Tuesday, April 17, 2012

ಅಸಾಧ್ಯ ಅಪೇಕ್ಷೆ

ಒಬ್ಬ ವ್ಯಕ್ತಿ ಮಂಗಳೂರು ಬೀಚಿನ ದಡದ ಮೇಲೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ.

ಇದ್ದಕ್ಕಿದ್ದಂತೆ ಆಕಾಶದಲ್ಲಿ ಅವನ ತಲೆಯ ಮೇಲಿನ ಮೋಡವೆಲ್ಲ ಮುಸುಕುಗಟ್ಟಿ, ಆಕಾಶವಾಣಿಯೊಂದು ತೇಲಿ ಬಂತು -



“ಮಗು, ನಾನು ದೇವರು... ಇಷ್ಟು ದಿನ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ನಾನು ಪ್ರಸನ್ನನಾಗಿದ್ದೇನೆ. ನಿನಗೊಂದು ವರ ಕೊಡುತ್ತೇನೆ. ಏನು ಬೇಕೋ ಕೇಳು”

ಆ ವ್ಯಕ್ತಿಗೆ ತುಂಬಾ ಖುಷಿಯಾಯ್ತು.

ತಕ್ಷಣ ಕೇಳಿದ “ನನಗೆ ಇಲ್ಲಿಂದ ಹವಾಯಿ ದ್ವೀಪಕ್ಕೆ ಯಾವಾಗ ಬೇಕೋ ಆವಾಗ ಹೋಗಿ ಬರಲು ಸೇತುವೆಯೊಂದನ್ನು ಕಟ್ಟಿ ಕೊಡು”

ಅದಕ್ಕೆ ದೇವರು -

“ಮಗು, ನಿನ್ನ ಅಪೇಕ್ಷೆ ಅಸಾಧ್ಯವೇನಲ್ಲ, ಆದರೆ ತುಂಬಾ ಲೌಕಿಕವಾದದ್ದು ಮತ್ತು ಸ್ವಾರ್ಥದಿಂದ ಕೂಡಿದ್ದಾಗಿದೆ."

"ಸ್ವಲ್ಪ ಯೋಚನೆ ಮಾಡು – ಅಂಥದ್ದೊಂದು ಸೇತುವೆಯನ್ನು ಕಟ್ಟಲು ಸಪ್ತ ಸಾಗರಗಳಲ್ಲಿ ಬೃಹದಾಕಾರದ ಸ್ತಂಭಗಳನ್ನು ಸ್ಥಾಪಿಸಬೇಕಾಗುತ್ತದೆ..... ಎಷ್ಟೊಂದು ಸಿಮೆಂಟ್ ಮತ್ತು ಉಕ್ಕು ಖರ್ಚಾಗುತ್ತದೆ.... ಅದಕ್ಕೆ ಬೇಕಿರುವ ನೀರು, ಮಾನವ ಸಂಪನ್ಮೂಲ, ವಿದ್ಯುಚ್ಛಕ್ತಿ,.... ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಸಂಪನ್ಮೂಲಗಳ ವ್ಯಯವಾಗುತ್ತದೆ..."

"ನಿನ್ನೊಬ್ಬನ ಸ್ವಾರ್ಥಕ್ಕಾಗಿ ಅಷ್ಟೊಂದು ಸಂಪನ್ಮೂಲಗಳ ವ್ಯಯ ತರವಲ್ಲ ಮಗು...."

"ನನಗೂ ಕೀರ್ತಿ ತರುವಂಥ ಮತ್ತು ಸಕಲ ಜೀವ ಸಂಕುಲಕ್ಕೆ ನನ್ನ ಮೇಲಿನ ನಂಬಿಕೆ ಇನ್ನೂ ಹೆಚ್ಚಾಗುವಂಥ ಬೇರೆ ಯಾವುದಾದರೂ ವರ ಕೇಳು, ಖುಶಿಯಿಂದ ದಯಪಾಲಿಸುವೆ” ಎಂದ.

ಆ ವ್ಯಕ್ತಿ ತುಂಬಾ ಹೊತ್ತು ಯೋಚನೆ ಮಾಡಿ, ಕಡೆಗೆ ದೇವರಿಗೆ ಮತ್ತೆ ಕೇಳಿದ -

“ದೇವರೇ...... "

"ನನಗೆ ನನ್ನ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಕೊಡು....."

"ಅವಳ ಅಂತರಂಗವನ್ನು ಅರಿಯುವ ಶಕ್ತಿ ಕೊಡು......"

"ಅವಳು ಸುಮ್ಮನಿದ್ದಾಗ ಏನು ಯೋಚಿಸುತ್ತಿರುತ್ತಾಳೆ,.... "

"ಅವಳು ಏಕೆ ಅಳುತ್ತಾಳೆ,.... "

""ಏನಾಯ್ತು?" ಎಂದು ನಾ ಕೇಳಿದಾಗ ಅವಳು “ಏನೂ ಇಲ್ಲ” ಅಂದಾಗ ಅದರ ಗೂಢಾರ್ಥವೇನು ಎಂದು ಅರಿಯುವ ಶಕ್ತಿ ಕೊಡು....."

"ಒಟ್ಟಾರೆ ಅವಳನ್ನು ಖುಷಿಯಿಂದಿರಿಸುವ ಉಪಾಯವೆನು ಎಂದು ನನಗೆ ತಿಳಿಸಿಕೊಡು.....”



ದೇವರು ಉತ್ತರಿಸಿದ -

“ಮಗು, ನಿನಗೆ ಸೇತುವೆಯ ಮೇಲೆ ದ್ವಿಪಥ ರಸ್ತೆ ಬೇಕೋ ಅಥವಾ ಚತುಷ್ಪಥ ರಸ್ತೆ ಬೇಕೋ?”

-ಇಂಗ್ಲೀಷಿನಿಂದ ಅನುವಾದಿಸಿದ್ದು... ಸುಮ್ನೇ... ತಮಾಷೆಗೆ :-)

ಪ್ರೀತಿಯಿಂದ,

Tuesday, February 1, 2011

ಶಾಲೆಯ ದಿನಗಳು.... ಎಷ್ಟು ಸುಂದರ...!

ಸುಮ್ನೇ ಹಳೆಯ ಈ-ಮೇಲುಗಳನ್ನು ತಡಕಾಡುತ್ತಿದ್ದಾಗ ಸಿಕ್ಕ ಚಿತ್ರಗಳಿವು.... ಶಾಲೆಯ ದಿನಗಳು ಎಷ್ಟು ಸುಂದರ!... ಅಲ್ವಾ!? ಅನಿಸ್ತು :)

ಒಂದೊಂದೇ ಚಿತ್ರದಲ್ಲಿರುವ ಸಾಲುಗಳನ್ನು ಓದುತ್ತಾ ಹೋಗಿ... ಕೊನೆಯ ಚಿತ್ರವನ್ನು ಮಾತ್ರ ತಪ್ಪದೇ ನೋಡಿ :)

1)

2)

3)

4)

5)

ಈ ಚಿತ್ರಗಳನ್ನು ನೋಡಿ ನಾನು ಐದನೇ ತರಗತಿಯಲ್ಲಿದ್ದಾಗ 'ಕಲಂದರ್' ಎಂಬ ಸಹಪಾಠಿಯೊಬ್ಬ ಗಣಿತ ಪರೀಕ್ಷೆಯ ಪೇಪರ್ ನಲ್ಲಿ ರಾಮಾಚಾರಿ ಚಿತ್ರದ "ಯಾರಿವಳು ಯಾರಿವಳು" ಹಾಡನ್ನು ಬರೆದಿದ್ದು, ಸೊರಟೂರ್ ಎಂಬ ಮಾಸ್ತರರು ಅವನಿಗೆ ಎಲ್ಲರ ಮುಂದೆ ಬೆಂಡೆತ್ತಿದ್ದು ನೆನಪಾಗಿ ಒಳ್ಳೇ ನಗು ಬಂತು :)

ಪ್ರೀತಿಯಿಂದ,

Wednesday, November 17, 2010

ನಗು...ಎಂದಿದೆ...ಮಂಜಿನ...ಬಿಂದು... :)

.
ಅದು 25 ನೇ ಫೆಬ್ರುವರೀ 2008, ಸೋಮವಾರದ ಮುಂಜಾನೆ.

ನನ್ನ ಅಮೇರಿಕ ಭೇಟಿಯ ಮೊದಲ 'ಕೆಲಸದ' ದಿನ. ಎರಡು ದಿನ ಮುಂಚೇನೇ, ಅಂದರೆ ಶುಕ್ರವಾರ ಸಾಯಂಕಾಲವೇ ಅಲ್ಲಿಗೆ ಹೋಗಿದ್ದೆ... ಅಲ್ಲಿದ್ದ ಸ್ನೇಹಿತರೊಂದಿಗೆ ಗ್ರೋಸರೀ ಶಾಪಿಂಗ್ ಮುಗಿಸಿ, ಹತ್ತಿರದ ಮಿಶನ್ ಪೀಕ್ ಗಿರಿಸರಣಿಯ ತುತ್ತತುದಿಯವರೆಗೆ ಟ್ರೆಕಿಂಗ್ ಹೋಗಿಬಂದು, ಸುಂದರವಾದ ವಾರಾಂತ್ಯವನ್ನು ಕಳೆದು, ಅಂದು ಬೆಳಿಗ್ಗೆ ನನ್ನ ಮೊದಲ 'ಕೆಲಸದ' ದಿನದಂದು ಆಫೀಸ್ ಗೆ ಹೋಗಲು ತಯಾರಿ ನಡೆಸಿದ್ದೆ. ಅಮೇರಿಕದ San Joe ನಗರದ Extended Stay America ಹೊಟೆಲ್ ಮುಂಭಾಗದಲ್ಲಿ ನನ್ನನ್ನು ಕರೆದೊಯ್ಯಲು ಬರಲಿದ್ದ ಕ್ಯಾಬ್ ಗೋಸ್ಕರ ಕಾಯುತ್ತಾ ನಿಂತಿದ್ದೆ. ತಂಪಾದ ಆಹ್ಲಾದಕರ ವಾತಾವರಣ, ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಭೂರಮೆಯನ್ನು ನೋಡುತ್ತ ನಿಂತಿದ್ದ ನನ್ನ ಮೈ, ತಣ್ಣನೆ ಕುಳಿರ್ಗಾಳಿಗೆ ಸಣ್ಣಗೆ ನಡುಗುತ್ತಿತ್ತು.

ಆಗ ಅಲ್ಲಿಗೆ ಬಂದ ಹಸನ್ಮುಖಿ ಅಮೇರಿಕ ಪ್ರಜೆಯೊಬ್ಬ ನನ್ನನ್ನು ನೋಡಿ ಒಂದು ಬೆಚ್ಚಗೆಯ ಮುಗುಳ್ನಗೆಯೊಂದಿಗೆ "ಗುಡ್ ಮಾರ್ನಿಂಗ್" ಅಂದ!.. ನಂಗೆ ಇದು ಅನಿರೀಕ್ಷಿತವಾಗಿತ್ತು; ಕೆಲ ಕ್ಷಣ ಮಾತು ಹೊರಡಲಿಲ್ಲ.. ಏಕೆಂದರೆ ನಾವಿಬ್ಬರೂ ಒಬ್ಬರಿಗೊಬ್ಬರು ಅಪರಿಚಿತರು. ಆದರೂ ಸಹ ಆತ ಅಷ್ಟೊಂದು ಆತ್ಮೀಯತೆಯಿಂದ ವಿಶ್ ಮಾಡಿದಾಗ ಸುಮ್ಮನಿರಲಾಗಲಿಲ್ಲ; ಪ್ರತಿಯಾಗಿ ನಾನೂ "ಗುಡ್ ಮಾರ್ನಿಂಗ್" ಹೇಳಿದೆ.. ಆತ ಮತ್ತೆ ಅದೇ ಹಸನ್ಮುಖದೊಂದಿಗೆ "ಲವ್ಲೀ ವೆದರ್" ಅನ್ನುತ್ತ ನನ್ನ ಪ್ರತಿಕ್ರಿಯೆಗೂ ಕಾಯದೇ "ಹ್ಯಾವ್ ಅ ನೈಸ್ ಡೇ!" ಅಂತ ಹೇಳಿ ತನಗೋಸ್ಕರ ಬಂದ ಕಾರಿನಲ್ಲಿ ಹೊರಟೇ ಬಿಟ್ಟ... ನನ್ನ ಕ್ಷೀಣ "ಥ್ಯಾಂಕ್ ಯೂ ಅಂಡ್ ವಿಶ್ ಯೂ ಆಲ್ಸೋ ದ ಸೇಮ್" ಎಂಬ ಪ್ರತಿಕ್ರಿಯೆ ಅವನ ಕಿವಿಗೆ ಬಿತ್ತೋ ಇಲ್ಲ್ವೋ ನಾ ಕಾಣೆ!

ಅಂದು ಇಡೀ ದಿನ ನಾನು ಅದರ ಬಗ್ಗೆಯೇ ಯೋಚಿಸುತ್ತಿದ್ದೆ... ನಮ್ಮ ದೇಶದಲ್ಲಿ ತೀರಾ ಪರಿಚಯಸ್ತರು ಸಹ ಕೆಲವು ಸಲ ನೋಡಿಯೂ ನೋಡದವರಂತೆ ಹೋಗುತ್ತಿರುತ್ತಾರೆ. ನಾವಾಗಿ ಮಾತನಾಡಿಸಿದರೂ ಏನೋ ಕಾಟಾಚಾರಕ್ಕೆ ಎಂಬಂತೆ, ಇಲ್ಲವೇ ತಮ್ಮ ಕೆಲಸ ಇದ್ದರೆ ಸ್ವಲ್ಪ ಚೆನ್ನಾಗಿ ಮಾತಾಡಿ ಹೊರಡುತ್ತಾರೆ.. ಅಪರಿಚಿತರು ಮಾತನಾಡಿಸಿದರೆ ಅವರನ್ನು ಅನುಮಾನದಿಂದಲೇ ನೋಡುತ್ತಾರೆ.. ಅಂಥ ವಾತಾವರಣದಲ್ಲಿ ಬೆಳೆದಿದ್ದರಿಂದಲೋ ಏನೋ ನನಗೂ ಸಹ ಆ ವ್ಯಕ್ತಿ ಮೊದಲು ವಿಶ್ ಮಾಡಿದಾಗ ಸ್ವಲ್ಪ ದಿಗಿಲು, ಆಶ್ಚರ್ಯವಾಗಿದ್ದು. ಆದರೆ ಅವನ ಆ gesture ಇತ್ತಲ್ಲ, ಅದು ನಾನು ಇಡೀ ದಿನ ಉಲ್ಲಸಿತವಾಗಿರಲು ಸಹಾಯ ಮಾಡಿತೆನ್ನಬಹುದು... ಅವನೊಬ್ಬನೇ ಅಲ್ಲ, ಅಂದು ನಾನು Nortel Networks ನ Santa Clara ಆಫೀಸ್ ಗೆ ಹೋದಾಗ ನಾನು ಭೇಟಿ ಮಾಡಿದ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಮುಗುಳ್ನಗುತ್ತಾ ಮಾತನಾಡಿಸಿ, "Have a nice stay in US!" ಅಂತ ವಿಶ್ ಮಾಡಿದ್ರು.. ನನ್ನ ಜೀವನದಲ್ಲಿ ತುಂಬಾ ಖುಷಿ ಪಟ್ಟ ದಿನಗಳಲ್ಲಿ ಅದೂ ಒಂದು ಅನ್ನಬಹುದು.

ಹೌದೂ...!!?? ನಮ್ಮಲ್ಲಿ ಯಾಕೆ ಆ ತರದ ಹಸನ್ಮುಖಿಗಳು ತುಂಬಾ ವಿರಳ? ಯಾಕೆ ನಾವು ಒಬ್ಬರಿಗೆ ಒಂದು ಒಳ್ಳೆಯ ಮಾತನಾಡಲು ಅಷ್ಟೊಂದು ಮೀನಮೇಷ ಎಣಿಸುತ್ತೇವೆ?.. ನಮ್ಮ ಬಾಯಲ್ಲಿನ ಮುತ್ತುಗಳು ಎಲ್ಲಿ ಉದುರಿ ಹೋಗುತ್ತವೆಯೋ ಅನ್ನೋ ತರ? ಕೆಲವರ ಮುಂದಂತೂ ಮುಖ ಪೂರ್ತಿ ಗಂಟು ಹಾಕಿಕೊಂಡೇ ಮಾತನಾಡುತ್ತೇವೆ... ಇನ್ನು ಕೆಲವರ ಮೇಲೆ ವಿನಾಕಾರಣ ಸಿಡುಕುತ್ತೇವೆ.. ರೇಗುತ್ತೇವೆ.. ಕೆಲವರೊಂದಿಗೆ ನಗುತ್ತಾ ಮಾತನಾಡಿದರೂ ಅದರಲ್ಲಿ ಬಹುಪಾಲು ಕೃತ್ರಿಮ ನಗು ಅಡಗಿರುತ್ತದೆ... ಯಾಕೆ ಹೀಗೆ?... ನಮ್ಮ ತಪ್ಪಾ?... ನಾವು ಬೆಳೆದ ಪರಿಸರದ ತಪ್ಪಾ?...ಅಥವಾ ಇದಕ್ಕೆ ಬೇರೆ ಏನಾದ್ರೂ ಕಾರಣವಾ?... ಇದನ್ನು ಸರಿಪಡಿಸಲಾಗುವುದೇ ಇಲ್ಲವೇ?... ನಮ್ಮ ಮುಂದಿನ ಪೀಳಿಗೆಯೂ ಹೀಗೆಯೇ ಇರುತ್ತಾ?... ಇರಬೇಕಾ?... ಒಂದೂ ಗೊತ್ತಾಗ್ತಿಲ್ಲ...

ನಾವು ಯಾರನ್ನೋ ಮುಗುಳ್ನಗುತ್ತ ಮಾತನಾಡಿಸಿದರೆ ಅವರ ದಿನ ಚೆನ್ನಾಗಿರುತ್ತೆ ಅಂತಲ್ಲ; ಆದ್ರೆ ನಮ್ಮ ಆ ಒಂದು ಮುಗುಳ್ನಗು ಮತ್ತು ಮಾತುಗಳು ಅವರ ಮನಸ್ಸಿನ ಮೇಲೊಂದು ಧನಾತ್ಮಕ ಪ್ರಭಾವ ಬೀರಿ, ಅವರ ಮನೋಸ್ಥೈರ್ಯವನ್ನು ಹೆಚ್ಚಿಸಬಲ್ಲದು ಅನ್ನುವುದು ಸುಳ್ಳಲ್ಲ.

ನಾಳೆ ಬೆಳಿಗ್ಗೆ ನಿಮಗಿಷ್ಟಬಂದವರೊಬ್ಬರನ್ನು ಒಂದು ಮುಗುಳ್ನಗೆಯೊಂದಿಗೆ ಮಾತನಾಡುಸುತ್ತೀರಿ ತಾನೇ :) ?

ಮುಗುಳ್ನಗೆಯೊಂದಿಗೆ,

Thursday, November 4, 2010

ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು :)



ವೃತ್ತಿಜೀವನದಲ್ಲೊಂದು ಹೊಸ ಮೈಲುಗಲ್ಲು; ಹೊಸ ಅಧ್ಯಾಯವೊಂದರ ಪ್ರಾರಂಭ... ಅದಕ್ಕೂ ಮುಂಚೆ ಕಣ್ಮನ ತಣಿಸಿ, ನವೋಲ್ಲಾಸ ನೀಡಿದ ರಾಮೇಶ್ವರ, ಕನ್ಯಾಕುಮಾರಿ ಮತ್ತು ಮಧುರೈ ಪ್ರವಾಸ... ಈ ದೀಪಾವಳಿ ನನಗೋಸ್ಕರ ನೀಡಿದ ಕೊಡುಗೆ ಎನ್ನಲೇ... :)



ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು :)

ಪ್ರೀತಿಯಿಂದ,

Friday, August 20, 2010

ಹೀಗೊಂದು ನ್ಯೂಸ್ ಪೇಪರ್ ಪ್ರಸಂಗ...


ಸಹೋದ್ಯೋಗಿಗಳಾದ ಮಂಜು ಮತ್ತು ಗಿರೀಶ್ ನನ್ನ ಮತ್ತು ಪರಸ್ಪರ ಒಳ್ಳೆಯ ಸ್ನೇಹಿತರು. ಅವರಿಬ್ಬರೂ ನೆರೆಹೊರೆಯವರಾಗಿರುವುದು ಅವರ ನಡುವಿನ ಬಾಂಧವ್ಯ ಇನ್ನೂ ಹೆಚ್ಚಲು ಸಹಾಯಕವಾಗಿದೆಯೆನ್ನಬಹುದು.

ಇಬ್ಬರೂ ಸೇರಿದರೆ ತಾವು ಮತ್ತು ತಮ್ಮ ಬಾಡಿಗೆ ಮನೆಯ ಜೀವನದ ಬಗ್ಗೆಯೇ ಸಂಭಾಷಣೆ ನಡೆಯುತ್ತೆ. ನಾವೆಲ್ಲರೂ ಸೇರಿ ಕಾಫೀ ಟೈಮ್ ನಲ್ಲಿ ಕುಳಿತು ಹರಟೆ ಹೊಡೆಯುವಾಗಲೂ ಅವರ ಸುದ್ದಿಯದೇ ಮೇಲುಗೈ. "ನಮ್ಮ ಓನರ್ ಹಾಗೆ ಅಂದ", "ಹೀಗೆ ತಕರಾರು ಮಾಡಿದ", ಮುಂತಾದ ಓನರ್ ಬಗೆಗಿನ ಸಾಮಾನ್ಯ ಕಂಪ್ಲೇಂಟ್ ನಿಂದ ಹಿಡಿದು ಅಕ್ಕಪಕ್ಕದವರೊಂದಿಗಿನ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯದ ಬಗ್ಗೆಯೇ ಮಾತುಕತೆ. ಇಬ್ಬರೂ ಅಕ್ಕಪಕ್ಕದವರಾಗಿರುವುದರಿಂದ ಅಲ್ಲಿ ತಮ್ಮಿಬ್ಬರ ಮಧ್ಯದ ಭಿನ್ನಾಭಿಪ್ರಾಯದ ಬಗೆಗೂ ಮಾತುಕತೆ, ನಮ್ಮ ಸಲಹೆ ಕೇಳುವುದು ಮುಂತಾದವು ನಡೆದೇ ಇರುತ್ತವೆ.


ನೆರೆಹೊರೆಯರೂ ಮತ್ತು ಸಹೋದ್ಯೋಗಿಗಳೂ ಆದ ಕಾರಣ ಅವರಿಬ್ಬರೂ ಯಾವಾಗಲೂ ಒಟ್ಟಿಗೆ ಇದ್ದು, ತಮ್ಮಿಬ್ಬರ ಮನೆಗೂ ಸಾಮಾನ್ಯವಾಗಿ ಅವಶ್ಯವಿರುವ ಕೆಲಸವನ್ನು ಅವರು ಒಟ್ಟಿಗೇ ಮಾಡುವದು. ನ್ಯೂಸ್ ಪೇಪರ್ ತರಿಸೋದಿರಲಿ, ಇಬ್ಬರ ಮನೆಯ ಗ್ಯಾಸ್ ಕನೆಕ್ಶನ್ ಪಡೆಯಲಿರಲಿ, ತಮ್ಮ ಮನೆಗಳ ಚಿಕ್ಕ-ಪುಟ್ಟ ಆಲ್ಟರೇಶನ್ ಗಾಗಿ ಮನೆಯ ಓನರ್ ಜೊತೆಗೆ ಜಗಳವಾಡುವುದಿರಲಿ, ಇಂಥ ಎಲ್ಲ ಕೆಲಸಗಳನ್ನು ಅವರು ಒಟ್ಟಿಗೆ ಮಾಡುವದು. ತುಂಬಾ ಹಾಸ್ಯಪ್ರವೃತ್ತಿಯ ಮಂಜು ಇಂಥ ಕೆಲಸ ಕಾರ್ಯದಲ್ಲಿ ಗಿರೀಶನ ಕಾಲೆಳೆಯುವುದು, ಗೋಳು ಹೊಯ್ದುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಾಗಿ ಅಂತ ಕೆಲಸ ಮಾಡಿದಾಗಲೆಲ್ಲ ಅದೊಂದು ಸ್ವಾರಸ್ಯಕರ ಚರ್ಚೆಗೆ ನಾಂದಿಯಾಗಿದ್ದೂ ಉಂಟು.


ಮೊನ್ನೆ ಹೀಗೆಯೇ ಆಯ್ತು. ಇಬ್ಬರೂ ಒಬ್ಬನೇ ಪೇಪರ್ ಏಜೆಂಟ್ ಹತ್ತಿರ ನ್ಯೂಸ್ ಪೇಪರ್ ಹಾಕಿಸಿಕೊಳ್ಳುತ್ತಾರೆ. ಮನೆಗಳು ತೀರಾ ಅಕ್ಕಪಕ್ಕಾದವುಗಳಾಗಿರುವುದರಿಂದ, ಪೇಪರ್ ಹಾಕುವ ಹುಡುಗ ಎರಡೂ ಪೇಪರ್ ಗಳನ್ನು ಒಟ್ಟಿಗೆ ಇಬ್ಬರಲ್ಲಿ ಒಬ್ಬರ ಮನೆಯ ಮುಂದೆ ಎಸೆದು ಹೋಗುವುದು ವಾಡಿಕೆ. ಹೀಗಾಗಿ, ವಾಡಿಕೆಯಂತೆ ಪೇಪರ್ ನವ ಮೊನ್ನೆ ಇಬ್ಬರ ಪೇಪರ್ ನ್ನೂ ಒಟ್ಟಿಗೇ ಎಸೆದು ಹೋಗಿದ್ದಾನೆ. ಮಂಜುರ ಕಸಿನ್ ತಮ್ಮ ಪೇಪರ್ ನ ಎತ್ಕೊಂಡು ಗಿರೀಶ್ ರ ಪೇಪರ್ ನ ಅಲ್ಲೇ ಬಿಟ್ಟು ಒಳಗೆ ಹೋಗಿ ತಮ್ಮ ಕೋಣೆಯಲ್ಲಿ ಪೇಪರ್ ಓದುತ್ತ ಕುಳಿತಿದ್ದಾರೆ. ನಂತರ ಹೊರಗೆ ಬಂದ ಗಿರೀಶ್, ಮನೆಯ ಮುಂದೆ ಒಂದೇ ಪೇಪರ್ ಇರುವುದನ್ನು ನೋಡಿ, ಮಂಜು ತಮ್ಮ ಪೇಪರ್ ನ ಒಳಗೆ ತೆಗೆದುಕೊಂಡು ಹೋಗಿರಬಹುದು, ಇದು ನನ್ನದೇ ಇರಬೇಕು ಅಂತ ಪೇಪರ್ ನ ಅರ್ಧಂಬರ್ಧ ಓದಿ, ಅಲ್ಲೇ ಇಟ್ಟು, ವಾಕಿಂಗ್ ಗೋ ಇನ್ನೇನಕ್ಕೋ ಹೊರಗಡೆ ಹೋಗಿದ್ದಾರೆ. ಮಂಜುಗೆ ತಮ್ಮ ಪಾಲಿನ ಪೇಪರನ್ನು ತಮ್ಮ ಕಸಿನ್ ಎತ್ಕೊಂಡು ಒಳಗೆ ಓದುತ್ತ ಕುಳಿತಿರುವುದು ಗೊತ್ತಿಲ್ಲ. ಮಂಜು ಹೊರಗೆ ಬಂದು ನೋಡ್ತಾರೆ, ಕೇವಲ ಒಂದೇ ಪೇಪರ್ ಇದೆ. ಅರೇ! ಇನ್ನೊಂದು ಪೇಪರ್ ಎಲ್ಲಿ ಅಂತ ಯೋಚಿಸಿ, ಗಿರೀಶ್ ತಮ್ಮ ಪಾಲಿನ ಪೇಪರ್ ಎತ್ತಿಕೊಂಡಿರಬಹುದು, ಇದು ನನ್ನದೇ ಅಂದ್ಕೊಂಡು ಆ ಪೇಪರ್ ಅನ್ನೂ ತಾವೇ ಎತ್ಕೊಂಡು ಒಳಗೆ ಆರಾಮವಾಗಿ ಓದುತ್ತಾ ಕುಳಿತಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ವಾಕ್ ಮುಗಿಸಿ ವಾಪಸ್ ಬಂದ ಗಿರೀಶ್ ಮನೆಯ ಮುಂದಿನ ಪೇಪರ್ ಎತ್ಕೊಳೋಕೆ ನೋಡ್ತಾರೆ, ಅಲ್ಲಿ ಪೇಪರ್ ಇಲ್ವೇ ಇಲ್ಲ!. ಅರೆ, ಈಗ ತಾನೆ ಓದಿ ಇಟ್ಟು ಹೋಗಿದ್ದ ಪೇಪರ್ ಎಲ್ಲಿ ಹೋಯ್ತು ಅಂತ, ಒಳಗೆ ಹೆಂಡತಿಯನ್ನು ಕೇಳಿದ್ರೆ ನಾನು ತಂದಿಲ್ಲ ಅಂದ್ರಂತೆ. ಹಿಂದಿನ ದಿನ, ಪೇಪರ್ ಹಾಕುವ ಏಜೆಂಟ್ ತಿಂಗಳ ವಂತಿಗೆ ಹಣ ಸಂಗ್ರಹಿಸಲು ಬರುವದಿತ್ತು; ಆದರೆ ಯಾವುದೋ ಕಾರಣಕ್ಕೆ ಬಂದಿರಲಿಲ್ಲ. ಅದಕ್ಕೆ ಗಿರೀಶ್ ಗೆ, ಈ ಪೇಪರ್ ನವನು ವಂತಿಗೆ ಹಣ ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ಎತ್ಕೊಂಡು ಹೋಗಿದ್ದಾನೆ ಅಂತ ಅನುಮಾನ ಶುರುವಾಗಿದೆ!. ತಕ್ಷಣ ಜೇಬಿನಿಂದ ಮೊಬೈಲ್ ತೆಗೆದು ಪೇಪರ್ ಏಜೆಂಟ್ ಗೆ ಫೋನಾಯಿಸಿ "ಏನ್ರೀ ದುಡ್ಡು ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ತಗೊಂಡು ಹೋಗೋದೆ?" ಅಂತ ಚೆನ್ನಾಗಿ ದಬಾಯಿಸಿದ್ದಾರೆ. ಪಾಪ ಏಜೆಂಟ್, ಫುಲ್ಲ್ ಕನ್ಫ್ಯೂಸ್! "ಇಲ್ಲ ಸರ್, ನಾನು ಪೇಪರ್ ವಾಪಸ್ ತಂದಿಲ್ಲ, ಆದ್ರೆ ನೀವು ದುಡ್ಡು ಕೊಟ್ಟಿಲ್ಲ ಅಂತ ನನಗೇ ನೆನಪಿರಲಿಲ್ಲ, ಇವಾಗ ಬರ್ಲಾ ಸಾರ್, ದುಡ್ಡು ಕೊಡ್ತೀರಾ?" ಅಂತ ಕೇಳಿದ್ದಾನೆ. ಪೇಪರ್ ವಾಪಸ್ ತಗೊಂಡು ಹೋಗಿದ್ದಲ್ದೇ, ದುಡ್ಡು ಕೊಡ್ತೀರಾ ಅಂತ ಬೇರೆ ಕೇಳ್ತಿದಾನಲ್ಲ ಅಂತ ಗಿರೀಶ್ ಮತ್ತಷ್ಟು ಗರಂ ಆಗಿ ಅವ್ನ ಜೊತೆ ವಾದ ಮಾಡಿದ್ದಾರೆ. ಇಷ್ಟೆಲ್ಲಾ ಗಲಾಟೆ ಕೇಳಿ ಗಾಭರಿಯಾಗಿ ಹೊರಗೆ ಓಡಿ ಬಂದ ಮಂಜು ಮತ್ತವರ ಕಸಿನ್, ಏನಾಯ್ತು ಅಂತ ಕೇಳಿ, ಇಲ್ಲ ಮಾರಾಯ್ರೆ ಬೈ ಮಿಸ್ಟೇಕ್ ನಾವೇ ಎರಡೂ ಪೇಪರ್ ಎತ್ತ್ಕೊಂಡಿದ್ದು ಅಂತ ಹೇಳಿದ್ರಂತೆ. ಈಗ ಗಿರೀಶ್ ಸಿಟ್ಟು ಮಂಜು ಮೇಲೆ ವರ್ಗಾವಣೆಯಾಗಿದೆ. "ಏನ್ರೀ? ನಂ ಪೇಪರ್ ನ ನೀವು ತೆಗೆದಿರಿಸಿ ಆಟ ಆಡಿಸ್ತೀರಾ? ನಿಮ್ ಮೇಲೆ ಓನರ್ ಗೆ ಕಂಪ್ಲೇಂಟ್ ಮಾಡ್‌ಬೇಕಾ, ಹೇಗೆ?" ಅಂತ ನಯವಾಗಿ ದಬಾಯ್ಸಿದಾರೆ.

ಯಥಾಪ್ರಕಾರ ಇಂದು ಬೆಳಿಗ್ಗೆ ಕಾಫೀ ಟೈಮ್ ನಲ್ಲಿ, ಮೊನ್ನೆ ಹೀಗಾಯ್ತು ಅಂತ ಇಬ್ಬರೂ ತಮ್ಮ ತಮ್ಮ ವರ್ಷನ್ ನ ವಿವರಿಸುತ್ತಿದ್ದರೆ, ನಮಗೆಲ್ಲ ಒಳ್ಳೇ ನಗು :)

ಪ್ರೀತಿಯಿಂದ,

Thursday, August 12, 2010

ಲಾಲ್‌ಬಾಗ್ ಸುಂದರಿಯರು - ೨೦೧೦

ಕಳೆದ ವರ್ಷದ ಸ್ವಾತಂತ್ರೋತ್ಸವ ನಿಮಿತ್ತ ಲಾಲ್‌ಬಾಗ್ ಉದ್ಯಾನದಲ್ಲಿ ಏರ್ಪಡಿಸಿದ್ದ ಪುಷ್ಪಪ್ರದರ್ಶನದ ಚಿತ್ರಗಳನ್ನು ಲಾಲ್‌ಬಾಗ್ ಸುಂದರಿಯರು ಎಂಬ ಪೋಸ್ಟ್ ನಲ್ಲಿ ನೋಡಿದ್ದೀರಿ. ಇವು ಈ ವರ್ಷದ 'ಸುಂದರಿಯರು' ...



ಸಮಯದ ಅಭಾವದಿಂದ ಚಿತ್ರಗಳಿಗೆ ಶೀರ್ಷಿಕೆ/ಅಡಿಬರಹ ಬರೆಯಲಾಗಲಿಲ್ಲ. ಕ್ಷಮೆಯಿರಲಿ...

ಪ್ರೀತಿಯಿಂದ,

Monday, August 9, 2010

ಫಿಸಿಕ್ಸ್ ಮೇಷ್ಟ್ರೂ.. ಸ್ನೇಹಿತನೂ.. ಮತ್ತು ನಕಲಿ ಸಹಿಯೂ..

.
ಅದು ೨೦೦೧ ರ ಜುಲೈ - ಆಗಸ್ಟ್ ಸಮಯ ಇರಬೇಕು. ಆಗ ನಾನು ನನ್ನ ಬೀ. ಈ. ಎರಡನೇ ಸೆಮೆಸ್ಟರ್ ನಲ್ಲಿದ್ದೆ. ಎರಡನೆ ಸೆಮೆಸ್ಟರ್ ಗೆ ಫಿಸಿಕ್ಸ್ ಮತ್ತು ಮೆಕ್ಯಾನಿಕಲ್ ವರ್ಕ್‌ಶಾಪ್ ಇದ್ವು. ಫಿಸಿಕ್ಸ್ ಲ್ಯಾಬ್ ನಲ್ಲಿ ಒಂದು ಅಲಿಖಿತ ನಿಯಮ ಇತ್ತು. ಲ್ಯಾಬ್ ನಲ್ಲಿ ಪ್ರತಿ ವಾರದ ಪ್ರ್ಯಾಕ್ಟಿಕಲ್ ಕ್ಲಾಸ್ ನಂತರ ಎಲ್ಲರೂ ತಮ್ಮ ಅಬ್ಸರ್ವೇಶನ್ ಬುಕ್ ಅನ್ನು ಲ್ಯಾಬ್ ಫ್ಯಾಕಲ್ಟೀ ಗೆ ತೋರಿಸಿ ಅಂದಿನ ಎಕ್ಸ್‌ಪೆರಿಮೆಂಟ್ ನ ರೆಕಾರ್ಡ್ಸ್ ತೋರಿಸಿ ಅವರ ಸಹಿ ಪಡೆಯಬೇಕಿತ್ತು. ಕೆಲವು ಮೈಗಳ್ಳ ಹುಡುಗರು (ಕೆಲವು ಹುಡುಗಿಯರೂ ಸಹ!) ಲ್ಯಾಬ್ ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡದೇ ಸುಮ್ನೇ ಟೈಮ್ ಪಾಸ್ ಮಾಡಿ, ಬೇರೆಯವರ ರೀಡಿಂಗ್ಸ್ ಕಾಪೀ ಮಾಡಿ ತೋರಿಸುತ್ತಿದ್ದುದರಿಂದ ನಮ್ಮ ಫಿಸಿಕ್ಸ್ ಮೇಷ್ಟ್ರು ಈ ನಿಯಮವನ್ನು ಜಾರಿಗೆ ತಂದಿದ್ದರು. ನಂತರ ನಾವು ಅಬ್ಸರ್ವೇಶನ್ ಬುಕ್ ನಲ್ಲಿನ ರೀಡಿಂಗ್ ಮತ್ತು ಫಲಿತಾಂಶಗಳನ್ನು ಜರ್ನಲ್ ನಲ್ಲಿ ಬರೆದು ಮೇಷ್ಟರಿಗೆ ತೋರಿಸಬೇಕಿತ್ತು. ಸೆಮೆಸ್ಟರ್ ನ ಕೊನೆಯಲ್ಲಿ ಜರ್ನಲ್ ಗೆ ಅಂತ 5% ಇಂಟರ್ನಲ್ ಮಾರ್ಕ್ಸ್ ಇರ್ತಿದ್ವು ಮತ್ತು ಆ ಇಂಟರ್ನಲ್ ಮಾರ್ಕ್ಸ್ ಫೈನಲ್ ರಿಸಲ್ಟ್ ನಲ್ಲಿ ಕನ್ಸಿಡರ್ ಆಗ್ತಿದ್ವು. ಅಬ್ಸರ್ವೇಶನ್ ಬುಕ್ ನಲ್ಲಿ ಸಹಿ ಪಡೆದ ಎಕ್ಸ್‌ಪೆರಿಮೆಂಟ್ ಗಳಿಗೆ ಮಾತ್ರ ಜರ್ನಲ್ ನಲ್ಲಿ ಸಹಿ ಮಾಡುತ್ತಿದ್ದರು ಮತ್ತು ಎಲ್ಲ ಎಕ್ಸ್‌ಪೆರಿಮೆಂಟ್ ಗಳನ್ನು ದಾಖಲಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಸಂಪೂರ್ಣ ಮಾರ್ಕ್ಸ್ ಲಭಿಸುತ್ತಿತ್ತು.
.

.
ಇಂಟರ್ನಲ್ ಮಾರ್ಕ್ಸ್ ಗಿಟ್ಟಿಸಲೋಸುಗ ಕೆಲವು ಹುಡುಗರು ಅಬ್ಸರ್ವೇಶನ್ ಬುಕ್ ನಲ್ಲಿ ಮೇಷ್ಟ್ರ ಸಹಿಯನ್ನು ನಕಲು ಮಾಡುತ್ತಿದ್ದುದುಂಟು. ಹೀಗೆ ನಕಲು ಮಾಡುತ್ತಿದ್ದುದು ಮೇಷ್ಟರಿಗೂ ಗೊತ್ತಿದ್ದ ಕಾರಣ ಅವರು ಸಹ ಅಬ್ಸರ್ವೇಶನ್ ಬುಕ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಮಾರ್ಕ್ಸ್ ಕೊಡುತ್ತಿದ್ದರು.
.
ಸರಿ, ಸೆಮೆಸ್ಟರ್ ಕೊನೆಯ ಸಮಯ ಬಂದೇ ಬಿಟ್ಟಿತು. ಪ್ರಿಲಿಮಿನರೀ ಪ್ರ್ಯಾಕ್ಟಿಕಲ್ ಎಗ್ಸ್ಯಾಮ್ಸ್ ಬಂತು. ಆ ಸಮಯದಲ್ಲೇ ಇಂಟರ್ನಲ್ ಮಾರ್ಕ್ಸ್ ಅವಾರ್ಡ್ ಮಾಡುತ್ತಿದ್ದರು. ನನ್ನ ಸೀರಿಯಲ್ ನಂಬರಿಗೆ ಮುಂಚೆ ನನ್ನ ಕ್ಲಾಸ್‌ಮೇಟ್ ಒಬ್ಬನ ನಂಬರ್ ಇತ್ತು. ಪ್ರಿಲಿಮಿನರೀ ಎಗ್ಸ್ಯಾಮ್ ದಿನ ಮೇಷ್ಟರು ನಮ್ಮನ್ನೆಲ್ಲಾ ಲ್ಯಾಬ್ ನಲ್ಲಿ ನಮ್ಮ ನಮ್ಮ ಸೀರಿಯಲ್ ನಂಬರ್ ಪ್ರಕಾರ ಕ್ಯೂ ನಲ್ಲಿ ಬರಲು ಹೇಳಿ ಒಬ್ಬೊಬ್ಬರದೇ ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪರಿಶೀಲಿಸಿ ಮಾರ್ಕ್ಸ್ ಕೊಟ್ಟು ಕಳುಹಿಸಲು ಶುರು ಮಾಡಿದರು. ನನಗಿಂತ ಮುಂಚೆ ನನ್ನ ಸ್ನೇಹಿತನ ನಂಬರ್ ಇದ್ದುದರಿಂದ ಅವನು ನನಗಿಂತ ಮುಂಚೆ ಮೇಷ್ಟ್ರ ಬಳಿಗೆ ಹೋದ. ನಾನು ಸರದಿಯಲ್ಲಿ ಅವನ ಹಿಂದೆಯೇ ನಿಂತಿದ್ದೆ. ಮೇಷ್ಟರು ಅವನ ಅಬ್ಸರ್ವೇಶನ್ ಬುಕ್ ನ ಪ್ರತಿ ಪೇಜ್ ಅನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ, ಒಂದೊಂದೇ ಪುಟವನ್ನು ತಿರುವಿ ಹಾಕುತ್ತಾ, ಮಧ್ಯೆ ಒಂದು ಪೇಜ್ ನಲ್ಲಿ ತುಂಬಾ ಹೊತ್ತು ಮುಳುಗಿ ಹೋದರು. ಆಮೇಲೆ ಕತ್ತೆತ್ತಿ, ನನ್ನ ಸ್ನೇಹಿತನನ್ನು ದುರುಗುಟ್ಟಿ ನೋಡುತ್ತಾ "ಏನೋ ಫೋರ್ಜರಿ ಮಾಡ್ತೀಯಾ? ಎಷ್ಟು ಧೈರ್ಯ ನಿನಗೇ? ಈ ಪೇಜ್ ನಲ್ಲಿರೋ ಸಹಿ ನನ್ನದಲ್ಲ!" ಅಂತ ಗದರಿ, ಅದರ ಮುಂದಿನ ಪೇಜ್ ತಿರುಗಿಸಿ ಅಲ್ಲಿದ್ದ ಸಹಿಯನ್ನು ತೋರಿಸುತ್ತಾ "ಇದು ನನ್ನ ಸಹಿ, ಹಿಂದಿನ ಪೇಜ್ ನಲ್ಲಿರೋದು ನೀನು ಮಾಡಿದ ನಕಲು ಸಹಿ!" ಅಂತ ಗದರಿ, ಒಂದು ಮಾರ್ಕ್ ಕಡಿಮೆ ಕೊಟ್ಟು ಕಳುಹಿಸಿದರು. ನನ್ನ ಸ್ನೇಹಿತ ತನ್ನ ಎಕ್ಸ್‌ಪೆರಿಮೆಂಟ್ ಮುಗಿಸಿ, ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪಡೆದು ಹೊರಗೆ ಹೋದ.
.
ನಂತರ ನನ್ನ ಸರದಿ. ನಾನು ಕಾಲೇಜಿನಲ್ಲಿ ತುಂಬಾ ಒಬೀಡಿಯೆಂಟ್ ಸ್ಟೂಡೆಂಟ್ (!) ಆಗಿದ್ದರಿಂದ ನನಗೆ ಜರ್ನಲ್ ಗೆ ಫುಲ್ಲ್ ಮಾರ್ಕ್ಸ್ ಸಿಕ್ಕ್ವು. ನಾನು ಸಹ ನನ್ನ ಪ್ರ್ಯಾಕ್ಟಿಕಲ್ ಪ್ರಿಲಿಮಿನರೀ ಎಗ್ಸ್ಯಾಮ್ ಮುಗಿಸಿ ಹೊರಗೆ ಬಂದೆ. ನನ್ನ ಸ್ನೇಹಿತ ನಕಲು ಸಹಿ ಮಾಡಿದ್ದು ಅದಕ್ಕೆ ಮುಂಚೆ ನನಗೂ ಸಹ ಗೊತ್ತಿರಲಿಲ್ಲವಾದ್ದರಿಂದ ಅವನನ್ನೇ ಕೇಳಿ ವಿಷಯ ತಿಳಿದು ಕೊಳ್ಳುವ ಕುತೂಹಲದಿಂದ ಅವನನ್ನೇ ಹುಡುಕಿಕೊಂಡು ಹೊರಟೆ. ಅಲ್ಲಿ ಗಿಡದ ಕೆಳಗೆ ನನಗೋಸ್ಕರ ಕಾಯುತ್ತಾ ಕುಳಿತಿದ್ದ ನನ್ನ ಸ್ನೇಹಿತನೆಡೆಗೆ ಹೋಗಿ ನಯವಾಗಿ ಗದರುತ್ತ ಕೇಳಿದೆ "ಯಾಕೋ ಆ ತರ ಮಾಡಿದೆ.. ಮೇಷ್ಟರ ಸಹಿಯನ್ನೇ ನಕಲು ಮಾಡುವ ಧೈರ್ಯ ಹೇಗೋ ಬಂತು ನಿಂಗೆ? ಈಗ ನೋಡು ಒಂದು ಮಾರ್ಕ್ಸ್ ಕಡಿಮೆ ಬಂತಲ್ಲ ನಿಂಗೆ.." ಅಂತ ಗದರಿದೆ.
ಅದಕ್ಕವನು ನಗುತ್ತಾ ಏನು ಹೇಳಿದ ಗೊತ್ತಾ?

.

"ಲೋ, ಮಾರ್ಕ್ಸ್ ಕಥೆ ಬಿಟ್ಟ್ಹಾಕು; ತಮಾಷೆ ಏನು ಗೊತ್ತಾ!? ಮೇಷ್ಟ್ರು ಮೊದಲು 'ಈ ಸಹಿ ನನ್ನದಲ್ಲ' ಅಂದ್ರಲ್ಲ.. ಅದು ಅವರದೇ ಸಹಿ!.... ಅವರು ನಂತರದ ಪೇಜ್ ತೋರಿಸಿ 'ಇದು ನನ್ನ ಸಹಿ' ಅಂದ್ರಲ್ಲ.. ಅದು ನಾನು ಮಾಡಿದ ನಕಲು ಸಹಿ!!"

.

ನನಗೆ ನಗು ತಡೆಯಲಾರದೇ ಬಿದ್ದು ಬಿದ್ದು ನಕ್ಕಿದ್ದೆ.. ಈಗಲೂ ಗೆಳೆಯರೆಲ್ಲ ಸೇರಿದಾಗ ಆ ಘಟನೆಯನ್ನು ನೆನೆಸಿಕೊಂಡು ನಗುತ್ತಿರುತ್ತೇವೆ.

Thursday, October 15, 2009

ಹೊಣೆಗಾರಿಕೆ

ಮೊನ್ನೆ ಹೀಗೇ ನನ್ನ ಪರ್ಸನಲ್ ಮೇಲ್ ಬಾಕ್ಸ್ ನಲ್ಲಿ ಏನೋ ಹುಡುಕುತ್ತಿದ್ದಾಗ ನನಗೆ ಸ್ನೇಹಿತರೊಬ್ಬರು ತುಂಬಾ ಹಿಂದೆ ಕಳಿಸಿದ್ದ ಈ-ಮೇಲ್ ಒಂದು ಕಣ್ಣಿಗೆ ಬಿತ್ತು. ಪರಮಹಂಸ ಶ್ರೀ ನಿತ್ಯಾನಂದ ಎಂಬ ಮಹನೀಯರೊಬ್ಬರು ಬರೆದ ಒಂದು ಚಿಕ್ಕ ಲೇಖನ ಅದರಲ್ಲಿತ್ತು. ಅದು ಜುಲೈ 13, 2006 ರ ಎಕನಾಮಿಕ್ ಟೈಮ್ಸ್ ನ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿತ್ತಂತೆ. ಒಬ್ಬ ವ್ಯಕ್ತಿ ಜೀವನದ ಯಾವುದೇ ರಂಗದಲ್ಲಿ ಬೆಳೆಯಲು ಮೂಲಭೂತವಾದ ಮತ್ತು ಅತಿ ಅಗತ್ಯವಾದ ಅಂಶಗಳಲ್ಲಿ ನಾವು ಮಾಡುವ ಪ್ರತಿ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನಾವೇ ಹೊರುವುದು ಎಷ್ಟು ಮುಖ್ಯ ಎಂದು ಅದರಲ್ಲಿ ಅವರು ತುಂಬಾ ಚೆನ್ನಾಗಿ ವಿವರಿಸಿದ್ದರು. ಅದರಲ್ಲಿನ ಕೆಲವು ಅಣಿಮುತ್ತುಗಳು, ಇಲ್ಲಿ ನಿಮ್ಮೆಲ್ಲರಿಗಾಗಿ:

1) Responsibility is consciousness.

2) When you work with no feelings of responsibility, you will work and feel like a slave. When you work with responsibility, your capacity will expand and you will flower and radiate energy.

3) When you take up responsibility for the entire cosmos, you will expand and look like a leader!

ಹೌದಲ್ವಾ! ದಿನ ನಿತ್ಯ ನಾವು ಎಷ್ಟೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಾಗಲಿ, ಕೆಲಸದ ಮೇಲಿರಲಿ, ನಮ್ಮನ್ನು ನಂಬಿ ನಮ್ಮ ಮೇಲೆ ಒಂದಿಲ್ಲೊಂದು ಕೆಲಸವನ್ನು ವಹಿಸಿರುತ್ತಾರೆ. ಆ ಕೆಲಸವನ್ನು ನಾವು ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ; ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕೆಲಸ ಮುಗಿಸಿ ಕೈ ತೊಳೆದುಕೊಳ್ಳಲಾಗುವುದಿಲ್ಲ. ನಂತರದ ಎಲ್ಲ ಪರಿಣಾಮಗಳಿಗೂ ನಾವೇ ಹೊಣೆಗಾರರಾಗಿರಬೇಕಾಗುತ್ತದೆ. ಈ ಹೊಣೆಗಾರಿಕೆಯನ್ನೇ ನಾವು ಅಕೌಂಟಬಿಲಿಟೀ, ಉತ್ತರದಾಯಿತ್ವ ಅನ್ನೋದು. ಶ್ರೀ ನಿತ್ಯಾನಂದರು ಹೇಳಿದಂತೆ, ಜವಾಬ್ದಾರಿ ಇಲ್ಲದೇ ಕೆಲಸ ಮಾಡಿದರೆ ನಾವು ಗುಲಾಮರಂತಾಗುತ್ತೇವೆ. ಅದೇ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಉಳಿದವರಿಗೆ ಮಾದರಿಯಾಗುವ ನಾಯಕರಾಗುತ್ತೇವೆ.


ಜೀವನದಲ್ಲಿ ಬೆಳೆಯಬೇಕೆಂದರೆ ಸ್ವಲ್ಪ ಮಟ್ಟಿಗಿನ ಕ್ಯಾಲ್ಕ್ಯುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ. ನಮ್ಮ ಸ್ವಯಂ ಶಕ್ತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದರೆ ಮಾತ್ರ ಆ ತರಹದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ. ಆದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದೇ, ಯಾವುದೇ ಕೆಲಸದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಳ್ಳದೇ ಕೆಲಸ ಮಾಡುವುದು ಗುಲಾಮಗಿರಿಯಲ್ಲದೇ ಬೇರೇನಲ್ಲ. ನಾವು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದನ್ನು ಸಮರ್ಪಕವಾಗಿ ಮಾಡಿ ಮುಗಿಸಿದಾಗ ಅದರಿಂದ ಒಳ್ಳೆಯದೇ ಆಗಬಹುದು, ಅಥವಾ ಕೆಟ್ಟದ್ದೂ ಆಗಬಹುದು. ಒಳ್ಳೆಯದಾದ್ರೆ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಲು ಸ್ಪೂರ್ತಿ ಸಿಗುತ್ತದೆ ಮತ್ತು ನಮ್ಮ ಆತ್ಮ ವಿಶ್ವಾಸ (ಸೆಲ್ಫ್ ಕಾನ್ಫಿಡೆನ್ಸ್) ಹೆಚ್ಚುತ್ತದೆ. ಒಂದು ವೇಳೆ ಕೆಲಸದ ಪರಿಣಾಮ ಅನಿರೀಕ್ಷಿತವಾಗಿ ಕೆಟ್ಟದ್ದಾದರೆ ನಾವು ಒಂದು ಹೊಸ ಪಾಠ ಕಲಿತಂತಾಗುತ್ತದೆ. ಮುಂದಿನ ಸಲ ಯಾವುದೇ ಕೆಲಸ ಮಾಡುವಾಗ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ. ಹೊಣೆಗಾರಿಕೆಯೇ ಇಲ್ಲದೇ ಕೆಲಸ ಮಾಡಿದಾಗ 'ಕೆಲಸ ಮಾಡಿ ಪ್ರತಿಫಲ ಪಡೆದೆ' ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲಾಗುವುದಿಲ್ಲ. ಕಡೇತನಕ ಬೇರೆಯವರು ಹೇಳುವ ಕೆಲಸವನ್ನೇ ಮಾಡುತ್ತಾ "ನೀ ಹೇಳಿದೆ, ಅದಕ್ಕೆ ನಾ ಮಾಡಿದೆ" ಎಂಬ ಉಡಾಫೆ ಪ್ರವೃತ್ತಿ ಮೈಗೂಡುತ್ತದೆ.

ಜವಾಬ್ದಾರಿ ಬಂದಾಗ ನಿಭಾಯಿಸುವುದು ಬೇರೆ, ನಾವೇ ಜವಾಬ್ದಾರಿ ಹೊರಲು ಮುಂದಾಗುವುದು ಬೇರೆ. ಜೀವನದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ. ಜವಾಬ್ದಾರಿ ಹೊರಲು ಸಿದ್ಧನಿರದವನು ಅದು ತಾನಾಗೇ ಬಂದಾಗಲೂ ಒಂದಿಲ್ಲೊಂದು ಕಾರಣ ಹೇಳಿ ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸ್ತಾನೆ. ಹಾಗಾದಾಗ, ಆ ವ್ಯಕ್ತಿಯ ಜೀವನ ನಿಂತ ನೀರಾಗುತ್ತದೆ. ಹಳೆಯ ಸೋಲನ್ನೆಲ್ಲ ಮರೆತು, ಸಾಧ್ಯವಾದರೆ ಅವುಗಳಿಂದ ಸ್ವಲ್ಪ ಪಾಠವನ್ನೂ ಕಲಿತು, ಮೈಗೊಡವಿ ಎದ್ದು ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧನಾಗುವವನಿಗೆ ಒಂದಿಲ್ಲೊಂದು ಅವಕಾಶ ಹುಡುಕಿಕೊಂಡು ಬರುತ್ತದೆ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತುಂಬಾ ಅಗತ್ಯ ಕೂಡ.

ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ - ನಾವು ಮಾಡುವ ಕೆಲಸದ ಸಂಪೂರ್ಣ ಜವಾಬ್ದಾರಿ ಹೊರಲು ಸಿದ್ಧರಾದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಹೊಣೆಗಾರಿಕೆಯಿಂದ ಮಾಡುವ ಒಂದು ಪುಟ್ಟ ಕೆಲಸವು ನೀಡುವ ತೃಪ್ತಿ, ಆತ್ಮ ಸಂತೋಷವನ್ನು ಹೊಣೆಗಾರಿಕೆಯಿಲ್ಲದೇ ಮಾಡುವ ಎಷ್ಟೇ ದೊಡ್ಡ ಮತ್ತು ಎಷ್ಟೇ ದುಡ್ಡು ತಂದು ಕೊಡುವ ಯಾವ ಗುಲಾಮಗಿರಿ ಕೆಲಸವೂ ಕೊಡಲ್ಲ, ಅಲ್ವಾ?

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


ತಮಗೆ ಮತ್ತು ತಮ್ಮ ಕುಟುಂಬವರ್ಗದವರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಗಳ ಹಬ್ಬ ನಮ್ಮೆಲ್ಲರ ಬಾಳಿನಲ್ಲಿ ಇಂತಹ ಅನಂತ ದಿವ್ಯಜ್ಞಾನದ ಜ್ಯೋತಿಗಳನ್ನು ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.

Tuesday, September 1, 2009

ಕಟು ಸತ್ಯ

'
ನನ್ನ ಮೊಟ್ಟಮೊದಲ ಬ್ಲಾಗ್ ಪೋಸ್ಟ್ ನಲ್ಲಿ ತಮಿಳರ ಭಾಷಾ ದುರಭಿಮಾನ ಮತ್ತು ಬೆಂಗಳೂರಿನ ಬಗ್ಗೆ ಬರೆದಿದ್ದೆ. ಬೆಂಗಳೂರಿನಲ್ಲಿ ತಮಿಳರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ಸ್ವಂತ ಅನುಭವವೊಂದನ್ನು ಆಧಾರವಾಗಿಟ್ಟುಕೊಂಡು ಆ ಪುಟ್ಟ ಲೇಖನದಲ್ಲಿ ಹೇಳಿದ್ದೆ. ಆ ಕಟು ಸತ್ಯವನ್ನು ಪುಷ್ಟೀಕರಿಸುವಂತಹ ಈ-ಮೈಲ್ ಫಾರ್ವರ್ಡ್ ಒಂದು ನಿನ್ನೆ ಸ್ನೇಹಿತನೊಬ್ಬನಿಂದ ಬಂತು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಒದಗಿರುವ ದುಸ್ಥಿತಿಯನ್ನು ಬಿಂಬಿಸುವ ಈ ಚಿತ್ರವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

'ಈ ಕಾರ್ಟೂನ್ ಚಿತ್ರಿಸಿದ ರಾಮಧ್ಯಾನಿ ಅವರಿಗೆ ಧನ್ಯವಾದಗಳು.

Tuesday, August 25, 2009

ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.
ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.

ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.

ಚಿತ್ರಕೃಪೆ: ಅಂತರ್ಜಾಲ

ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.