Monday, March 30, 2009

ನಲ್ಮೆಯ ಪೋರಿಗೆ ಹ್ಯಾಪೀ ಬರ್ತ್ ಡೇ!

'

ಈಕೆ ನನ್ 'ಗರ್ಲ್-ಫ್ರೆಂಡು'; ಹೆಸ್ರು "ನೀಲಾ" ಅಂತ; ನನ್ನ ಒಡಹುಟ್ಟಿದ ಸಹೋದರಿಯ ಮಗಳು. ಈಕೆಯ ಇತ್ತೀಚಿನ ಭಾವಚಿತ್ರ ಸಿಗದ ಕಾರಣ ಈಕೆ ಎರಡು ವರ್ಷದ ಮಗುವಾಗಿದ್ದಾಗಿನ ಫೋಟೋನೇ ಹಾಕಿದೀನಿ.

ನೋಡೋದಕ್ಕೆ ಒಳ್ಳೇ ಪ್ರಿನ್ಸೆಸ್ ಥರಾ ಇದಾಳಲ್ವಾ?

ನಾವಿಬ್ರೂ ಪರಸ್ಪರ ತುಂಬಾ ಪ್ರೀತಿಸ್ತಿದೀವಿ; ನಾನು ಮದ್ವೆ ಅಂತ ಆದ್ರೆ ಇವಳನ್ನೇ ಅಂತ ಡಿಸೈಡ್ ಮಾಡಿದೀನಿ. ನೋಡೋಕೂ ಚೆನ್ನಾಗಿದಾಳೆ. ನನ್ನ ಒಡಹುಟ್ಟಿದ ಸಹೋದರಿಯ ಮಗಳಾದ್ದರಿಂದ ಜಾತಿ ಸಮಸ್ಯೆಯೂ ಇಲ್ಲ. ನಾನು ಇವಳನ್ನ ಮದ್ವೆ ಆಗೋಕೆ ನಂ ಮನೇಲಿ ಯಾರ ಅಭ್ಯಂತರವೂ ಇಲ್ಲ. ಸೋ ನಂ ಇಬ್ರ ಮದ್ವೇಗೆ ಯಾವುದೇ ಆತಂಕಾನೂ ಇರಲ್ಲ ಅಂದ್ಕೊಂಡಿದ್ದೆ.

ನನ್ನ ಮದ್ವೆ ಆಗೋಕೆ ಎರಡು ವರ್ಷದವಳು ಇದ್ದಾಗಿಂದಲೇ ಕೈಯಲ್ಲಿ ಹೂ ಹಿಡಿದು ಕಾಯ್ತಿದಾಳೆ...

ಎಲ್ಲಾ ಓಕೇ .. ಆದ್ರೆ ಇವಳ ಮನೇಲಿ ಇವಳ ಅಪ್ಪನದು ಒಬ್ಬನದೇ ತಕರಾರು; "ಬೇಡ, ಇಬ್ಬರಿಗೂ ವಯಸ್ಸಿನ ಅಂತರ ಜಾಸ್ತಿ" ಅಂತಿದಾನೆ. ಪ್ರೀತಿಗೆ ವಯಸ್ಸಿನ ಹಂಗು ಬೇಕೇ? ನೀವಾದ್ರೂ ಅವಳ ಅಪ್ಪನಿಗೆ ಸ್ವಲ್ಪ ಬುದ್ಧಿ ಹೇಳ್ತೀರಾ ಪ್ಲೀಸ್...

"ನನ್ನ ಮತ್ತು ಉಮಿ ಮಾಮಾನ ಮದ್ವೇಗೆ ಅಪ್ಪನನ್ನು ಹೆಂಗೆ ಒಪ್ಸೋದು?"

ಅಂದ್ ಹಾಗೆ ಇವತ್ತು ಈಕೆಯ ನಾಲ್ಕನೆಯ ವರ್ಷದ ಹ್ಯಾಪೀ ಬರ್ತ್‌ಡೇ; ವಿಶ್ ಯೂ ಅ ವೆರೀ ಹ್ಯಾಪೀ ಬರ್ತ್ ಡೇ ಪುಟ್ಟಾ! ಆದಷ್ಟು ಬೇಗ ಆ ದೇವ್ರು ನಿಮ್ ಅಪ್ಪನ್ಗೆ ಒಳ್ಳೇ ಬುದ್ಧಿ ಕೊಟ್ಟು, ನಮ್ಮಿಬ್ಬರ ಮದ್ವೇಗೆ ಒಪ್ಪೋ ತರ ಆಗ್ಲೀ ಅಂತ ಬೇಡ್ಕೋತೀನಿ :) .

ನೀವೂ ವಿಶ್ ಮಾಡ್ತೀರಾ ಅಲ್ವಾ ? :)
'

Thursday, March 26, 2009

ಯುಗ-ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ

'
ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು

'

Tuesday, March 17, 2009

ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

'
ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಸಾಯಂಕಾಲ ಕಛೇರಿಯಿಂದ ಬಂದ ಮೇಲೆ,
ಹೆಂಡತಿ ಅಡುಗೆ ಮಾಡುತ್ತಿರುತ್ತಾಳೆ,
ನನಗೆ ಅಡುಗೆ ಮನೆಯಲ್ಲಿನ ಪಾತ್ರೆಗಳ ಶಬ್ದ ಕೇಳುತ್ತಿರುತ್ತದೆ,
ನಾನು ಕಳ್ಳ ಹೆಜ್ಜೆ ಇಡುತ್ತಾ ಮನೆ ಪ್ರವೇಶಿಸುತ್ತೇನೆ,
ನನ್ನ ಕಪ್ಪು ಕಪಾಟಿ ನಿಂದ ಬಾಟಲಿಯನ್ನು ಹೊರತೆಗೆಯುವೆ,
ಶಿವಾಜಿ ಮಹಾರಾಜರು ಚಿತ್ರ ಪಟದಿಂದ ನನ್ನೆಡೆಗೆ ನೋಡುತ್ತಿದ್ದಾರೆ.
ಆದರೆ ಯಾರಿಗೂ ಇದು ಗೊತ್ತಿಲ್ಲ,
ಏಕೆಂದರೆ, ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಹಳೆಯ ಸಿಂಕಿನ ಮೇಲಿರುವ ರ್ಯಾಕಿನಿಂದ ಗ್ಲಾಸ್ ಎತ್ತಿಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುವೆ,
ಗ್ಲಾಸನ್ನು ತೊಳೆದು ವಾಪಸ್ ರ್ಯಾಕ್ ನಲ್ಲಿ ಇಡುವೆ,
ಹಾಂ ಖಂಡಿತ, ಬಾಟಲಿಯನ್ನು ವಾಪಸ್ ಕಪಾಟಿನಲ್ಲಿ ಇಡುವೆ,
ಶಿವಾಜಿ ಮಹಾರಾಜರು ಮುಗುಳ್ನಗುತ್ತಿದ್ದಾರೆ.

ಅಡುಗೆ ಮನೆಯೊಳಗೆ ಇಣುಕುವೆ,
ಹೆಂಡತಿ ಅಲೂಗಡ್ಡೆ ಹೆಚ್ಚುತ್ತಿದ್ದಾಳೆ,
ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೇಳಿದೆ, "ಅಯ್ಯರ್ ರವರ ಮಗಳ ಮದುವೆ ಬಗ್ಗೆ ಏನಾದರೂ ಸುದ್ದಿ ತಿಳಿಯಿತೇ?"
ಹೆಂಡತಿ ಉತ್ತರಿಸುತ್ತಾಳೆ "ಇಲ್ಲ, ಪಾಪ ನತದೃಷ್ಟೆ, ಅವಳಿಗಿನ್ನೂ ಅನುರೂಪದ ವರ ಸಿಕ್ಕಿಲ್ಲ"

ನಾನು ಮತ್ತೆ ಹೊರಬರುವೆ, ಕಪ್ಪು ಕಪಾಟಿ ನಿಂದ ಕ್ಷೀಣ ಸದ್ದು,
ಆದರೆ ಬಾಟಲಿ ಹೊರತೆಗೆಯುವಾಗ ಸದ್ದಾಗದಂತೆ ಜಾಗೃತೆ ವಹಿಸುತ್ತೇನೆ,
ಸಿಂಕಿನ ಮೇಲಿನ ಹಳೆಯ ರ್ಯಾಕ್ ನಿಂದ ಗ್ಲಾಸನ್ನು ತೆಗೆದುಕೊಳ್ಳುವೆ,
ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ,
ಬಾಟಲಿಯನ್ನು ತೊಳೆದು ಸಿಂಕಿನಲ್ಲಿ ಇಡುತ್ತೇನೆ,
ಮತ್ತು ಕಪ್ಪು ಗ್ಲಾಸನ್ನು ಕಪಾಟಿನಲ್ಲಿ,
ಆದರೆ ಇದು ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಮತ್ತೆ ಹೆಂಡತಿಯನ್ನು ಕೇಳುತ್ತೇನೆ,
"ಪರವಾಗಿಲ್ಲ ಬಿಡು, ಅಯ್ಯರ್ ರವರ ಮಗಳಿಗೆ ಇನ್ನೂ ಅಷ್ಟೇನೂ ವಯಸ್ಸಾಗಿಲ್ಲವಲ್ಲ"
ಅದಕ್ಕೆ ನನ್ನ ಹೆಂಡತಿ,
"ಏನು ಹೇಳ್ತಿದಿರಾ..ಅವಳಿಗೀಗಾಗಲೆ 28 ತುಂಬಿದೆ, ಕತ್ತೆ ವಯಸ್ಸಾಗಿದೆ.."
ನನಗೆ ಅವಳ ವಯಸ್ಸು ಮರೆತು ಹೋಗಿದೆ,
"ಓ ಹೌದಲ್ವಾ!' ನಾನುಲಿಯುವೆ.
ನಾನು ಮತ್ತೆ ನನ್ನ ಕಪ್ಪು ಕಪಾಟಿ ನಿಂದ ಅಲೂಗಡ್ಡೆ ಹೊರತೆಗೆಯುತ್ತೇನೆ,
ಆದರೆ ಕಪಾಟಿನ ಸ್ಥಳ ತನ್ನಿಂದ ತಾನೇ ಬದಲಾಗಿದೆ!
ರ್ಯಾಕಿನಿಂದ ಬಾಟಲಿ ತೆಗೆದು ಶೀಘ್ರವಾಗಿ ಒಂದು ಪೆಗ್ ಮುಗಿಸುತ್ತೇನೆ.

ಶಿವಾಜಿ ಮಹಾರಾಜರು ಜೋರಾಗಿ ನಗುತ್ತಿದ್ದಾರೆ!
ನಾನು ರ್ಯಾಕ್ ಅನ್ನು ಅಲೂಗಡ್ಡೆಯೊಳಗೆ ಇಟ್ಟು,
ಶಿವಾಜಿ ಮಹಾರಾಜರ ಚಿತ್ರಪಟವನ್ನು ತೊಳೆದು,
ವಾಪಸ್ ಅದನ್ನು ಕಪ್ಪು ಕಪಾಟಿನಲ್ಲಿ ಇಡುತ್ತೇನೆ,
ಹೆಂಡತಿ ಸಿಂಕನ್ನು ಸ್ಟೋವ್ ಮೇಲೆ ಇಡುತ್ತಿದ್ದಾಳೆ,
ಆದರೆ ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಕೋಪದಿಂದ ಹೆಂಡತಿಗೆ ಕೇಳುತ್ತೇನೆ, "ನೀನು ಅಯ್ಯರ್ ಅವರನ್ನು ಕತ್ತೆ ಎಂದು ಕರೆಯುವೆಯ?
ಅವರನ್ನು ಮತ್ತೆ ಹಾಗೆ ಕರೆದರೆ ನಿನ್ನ ನಾಲಿಗೆ ಕತ್ತರಿಸುತ್ತೇನೆ! ಹುಷಾರ್!!"
ಅದಕ್ಕೆ ಹೆಂಡತಿ, "ಸುಮ್ಮನೇ ಏನೇನೋ ಗೊಣಗಾಡಬೇಡಿ,
ಹೊರಗೆ ಹೋಗಿ ಶಾಂತವಾಗಿ ಕುಳಿತುಕೊಳ್ಳಿ" ಎನ್ನುತ್ತಾಳೆ!
ನಾನು ಮತ್ತೆ, ಆಲೂಗಡ್ಡೆ ಯಿಂದ ಬಾಟಲಿ ತೆಗೆದು,
ಕಪ್ಪು ಕಪಾಟಿ ನೊಳಗೆ ಹೋಗಿ ಒಂದು ಪೆಗ್ ಮುಗಿಸುತ್ತೇನೆ.
ಸಿಂಕನ್ನು ತೊಳೆದು, ರ್ಯಾಕಿನ ಮೇಲೆ ಇಡುತ್ತೇನೆ.
ಹೆಂಡತಿ ನಗುತ್ತಿದ್ದಾಳೆ!

ಶಿವಾಜಿ ಮಹಾರಾಜರು ಇನ್ನೂ ಅಡುಗೆ ಮಾಡುತ್ತಿದ್ದಾರೆ.
ಆದರೆ, ಇದೆಲ್ಲ ಯಾರಿಗೂ ಗೊತ್ತಿಲ್ಲ,
ಏಕೆಂದರೆ ನಾನು ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ನಾನು ಈ ಸಾರಿ ನಗುತ್ತಾ ಹೆಂಡತಿಯನ್ನು ಕೇಳುತ್ತೇನೆ,
"ಹಾಗಾದರೆ, ಅಯ್ಯರ್ ರವರು ಕತ್ತೆಯನ್ನು ಮದುವೆ ಆಗುತ್ತಿದ್ದಾರೆಯೇ!?",
"ರೀ ಹೋಗಿ ನಿಮ್ಮ ಮುಖದ ಮೇಲೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ"
ಹೆಂಡತಿ ಅಬ್ಬರಿಸುತ್ತಾಳೆ.

ನಾನು ಮತ್ತೆ ಅಡುಗೆ ಮನೆಯೊಳಗೆ ಹೋಗುತ್ತೇನೆ,
ಸಾವಕಾಶವಾಗಿ ಸಿಂಕಿನ ಮೇಲೆ ಕುಳಿತುಕೊಳ್ಳುತ್ತೇನೆ,
ಸ್ಟೋವ್ ಕೂಡ ಸಿಂಕಿನ ಮೇಲಿದೆ,
ಹೊರಗಡೆ ರೂಮಿನ ಬಾಟಲಿಯೊಳಗಿಂದ ಯಾವುದೋ ಕ್ಷೀಣ ಸದ್ದು,

ನಾನು ಇಣುಕಿ ನೋಡುತ್ತೇನೆ,
ಹೆಂಡತಿ ಸಿಂಕಿನಲ್ಲಿ ಒಂದು ಪೆಗ್ ಮುಗಿಸುತ್ತಿದ್ದಾಳೆ!
ಆದರೆ ಯಾವ ಕತ್ತೆಗೂ ನಾನು ಏನು ಮಾಡಿದೆ ಎಂದು ಗೊತ್ತಿಲ್ಲ,
ಏಕೆಂದರೆ ಶಿವಾಜಿ ಮಹಾರಾಜರು(?!) ಯಾವತ್ತೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ!

ಅಯ್ಯರ್ ರವರು ಇನ್ನೂ ಅಡುಗೆ ಮಾಡುತ್ತಿದ್ದಾರೆ,
ನಾನು ಚಿತ್ರಪಟ ದಿಂದ ಹೆಂಡತಿಯೆಡೆಗೆ ನೋಡಿ ಮುಗುಳ್ನಗುತ್ತಿದ್ದೇನೆ,
ಏಕೆಂದರೆ ನಾನು ಯಾವತ್ತೂ . . ಏನನ್ನು ತೆಗೆದುಕೊಳ್ಳುವುದಿಲ್ಲ?
ಅರೆ, ಮರೆತು ಹೋಯಿತಲ್ಲ!

- ಈ-ಮೇಲ್ ಫಾರ್ವರ್ಡ್ ಆಧಾರಿತ
'