ಲಾಲ್‌ಬಾಗ್ ಉದ್ಯಾನವನದಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಕಳೆದ ಶನಿವಾರದಂದು ಕಂಡ ಕೆಲವು ಬೆಡಗಿಯರು...
ಹೂವು, ಚೆಲುವೆಲ್ಲಾ ತಂದೆಂದಿತು...
ತನುವೂ ನಿನ್ನದೇ, ಮನವೂ ನಿನ್ನದೇ...

ಇವತ್ತು ರಕ್ಷಾಬಂಧನ; ನನ್ನ ತಂಗಿ ನಾವು ಮೂರು ಜನ ಅಣ್ಣಂದಿರಿಗೆ ರಾಖಿ ಕಟ್ಟಲು ಊರಲ್ಲಿ ನಮ್ಮ ಮನೆ, ಅಂದ್ರೆ ತನ್ನ ತವರು ಮನೆಗೆ ಬಂದಿರ್ತಾಳೆ. ಆದರೆ ನಾನೊಬ್ಬ ನತದೃಷ್ಟ ಅಣ್ಣ ಮಾತ್ರ ಇಲ್ಲಿ ಬೆಂಗಳೂರೆಂಬ ಕರ್ಮಭೂಮಿಯಲ್ಲಿ ಕೆಲಸದ ಬಂಧಿಯಾಗಿ ಕುಳಿತಿದ್ದೇನೆ. "ಅಣ್ಣಾ ಪ್ಲೀಸ್, ಅವತ್ತೊಂದಿನ ಊರಿಗೆ ಬಂದ್ ಹೋಗೋ, ನಿಂಗೂ ರಾಖಿ ಕಟ್ಟತೇನೀ..." ಅಂತ ತಂಗಿ ಒಂದು ವಾರ ಮುಂಚೇನೇ ಕರೆದಿದ್ರೂ, ಹೋಗಬೇಕೆನ್ನೋ ಮಹದಾಸೆ ನಂಗೂ ಇದ್ರೂ ಹೋಗಲಾಗದ ಅಸಹಾಯಕತೆ ನನ್ನದು. ಊರಲ್ಲಿರುವ ನನ್ನಿಬ್ಬರು ಸಹೋದರರೇ ಅದೃಷ್ಟವಂತರು ಅನ್ಸುತ್ತೆ. ಇರುವ ಒಬ್ಬಳು ತಂಗಿ ಕೈಯಿಂದ ರಾಖಿ ಕಟ್ಟಿಸಿಕೊಂಡು, ತಂಗಿಯ ಶುಭಾಶೀರ್ವಾದ ಪಡೆಯುವ ಅವಕಾಶಾನ ನಾನೊಬ್ಬ ಮಾತ್ರ ಮಿಸ್ ಮಾಡ್ಕೋತಿದೀನಿ. ಆದರೆ ತಂಗಿ ಕೋರಿಯರ್ ನಲ್ಲಿ ಕಳಿಸಿದ ರಾಖಿಯನ್ನೇ ಕಣ್ಣಿಗೊತ್ತಿಕೊಂಡು ನಾನೇ ಸ್ವತಃ ಕಟ್ಟಿಕೊಂಡು ಅಷ್ಟಕ್ಕೇ ತೃಪ್ತಿಪಟ್ಟುಕೊಂಡು ಕುಳಿತಿದ್ದೇನೆ. ಸಾರೀ ತಂಗ್ಯವ್ವ, ನಾನು ಈ ವರ್ಷ ನಿನ್ನ ಕೈಯ್ಯಾರೇ ರಾಖಿಯಂತೂ ಕಟ್ಟಿಸ್ಕೊಳ್ಳೋಕಾಗ್ತಿಲ್ಲ. ಆದರೆ ನಿನ್ನ ಶುಭಾಶೀರ್ವಾದ, ಹಾರೈಕೆಗಳು ನನ್ನೊಂದಿಗೆ ಸದಾ ಇರ್ತವೆ ಅಂತ ಭಾವಿಸ್ತೀನಿ.
ಹುಟ್ಟಿದ ಊರು ಬಿಟ್ಟು ಬೆಂಗಳೂರಿನಲ್ಲಿ ಇದ್ದು ಕಳೆದುಕೊಳ್ಳುತ್ತಿರುವ ಸೌಭಾಗ್ಯಗಳಲ್ಲಿ ಇದೂ ಒಂದು. ಊರಲ್ಲಿದ್ದಾಗ ಕಳೆದ ರಕ್ಷಾಬಂಧನದ ದಿನಗಳ ಮೆಲುಕೇ ಈ ದಿನ ನನ್ನ ಸಂಗಾತಿ. ಚಿಕ್ಕವಳಿದ್ದಾಗ ತಂಗಿ, "ನನಗ ಅಂಗಡಿಗೆ ಹೋಗಿ ರಾಖಿ ತರಾಕ ಗೊತ್ತಾಗುದಿಲ್ಲ, ನೀವsss ತಂದು ಕೊಟ್ರ ರಾಖಿ ಕಟ್ಟತೇನಪಾ" ಅಂತ ಮುಗ್ಧವಾಗಿ ಹೇಳಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸ್ತಿದ್ಲು. "ನಾವsss ರಾಖಿ ತಂದು ಕೊಟ್ಟು ಕಟ್ಟಸ್ಕೊಂಡು ನಿನಗ ಗಿಫ್ಟ್ ಕೊಡಬೇಕೇನವಾ, ಹೋಗೋಗ್.." ಅಂತ ನಾವು ಅಣ್ಣಂದಿರು ಅವಳಿಗೆ ಗೋಳು ಹುಯ್ಕೋತಿದ್ವಿ. ರಾಖಿ ಮತ್ತು ಪೇಢಾ ತಂದುಕೊಟ್ಟು, ನಾವು ಮೂರೂ ಜನ ಅಣ್ಣಂದಿರು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟುಕೊಂಡು ತಂಗಿ ಕೈಯಲ್ಲಿ ರಾಖಿ ಕಟ್ಟೀಸ್ಕೊಳ್ಳೋಕೆ ಸಾಲಾಗಿ ಮಣೆ ಹಾಕಿಕೊಂಡು ಕೂಡ್ತಿದ್ವಿ. ತಂಗಿ ಬಂದು ನಮ್ಮೆಲ್ಲರ ಹಣೆಗೆ ವಿಭೂತಿ ಪಟ್ಟಿ ಬಳಿದು, ಆರತಿ ತಟ್ಟೆಯಲ್ಲಿನ ಜ್ಯೋತಿಯ ಬಿಸಿಗೆ ವೀಳ್ಯದೆಲೆ ಕಾಯಿಸಿ, ನಮ್ಮ ಹಣೆಗೆ ವೀಳ್ಯದೆಲೆಯ ಕಪ್ಪು-ಕಾಡಿಗೆ ಬೊಟ್ಟು ಹಚ್ಚಿ, ತನ್ನ ಮುದ್ದಾದ ಪುಟ್ಟ-ಪುಟ್ಟ ಕೈಗಳಿಂದ ನಮ್ಮೆಲ್ಲರಿಗೂ ರಾಖಿ ಕಟ್ಟಿ, ಬಾಯಲ್ಲಿ ಪೇಢಾ ಹಾಕಿ, ಸರತಿಯಂತೆ ನಮಗೆ ಆರತಿ ಬೆಳಗುತ್ತಿದ್ದಳು. ಅಪ್ಪ ನಮಗೆ ಮೊದಲೇ ಕೊಟ್ಟಿರುತ್ತಿದ್ದ ಪುಡಿಗಾಸಿನ ಜೊತೆಗೆ ನಾವು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿರುತ್ತಿದ್ದ ಬಿಡಿಗಾಸನ್ನೂ ಸೇರಿಸಿ ಆರತಿ ತಟ್ಟೆಯಲ್ಲಿ ಹಾಕಿ ನಾವೆಲ್ಲ ತಂಗಿಯ ಶುಭಾಶೀರ್ವಾದ ಪಡೀತಿದ್ವಿ. ನಂತರ ತಂಗಿ ಕಟ್ಟಿದ್ದ ರಾಖಿಯನ್ನು ಹೆಮ್ಮೆಯಿಂದ ಪದೇ ಪದೇ ನೋಡಿಕೊಳ್ಳುತ್ತ ಶಾಲೆಯ ಕಡೆ ಹೆಜ್ಜೆ ಹಾಕ್ತಿದ್ವಿ. ನಾವು ಹೋಗುತ್ತಿದ್ದ ಶಾಲೆ ಬರೀ ಗಂಡು ಮಕ್ಕಳ ಶಾಲೆಯಾದ್ದುದರಿಂದ ಶಾಲೆಯಲ್ಲಿ ರಾಖಿ ಕಟ್ಟಲು ಬರುವ ಹುಡುಗಿಯರ ಕಾಟವಾಗಲಿ, ನಾವು ಅವರಿಂದ ತಪ್ಪಿಸಿಕೊಂಡು ಓಡುವ ಪ್ರಸಂಗವಾಗಲಿ ನಮಗೆ ಬರುತ್ತಿರಲಿಲ್ಲ ಬಿಡಿ :) ಸ್ಕೂಲಲ್ಲಿ ಓರಗೆಯ ಗೆಳೆಯರಿಗೆ ನಮ್ಮ ಕೈಯಲ್ಲಿನ ರಾಖಿ ತೋರಿಸಿ "ನಮ್ ತಂಗಿ ಕಟ್ಟಿದ ರಾಖಿ ನೋಡ್ರಲೇ, ಎಷ್ಟ್ ಛಂದ್ ಐತೀ" ಅಂತ ಜಂಭ ಕೊಚ್ಚಿಕೋತಿದ್ವಿ. ರಕ್ಷಾಬಂಧನ ಮುಗಿದು ಮೂರ್ನಾಲ್ಕು ದಿನಗಳು ಕಳೆದು, ರಾಖಿಯಲ್ಲಿನ ಚಿತ್ತಾರದ ಪಕಳೆಗಳು ಒಂದೊಂದಾಗಿ ಕಳಚಿ ಬಿದ್ದು, ಕಡೆಗೆ ದಾರವೊಂದೇ ಉಳಿಯುವವರೆಗೆ ರಾಖಿ ಬಿಚ್ಚುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ನಮಗೆಲ್ಲ ನಮ್ಮ ತಂಗಿಯ ಮೇಲೆ ಮತ್ತು ಅವಳು ಕಟ್ಟಿದ ರಾಖಿಯ ಮೇಲೆ.
ಫೂಲೋಂಕಾ ತಾರೋಂಕಾ ಸಬ್ಕಾ ಕೆಹ್ನಾ ಹೈ,
ಏಕ್ ಹಜಾರೋಂ ಮೇಂ ಮೇರಿ ಬೆಹ್ನಾ ಹೈ,
ಸಾರೀ ಉಮರ್ ಹಮೇ ಸಂಗ್ ರೆಹ್ನಾ ಹೈ...
ಮುಂದೆ ಸ್ಕೂಲು ಮುಗಿದು ಕಾಲೇಜು ಓದಲು ಹುಬ್ಬಳ್ಳಿಯಲ್ಲಿ ಇದ್ದಾಗಲೂ ತಪ್ಪದೇ ಪ್ರತಿ ವರ್ಷ ರಕ್ಷಾಬಂಧನದ ದಿನ ಊರಿಗೆ ಹೋಗಿ ಬರ್ತಿದ್ದೆ. ಮದುವೆಯಾದ ಮೇಲೆ ತಂಗಿಯೂ ಪ್ರತಿ ವರ್ಷ ತಪ್ಪದೇ ರಕ್ಷಾಬಂಧನದ ದಿನ ಊರಿಗೆ ಬರ್ತಾಳೆ. ಉನ್ನತ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದ ಮೇಲೆಯೇ ರಕ್ಷಾಬಂಧನದ ದಿನ ಊರಲ್ಲಿರಲಾಗದ ಹತಭಾಗ್ಯ ನನ್ನದಾಗಲು ಶುರುವಾಯಿತು. ಕೆಲವು ಸಲ ಊರಿಗೆ ಹೋಗಲು ಸಾಧ್ಯವಾಗಿದ್ದರೂ, ಈ ಶುಭದಿನವನ್ನು ಮಿಸ್ ಮಾಡ್ಕೊಂಡಿದ್ದೇ ಹೆಚ್ಚು ಸಲ.
ನನ್ನ ಮುದ್ದು ತಂಗ್ಯವ್ವ, ನಂಗೊತ್ತು, ಇವತ್ತು ಊರಲ್ಲಿ ಉಳಿದ ಇನ್ನಿಬ್ಬರು ಅಣ್ಣಂದಿರಿಗೆ ರಾಖಿ ಕಟ್ಟುವಾಗ ನೀ ನನ್ನನ್ನು ಖಂಡಿತ ಮಿಸ್ ಮಾಡ್ಕೊಂಡಿರ್ತೀಯಾ ಅಂತ. ಸಾರೀ ಪುಟ್ಟೀ, ಬೇಜಾರ್ ಮಾಡ್ಕೊಬೇಡ; ಇದೊಂದು ಸರ್ತಿ ಕ್ಷಮಿಸಿಬಿಡು. ನೀ ಕಳಿಸಿದ ರಾಖಿ ಇವತ್ತು ಬೆಳಿಗ್ಗೇನೇ ನನ್ನ ಕೈ ಸೇರಿದೆ. ನಿನ್ನ ಹೆಸರು ಹೇಳಿಕೊಂಡು ಅದನ್ನ ನನ್ನ ಕೈಗೆ ನಾನೇ ಕಟ್ಕೊಂಡಿದೀನಿ. ಇದೊಂದು ಸರ್ತಿ ನೀನು ಅಲ್ಲಿಂದಲೇ ನಂಗೆ ಶುಭಾಶೀರ್ವಾದ ಮಾಡಿ, "ನಿಂಗೆ ಒಳ್ಳೆಯದಾಗಲಿ ಅಣ್ಣ" ಅಂತ ಹಾರೈಸಿಬಿಡು. ಮುಂದಿನ ಸಲ ನಿನ್ನ ಕೈಯಾರೆ ರಾಖಿ ಕಟ್ಟಿಸ್ಕೊಳ್ಳೋಕೆ ತಪ್ಪದೇ ಊರಿಗೆ ಬರ್ತೀನಿ, ಮಿಸ್ ಮಾಡ್ಕೋಳಲ್ಲ, ಪ್ರಾಮೀಸ್! :)
'
ಚಿತ್ರಕೃಪೆ: ಅಂತರ್ಜಾಲ'


ಆಶಾವಾದಿತನ ಅಂದ್ರೆ ಇದೇ ಇರಬಹುದೇನೋ :)
'

ಮಕ್ಕಳ ಬಾಲ್ಯಜೀವನದ ಒಂದು ಅವಿಭಾಜ್ಯ ಅಂಗ ಅಂದ್ರೆ ಅಜ್ಜಿಮನೆ. ತಂದೆಯ ತಾಯಿಯೂ ಅಜ್ಜಿ ಆಗುತ್ತಾಳಾದರೂ ಆ ಅಜ್ಜಿಯ ಮನೆ ನಮ್ಮ ಮನೆಯೇ ಆಗಿದ್ದರಿಂದ ನಮಗೆಲ್ಲ ಅಮ್ಮನ ತವರುಮನೆಯೇ ಅಜ್ಜಿಮನೆ ಆಗಿತ್ತು.
ಬೇಸಿಗೆ ರಜೆ ಬಂತೆಂದರೆ ಸಾಕು, ಎಲ್ಲ ಮಕ್ಕಳು ಅಜ್ಜಿಮನೆ ಸೇರುತ್ತವೆ. ನಾನು ಚಿಕ್ಕವನಿದ್ದಾಗಲಂತೂ ಬೇಸಿಗೆ ರಜೆ ಬಂತೆಂದರೆ ಸಾಕು "ನಾನು ಅಜ್ಜಿ ಮನೆಗೆ ಹೊಗ್ತೇನೆ" ಅಂತ ರಚ್ಚೆ ಹಿಡಿದುಬಿಡುತ್ತಿದ್ದೆ. ಬೇಸಿಗೆ ರಜೆಯಲ್ಲಿ ಅಜ್ಜಿಮನೆಯಲ್ಲಿ ನಮ್ಮ ಚಿಕ್ಕಮ್ಮ, ದೊಡ್ಡಮ್ಮಂದಿರ ಮಕ್ಕಳೂ ಬರುತ್ತಿದ್ದರಾದ್ದರಿಂದ, ನಮಗೆಲ್ಲ ಅಜ್ಜಿ ಮನೆಗೆ ಹೋಗೋದು ಅಂದ್ರೆ ತುಂಬ ಖುಷಿ ಕೊಡುವ ವಿಷಯವಾಗಿತ್ತು.
ಅಜ್ಜಿಮನೆ ಇಷ್ಟವಾಗೋಕೆ ಹಲವಾರು ಕಾರಣಗಳಿದ್ದವು. ವರುಷಕ್ಕೆ ಒಂದ್ಸರ್ತಿ ಬೇಸಿಗೆ ರಜೆಯಲ್ಲಿ ಮಾತ್ರ ಅಜ್ಜಿ ಮನೆಗೆ ಹೋಗುತ್ತಿದ್ದುದರಿಂದ ಅಜ್ಜ-ಅಜ್ಜಿಗೆ ನಾವೆಲ್ಲ ಮೊಮ್ಮಕ್ಕಳ ಮೇಲೆ ವಿಶೇಷ ಮಮತೆ. ಆಗಿನ ನಮ್ಮ ಬೇಡಿಕೆಗಳೂ ಚಿಕ್ಕ-ಪುಟ್ಟವು ಆಗಿರುತ್ತಿದ್ದರಿಂದ ನಮಗೆ ಅವರು ಯಾವುದೇ ಕಾರಣಕ್ಕೂ ನಿರಾಶೆ ಮಾಡುತ್ತಿರಲಿಲ್ಲ. ತುಂಟಾಟ ತೀರ್ವವಾದಾಗ ಮಾವಂದಿರ ಗದರಿಕೆ ಆಗಾಗ ಕೇಳಿಬರುತ್ತಿದ್ದರೂ ಅಜ್ಜಿಯ ಶ್ರೀರಕ್ಷೆ ನಮಗೆ ಇರುತ್ತಿದ್ದುದರಿಂದ ಯಾವ ಭಯವೂ ಇಲ್ಲದೇ ಅಜ್ಜಿಮನೆಯಲ್ಲಿ ಇರಬಹುದಾಗಿತ್ತು.
ನಮ್ಮದು ಮತ್ತು ನಮ್ಮ ಅಜ್ಜಿ ಮನೆಯವರದು ಕೃಷಿ ಆಧಾರಿತ ಕುಟುಂಬವಾದ್ದರಿಂದ ಅಜ್ಜ-ಅಜ್ಜಿ ಬೆಳಿಗ್ಗೆ ಹತ್ತು ಘಂಟೆಗೆಲ್ಲ ಹೊಲಕ್ಕೆ ಹೊರಡಲು ತಯಾರಾಗುತ್ತಿದ್ದರು. ನಾವೂ ಕೆಲಸಾರಿ ಅವರ ಜೊತೆ ಹೊಲಕ್ಕೆ ಹೋಗಿ ಹೊಲದಲ್ಲಿನ ಟೊಮ್ಯಾಟೋ, ಹುಣಸೆಕಾಯಿ, ಸೌತೆಕಾಯಿ ಮೆಲ್ಲುತ್ತಾ, ಓರಗೆಯವರೊಂದಿಗೆ ಮತ್ತು ದನ-ಕರುಗಳ ಜೊತೆ ಆಟವಾಡುತ್ತಾ ದಿನ ಕಳೆಯುವುದು ತುಂಬಾ ಸಂತಸದ ವಿಷಯವಾಗಿತ್ತು. ಮಧ್ಯಾಹ್ನ ಎಲ್ಲರೊಂದಿಗೆ ಊಟ ಮಾಡಿ ಸಂಜೆ ಜೊತೆಯಾಗಿ ವಾಪಸ್ ಬರುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವ ಆಳುಗಳಿಗೆಲ್ಲ ಅಜ್ಜಿ ನಮ್ಮನ್ನು "ಇವನು ನಮ್ಮ ಬಸಕ್ಕನ ಮಗ, ಇವನು ಕಮಲಕ್ಕನ ಮಗ, .." ಎಂದು ಪರಿಚಯ ಮಾಡಿ ಕೊಡುತ್ತಿದ್ದರೆ ನಮಗೆಲ್ಲ ಶಾಲೆಯಲ್ಲಿ ಕರೆದು ಬಹುಮಾನ ಕೊಟ್ಟಷ್ಟೇ ಖುಷಿಯಾಗುತ್ತಿತ್ತು. ಸಾಯಂಕಾಲ ವಾಪಸ್ ಬರುವಾಗ ಎತ್ತಿನ ಗಾಡಿಯಲ್ಲಿ ಹುಲ್ಲಿನ ಹೊರೆ, ಕೃಷಿ ಉತ್ಪನ್ನಗಳ ಮೂಟೆಗಳ ಮೇಲೆ ಸವಾರಿ ಮಾಡುತ್ತಾ ಒಬ್ಬರ ಕಿವಿಯಲ್ಲೊಬ್ಬರು ತೆಳುವಾದ ಹುಲ್ಲು ಕಡ್ಡಿ ಆಡಿಸಿ ಕಚಗುಳಿ ಇಡುತ್ತ, ತರಲೆ ಮಾಡುತ್ತ ನಗಾಡುತ್ತ ಮನೆ ಕಡೆ ಪ್ರಯಾಣಿಸುವುದು ತುಂಬಾ ಮಜ ಕೊಡುತ್ತಿತ್ತು.
ವಾಪಸ್ ಮನೆಗೆ ಬಂದ ಮೇಲೆ ಅಜ್ಜಿ ಮಾಡಿ ಕೊಡುತ್ತಿದ್ದ ಉಸುಳಿ ಕಾಳು, ಮುದ್ದೆ ರೊಟ್ಟಿ, ಬಜ್ಜಿ-ಬೋಂಡ, ಮುಂತಾದ ತಿನಿಸುಗಳ ಮಜಾನೇ ಬೇರೆ. ರಾತ್ರಿ ಊಟ ಮಾಡಿ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ, ಮಧ್ಯೆ ಮಧ್ಯೆ ತರಲೆ ಪ್ರಶ್ನೆ ಮಾಡುತ್ತಾ ಖುಷಿಯಾಗಿ ಮಲಗುತ್ತಿದ್ದ ದಿನಗಳನ್ನು ಕಡೇತನಕ ಮರೆಯಲು ಆಗೋಲ್ಲ ಅನ್ನಿಸುತ್ತೆ.
ಪ್ರತಿ ಶನಿವಾರ ಹುಬ್ಬಳ್ಳಿಯ ಸಂತೆಗೆ ಹೋಗುತ್ತಿದ್ದ ನಮ್ಮ ಅಜ್ಜ ಪ್ರತಿಯೊಬ್ಬ ಮೊಮ್ಮಗ/ಮೊಮ್ಮಗಳನ್ನು ಪ್ರತ್ಯೇಕವಾಗಿ ಕರೆದು "ಹುಬ್ಬಳ್ಳಿ ಸಂತೆಯಿಂದ ನಿನಗೇನು ತರಲಿ ಪುಟ್ಟ?" ಎಂದು ಕೇಳಿ, ಸಂತೆಯಿಂದ ವಾಪಸ್ ಬರುವಾಗ ನಾವು ಕೇಳಿದ ಪೆಪರ್ಮಿಂಟ್, ಪೇಡ, ಆಟಿಕೆ ಸಾಮಾನು ಮುಂತಾದವನ್ನು ತಪ್ಪದೇ ತಂದು ನಮ್ಮನ್ನು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಕರೆದು ನಾವು ಕೇಳಿದ ತಿನಿಸು, ಆಟಿಕೆಗಳನ್ನು ಕದ್ದು ಕೊಡುತ್ತಿದ್ದ (ಮೊಮ್ಮಕ್ಕಳು ಪರಸ್ಪರ ಜಗಳವಾಡದಿರಲಿ ಅಂತ).
ನಾವು ಮಾಡುತ್ತಿದ್ದ ಕೀಟಲೆಗಳು ತೀರಾ ಅತಿಯಾದಾಗ ಅಜ್ಜಿ ಮೆತ್ತಗೆ ಗದರಿಸುತ್ತಿದ್ದರೂ ಆ ಬೆದರಿಕೆಯಲ್ಲೂ ಬೆಟ್ಟದಷ್ಟು ಪ್ರೀತಿ ತುಂಬಿರುತ್ತಿತ್ತು. ನಾವು ಓರಗೆಯ ಹುಡುಗರೊಂದಿಗೆ ಜಗಳವಾಡಿಕೊಂಡು ಬಂದರೆ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡಿಕೊಳ್ಳುತ್ತಿದ್ಲು. ನಮ್ಮದೇ ತಪ್ಪಿದ್ದರೂ ಅಜ್ಜಿ ನಮ್ಮನ್ನೇ ಡಿಫೆಂಡ್ ಮಾಡೋದು ನೋಡಿ ನಮಗೆ ಜಗಳ ಕಾಯಲು ಇನ್ನಷ್ಟು ಹುರುಪು ಬರುತ್ತಿತ್ತು ಅನ್ನಿ. ಹೀಗಾಗಿ ಅಜ್ಜಿಮನೆ ಎಂದರೆ ನಮಗೆಲ್ಲ ಮೋಜಿನ, ಉಲ್ಲಾಸಮಯ ತಾಣವಾಗಿರುತ್ತಿತ್ತು. ನಾನು ಮತ್ತು ನಮ್ಮ ಮಾವನ ಮಗ ಊರ ಹೊರಗಿನ ಕೆರೆಯಲ್ಲಿ ಕದ್ದು ಈಜಾಡಲು ಹೋಗಿ, ಅದು ಮಾವನಿಗೆ ಗೊತ್ತಾಗಿ ಹತ್ತಿ ಕಟ್ಟಿಗೆಯಿಂದ ಹೊಡೆತ ತಿಂದಾಗಲಂತೂ " ಅಯ್ಯೋ, ಅಜ್ಜಿ ಇವತ್ತು ಹೊಲಕ್ಕೆ ಹೊಗದೇ ಮನೆಯಲ್ಲೇ ಇದ್ದಿದ್ದರೆ ಈಗಲೂ ನಮ್ಮನ್ನು ಡಿಫೆಂಡ್ ಮಾಡಿ ಈ ದೂರ್ವಾಸಮುನಿ ಮಾವನ ಹೊಡೆತ ತಪ್ಪಿಸುತ್ತಿದ್ದಳಲ್ಲ" ಎಂದು ಅನಿಸಿತ್ತು.
ಇವೆಲ್ಲ ಕಾರಣಗಳಿಂದಾಗಿ, ಅಜ್ಜಿಮನೆಯೆಂಬುದು ಪ್ರತಿ ಮಗುವಿನ ಬಾಲ್ಯದ ಅವಿಭಾಜ್ಯ ಅಂಗ; ಅಜ್ಜಿಮನೆ ವಾಸದ ಸಂತಸವನ್ನು ಯಾವ ಮಗುವೂ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಸ್ಪೆಶಲ್ ಕ್ಲಾಸ್, ಕಾನ್‌ವೆಂಟ್ ಅಡ್ಮಿಶನ್ ಇಂಟರ್‌ವ್ಯೂ ಅದು ಇದು ಅಂತ ನೆಪ ಹೇಳುತ್ತ ತನ್ನ ಮಗಳು, ನನ್ನ ನಾಲ್ಕು ವರ್ಷದ ಗರ್ಲ್ ಫ್ರೆಂಡ್ ನೀಲಾಳನ್ನು ಬೇಸಿಗೆ ರಜೆ ಕಳೆಯಲು ತನ್ನ ಅಜ್ಜಿ ಮನೆಗೆ ಕಳಿಸಲು ಮೀನಮೇಷ ಎಣಿಸುತ್ತಿದ್ದ ನನ್ನ ಸಹೋದರಿಗೆ ಈಗ್ಗೆ ಎರಡು ವಾರಗಳ ಹಿಂದಷ್ಟೇ ಗದರಿದ್ದೆ; ಅಜ್ಜಿಮನೆ ಆನಂದ ಅನುಭವಿಸುವುದು ಅವಳ ಜನ್ಮ ಸಿದ್ಧ ಹಕ್ಕು; ಅದನ್ನು ಯಾವ ಕಾರಣಕ್ಕೂ ಅವಳಿಂದ ಕಿತ್ತುಕೊಳ್ಳಬೇಡ. ಓದು ಬರಹ ಮುಗಿಸೋಕೆ ರಜೆ ಟೈಮೂ ಬೇಕಾ ಅಂತ ಮಕ ಮಕ ಬೈದಿದ್ದೆ. ಮಾರನೆಯ ದಿನವೇ ನನ್ನ ಕಿರಿಯ ಸಹೋದರನನ್ನು ಅವಳ ಮನೆಗೆ ಕಳಿಸಿ ಅವಳ ಅಜ್ಜಿ (ನನ್ನ ತಾಯಿ) ಮನೆಗೆ ಕರೆಸಿಕೊಂಡಿದ್ದೆ.
ಇವೆಲ್ಲ ನೆನಪಾಗಿದ್ದು ಮೊನ್ನೆ ಸೋಮವಾರ ನಮ್ಮ ಅಜ್ಜಿ ತೀರಿಕೊಂಡ ಸುದ್ದಿ ಬಂದಾಗ. ಕಳೆದ ವಾರಾಂತ್ಯ ಹುಬ್ಬಳ್ಳಿಗೆ ಹೋಗಿ ಅಣ್ಣನ ಮಗಳು ಮೇಘ ಳ ನಾಮಕರಣ ಸಮಾರಂಭ ಮುಗಿಸಿ ಸೋಮವಾರ ಬೆಳಿಗ್ಗೆ ನಾನು ಪ್ರಯಾಣಿಸುತ್ತಿದ್ದ ರೈಲು ಇನ್ನೇನು ಬೆಂಗಳೂರು ಸಿಟೀ ರೈಲು ನಿಲ್ದಾಣ ತಲುಪುವದರಲ್ಲಿದ್ದಾಗ ಮನೆಯಿಂದ ಕರೆ ಬಂತು; "ಬೆಳಿಗ್ಗೆ ಅಜ್ಜಿ ನಮ್ಮನ್ನೆಲ್ಲಾ ಬಿಟ್ಟು ಹೋದಳು" ಅಂತ.
ಬೆಳಿಗ್ಗೆ ಸಮಯಕ್ಕೆ ಇದ್ದ ಎರಡು ಎಕ್ಸ್‌ಪ್ರೆಸ್ ರೈಲುಗಳು ಆಗಲೇ ಬೆಂಗಳೂರಿನಿಂದ ಹೊರಟು ಬಿಟ್ಟಿದ್ದರಿಂದ ಮತ್ತು ಮುಂದಿನ ರೈಲು ಮಧ್ಯಾಹ್ನವಿದ್ದುದರಿಂದ, ನನಗಾಗ ವಾಪಸ್ ಹುಬ್ಬಳ್ಳಿಗೆ ಹೋಗಲು ಬಸ್ಸೇ ಗತಿಯಾಗಿತ್ತು. ತಕ್ಷಣ ಬಸ್ ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೆ ಹುಬ್ಬಳ್ಳಿ ತಲುಪುವಷ್ಟರಲ್ಲಿ ಸಾಯಂಕಾಲ ಐದು ಘಂಟೆ ಆಗಬಹುದು ಎಂದರು. ಅಂತ್ಯ ಸಂಸ್ಕಾರವನ್ನು ಮಧ್ಯಾಹ್ನ ಎರಡು ಘಂಟೆಗೇ ಇಟ್ಟುಕೊಂಡಿದ್ದರೂ ಅಜ್ಜನ ಅಂತ್ಯ ಸಂಸ್ಕಾರವನ್ನೂ ತಪ್ಪಿಸಿಕೊಂಡಿದ್ದ ನನಗೆ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕೆಂದುಕೊಂಡೆ. ಮತ್ತೆ ವಾಪಸ್ ಹುಬ್ಬಳ್ಳಿಯ ಬಸ್ ಹಿಡಿದು ಹೊರಟೆ. ನನ್ನ ದುರಾದೃಷ್ಟ; ಕಡೆಗೂ ಅಂತ್ಯಸಂಸ್ಕಾರದ ವೇಳೆಗೆ ಸರಿಯಾಗಿ ತಲುಪಲಾಗಲಿಲ್ಲ.
ನೆರೆದಿದ್ದ ನೂರಾರು ಜನರಿಗೆ ತೊಂದರೆಯಾಗುವುದೆಂಬ ಕಾರಣವಾಗಿ ನಾನು ಹುಬ್ಬಳ್ಳಿ ತಲುಪುವಷ್ಟರಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟಿದ್ದರು. ಕಡೆಗೆ ಅಜ್ಜಿಯ ಸಮಾಧಿಯ ಹತ್ತಿರ ಹೋಗಿ ಸಮಾಧಿಯ ಮೇಲೆ ಹೂಮಾಲೆ ಹಾಕಿ "ನಿನ್ನ ಅಂತ್ಯ ಸಂಸ್ಕಾರಕ್ಕೂ ಬರಲಾಗಲಿಲ್ಲ, ನನ್ನನು ಕ್ಷಮಿಸಿಬಿಡಜ್ಜಿ, ಸಾಧ್ಯವಾದ್ರೆ ಈ ಜನ್ಮದಲ್ಲಿ ನಿನ್ನ ಋಣ ತೀರಿಸಲು ಪ್ರಯತ್ನಿಸುತ್ತೇನೆ" ಎಂದು ಬಿಕ್ಕಿ ಬಿಕ್ಕಿ ಅತ್ತು ಬಂದೆ. ಹುಟ್ಟೂರು ಬಿಟ್ಟು ಇಷ್ಟು ದೂರ ಇದ್ದು ಪ್ರೀತಿ-ಪಾತ್ರರ ಅಂತ್ಯ ಸಂಸ್ಕಾರಕ್ಕೂ ಸಮಯಕ್ಕೆ ಸರಿಯಾಗಿ ಹೋಗಲಾಗದ ನನ್ನ ಅಸಹಾಯಕತೆಗೆ ನನ್ನ ಮೇಲೆ ನನಗೇ ಜಿಗುಪ್ಸೆ ಬಂತು. ಊರು ಬಿಟ್ಟು ವಿದ್ಯಾಭ್ಯಾಸ, ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಕಳೆದುಕೊಂಡಿರುವ ಅತ್ಯಮೂಲ್ಯ ಅವಕಾಶಗಳಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಅವಕಾಶವೂ ಒಂದಾಗಿ ಹೋಯಿತು. ಅಜ್ಜಿಗೆ ಅಂತಿಮ ನಮನ ಸಲ್ಲಿಸಲಾಗದ ವಿಷಯ ತುಂಬಾ ನೋವಿನ ವಿಷಯವಾಗಿ ಕಾಡಿತು.
ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೇ ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟು ಹೋದರು. ಆ ಸಮಯದಲ್ಲಿ ನನ್ನ ಪರೀಕ್ಷೆಗಳು ಸಮೀಪಿಸುತ್ತಿದ್ದ ಕಾರಣ ಊರಿನವರ್ಯಾರೂ ನನಗೆ ಆ ಸುದ್ದಿ ತಿಳಿಸಿರಲಿಲ್ಲ. ಈಗ ಸುದ್ದಿ ತಿಳಿದರೂ ಅಜ್ಜಿಗೆ ಅಂತಿಮ ನಮನ ಸಲ್ಲಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಮನಸ್ಸಿಗೆ ಇನ್ನೂ ಖೇದವಾಗುತ್ತಿದೆ.
ಚಿತ್ರಕೃಪೆ: ಅಂತರ್ಜಾಲ
'

ನೋಡೋದಕ್ಕೆ ಒಳ್ಳೇ ಪ್ರಿನ್ಸೆಸ್ ಥರಾ ಇದಾಳಲ್ವಾ?
ನಾವಿಬ್ರೂ ಪರಸ್ಪರ ತುಂಬಾ ಪ್ರೀತಿಸ್ತಿದೀವಿ; ನಾನು ಮದ್ವೆ ಅಂತ ಆದ್ರೆ ಇವಳನ್ನೇ ಅಂತ ಡಿಸೈಡ್ ಮಾಡಿದೀನಿ. ನೋಡೋಕೂ ಚೆನ್ನಾಗಿದಾಳೆ. ನನ್ನ ಒಡಹುಟ್ಟಿದ ಸಹೋದರಿಯ ಮಗಳಾದ್ದರಿಂದ ಜಾತಿ ಸಮಸ್ಯೆಯೂ ಇಲ್ಲ. ನಾನು ಇವಳನ್ನ ಮದ್ವೆ ಆಗೋಕೆ ನಂ ಮನೇಲಿ ಯಾರ ಅಭ್ಯಂತರವೂ ಇಲ್ಲ. ಸೋ ನಂ ಇಬ್ರ ಮದ್ವೇಗೆ ಯಾವುದೇ ಆತಂಕಾನೂ ಇರಲ್ಲ ಅಂದ್ಕೊಂಡಿದ್ದೆ.
ನನ್ನ ಮದ್ವೆ ಆಗೋಕೆ ಎರಡು ವರ್ಷದವಳು ಇದ್ದಾಗಿಂದಲೇ ಕೈಯಲ್ಲಿ ಹೂ ಹಿಡಿದು ಕಾಯ್ತಿದಾಳೆ...
ಎಲ್ಲಾ ಓಕೇ .. ಆದ್ರೆ ಇವಳ ಮನೇಲಿ ಇವಳ ಅಪ್ಪನದು ಒಬ್ಬನದೇ ತಕರಾರು; "ಬೇಡ, ಇಬ್ಬರಿಗೂ ವಯಸ್ಸಿನ ಅಂತರ ಜಾಸ್ತಿ" ಅಂತಿದಾನೆ. ಪ್ರೀತಿಗೆ ವಯಸ್ಸಿನ ಹಂಗು ಬೇಕೇ? ನೀವಾದ್ರೂ ಅವಳ ಅಪ್ಪನಿಗೆ ಸ್ವಲ್ಪ ಬುದ್ಧಿ ಹೇಳ್ತೀರಾ ಪ್ಲೀಸ್...
"ನನ್ನ ಮತ್ತು ಉಮಿ ಮಾಮಾನ ಮದ್ವೇಗೆ ಅಪ್ಪನನ್ನು ಹೆಂಗೆ ಒಪ್ಸೋದು?"
ಅಂದ್ ಹಾಗೆ ಇವತ್ತು ಈಕೆಯ ನಾಲ್ಕನೆಯ ವರ್ಷದ ಹ್ಯಾಪೀ ಬರ್ತ್‌ಡೇ; ವಿಶ್ ಯೂ ಅ ವೆರೀ ಹ್ಯಾಪೀ ಬರ್ತ್ ಡೇ ಪುಟ್ಟಾ! ಆದಷ್ಟು ಬೇಗ ಆ ದೇವ್ರು ನಿಮ್ ಅಪ್ಪನ್ಗೆ ಒಳ್ಳೇ ಬುದ್ಧಿ ಕೊಟ್ಟು, ನಮ್ಮಿಬ್ಬರ ಮದ್ವೇಗೆ ಒಪ್ಪೋ ತರ ಆಗ್ಲೀ ಅಂತ ಬೇಡ್ಕೋತೀನಿ :) .
ನೀವೂ ವಿಶ್ ಮಾಡ್ತೀರಾ ಅಲ್ವಾ ? :)
'