Monday, April 27, 2009

ಕೆಂಡಸಂಪಿಗೆಯಲ್ಲಿ 'ನಿನ್ನೊಲುಮೆಯ' ಪರಿಮಳ

'
ಇವತ್ತು ಬೆಳಿಗ್ಗೆ ಆಫೀಸಿಗೆ ಬಂದು, ಕಣ್ಣುಜ್ಜುತ್ತಾ (!) ನನ್ನ ಬ್ಲಾಗ್ ಡ್ಯಾಶ್‌ಬೋರ್ಡ್ ತೆರೆದು ಕೂತೆ. ಬ್ಲಾಗ್-ಮಿತ್ರರ ಬ್ಲಾಗುಗಳಲ್ಲಿ ಏನೇನು ಅಪ್‌ಡೇಟ್ಸ್ ಇವೆ ಅಂತ ನೋಡುತ್ತಿದ್ದಾಗ ಧರಿತ್ರಿಯವರ ಬ್ಲಾಗಿನಲ್ಲಿ ಕೆಂಡಸಂಪಿಗೆಗೆ ಥ್ಯಾಂಕ್ಯೂ ಹೇಳುವ ಬರಹವೊಂದಿತ್ತು. ಅರೆ, ಕೆಂಡ ಸಂಪಿಗೆಯಲ್ಲಿ ನಮ್ಮ ಧರಿತ್ರಿಯ ಬ್ಲಾಗಿನ ಬಗ್ಗೆ ಮಾಹಿತಿ ನೀಡಿದ್ದಾರಲ್ಲ ಅಂತ ಅಲ್ಲಿಂದ ಕೆಂಡಸಂಪಿಗೆಯ ಪರಿಮಳ ಹೀರಲು ಹೊರಟೆ. ಧರಿತ್ರಿ ಬಗ್ಗೆ ಓದಿ, ಹಾಗೆಯೇ ಇನ್ನಿತರ ಸುಮಾರು ಕನ್ನಡ ಬ್ಲಾಗುಗಳ ಬಗ್ಗೆ ಓದುತ್ತಾ ಹೋದಂತೆ ನನಗೊಂದು ಅಚ್ಚರಿ ಕಾದಿತ್ತು. ಉಮೇಶರ ನಿನ್ನೊಲುಮೆಯಿಂದಲೇ ಅನ್ನುವ ತಲೆಬರಹದಡಿಯಲ್ಲಿ ನನ್ನ ಬ್ಲಾಗಿನ ಬಗ್ಗೆಯೂ ಚಿಕ್ಕದಾದ ಚೊಕ್ಕದಾದ ಪರಿಚಯವಿತ್ತು! ಬ್ಲಾಗು ಲೋಕದ ಅತಿರಥ ಮಹಾರಥರ ಬ್ಲಾಗುಗಳ ಪರಿಚಯದ ನಡುವೆ ಏನಪ್ಪಾ ನನ್ನ ಬ್ಲಾಗಿನಂತ ಕೂಸುಮರಿಯ ಪರಿಚಯ ಅಂತ ಆಶ್ಚರ್ಯವಾಗಿ ಮತ್ತೊಂದು ಸಲ ಕಣ್ಣುಜ್ಜಿ ನೋಡಿದೆ. ಹೌದು, ನನ್ನ ಬ್ಲಾಗಿನ ಬಗ್ಗೆಯೇ!



ದಿನನಿತ್ಯ ಕಾಣುವ ಆಸಕ್ತಿಕರ ಸಂಗತಿಗಳನ್ನು, ಮನದ ಭಾವನೆಗಳನ್ನು, ನಾನೇ ಕ್ಲಿಕ್ಕಿಸುವ ಕೆಲವು ಛಾಯಾಚಿತ್ರಗಳನ್ನು ಮತ್ತು ಇನ್ನಿತರ ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ನಾನು ಈ ಬ್ಲಾಗುಲೋಕಕ್ಕೆ ಕಾಲಿಟ್ಟೆ. ನನ್ನ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ, ಮೆಚ್ಚಿ, ಪ್ರೋತ್ಸಾಹಿಸಿದ ಕೆಂಡಸಂಪಿಗೆಗೆ ಅನಂತಾನಂತ ಧನ್ಯವಾದಗಳು.

http://www.kendasampige.com/article.php?id=1774
'

Monday, April 6, 2009

ಸೋತು ಗೆಲ್ಲುವವರು...

'
ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಎಲ್ಲ ಪಕ್ಷಗಳ ಚುನಾವಣಾ ತಯಾರಿ ಜೋರಾಗಿಯೇ ನಡೆದಿರಬೇಕು. ಜಾಗೋ ರೇ, ಲೀಡ್ ಇಂಡಿಯಾ ಮುಂತಾದ ಕ್ಯಾಂಪೇನ್ ಗಳು "ವೋಟ್ ಮಾಡಿ, ವೋಟ್ ಮಾಡಿ" ಅಂತ ಮತದಾನದ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಮತ ಚಲಾಯಿಸುವುದು ನಮ್ಮ ಹಕ್ಕು ಮತ್ತು ಆದ್ಯ ಕರ್ತವ್ಯ ಎರಡೂ ಹೌದು. ಆದರೆ ನಮ್ಮ ಈ ಮತದಾನದ ವ್ಯವಸ್ಥೆಯಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ. ಅದೇನಂದ್ರೆ "ಸೋತು ಗೆಲ್ಲುವ" ಅಭ್ಯರ್ಥಿಗಳದು.

"ಸೋತು ಗೆಲ್ಲುವವರು" ಅಂದ್ರೆ ಯಾರು ಅಂತೀರಾ? ಒಂದು ಉದಾಹರಣೆ ಸಮೇತ ಹೇಳಲು ಪ್ರಯತ್ನಿಸುತ್ತೇನೆ.

ಒಂದು ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರಿದ್ದಾರೆ ಮತ್ತು ಅಲ್ಲಿ ನೂರಕ್ಕೆ ನೂರರಷ್ಟು ಮತದಾನ ನಡೆಯುತ್ತೆ ಎಂದಿಟ್ಟುಕೊಳ್ಳೋಣ. ಚುನಾವಣೆ ನಂತರ ಮೂವರು ಅಭ್ಯರ್ಥಿಗಳಲ್ಲಿ ಮೊದಲ ಇಬ್ಬರಿಗೆ ತಲಾ ಮೂವತ್ತು ಸಾವಿರ ಮತಗಳು ಮತ್ತು ಮೂರನೆಯವನಿಗೆ ನಲವತ್ತು ಸಾವಿರ ಮತಗಳು ಲಭಿಸಿದವು ಎಂದಿಟ್ಟುಕೊಳ್ಳೋಣ. ಈಗ ನಮ್ಮ ಚುನಾವಣಾ ವ್ಯವಸ್ಥೆ ಗೆದ್ದವರು ಯಾರೆಂದು ಘೋಷಿಸುತ್ತೆ? ಮೂರನೆಯವನನ್ನು ತಾನೇ?

ಇಲ್ಲಿ ಗಮನಿಸತಕ್ಕ ಅಂಶವೆಂದರೆ, ಈ ಮೂರನೆಯ ಅಭ್ಯರ್ಥಿ ಆ ಕ್ಷೇತ್ರದ 60% ಮತದಾರರಿಂದ ತಿರಸ್ಕರಿಸಲ್ಪಟ್ಟವನು. ಅವನಿಗೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತು ಅವನು ವಿಜಯಿಶಾಲಿಯೇ ಆಗಿರಬಹುದು. ಆದರೆ, ಅವನು ತನಗೆ ಮತ ಹಾಕದ 60 ಪ್ರತಿಶತ ಮತದಾರರಿಂದ ತಿರಸ್ಕರಿಸಲ್ಪಟ್ಟವನು ಎಂಬ ಅಂಶ ಮಾತ್ರ ಸುಳ್ಳಲ್ಲ ತಾನೇ? ಇಂಥವರನ್ನೇ ನಾನು "ಸೋತು ಗೆಲ್ಲುವವರು" ಅಂತ ಸಂಭೋದಿಸಿದ್ದು.

ಇದು ನಮ್ಮ ಚುನಾವಣಾ ವ್ಯವಸ್ಥೆಯ ಲೊಪವೇ? ಹೌದಾಗಿದ್ದರೆ, ಇದಕ್ಕೆ ಪರಿಹಾರವೇನು?
'