಾರೆ.
ಆದರೆ ಯಾರಿಗೂ ಇದು ಗೊತ್ತಿಲ್ಲ,
ಏಕೆಂದರೆ, ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಹಳೆಯ ಸಿಂಕಿನ ಮೇಲಿರುವ ರ್ಯಾಕಿನಿಂದ ಗ್ಲಾಸ್ ಎತ್ತಿಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುವೆ,
ಗ್ಲಾಸನ್ನು ತೊಳೆದು ವಾಪಸ್ ರ್ಯಾಕ್ ನಲ್ಲಿ ಇಡುವೆ,
ಹಾಂ ಖಂಡಿತ, ಬಾಟಲಿಯನ್ನು ವಾಪಸ್ ಕಪಾಟಿನಲ್ಲಿ ಇಡುವೆ,
ಶಿವಾಜಿ ಮಹಾರಾಜರು ಮುಗುಳ್ನಗುತ್ತಿದ್ದಾರೆ.

ಅಡುಗೆ ಮನೆಯೊಳಗೆ ಇಣುಕುವೆ,
ಹೆಂಡತಿ ಅಲೂಗಡ್ಡೆ ಹೆಚ್ಚುತ್ತಿದ್ದಾಳೆ,
ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೇಳಿದೆ, "ಅಯ್ಯರ್ ರವರ ಮಗಳ ಮದುವೆ ಬಗ್ಗೆ ಏನಾದರೂ ಸುದ್ದಿ ತಿಳಿಯಿತೇ?"
ಹೆಂಡತಿ ಉತ್ತರಿಸುತ್ತಾಳೆ "ಇಲ್ಲ, ಪಾಪ ನತದೃಷ್ಟೆ, ಅವಳಿಗಿನ್ನೂ ಅನುರೂಪದ ವರ ಸಿಕ್ಕಿಲ್ಲ"

ನಾನು ಮತ್ತೆ ಹೊರಬರುವೆ, ಕಪ್ಪು ಕಪಾಟಿ ನಿಂದ ಕ್ಷೀಣ ಸದ್ದು,
ಆದರೆ ಬಾಟಲಿ ಹೊರತೆಗೆಯುವಾಗ ಸದ್ದಾಗದಂತೆ ಜಾಗೃತೆ ವಹಿಸುತ್ತೇನೆ,
ಸಿಂಕಿನ ಮೇಲಿನ ಹಳೆಯ ರ್ಯಾಕ್ ನಿಂದ ಗ್ಲಾಸನ್ನು ತೆಗೆದುಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ,
ಬಾಟಲಿಯನ್ನು ತೊಳೆದು ಸಿಂಕಿನಲ್ಲಿ ಇಡುತ್ತೇನೆ,
ಮತ್ತು ಕಪ್ಪು ಗ್ಲಾಸನ್ನು ಕಪಾಟಿನಲ್ಲಿ,
ಆದರೆ ಇದು ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಮತ್ತೆ ಹೆಂಡತಿಯನ್ನು ಕೇಳುತ್ತೇನೆ,
"ಪರವಾಗಿಲ್ಲ ಬಿಡು, ಅಯ್ಯರ್ ರವರ ಮಗಳಿಗೆ ಇನ್ನೂ ಅಷ್ಟೇನೂ ವಯಸ್ಸಾಗಿಲ್ಲವಲ್ಲ"
ಅದಕ್ಕೆ ನನ್ನ ಹೆಂಡತಿ,
"ಏನು ಹೇಳ್ತಿದಿರಾ..ಅವಳಿಗೀಗಾಗಲೆ 28 ತುಂಬಿದೆ, ಕತ್ತೆ ವಯಸ್ಸಾಗಿದೆ.."
ನನಗೆ ಅವಳ ವಯಸ್ಸು ಮರೆತು ಹೋಗಿದೆ,
"ಓ ಹೌದಲ್ವಾ!' ನಾನುಲಿಯುವೆ.
ನಾನು ಮತ್ತೆ ನನ್ನ ಕಪ್ಪು ಕಪಾಟಿ ನಿಂದ ಅಲೂಗಡ್ಡೆ ಹೊರತೆಗೆಯುತ್ತೇನೆ,
ಆದರೆ ಕಪಾಟಿನ ಸ್ಥಳ ತನ್ನಿಂದ ತಾನೇ ಬದಲಾಗಿದೆ!
ರ್ಯಾಕಿನಿಂದ ಬಾಟಲಿ ತೆಗೆದು ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ.

ಶಿವಾಜಿ ಮಹಾರಾಜರು ಜೋರಾಗಿ ನಗುತ್ತಿದ್ದಾರೆ!
ನಾನು ರ್ಯಾಕ್ ಅನ್ನು ಅಲೂಗಡ್ಡೆಯೊಳಗೆ ಇಟ್ಟು,
ಶಿವಾಜಿ ಮಹಾರಾಜರ ಚಿತ್ರಪಟವನ್ನು ತೊಳೆದು,
ವಾಪಸ್ ಅದನ್ನು ಕಪ್ಪು ಕಪಾಟಿನಲ್ಲಿ ಇಡುತ್ತೇನೆ,
ಹೆಂಡತಿ ಸಿಂಕನ್ನು ಸ್ಟೋವ್ ಮೇಲೆ ಇಡುತ್ತಿದ್ದಾಳೆ,
ಆದರೆ ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೋಪದಿಂದ ಹೆಂಡತಿಗೆ ಕೇಳುತ್ತೇನೆ, "ನೀನು ಅಯ್ಯರ್ ಅವರನ್ನು ಕತ್ತೆ ಎಂದು ಕರೆಯುವೆಯ?
ಅವರನ್ನು ಮತ್ತೆ ಹಾಗೆ ಕರೆದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ! ಹುಷಾರ್!!"
ಅದಕ್ಕೆ ಹೆಂಡತಿ, "ಸುಮ್ಮನೇ ಏನೇನೋ ಗೊಣಗಾಡಬೇಡಿ,
ಹೊರಗೆ ಹೋಗಿ ಶಾಂತವಾಗಿ ಕುಳಿತುಕೊಳ್ಳಿ" ಎನ್ನುತ್ತಾಳೆ!
ನಾನು ಮತ್ತೆ, ಆಲೂಗಡ್ಡೆ ಯಿಂದ ಬಾಟಲಿ ತೆಗೆದು,
ಕಪ್ಪು ಕಪಾಟಿ ನೊಳಗೆ ಹೋಗಿ ಒಂದು ಪೆಗ್ ಮುಗಿಸುತ್ತೇನೆ.
ಸಿಂಕನ್ನು ತೊಳೆದು, ರ್ಯಾಕಿನ ಮೇಲೆ ಇಡುತ್ತೇನೆ.
ಹೆಂಡತಿ ನಗುತ್ತಿದ್ದಾಳೆ!

ಶಿವಾಜಿ ಮಹಾರಾಜರು ಇನ್ನೂ ಅಡುಗೆ ಮಾಡುತ್ತಿದ್ದಾರೆ.
ಆದರೆ, ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಈ ಸಾರಿ ನಗುತ್ತಾ ಹೆಂಡತಿಯನ್ನು ಕೇಳುತ್ತೇನೆ,
"ಹಾಗಾದರೆ, ಅಯ್ಯರ್ ರವರು ಕತ್ತೆಯನ್ನು ಮದುವೆ ಆಗುತ್ತಿದ್ದಾರೆಯೇ!?",
"ರೀ ಹೋಗಿ ನಿಮ್ಮ ಮುಖದ ಮೇಲೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ"
ಹೆಂಡತಿ ಅಬ್ಬರಿಸುತ್ತಾಳೆ.

ನಾನು ಮತ್ತೆ ಅಡುಗೆ ಮನೆಯೊಳಗೆ ಹೋಗುತ್ತೇನೆ,
ಸಾವಕಾಶವಾಗಿ ಸಿಂಕಿನ ಮೇಲೆ ಕುಳಿತುಕೊಳ್ಳುತ್ತೇನೆ,
ಸ್ಟೋವ್ ಕೂಡ ಸಿಂಕಿನ ಮೇಲಿದೆ,
ಹೊರಗಡೆ ರೂಮಿನ ಬಾಟಲಿಯೊಳಗಿಂದ ಯಾವುದೋ ಕ್ಷೀಣ ಸದ್ದು,

ನಾನು ಇಣುಕಿ ನೋಡುತ್ತೇನೆ,
ಹೆಂಡತಿ ಸಿಂಕಿನಲ್ಲಿ ಒಂದು ಪೆಗ್ ಮುಗಿಸುತ್ತಿದ್ದಾಳೆ!
ಆದರೆ ಯಾವ ಕತ್ತೆಗೂ ನಾನು ಏನು ಮಾಡಿದೆ ಎಂದು ಗೊತ್ತಿಲ್ಲ,
ಏಕೆಂದರೆ ಶಿವಾಜಿ ಮಹಾರಾಜರು(?!) ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಅಯ್ಯರ್ ರವರು ಇನ್ನೂ ಅಡುಗೆ ಮಾಡುತ್ತಿದ್ದಾರೆ,
ನಾನು ಚಿತ್ರಪಟ ದಿಂದ ಹೆಂಡತಿಯೆಡೆಗೆ ನೋಡಿ ಮುಗುಳ್ನಗುತ್ತಿದ್ದೇನೆ,
ಏಕೆಂದರೆ ನಾನು ಯಾವತ್ತೂ . . ಏನನ್ನು ತೆಗೆದುಕೊಳ್ಳುವುದಿಲ್ಲ?
ಅರೆ, ಮರೆತು ಹೋಯಿತಲ್ಲ!

- ಈ-ಮೇಲ್ ಫಾರ್ವರ್ಡ್ ಆಧಾರಿತ
'

Wednesday, February 4, 2009

ಕೊಡಚಾದ್ರಿ ಸೊಬಗು.. ನನ್ನ ಕ್ಯಾಮರದ ಕಣ್ಣಲ್ಲಿ ಕಂಡಂತೆ...

'ಕಳೆದ ವಾರಾಂತ್ಯವನ್ನು ನನ್ನ ಸ್ನೇಹಿತರೊಂದಿಗೆ ಕೊಡಚಾದ್ರಿಯಲ್ಲಿ ಕಳೆದೆ. ಅಲ್ಲಿ ತೆಗೆದ ಕೆಲವು ಚಿತ್ರಗಳು.


ಲಿಂಗನಮಕ್ಕಿ ಹಿನ್ನೀರು ಪ್ರದೇಶದಿಂದ ಕಂಡ ಸೂರ್ಯಾಸ್ತದ ದೃಶ್ಯ...




ಸಂಜೆ ಹೊಂಬೆಳಕು


ಸೂರ್ಯೋದಯ ನೋಡಲು ಹೋಗುವಾಗ ಕಂಡ ಬಾನಂಚಿನ ವರ್ಣ ಚಿತ್ತಾರ





ಮಂಜು ಮುಸುಕಿದ ದೃಶ್ಯ



ಸೂರ್ಯೋದಯದ ಆರಂಭ









ಆಹಾ!!.. ನಯನ ಮನೋಹರ!!!... ಅಲ್ವಾ?




















ಗಣಪತಿ ಗುಹೆ


ಶಂಕರಾಚಾರ್ಯ ಪೀಠದ ಸುಂದರ ದೃಶ್ಯ..




ಹೇಗಿದೆ ಕೊಡಚಾದ್ರಿಯ ಪ್ರಕೃತಿ ಸೌಂದರ್ಯ...


ಕೊಡಚಾದ್ರಿ ಸಮೀಪದಲ್ಲೇ ಇರುವ ಶಿವಪ್ಪ ನಾಯಕನ ಕೋಟೆ..


ಶಿವಪ್ಪ ನಾಯಕನ ದರ್ಬಾರ್ ನಡೆಯುತ್ತಿದ್ದ ಸ್ಥಳ..


ಅಭಿನವ ಶಿವಪ್ಪ ನಾಯಕ :)..


'