Thursday, May 28, 2009

ಆಶಾವಾದ...

ಸ್ನೇಹಿತನೊಬ್ಬ ಈ-ಮೇಲ್ ನಲ್ಲಿ ಕಳಿಸಿದ್ದು...
ಎರಡು ಗಂಡು ಕತ್ತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತವೆ:

ಒಂದು ಕತ್ತೆ: "ಗೆಳೆಯ, ನನ್ನ ಯಜಮಾನ ನನಗೆ ವಿಪರೀತ ಹೊಡೆದು ಹಿಂಸೆ ಕೊಡುತ್ತಾನೆ."
ಎರಡನೆ ಕತ್ತೆ: "ಹಾಗಿದ್ದರೆ ನೀನು ಓಡಿ ಹೋಗಬಾರದೇಕೆ?"
ಮೊದಲ ಕತ್ತೆ: "ಓಡಿ ಹೋಗಬಹುದಿತ್ತು, ಆದರೆ ಇಲ್ಲಿ ನನಗೆ ಉತ್ತಮ ಭವಿಷ್ಯವಿದೆ... ಯಜಮಾನನ ಸುಂದರ ಮಗಳು ತುಂಟತನ ಮಾಡಿದಾಗಲೆಲ್ಲ ಯಜಮಾನ ಅವಳಿಗೆ ಹೇಳುತ್ತಿರುತ್ತಾನೆ - 'ನಿನ್ನ ಮದುವೆ ಕತ್ತೆ ಜೊತೆ ಮಾಡುತ್ತೇನೆ...!' ಎಂದು. ನಾನು ಅದೇ ಆಶಾವಾದದಿಂದ ಇಲ್ಲಿಯೇ ಇದ್ದೇನೆ."
'
ಆಶಾವಾದಿಯಾಗಿರೋದ್ರಿಂದ ನಮ್ಮ ಭವಿಷ್ಯ ಉತ್ತಮವಾಗದೆ ಇರಬಹುದು. ಆದರೆ ಅದು ಸದ್ಯದ ನಮ್ಮ ಕಷ್ಟವನ್ನು ಇನ್ನಷ್ಟು ಸಹ್ಯವಾಗಿಸುತ್ತೆ.


ಆಶಾವಾದಿತನ ಅಂದ್ರೆ ಇದೇ ಇರಬಹುದೇನೋ :)

'

Friday, May 22, 2009

ಅಜ್ಜಿಮನೆ

'

ಮಕ್ಕಳ ಬಾಲ್ಯಜೀವನದ ಒಂದು ಅವಿಭಾಜ್ಯ ಅಂಗ ಅಂದ್ರೆ ಅಜ್ಜಿಮನೆ. ತಂದೆಯ ತಾಯಿಯೂ ಅಜ್ಜಿ ಆಗುತ್ತಾಳಾದರೂ ಆ ಅಜ್ಜಿಯ ಮನೆ ನಮ್ಮ ಮನೆಯೇ ಆಗಿದ್ದರಿಂದ ನಮಗೆಲ್ಲ ಅಮ್ಮನ ತವರುಮನೆಯೇ ಅಜ್ಜಿಮನೆ ಆಗಿತ್ತು.

ಬೇಸಿಗೆ ರಜೆ ಬಂತೆಂದರೆ ಸಾಕು, ಎಲ್ಲ ಮಕ್ಕಳು ಅಜ್ಜಿಮನೆ ಸೇರುತ್ತವೆ. ನಾನು ಚಿಕ್ಕವನಿದ್ದಾಗಲಂತೂ ಬೇಸಿಗೆ ರಜೆ ಬಂತೆಂದರೆ ಸಾಕು "ನಾನು ಅಜ್ಜಿ ಮನೆಗೆ ಹೊಗ್ತೇನೆ" ಅಂತ ರಚ್ಚೆ ಹಿಡಿದುಬಿಡುತ್ತಿದ್ದೆ. ಬೇಸಿಗೆ ರಜೆಯಲ್ಲಿ ಅಜ್ಜಿಮನೆಯಲ್ಲಿ ನಮ್ಮ ಚಿಕ್ಕಮ್ಮ, ದೊಡ್ಡಮ್ಮಂದಿರ ಮಕ್ಕಳೂ ಬರುತ್ತಿದ್ದರಾದ್ದರಿಂದ, ನಮಗೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ತುಂಬ ಖುಷಿ ಕೊಡುವ ವಿಷಯವಾಗಿತ್ತು.

ಅಜ್ಜಿಮನೆ ಇಷ್ಟವಾಗೋಕೆ ಹಲವಾರು ಕಾರಣಗಳಿದ್ದವು. ವರುಷಕ್ಕೆ ಒಂದ್ಸರ್ತಿ ಬೇಸಿಗೆ ರಜೆಯಲ್ಲಿ ಮಾತ್ರ ಅಜ್ಜಿ ಮನೆಗೆ ಹೋಗುತ್ತಿದ್ದುದರಿಂದ ಅಜ್ಜ-ಅಜ್ಜಿಗೆ ನಾವೆಲ್ಲ ಮೊಮ್ಮಕ್ಕಳ ಮೇಲೆ ವಿಶೇಷ ಮಮತೆ. ಆಗಿನ ನಮ್ಮ ಬೇಡಿಕೆಗಳೂ ಚಿಕ್ಕ-ಪುಟ್ಟವು ಆಗಿರುತ್ತಿದ್ದರಿಂದ ನಮಗೆ ಅವರು ಯಾವುದೇ ಕಾರಣಕ್ಕೂ ನಿರಾಶೆ ಮಾಡುತ್ತಿರಲಿಲ್ಲ. ತುಂಟಾಟ ತೀರ್ವವಾದಾಗ ಮಾವಂದಿರ ಗದರಿಕೆ ಆಗಾಗ ಕೇಳಿಬರುತ್ತಿದ್ದರೂ ಅಜ್ಜಿಯ ಶ್ರೀರಕ್ಷೆ ನಮಗೆ ಇರುತ್ತಿದ್ದುದರಿಂದ ಯಾವ ಭಯವೂ ಇಲ್ಲದೇ ಅಜ್ಜಿಮನೆಯಲ್ಲಿ ಇರಬಹುದಾಗಿತ್ತು.

ನಮ್ಮದು ಮತ್ತು ನಮ್ಮ ಅಜ್ಜಿ ಮನೆಯವರದು ಕೃಷಿ ಆಧಾರಿತ ಕುಟುಂಬವಾದ್ದರಿಂದ ಅಜ್ಜ-ಅಜ್ಜಿ ಬೆಳಿಗ್ಗೆ ಹತ್ತು ಘಂಟೆಗೆಲ್ಲ ಹೊಲಕ್ಕೆ ಹೊರಡಲು ತಯಾರಾಗುತ್ತಿದ್ದರು. ನಾವೂ ಕೆಲಸಾರಿ ಅವರ ಜೊತೆ ಹೊಲಕ್ಕೆ ಹೋಗಿ ಹೊಲದಲ್ಲಿನ ಟೊಮ್ಯಾಟೋ, ಹುಣಸೆಕಾಯಿ, ಸೌತೆಕಾಯಿ ಮೆಲ್ಲುತ್ತಾ, ಓರಗೆಯವರೊಂದಿಗೆ ಮತ್ತು ದನ-ಕರುಗಳ ಜೊತೆ ಆಟವಾಡುತ್ತಾ ದಿನ ಕಳೆಯುವುದು ತುಂಬಾ ಸಂತಸದ ವಿಷಯವಾಗಿತ್ತು. ಮಧ್ಯಾಹ್ನ ಎಲ್ಲರೊಂದಿಗೆ ಊಟ ಮಾಡಿ ಸಂಜೆ ಜೊತೆಯಾಗಿ ವಾಪಸ್ ಬರುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವ ಆಳುಗಳಿಗೆಲ್ಲ ಅಜ್ಜಿ ನಮ್ಮನ್ನು "ಇವನು ನಮ್ಮ ಬಸಕ್ಕನ ಮಗ, ಇವನು ಕಮಲಕ್ಕನ ಮಗ, .." ಎಂದು ಪರಿಚಯ ಮಾಡಿ ಕೊಡುತ್ತಿದ್ದರೆ ನಮಗೆಲ್ಲ ಶಾಲೆಯಲ್ಲಿ ಕರೆದು ಬಹುಮಾನ ಕೊಟ್ಟಷ್ಟೇ ಖುಷಿಯಾಗುತ್ತಿತ್ತು. ಸಾಯಂಕಾಲ ವಾಪಸ್ ಬರುವಾಗ ಎತ್ತಿನ ಗಾಡಿಯಲ್ಲಿ ಹುಲ್ಲಿನ ಹೊರೆ, ಕೃಷಿ ಉತ್ಪನ್ನಗಳ ಮೂಟೆಗಳ ಮೇಲೆ ಸವಾರಿ ಮಾಡುತ್ತಾ ಒಬ್ಬರ ಕಿವಿಯಲ್ಲೊಬ್ಬರು ತೆಳುವಾದ ಹುಲ್ಲು ಕಡ್ಡಿ ಆಡಿಸಿ ಕಚಗುಳಿ ಇಡುತ್ತ, ತರಲೆ ಮಾಡುತ್ತ ನಗಾಡುತ್ತ ಮನೆ ಕಡೆ ಪ್ರಯಾಣಿಸುವುದು ತುಂಬಾ ಮಜ ಕೊಡುತ್ತಿತ್ತು.

ವಾಪಸ್ ಮನೆಗೆ ಬಂದ ಮೇಲೆ ಅಜ್ಜಿ ಮಾಡಿ ಕೊಡುತ್ತಿದ್ದ ಉಸುಳಿ ಕಾಳು, ಮುದ್ದೆ ರೊಟ್ಟಿ, ಬಜ್ಜಿ-ಬೋಂಡ, ಮುಂತಾದ ತಿನಿಸುಗಳ ಮಜಾನೇ ಬೇರೆ. ರಾತ್ರಿ ಊಟ ಮಾಡಿ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ, ಮಧ್ಯೆ ಮಧ್ಯೆ ತರಲೆ ಪ್ರಶ್ನೆ ಮಾಡುತ್ತಾ ಖುಷಿಯಾಗಿ ಮಲಗುತ್ತಿದ್ದ ದಿನಗಳನ್ನು ಕಡೇತನಕ ಮರೆಯಲು ಆಗೋಲ್ಲ ಅನ್ನಿಸುತ್ತೆ.

ಪ್ರತಿ ಶನಿವಾರ ಹುಬ್ಬಳ್ಳಿಯ ಸಂತೆಗೆ ಹೋಗುತ್ತಿದ್ದ ನಮ್ಮ ಅಜ್ಜ ಪ್ರತಿಯೊಬ್ಬ ಮೊಮ್ಮಗ/ಮೊಮ್ಮಗಳನ್ನು ಪ್ರತ್ಯೇಕವಾಗಿ ಕರೆದು "ಹುಬ್ಬಳ್ಳಿ ಸಂತೆಯಿಂದ ನಿನಗೇನು ತರಲಿ ಪುಟ್ಟ?" ಎಂದು ಕೇಳಿ, ಸಂತೆಯಿಂದ ವಾಪಸ್ ಬರುವಾಗ ನಾವು ಕೇಳಿದ ಪೆಪರ್ಮಿಂಟ್, ಪೇಡ, ಆಟಿಕೆ ಸಾಮಾನು ಮುಂತಾದವನ್ನು ತಪ್ಪದೇ ತಂದು ನಮ್ಮನ್ನು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಕರೆದು ನಾವು ಕೇಳಿದ ತಿನಿಸು, ಆಟಿಕೆಗಳನ್ನು ಕದ್ದು ಕೊಡುತ್ತಿದ್ದ (ಮೊಮ್ಮಕ್ಕಳು ಪರಸ್ಪರ ಜಗಳವಾಡದಿರಲಿ ಅಂತ).

ನಾವು ಮಾಡುತ್ತಿದ್ದ ಕೀಟಲೆಗಳು ತೀರಾ ಅತಿಯಾದಾಗ ಅಜ್ಜಿ ಮೆತ್ತಗೆ ಗದರಿಸುತ್ತಿದ್ದರೂ ಆ ಬೆದರಿಕೆಯಲ್ಲೂ ಬೆಟ್ಟದಷ್ಟು ಪ್ರೀತಿ ತುಂಬಿರುತ್ತಿತ್ತು. ನಾವು ಓರಗೆಯ ಹುಡುಗರೊಂದಿಗೆ ಜಗಳವಾಡಿಕೊಂಡು ಬಂದರೆ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡಿಕೊಳ್ಳುತ್ತಿದ್ಲು. ನಮ್ಮದೇ ತಪ್ಪಿದ್ದರೂ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡೋದು ನೋಡಿ ನಮಗೆ ಜಗಳ ಕಾಯಲು ಇನ್ನಷ್ಟು ಹುರುಪು ಬರುತ್ತಿತ್ತು ಅನ್ನಿ. ಹೀಗಾಗಿ ಅಜ್ಜಿಮನೆ ಎಂದರೆ ನಮಗೆಲ್ಲ ಮೋಜಿನ, ಉಲ್ಲಾಸಮಯ ತಾಣವಾಗಿರುತ್ತಿತ್ತು. ನಾನು ಮತ್ತು ನಮ್ಮ ಮಾವನ ಮಗ ಊರ ಹೊರಗಿನ ಕೆರೆಯಲ್ಲಿ ಕದ್ದು ಈಜಾಡಲು ಹೋಗಿ, ಅದು ಮಾವನಿಗೆ ಗೊತ್ತಾಗಿ ಹತ್ತಿ ಕಟ್ಟಿಗೆಯಿಂದ ಹೊಡೆತ ತಿಂದಾಗಲಂತೂ " ಅಯ್ಯೋ, ಅಜ್ಜಿ ಇವತ್ತು ಹೊಲಕ್ಕೆ ಹೊಗದೇ ಮನೆಯಲ್ಲೇ ಇದ್ದಿದ್ದರೆ ಈಗಲೂ ನಮ್ಮನ್ನು ಡಿಫೆಂಡ್ ಮಾಡಿ ಈ ದೂರ್ವಾಸಮುನಿ ಮಾವನ ಹೊಡೆತ ತಪ್ಪಿಸುತ್ತಿದ್ದಳಲ್ಲ" ಎಂದು ಅನಿಸಿತ್ತು.

ಇವೆಲ್ಲ ಕಾರಣಗಳಿಂದಾಗಿ, ಅಜ್ಜಿಮನೆಯೆಂಬುದು ಪ್ರತಿ ಮಗುವಿನ ಬಾಲ್ಯದ ಅವಿಭಾಜ್ಯ ಅಂಗ; ಅಜ್ಜಿಮನೆ ವಾಸದ ಸಂತಸವನ್ನು ಯಾವ ಮಗುವೂ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಸ್ಪೆಶಲ್ ಕ್ಲಾಸ್, ಕಾನ್‌ವೆಂಟ್ ಅಡ್ಮಿಶನ್ ಇಂಟರ್‌ವ್ಯೂ ಅದು ಇದು ಅಂತ ನೆಪ ಹೇಳುತ್ತ ತನ್ನ ಮಗಳು, ನನ್ನ ನಾಲ್ಕು ವರ್ಷದ ಗರ್ಲ್ ಫ್ರೆಂಡ್ ನೀಲಾಳನ್ನು ಬೇಸಿಗೆ ರಜೆ ಕಳೆಯಲು ತನ್ನ ಅಜ್ಜಿ ಮನೆಗೆ ಕಳಿಸಲು ಮೀನಮೇಷ ಎಣಿಸುತ್ತಿದ್ದ ನನ್ನ ಸಹೋದರಿಗೆ ಈಗ್ಗೆ ಎರಡು ವಾರಗಳ ಹಿಂದಷ್ಟೇ ಗದರಿದ್ದೆ; ಅಜ್ಜಿಮನೆ ಆನಂದ ಅನುಭವಿಸುವುದು ಅವಳ ಜನ್ಮ ಸಿದ್ಧ ಹಕ್ಕು; ಅದನ್ನು ಯಾವ ಕಾರಣಕ್ಕೂ ಅವಳಿಂದ ಕಿತ್ತುಕೊಳ್ಳಬೇಡ. ಓದು ಬರಹ ಮುಗಿಸೋಕೆ ರಜೆ ಟೈಮೂ ಬೇಕಾ ಅಂತ ಮಕ ಮಕ ಬೈದಿದ್ದೆ. ಮಾರನೆಯ ದಿನವೇ ನನ್ನ ಕಿರಿಯ ಸಹೋದರನನ್ನು ಅವಳ ಮನೆಗೆ ಕಳಿಸಿ ಅವಳ ಅಜ್ಜಿ (ನನ್ನ ತಾಯಿ) ಮನೆಗೆ ಕರೆಸಿಕೊಂಡಿದ್ದೆ.

ಇವೆಲ್ಲ ನೆನಪಾಗಿದ್ದು ಮೊನ್ನೆ ಸೋಮವಾರ ನಮ್ಮ ಅಜ್ಜಿ ತೀರಿಕೊಂಡ ಸುದ್ದಿ ಬಂದಾಗ. ಕಳೆದ ವಾರಾಂತ್ಯ ಹುಬ್ಬಳ್ಳಿಗೆ ಹೋಗಿ ಅಣ್ಣನ ಮಗಳು ಮೇಘ ಳ ನಾಮಕರಣ ಸಮಾರಂಭ ಮುಗಿಸಿ ಸೋಮವಾರ ಬೆಳಿಗ್ಗೆ ನಾನು ಪ್ರಯಾಣಿಸುತ್ತಿದ್ದ ರೈಲು ಇನ್ನೇನು ಬೆಂಗಳೂರು ಸಿಟೀ ರೈಲು ನಿಲ್ದಾಣ ತಲುಪುವದರಲ್ಲಿದ್ದಾಗ ಮನೆಯಿಂದ ಕರೆ ಬಂತು; "ಬೆಳಿಗ್ಗೆ ಅಜ್ಜಿ ನಮ್ಮನ್ನೆಲ್ಲಾ ಬಿಟ್ಟು ಹೋದಳು" ಅಂತ.

ಬೆಳಿಗ್ಗೆ ಸಮಯಕ್ಕೆ ಇದ್ದ ಎರಡು ಎಕ್ಸ್‌ಪ್ರೆಸ್ ರೈಲುಗಳು ಆಗಲೇ ಬೆಂಗಳೂರಿನಿಂದ ಹೊರಟು ಬಿಟ್ಟಿದ್ದರಿಂದ ಮತ್ತು ಮುಂದಿನ ರೈಲು ಮಧ್ಯಾಹ್ನವಿದ್ದುದರಿಂದ, ನನಗಾಗ ವಾಪಸ್ ಹುಬ್ಬಳ್ಳಿಗೆ ಹೋಗಲು ಬಸ್ಸೇ ಗತಿಯಾಗಿತ್ತು. ತಕ್ಷಣ ಬಸ್ ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ಸಾಯಂಕಾಲ ಐದು ಘಂಟೆ ಆಗಬಹುದು ಎಂದರು. ಅಂತ್ಯ ಸಂಸ್ಕಾರವನ್ನು ಮಧ್ಯಾಹ್ನ ಎರಡು ಘಂಟೆಗೇ ಇಟ್ಟುಕೊಂಡಿದ್ದರೂ ಅಜ್ಜನ ಅಂತ್ಯ ಸಂಸ್ಕಾರವನ್ನೂ ತಪ್ಪಿಸಿಕೊಂಡಿದ್ದ ನನಗೆ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕೆಂದುಕೊಂಡೆ. ಮತ್ತೆ ವಾಪಸ್ ಹುಬ್ಬಳ್ಳಿಯ ಬಸ್ ಹಿಡಿದು ಹೊರಟೆ. ನನ್ನ ದುರಾದೃಷ್ಟ; ಕಡೆಗೂ ಅಂತ್ಯಸಂಸ್ಕಾರದ ವೇಳೆಗೆ ಸರಿಯಾಗಿ ತಲುಪಲಾಗಲಿಲ್ಲ.

ನೆರೆದಿದ್ದ ನೂರಾರು ಜನರಿಗೆ ತೊಂದರೆಯಾಗುವುದೆಂಬ ಕಾರಣವಾಗಿ ನಾನು ಹುಬ್ಬಳ್ಳಿ ತಲುಪುವಷ್ಟರಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟಿದ್ದರು. ಕಡೆಗೆ ಅಜ್ಜಿಯ ಸಮಾಧಿಯ ಹತ್ತಿರ ಹೋಗಿ ಸಮಾಧಿಯ ಮೇಲೆ ಹೂಮಾಲೆ ಹಾಕಿ "ನಿನ್ನ ಅಂತ್ಯ ಸಂಸ್ಕಾರಕ್ಕೂ ಬರಲಾಗಲಿಲ್ಲ, ನನ್ನನು ಕ್ಷಮಿಸಿಬಿಡಜ್ಜಿ, ಸಾಧ್ಯವಾದ್ರೆ ಈ ಜನ್ಮದಲ್ಲಿ ನಿನ್ನ ಋಣ ತೀರಿಸಲು ಪ್ರಯತ್ನಿಸುತ್ತೇನೆ" ಎಂದು ಬಿಕ್ಕಿ ಬಿಕ್ಕಿ ಅತ್ತು ಬಂದೆ. ಹುಟ್ಟೂರು ಬಿಟ್ಟು ಇಷ್ಟು ದೂರ ಇದ್ದು ಪ್ರೀತಿ-ಪಾತ್ರರ ಅಂತ್ಯ ಸಂಸ್ಕಾರಕ್ಕೂ ಸಮಯಕ್ಕೆ ಸರಿಯಾಗಿ ಹೋಗಲಾಗದ ನನ್ನ ಅಸಹಾಯಕತೆಗೆ ನನ್ನ ಮೇಲೆ ನನಗೇ ಜಿಗುಪ್ಸೆ ಬಂತು. ಊರು ಬಿಟ್ಟು ವಿದ್ಯಾಭ್ಯಾಸ, ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಕಳೆದುಕೊಂಡಿರುವ ಅತ್ಯಮೂಲ್ಯ ಅವಕಾಶಗಳಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಅವಕಾಶವೂ ಒಂದಾಗಿ ಹೋಯಿತು. ಅಜ್ಜಿಗೆ ಅಂತಿಮ ನಮನ ಸಲ್ಲಿಸಲಾಗದ ವಿಷಯ ತುಂಬಾ ನೋವಿನ ವಿಷಯವಾಗಿ ಕಾಡಿತು.

ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೇ ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟು ಹೋದರು. ಆ ಸಮಯದಲ್ಲಿ ನನ್ನ ಪರೀಕ್ಷೆಗಳು ಸಮೀಪಿಸುತ್ತಿದ್ದ ಕಾರಣ ಊರಿನವರ್ಯಾರೂ ನನಗೆ ಆ ಸುದ್ದಿ ತಿಳಿಸಿರಲಿಲ್ಲ. ಈಗ ಸುದ್ದಿ ತಿಳಿದರೂ ಅಜ್ಜಿಗೆ ಅಂತಿಮ ನಮನ ಸಲ್ಲಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಮನಸ್ಸಿಗೆ ಇನ್ನೂ ಖೇದವಾಗುತ್ತಿದೆ.

ಚಿತ್ರಕೃಪೆ: ಅಂತರ್ಜಾಲ

'