skip to main |
skip to sidebar
ಬೆಳದಿಂಗಳ ಬಾಲೆ,
ಕನಸಿನ ಕಣ್ಮಣಿ, ಸ್ವಪ್ನ ಸುಂದರಿ, ಕಲ್ಪನಾ ಕನ್ಯೆ, ಭಾವಿ ಬಾಳಿನ ಸುಪ್ತದೀಪ್ತೀ... ಈವರೆಗೂ ನನ್ನ ಕೈಗೆ ಸಿಗದೆ, ಕಣ್ಣಿಗೂ ಕಾಣದೆ ಇಲ್ಲೇ ಎಲ್ಲೋ ಇರುವ ನಿನ್ನನ್ನ ಏನಂತ ಕರೆಯಲಿ? ನೀ ಎಲ್ಲಿರುವೆ, ಹೇಗಿರುವೆ ಎಂಬ ಸ್ಪಷ್ಟವಾದೊಂದು ಕಲ್ಪನೆಯೂ ಇಲ್ಲದೇ ನಿನಗೀ ಪತ್ರ ಬರೆಯುತ್ತಿದ್ದೇನೆ. ನೀ ಎಲ್ಲಾದರೂ ಇರು, ಹೇಗಾದರೂ ಇರು, ನಮ್ಮಿಬ್ಬರ ಮದುವೆ ಯಾವತ್ತೋ ಸ್ವರ್ಗದಲ್ಲೇ ನೆರವೇರಿರುವುದರಿಂದ ನೀ ನನಗೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗ್ತೀಯ ಅನ್ನೋ ಆಶಾವಾದದೊಂದಿಗೆ ನಿನಗೀ ಓಲೆ.
ಚೆಲುವೆ ಎಲ್ಲಿರುವೆ, ಮನವ ಕಾಡುವ ರೂಪಸಿಯೇ,ಬಯಕೆಯ ಬಳ್ಳಿಯ,ನಗುವ ಹೂವಾದ ಪ್ರೇಯಸಿಯೇ...
ನಿಂಗೊತ್ತಾ? ನಿನ್ನ ಬಗ್ಗೆ ಒಂದು ಅಮೂರ್ತ ಕಲ್ಪನೆಯಿಟ್ಟುಕೊಂಡೇ ಪ್ರತಿನಿತ್ಯ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಹುಡುಕ್ತಾ ಇರ್ತೀನಿ. ನಾ ಪ್ರತಿನಿತ್ಯ ನಡೆದುಕೊಂಡು ಹೋಗುವ ಹಾದಿಯಲ್ಲಿ ಎದಿರಾಗುವ ಪ್ರತಿ ಹುಡುಗಿಯಲ್ಲಿ, ಬಸ್ಟ್ಯಾಂಡಿನಲ್ಲಿ ನನ್ನೊಂದಿಗೆ ಬಸ್ಸಿಗೆ ಕಾಯುತ್ತಾ ನಿಲ್ಲುವ ಪ್ರತಿ ಪ್ರಮೀಳೆಯಲ್ಲಿ, ಹತ್ತಿದ ಬಸ್ಸಿನಲ್ಲಿ ಸೀಟು ಸಿಗದೆ ನಿಂತ ಪ್ರತಿ ನೀಳಕಾಯದ ಶ್ವೇತಸುಂದರಿಯಲ್ಲಿ, ಊರಿಗೆ ಹೋಗುವಾಗ ರೈಲಿನಲ್ಲಿ ಜೊತೆಯಾಗುವ ಪ್ರತಿ ಲಲನಾಮಣಿಯಲ್ಲಿ, ಗೆಳೆಯರೊಂದಿಗೆ ಬೀದಿ ಸುತ್ತುವಾಗ ನೋಡುವ ಪ್ರತಿ ಕನ್ಯಾರತ್ನದಲ್ಲಿ, ಹೊಟೇಲಿನಲ್ಲಿ ಊಟ ಮಾಡುವಾಗ ಗೆಳತಿಯರೊಂದಿಗೋ ಇಲ್ಲ ಅಪ್ಪ-ಅಮ್ಮನೊಂದಿಗೋ ಬಂದು ಎದುರಿನ ಟೇಬಲ್ಲಿನಲ್ಲಿ ಆಸೀನಳಾಗಿ ಥೇಟ್ ನನ್ ಥರಾನೇ "ತಿನ್ನೋಕೆ ಏನು ಆರ್ಡರ್ ಮಾಡೋದು?" ಎಂದು ಪೇಚಾಡುವ ಪ್ರತಿ ಪೆದ್ದುಮಣಿಯಲ್ಲಿ, ಗೆಳೆಯನೊಬ್ಬನ ಮದುವೆಯಲ್ಲಿ ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ, ವಾರಾಂತ್ಯದಲ್ಲಿ ದೇವರ ದರ್ಶನಕ್ಕಾಗಿ ನಾ ಹೋಗುವ ದೇವಸ್ಥಾನಕ್ಕೆ "ನನಗೊಬ್ಬ ಒಳ್ಳೆಯ ಗಂಡನನ್ನು ದಯಪಾಲಿಸು ತಂದೇ" ಎಂದು ದೇವರಲ್ಲಿ ಮೊರೆಯಿಡಲು ಬರುವ ಪ್ರತಿ ಭಕ್ತ ಶಿಖಾಮಣಿಯಲ್ಲಿ, ಶಾಪಿಂಗ್ ಮಾಲ್ ನಲ್ಲಿ ಕೊಳ್ಳಲು ಬಂದಿದ್ದನ್ನು ಮರೆತು ಕಣ್ಣಿನಲ್ಲೇ ಬೇರೆ ಇನ್ನೇನನ್ನೋ ಹುಡುಕುವ ಕನ್ಫ್ಯೂಸ್ಡ್ ಹುಡುಗಿಯರಲ್ಲಿ,.... ಹೀಗೆ ಪ್ರತಿನಿತ್ಯ ಎದುರಾಗುವ ಪ್ರತಿ ಸಾಧಾರಣ ಸುಂದರಿಯಲ್ಲೂ ನಿನ್ನ ಸಾಕಾರ ರೂಪ ಕಾಣೋಕೆ ಹವಣಿಸ್ತಿರ್ತೀನಿ.
ಡ್ರೀಮ್ ಗರ್ಲ್,
ಕಿಸೀ ಶಾಯರ್ ಕೀ ಗಝಲ್,ಡ್ರೀಮ್ ಗರ್ಲ್,
ಕಿಸೀ ಝೀಲ್ ಕಾ ಕಂವಲ್,ಕಹೀಂ ತೋ ಮಿಲೆಗೀ,
ಕಭಿ ತೋ ಮಿಲೆಗೀ,ಆಜ್ ನಹೀ ತೋ ಕಲ್...
ಆದರೆ ಕೊನೆಗೆ, ಹೀಗೆ ನೋಡುವ ಪ್ರತಿ ಹುಡುಗಿಯಲ್ಲೂ ನಿನ್ನನ್ನ ಕಾಣದೆ ನಿರಾಶೆಗೊಳ್ತೀನಿ. ಪ್ರತಿಯೊಬ್ಬಳನ್ನೂ, ಛೇ! ಇವಳು ಸ್ವಲ್ಪ ಜಾಸ್ತೀನೇ ಮಾಡರ್ನ್; ನಮ್ಮ ಸಂಪ್ರದಾಯಸ್ಥ ಮನೆಗೆ ಸರಿ ಹೋಗಲ್ಲ,... ಉಹೂಂ, ಇವಳಿಗ್ಯಾಕೋ ಸ್ವಲ್ಪ ಕೊಬ್ಬು ಜಾಸ್ತಿ ಅನ್ಸುತ್ತೆ,... ಅರೆ! ಇವಳು ಈಗ ಸ್ವಲ್ಪ ಹಿಂದೆ ಅಂದುಕೊಂಡಷ್ಟು ಚೆನ್ನಾಗಿಲ್ಲ,... ಹ್ಮ್! ಇವಳ್ಯಾಕೋ ತುಂಬಾನೆ ಚೈಲ್ಡಿಶ್ ಅನ್ಸುತ್ತೆ,... ಅಯ್ಯೋ ಬೇಡಪ್ಪ - ನಾ ದುಡಿಯೋದೆಲ್ಲಾ ಇವಳ ಮೇಕಪ್ಪಿಗೇ ಸರಿ ಹೋಗುತ್ತೆ,... ಇವಳ್ಯಾಕೋ ತುಂಬಾನೆ ಚೆನ್ನಾಗಿದಾಳೆ - ಗಗನ ಕುಸುಮ!,... ಅಯ್ಯಪ್ಪ, ಇವಳು ತೀರಾ ದಪ್ಪ ಇದಾಳೆ,... ಅಯ್ಯೋ ಬೇಡ - ಇವಳ ನಖರಾ ಯಾಕೋ ಜಾಸ್ತಿಯಾಯ್ತು,... ಹ್ಮ್! ಇದು ನನಗೆ ಸಿಗದ ಹುಳಿ ದ್ರಾಕ್ಷಿ,... ಅಬ್ಬಾ! ಇವಳಾಡೋದು ನೋಡಿದ್ರೆ ಇವಳು ನನ್ನೊಂದಿಗೆ ಮತ್ತು ನಮ್ಮ ಮನೆಯವರೊಂದಿಗೆ ಹೊಂದಿಕೊಳ್ಳೋ ಚಾನ್ಸೇ ಇಲ್ಲ,... ಎಲ್ಲ ಸರಿ - ಆದ್ರೆ ಇವಳನ್ನ ನನ್ನ ಅಪ್ಪ-ಅಮ್ಮ ಒಪ್ಕೊಳ್ಳೋದು ಡೌಟು,... ಹೀಗೆ ಒಂದಿಲ್ಲೊಂದು ಕಾರಣದಿಂದ 'ಅವಳು' ನೀನಲ್ಲ ಎಂಬ ತೀರ್ಮಾನಕ್ಕೆ ಬಂದಿರ್ತೇನೆ :)
ಜಾನೆ ಜಾನ್,ಡೂಂಡತೇ ಫಿರ್ ರಹಾ,ಹೂಂ ತುಮ್ಹೆ ರಾತ್ ದಿನ್, ಮೈ ಯಹಾಂ ಸೆ ವಹಾಂ.
ಮುಝ್ಕೋ ಆವಾಜ್ ದೋ, ಚುಪ್ ಗಯೀ ಹೋ ಸನಮ್,ತುಮ್ ಕಹಾಂ...
"ಮೈ ಯಹಾಂ" ಅಂತ ಒಂದ್ಸಲ ನಂಗೆ ಕೇಳ್ಸೋವಷ್ಟು ಜೋರಾಗಿ ಕೂಗೆ ಪ್ಲೀಸ್... :) .
ನಿನ್ನ ಬಗೆಗಿನ ನನ್ನ ಅಪಕ್ವ ಕಲ್ಪನೆಗಳೆಲ್ಲ ಒತ್ತಟ್ಟಿಗಿರಲಿ; ಅಸಲಿಗೆ ನೀನು ಇರುವುದಾದರೂ ಹೇಗೆ? ನಾನೋ ಒಬ್ಬ ಸಾಮಾನ್ಯ, ಮಧ್ಯಮ ವರ್ಗದ ಹುಡುಗ. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾವುಕ; ನಾನೇ ಹೇಳ್ಕೊಳ್ಳೋ ಹಾಗೆ - ಜೀವನದ ಪ್ರತಿ ಪುಟ್ಟ ಸಂತಸದಲ್ಲೂ ಸಂಭ್ರಮಿಸುವ ಭಾವಜೀವಿ. ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ; ಆದ್ರೆ, ತುಂಬಾ ಹತ್ತಿರದವರನ್ನ ನನ್ನನ್ನು ನಾನೇ ಪ್ರೀತಿಸದಷ್ಟು ಹೆಚ್ಚಾಗಿ ಪ್ರೀತಿಸ್ತೇನೆ ಮತ್ತು ಗೌರವಿಸ್ತೇನೆ. ನೀನೂ ನನ್ನಂತೆ ನಾ? ನೀನೂ ನನ್ನಂತೆ ಭಾವಜೀವಿಯಾ? ನನ್ನಂತೆ ನೀನೂ ಅಪ್ಪ-ಅಮ್ಮನನ್ನು ಬೆಟ್ಟದಷ್ಟು ಪ್ರೀತಿಸ್ತೀಯ? ನನ್ನಂತೆ ಮಿತಭಾಷೀಯಾ ಅಥವಾ ಬಾಯಿ ಹರಿದು ಹೋಗುವಂತೆ ಇಪ್ಪತ್ನಾಲ್ಕು ಗಂಟೆನೂ ವಟವಟಾ ಅಂತ ವಟಗುಡ್ತಿರ್ತೀಯ :) ? ನನ್ನಂತೆ ನೀನೂ ಕಿಶೋರ್, ರಫಿ, ಲತಾ, ಸೋನು, ಶ್ರೇಯಾ, ಪೀ ಬೀ ಎಸ್, ರಾಜ್‌ಕುಮಾರ್, ಜಾನಕಿ, ಎಸ್ ಪೀ ಬೀ ಹಾಡುಗಳನ್ನು ಇಷ್ಟ ಪಡ್ತೀಯ? ನನ್ ಥರಾ ಆಗಾಗ ತರ್ಲೆ ಜೋಕು ಹೇಳಿ ಜೊತೆಗಿರೋರನ್ನ ನಗಿಸೋಕೆ ಪ್ರಯತ್ನಿಸ್ತಿರ್ತೀಯಾ? ಗೆಳೆಯನೋ, ಗೆಳತಿಯೋ ಮುಖ ಚಿಕ್ಕದು ಮಾಡಿಕೊಂಡು ಕುಳಿತಾಗ ಕಳವಳಗೊಂಡು"ಏನಾಯ್ತೋ" ಎಂದು ಆತ್ಮೀಯತೆಯಿಂದ ವಿಚಾರಿಸ್ತೀಯ? ನೀನೂ ನನ್ ಥರಾ ಹೀಗೆಯೇ ನಾನೆಲ್ಲಿದೀನಿ, ಹೇಗೀದೀನಿ ಅನ್ನೋ ಪುಟ್ಟದೊಂದು ಅಂದಾಜೂ ಇಲ್ಲದೇ ನಂಗೋಸ್ಕರ ಪತ್ರ, ಕವನ ಏನಾದ್ರೂ ಬರೀತಾ ಇದೀಯಾ?
ನೀನೆಂದರೆ ನನ್ನೊಳಗೆ, ಏನೋ ಒಂದು ಸಂಚಲನ,ನಾ ಬರೆಯದಾ ಕವಿತೆಗಳ, ನೀನೇ ಒಂದು ಸಂಕಲನ,ಓ ಜೀವವೇ ಹೇಳಿಬಿಡು, ನಿನಗೂ ಕೂಡ ಹೀಗೇನಾ...
ಕೆಲವು ಸಂದರ್ಭಗಳಲ್ಲಿ ನಿನ್ನ ಅನುಪಸ್ಥಿತಿ ನನ್ನ ತುಂಬಾ ಕಾಡುತ್ತೆ ಕಣೇ :( ... ಕಳೆದ ವರ್ಷ ಕೆಲಸದ ಮೇಲೆ ಅಮೇರಿಕಕ್ಕೆ ಹೋದಾಗ, ಅಲ್ಲಿ ಅಡುಗೆ ಮಾಡ್ಕೊಳ್ಳೋಕೆ ಪ್ರಯತ್ನ ಪಡ್ತಾ ಕೈ ಸುಟ್ಟುಕೊಂಡಾಗ, ಏನೋ ಅಡುಗೆ ಮಾಡೋಕೆ ಹೋಗಿ ಅದು ಇನ್ನೇನೋ ಆದಾಗ, ಅಲ್ಲಿ ಸಾಂತಾ ಕ್ರೂಸ್ ಬೀಚಿನ ದಂಡೆ ಮೇಲೆ ಒಬ್ಬನೇ ಅಲ್ಲೆಯುತ್ತಿದ್ದಾಗ, ಮನಮೋಹಕ ತಾಹೋ ಸರೋವರದ ಸುತ್ತಮುತ್ತ ಮಂಜಿನೊಂದಿಗೆ ಆಟವಾಡುತ್ತಿದ್ದಾಗ, ಮೊಂಟರಿ ಬೇ ಅಕ್ವೇರಿಯಮ್ ನಲ್ಲಿ ಮತ್ಸ್ಯಗಳ ಸುಂದರ ಲೋಕದಲ್ಲಿ ವಿಹರಿಸುತ್ತಿದ್ದಾಗ, ಮಿಶನ್ ಪೀಕ್ ಬೆಟ್ಟದ ತುದಿಯಲ್ಲಿದ್ದಾಗ, ಸ್ಯಾನ್ ಫ್ರಾನ್ಸ್ಸಿಸ್ಕೊ ಗೋಲ್ಡನ್ ಗೇಟ್ ಬ್ರಿಡ್ಜ್ ನ ಮೇಲೆ ಓಡಾಡುತ್ತಿದ್ದಾಗ, ಲಾಸ್ ಎಂಜೀಲಿಸ್ ನ ಡಿಸ್ನೀಲ್ಯಾಂಡ್ ನಲ್ಲಿ ಫನ್ ರೈಡ್ಸ್ ಆಡೋವಾಗ, ಹಾಲಿವುಡ್ ನ ಯೂನಿವರ್ಸಲ್ ಸ್ಟುಡಿಯೋದಲ್ಲಿ ಸ್ಟುಡಿಯೊ ಟೂರಿಗೆ ಹೋದಾಗ, ಮತ್ತೆ ಕೆಲವು ತಿಂಗಳ ಹಿಂದೆ ಕೊಡಚಾದ್ರಿ ಬೆಟ್ಟದ ಮೇಲೆ ಸೂರ್ಯೋದಯದ ಸೊಬಗು ಸವಿಯುತ್ತಿದ್ದಾಗೆಲ್ಲ ನಿನ್ನನ್ನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಂಡೆ; ನೀನೂ ಜೊತೆಗಿದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ಅಂತ.
ಮೈ, ಔರ್ ಮೇರಿ ತನಹಾಯೀ,ಅಕ್ಸರ್ ಯೇ ಬಾತೇ ಕರ್ತೇ ಹೈ.
ತುಮ್ ಹೋತೀ ತೋ ಕೈಸಾ ಹೋತಾ,ತುಮ್ ಯೇ ಕೆಹ್ತಿ, ತುಮ್ ವೋ ಕೆಹ್ತಿ,ತುಮ್ ಈಸ್ ಬಾತ್ ಪೆ ಹೈರಾನ್ ಹೋತೀ,ತುಮ್ ಉಸ್ ಬಾತ್ ಪೆ ಕಿತ್ನೀ ಹಸ್ತೀ,ತುಮ್ ಹೋತೀ ತೋ ಐಸಾ ಹೋತಾ, ತುಮ್ ಹೋತೀ ತೋ ವೈಸಾ ಹೋತಾ,
ಮೈ, ಔರ್ ಮೇರಿ ತನಹಾಯೀ, ಅಕ್ಸರ್ ಯೇ ಬಾತೇ ಕರ್ತೇ ಹೈ.
ನಾಳೆ ಮದುವೆಯಾದ ಮೇಲೆ, ನಿನ್ನ ಅಪ್ಪ-ಅಮ್ಮನನ್ನು ಕಂಡಷ್ಟೇ ಪ್ರೀತ್ಯಾದರಗಳಿಂದ ನನ್ನ ಅಪ್ಪ-ಅಮ್ಮನನ್ನೂ ಕಾಣಬಲ್ಲೆಯಾ? ನಾ ಚಿಕ್ಕದೊಂದು ಗೆಲುವಿನೊಂದಿಗೆ ಮನೆಗೆ ಬಂದಾಗ ಒಂದು ಹೆಮ್ಮೆಯ ಮುಗುಳ್ನಗೆಯೊಂದಿಗೆ ನನ್ನ ಸ್ವಾಗತಿಸ್ತೀಯಾ? ಸೋತು ಸುಣ್ಣವಾಗಿ ಬಂದಾಗ ಎರಡು ಸಾಂತ್ವನದ ನುಡಿಗಳನ್ನು ಹೇಳಿ ಮತ್ತೆ ನನ್ನನ್ನು ಚೈತನ್ಯದ ಚಿಲುಮೆಯಾಗಿಸ್ತೀಯಾ? ಕೃಷಿಯಾಧಾರಿತ, ಮಧ್ಯಮವರ್ಗದ, ಸಂಪ್ರದಾಯಸ್ಥ ಮನೆ ನಮ್ಮದು; ನಮ್ಮ ಮನೆಯ ಸಂಪ್ರದಾಯ, ಶಿಷ್ಟಾಚಾರಗಳನ್ನು ನನ್ನಷ್ಟೇ ಶ್ರದ್ಧೆಯಿಂದ ಪಾಲಿಸ್ತೀಯಾ? ಹುಣ್ಣಿಮೆ ಬೆಳದಿಂಗಳಲ್ಲಿ ನನ್ ಜೊತೆ ಕೂತ್ಕೊಂಡು ಚುಕ್ಕಿಗಳನ್ನು ಎಣಿಸೋಕೆ ಹೆಲ್ಪ್ ಮಾಡ್ತೀಯಾ? ಮತ್ತೆ, ನಾ ಆಫೀಸಿನಿಂದ ಲೇಟಾಗಿ ಬಂದಾಗ ಹುಸಿಗೋಪ ತೋರಿಸಿ "ನಾಳೆಯಿಂದ ಬೇಗ ಬರ್ದಿದ್ರೆ ನಿಮ್ಗೆ ಊಟ ಇಲ್ಲ!" ಅಂತ ಹೆದ್ರಿಸ್ತೀಯ? ಚಿಕ್ಕದೊಂದು ನಿರುಪದ್ರವಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ ನನ್ನ ಕಿವಿ ಹಿಂಡಿ "ಇನ್ನೊಂದು ಸಲ ಸುಳ್ಳು ಹೇಳಿದ್ರೆ ನಾ ನನ್ನ ತವರು ಮನೆಗೆ ಹೊರ್ಟೋಗ್ತೀನಿ" ಅಂತ ಹೇಳಿ ನಂಗೆ ಭಯ ಬೀಳಿಸ್ತೀಯ? ಏನೋ ಒಂದು ತರ್ಲೆ ಮಾಡಿ ನನ್ಹತ್ರ ಬೈಸಿಕೊಂಡಾಗ ಪುಟ್ಟ ಮಗುವಿನಂತೆ ಗಲ್ಲ ಊದಿಸಿಕೊಂಡು ಕೂಡ್ತೀಯಾ? ಇಷ್ಟೆಲ್ಲಾ ನಿರೀಕ್ಷೆ ತುಂಬಾ ಜಾಸ್ತಿ ಅನ್ನಿಸಿದ್ರೆ, ಕಡೆ ಪಕ್ಷ ನನ್ನ ನಗುವಿಗೆ ನಗುವಾಗಿ, ಅಳುವಿಗೆ ಅಳುವಾಗಿ ಸಾಥ್ ನೀಡಬಲ್ಲೆಯಾ? ನಿನ್ನಿಂದ ನಾನು ಇಷ್ಟೇ-ಇಷ್ಟು ಸಾಮಾನ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾ? ಹಾಂ! ಚಿಂತೆಬೇಡ; ಅಷ್ಟು ನಿರೀಕ್ಷೆಗಳನ್ನು ನೀನೂ ನನ್ನ ಬಗ್ಗೆ ಇಟ್ಟುಕೋಬಹುದು ಮತ್ತು ನಿನ್ನ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಬಲ್ಲೆ. ಹೇಳು, ಕಷ್ಟ-ಸುಖ ಏನೇ ಬರಲಿ, ನೀನು ನನ್ನ ಬಿಟ್ಟು ಇರಲ್ಲ ಅಲ್ಲ್ವಾ..?
ವಾದಾ ಕರ್ ಲೇ ಸಾಜನಾ, ತೇರೆ ಬಿನಾ ಮೈ ನಾ ರಹೂ, ಮೇರೆ ಬಿನಾ ತೂ ನಾ ರಹೆ, ಹೋಕೇ ಜುದಾ...
ಸಾಧಾರಣ, ಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿ, ಕೃಷಿಕ ಮನೆತನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಈ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟ ಪಟ್ಟಿದ್ದೇನೆ, ಸಾಕಷ್ಟು ತ್ಯಾಗ ಮಾಡಿದ್ದೇನೆ. ಬಳಲಿ ಬೆಂಡಾಗಿ ಬಂದಾಗ ನಿನ್ನ ಮಡಿಲು ನನಗೆ ತಂಪನೀಯಬಲ್ಲುದು ಎಂದು ಆಶಿಸಿದ್ದೇನೆ; ನನಗೆ ನಿರಾಸೆ ಮಾಡಲ್ಲ ತಾನೇ?...
ಬೇಕು ಬದುಕಲಿ,
ಸಾಕು ಅನಿಸುವಷ್ಟು ಮೌನ,
ಬೇಕು ಅನಿಸುವಷ್ಟು ಮಾತು, ಹಿಡಿ-ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ...
ಮನೆಯಲ್ಲಿ ಅಪ್ಪ-ಅಮ್ಮನ ಒತ್ತಡಕ್ಕೆ ಮಣಿದು ಇನ್ನು ಕೆಲವು ದಿನಗಳಲ್ಲಿ ನಿನ್ನ ಅಧಿಕೃತ ಅನ್ವೇಷಣೆ ಶುರುವಾಗಲಿದೆ. ಇದುವರೆಗೂ ಕಾಣದ ನಿನ್ನ ಜೊತೆಗೂಡಿ ಸುಂದರ ಬಾಳಗೊಪುರ ಕಟ್ಟುವ ಕನಸು ಕಂಡಿದ್ದೇನೆ. ಇಷ್ಟು ದಿನ ನನ್ನ ಕೈಗೆ ಸಿಗದೆ ಸತಾಯಿಸಿದ್ದಕ್ಕೆ ನಿನ್ನೊಂದಿಗೆ ಸಿಕ್ಕಾಪಟ್ಟೆ ಜಗಳ ಆಡಬೇಕಿದೆ. ಸಾಂತಾ ಕ್ರೂಸ್ ಬೀಚಿನ ದಂಡೆಯ ಮೇಲಿಂದ ನಿನ್ಗೋಸ್ಕರ ವಿಧವಿಧದ ಕಪ್ಪೇಚಿಪ್ಪುಗಳನ್ನ, ಶಂಖಗಳನ್ನ ಮತ್ತು ಇನ್ನೂ ಏನೇನನ್ನೋ ತಂದಿದೀನಿ; ಅವೆಲ್ಲ ನಿಂಗೆ ಕೊಡ್ಬೇಕು. ಬೇಂದ್ರೆ ಅಜ್ಜನ ಪದ್ಯದ ಸಾಲೊಂದು ನೆನಪಾಯ್ತು; 'ಮಲ್ಲಿಗೀ ಮಂಟಪದಾಗ ಗಲ್ಲ-ಗಲ್ಲ ಹಚ್ಚಿ ಕೂತು ಮೆಲ್ಲದನೀಲೆ ಹಾಡೂನಂತ'. ನಿನ್ ಜೊತೆ ಬಹಳಷ್ಟು ಮಾತಾಡೋದಿದೆ. ತುಂಬ ಹುಡುಕಾಡಿಸಬೇಡ; ಬೇಗ ಸಿಕ್ಬಿಡು.
ನಿನ್ನ ನೋಡಲೆಂತೋ, ಮಾತನಾಡಲೆಂತೋ,ಮನಸ ಕೇಳಲೆಂತೋ,
ಪ್ರೀತಿ ಹೇಳಲೆಂತೋ,ಆಹಾ ಒಂಥರಾ ಥರಾ, ಹೇಳಲೊಂಥರಾ ಥರಾ,ಕೇಳಲೊಂಥರಾ ಥರಾ...
ನಿನ್ನದೇ ನಿರೀಕ್ಷೆಯಲ್ಲಿರುವ,
- ನಿನ್ನವ
ವಿ. ಸೂ.: ಬ್ಲಾಗಲ್ಲಿ ಏನಾದರೂ ಬರೀಬೇಕು, ಏನು ಬರೀಲಿ ಅಂತ ಯೋಚಿಸ್ತಿದ್ದಾಗ ಹೀಗೇ ಒಂದು ತರ್ಲೆ ಐಡಿಯಾ ಹೊಳೀತು; ಮುಂದೆ ನನ್ನ ಮದ್ವೆ ಆಗಲಿರೋ ಕಲ್ಪನಾ ಕನ್ಯೆಗೆ ಒಂದು ಪತ್ರ ಬರೆದರೆ ಹೇಗೆ ಅಂತ. ಅದ್ಕೋಸ್ಕರ ಈ ಲೇಖನವೇ ಹೊರತು, ನಾನೇನೂ ನಿಜವಾಗಿಯೂ ಅಷ್ಟೊಂದು ಡೆಸ್ಪರೇಟ್ ಆಗಿ ಹುಡುಗಿ ಹುಡುಕ್ತಾ ಇಲ್ಲ :)
ಹಾಂ! ಪ್ರತಿಕ್ರಿಯೆಗೆ ಕನ್ನಡ ಲಿಪಿ ಉಪಯೋಗಿಸಿದರೆ ತುಂಬ ಸಂತೋಷ. ಕನ್ನಡದಲ್ಲಿ ಸರಳವಾಗಿ, ಶೀಘ್ರವಾಗಿ, ತಪ್ಪಿಲ್ಲದಂತೆ ಟೈಪಿಸಲು ನೀವು ಕ್ವಿಲ್‌ಪ್ಯಾಡ್ (http://www.quillpad.com/kannada/editor.html) ಬಳಸಬಹುದು. ಧನ್ಯವಾದಗಳು :)'
ವಾಹ್.. ಸೂಪರ್ ಕಣ್ರೀ... ತುಂಬಾನೇ ಚೆನ್ನಾಗಿದೆ ನಿಮ್ಮ ಬರವಣಿಗೆ... ನಿಮಗೆ ನೀವು ಬಯ್ಸಿದಂತ ಹುಡುಗಿನೇ ಸಿಗಲಿ ಅಂತ ಹಾರೈಸ್ತೀನಿ..
ReplyDeleteನನ್ನ ಬ್ಲಾಗಿನಲ್ಲಿ 'ಅಮ್ಮನ ಮನ ನೋಯಿಸಿದ್ದಕ್ಕೆ ದೇವರು ಶಾಪವಿತ್ತನಾ....?!' ಅನ್ನೋ ಒಂದು ಬರಹ ಹಾಕಿದ್ದೇನೆ. ಬಿಡುವಾದಾಗ ಒಮ್ಮೆ ಭೇಟಿ ಕೊಟ್ಟು, ಅನಿಸಿಕೆ ತಿಳಿಸಿ...
http://ranjanashreedhar.blogspot.com/
ಧನ್ಯವಾದಗಳು...
ರಂಜನ ಶ್ರೀಧರ್ ....
ವಾಹ್.....ಸುಮ್ಸುಮ್ನೆ ಇಸ್ಟೊಂದು ಚೆನ್ನಾಗಿ ಬರೆದಿದ್ದೀರಿ ಅಂದ್ರೆ ಇನ್ನು ನಿಜವಾಗ್ಲೂ 'ನಿಮ್ಮವಳಿಗೆ' ಬರೆದ್ರೆ ಹೇಗಿರುತ್ತೋ!!!! ನೀವು ಬಯಸುವಂತಮನದನ್ನೇ ಸಿಗಲೆಂಬ ಹಾರೈಕೆಯೊಂದಿಗೆ .......
ReplyDeleteಹ್ಹಾ ಹ್ಹಾ ಹ್ಹಾ....
ReplyDeleteಚನ್ನಾಗಿದೆ ಉಮೇಶ್..
ನಿಮಗೆ ನೀವು ಬಯಸಿದಂತ ಹುಡುಗಿ ಸಿಗಲಿ....
ಏನು ಉಮೇಶ ಪ್ರೇಮದ ಪಾಶ ದಲ್ಲಿ ಸಿಲುಕಲು ರಿಹರ್ಸಲ್ ಜೋರಾಗಿದೆ...
ReplyDeleteಉಮೇಶ್....
ReplyDeleteನಿಮ್ಮ ಒಲವಿನ ಓಲೆ...
ಓದಿ....ಓದಿ ...ನಾನಂತೂ..
ಭಾವನಾ ಲೋಕಕ್ಕೆ ತೇಲಿ ಹೋದೆ.....
ಮಧ್ಯದಲ್ಲಿ...
ಅಲ್ಲಲ್ಲಿ ಸೇರಿಸಿದ ಹಾಡೂಗಳಂತೂ ಸೂಪರ್...
ಅವುಗಳನ್ನು ಸರಿಯಾಗಿ ಬಳಸಿದ್ದೀರಿ....
ಬಹಳ ಖುಷಿಯಾಯಿತು....
ಅಭಿನಂದನೆಗಳು....
ನಿಮಗೆ....
ನಿಮ್ಮಾಸೆಯ ಹುಡುಗಿ ಸಿಗಲಿ....
ಪ್ರಕಾಶಣ್ಣ....
@ರಂಜನಾ,
ReplyDeleteನಿಮ್ಮ ಬ್ಲಾಗ್ ಇಷ್ಟವಾಯಿತು. ನೀವೂ ತುಂಬಾ ಚೆನ್ನಾಗಿ ಬರೀತೀರಿ. ಈ ಲೇಖನದ ಬಗ್ಗೆ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತು ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು. ಆಗಾಗ್ಗೆ ಬರ್ತಾ ಇರಿ.
@ಸುಮನ ಮೇಡಮ್,
ನಿಜವಾಗಿಯೂ ಬರೆದ್ರೆ ಅದು ಒಂದು ಪತ್ರವಾಗಿರೋಲ್ಲ; ದೊಡ್ಡದೊಂದು ಪುಸ್ತಕವೇ ಆದೀತೇನೋ :) . ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತು ಹಾರೈಕೆಗೆ ಅನಂತ ವಂದನೆಗಳು.
@ಶಿವಪ್ರಕಾಶ್,
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ವಂದನೆಗಳು.
@ದೇಸಾಯಿ ಸರ್,
ಹ್ಹೆ ಹ್ಹೆ .. ರಿಹರ್ಸಲ್ ಗಿಹರ್ಸಲ್ ಎನೂ ಇಲ್ಲ ಸರ್.. ಸುಮ್ನೇ ಬರೆದೆ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
@ಪ್ರಕಾಶ್ ಸರ್,
ನಿಮ್ಮ ಮನಃ ಪೂರ್ವಕ ಅಭಿನಂದನೆಗಳಿಗೆ ನಾನು ಚಿರಋಣಿ. ನಿಮ್ಮಂತವರ ಪ್ರೋತ್ಸಾಹವೇ ನನಗೆ ಹೆಚ್ಚು ಹೆಚ್ಚು ಬರೆಯಲು ಸ್ಪೂರ್ತಿ. ಧನ್ಯವಾದಗಳು.
ಸಿಗಲಿ ಬೇಗನೆ ನೀವು ಬಯಸಿದ ಹುಡುಗಿ ಸಿಗಲಿ..ಹಾಗೇ ಮದುವೆಗೆ ನಮ್ಮನ್ನೂ ಕರೇರಿ ಮಾರಾಯ್ರೆ...ನಿಮ್ಮ ಮದುವೆಯಂತೂ ನಾವ್ಯಾರೂ ಮಿಸ್ ಮಾಡ್ಕೊಳ್ಳಲ್ಲ ಕಣ್ರೀ. ಒಂದೇ ಉಸಿರಿಗೆ ಹುಡುಗಿಗೆ ದೀರ್ಘ ಪತ್ರ ಬರೆದುಬಿಟ್ಟಿದ್ದಿರಿ..ಚೆನ್ನಾಗಿದೆ,
ReplyDelete-ಧರಿತ್ರಿ
@ಧರಿತ್ರಿ,
ReplyDeleteಹ್ಹೆ ಹ್ಹೆ.. ಸುಮ್ನೇ ತಮಾಷೆಗೆ ಬರ್ದಿದ್ದು ಕಣ್ರೀ.. ಕೊನೇಲಿ ಟಿಪ್ಪಣಿ ಓದಲಿಲ್ವಾ.. :) .... ಎನೀವೇ, ನಿಮ್ಮ ಹಾರೈಕೆಗೆ ವಂದನೆಗಳು. ಮದ್ವೇಗೆ ಖಂಡಿತ ಕರೀತೀನ್ರೀ.. ನನ್ ಮದ್ವೇಲಿ ನೀವೇ ಓಲಗಿತ್ತಿ, ಆಯ್ತಾ.. :)
ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದಗಳು.
ಬರವಣಿಗೆ ತುಂಬಾ ಚೆನ್ನಾಗಿದೆ.
ReplyDeleteಬರಹ ಚೆನ್ನಾಗಿದೆ... ಓದುತ್ತ ರವಿ ಬೆಳಗೆರೆಯವರ ಲವ್ ಲವಿಕೆ ನೆನಪಾಗುತ್ತೆ... ನಿಮ್ಮ ಬರಹದಲ್ಲಿ ರವಿ ಬೆಳಗೆರೆಯವರ ಲವ್ ಲವಿಕೆ ಛಾಯೆ ಇದೆ... ಮುಂದುವರೆಸಿ...
ReplyDelete@ಅಗ್ನಿಹೋತ್ರಿಯವರೇ,
ReplyDeleteನನ್ನ ಬರವಣಿಗೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಆಗಾಗ್ಗೆ ಬರ್ತಾ ಇರಿ.
@ರವಿಕಾಂತ ಗೊರೆಯವರೇ,
ಬರಹವನ್ನು ಮೆಚ್ಚಿದ್ದಕ್ಕೆ ವಂದನೆಗಳು. ನಾನು ಬೆಳಗೆರೆಯವರ ಲವ್ ಲವಿಕೆ ಅಷ್ಟೊಂದು ಓದಿಲ್ಲ... ನನ್ನ ಬರಹ ನಿಮಗೆ ಅವರ ಬರಹವನ್ನು ನೆನಪಿಸಿದರೆ ತುಂಬ ಸಂತೋಷ.. ಅವರಿಗೆ ಹೋಲಿಸಲು ನಾನಿನ್ನೂ ತುಂಬಾ ಚಿಕ್ಕವನು; ಆದರೆ ನನ್ನ ಬರಹ ಬೇರೆ ಯಾರ ಬರಹದಿಂದಲೂ ಪ್ರಭಾವಿತವಾಗಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ಹುಡುಗ ತನ್ನ ಹುಡುಗಿಗೆ ಮತ್ತು ಹುಡುಗಿ ತನ್ನ ಹುಡುಗನಿಗೆ ಬರೆದ ಪತ್ರಗಳನ್ನು ನಾನೂ ಸಾಕಷ್ಟು ಓದಿದ್ದೇನೆ. ಆದರೆ ಹುಡುಗನೊಬ್ಬ ತನಗೆ ಇದುವರೆಗೆ ಯಾವತ್ತೂ ಕಂಡಿರದ ಮತ್ತು ಮುಂದೆ ಯಾವತ್ತೋ ಒಂದಿನ ತನ್ನವಳಾಗಬಹುದಾದ ಹುಡುಗಿಯೊಬ್ಬಳಿಗೆ ಬರೆದ ಪತ್ರ ಒಂದನ್ನೂ ಓದಿರಲಿಲ್ಲ. ಅದಕ್ಕೇ ಸುಮ್ನೇ ನೋಡೋಣ ಅಂತ ಬರೆದೆ.. ನನ್ನ ಬರಹ ನೂರಕ್ಕೆ ನೂರರಷ್ಟು ನನ್ನದೇ :) .. ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.. ಆಗಾಗ್ಗೆ ಬರುತ್ತಿರಿ.
ಉಮೇಶ್ ನಿಮ್ಮ ಬ್ಲಾಗ್ ಗೆ ತಡವಾಗಿ ದ್ದಕ್ಕೆ sorry ರೀ...
ReplyDeleteಒಳ್ಲೆಯ ಶಾಯರಿ, ಘಸಲ್ ಗಳನ್ನು ಪೋಣಿಸಿ ಮನದನ್ನೆಯಾಗುವವಳ ಮನಮುದಗೊಳಿಸಿ..ಆ ಕೋಮಲ ದೊನ್ನೆಯನ್ನು ತುಂಬಿದ್ದೀರಿ...ಚನ್ನಾಗಿದೆ ಯೋಚನಾ ಶೈಲಿ...ಮುಂದುವರೆಸಿ...ಹಾಗೇ..ಇದರಲ್ಲೂ..!!! All the best for nice ದೊನ್ನೆ...
ಉಮೇಶ್ ಸರ್,
ReplyDeleteನಿಮ್ಮ ಬ್ಲಾಗಿನ ಈ ಲೇಖನ ಹೇಗೆ ತಪ್ಪಿಸಿಕೊಂಡಿತೋ...ಗೊತ್ತಿಲ್ಲ....ಆಹಾಂ! ಈಗ ನೆನಪಾಯಿತು...ಓದಿ ಕಾಮೆಂಟ್ ಬರೆಯಬೇಕೆಂದರೇ err ಬಂದು ಕ್ಲೋಸ್ ಆಗುತ್ತಿತ್ತು. ಹೋಗ್ಲಿ ಬಿಡಿ ಮತ್ತೊಮ್ಮೆ ಹೊಸದಾಗಿ ಓದಿದಾಗ ಅದೇ ಖುಷಿಯಾಯ್ತು.
ನಿಮ್ಮ ಲೇಖನ ಬಹಳ ಚೆನ್ನಾಗಿದೆ. ನಾನು ಮದುವೆಗೆ ಮುಂಚೆ ಹೀಗೆ ಕನಸು ಕಾಣುತ್ತಿದ್ದೆ. ನಿಮ್ಮಂತೆ ಬರೆದ ಕವನ, ಪತ್ರಗಳು ತುಂಬಾ ಇವೆ. ಈಗ ಅವನೆಲ್ಲಾ ಹೊರತೆಗೆಯಬೇಕೆನಿಸುತ್ತಿದೆ.
ಪತ್ರದ ನಡುವೆ ಅಲ್ಲಲ್ಲಿ ಬರುವ ಹಾಡಿನ ಸಾಲುಗಳು ಮತ್ತಷ್ಟು ಗಾಢ ಅನುಭವ ಕೊಡುತ್ತವೆ...
ಪತ್ರಕ್ಕೆ ನೀವು ಕೊಟ್ಟಿರುವ ಶೈಲಿಯೂ ತುಂಬಾ ಚೆನ್ನಾಗಿದೆ...
ಅಭಿನಂದನೆಗಳು..
@ಜಲನಯನ ಸರ್,
ReplyDeleteಪರವಾಗಿಲ್ಲ ಸರ್,.. ತಡವಾಗಿಯಾದರೂ ಬಂದಿರಲ್ಲ, ಅದೇ ಸಂತೋಷ.. :) ನಿಮ್ಮ ಮೆಚ್ಚುಗೆ ಮತ್ತು ಹಾರೈಕೆಗಳಿಗೆ ವಂದನೆ, ಅಭಿವಂದನೆಗಳು. ಆಗಾಗ್ಗೆ ಬರ್ತಾ ಇರಿ.
@ಶಿವು ಸರ್,
ನಾನೂ ಅದೇ ಯೋಚ್ನೆ ಮಾಡ್ತಾ ಇದ್ದೆ; ಹೊಸ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸುತ್ತಿದ್ದ ಶಿವು ಸರ್ ಯಾಕೆ ಇನ್ನೂ ನನ್ನ ಈ ಪೋಸ್ಟ್ ಗೆ ಅನಿಸಿಕೆ ಬರೆದಿಲ್ಲ ಅಂತ... ಕಡೆಗೂ ನಿಮ್ಮ ಅನಿಸಿಕೆ ತಿಳಿಸಿದರಲ್ಲ; ತುಂಬಾ ಸಂತೋಷವಾಯಿತು. ಸುಮ್ ಸುಮ್ನೆ ಬರೆದ ಈ ಪತ್ರ ನಿಮಗೆಲ್ಲ ಹಳೆಯ ಮಧುರ ನೆನಪುಗಳನ್ನು ತಂದು ನಿಮ್ಮನ್ನು ಭಾವನಲೋಕಕ್ಕೆ ತೇಲಿಸಿಕೊಂಡು ಹೋಗಿದೆಯೆಂದರೆ ನನ್ನ ಬರಹ ಸಾರ್ಥಕವಾದಂತೆ. ಪತ್ರವನ್ನು ಮತ್ತು ಪತ್ರದ ಶೈಲಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ಪತ್ರ ಓದಿದರೆ (ಮದುವೆ ಗೊತ್ತಾದಮೇಲಾದರೂ) ನಿಮ ಹುಡುಗಿ ನಿಜವಾಗಿಯೂ ಸಂತಸಪಡುವುದು ಗ್ಯಾರಂಟಿ. ತುಂಬಾ ಚೆನ್ನಾಗಿದೆ ಪತ್ರ. ಯಂಡಮೂರಿ ಹೇಳುವಂತೆ ಪತ್ರವು ಶ್ರುತಿ ಮಾಡಿದೆ ವೀಣೆಯಂತಿರಬೇಕಂತೆ. ಇಲ್ಲಿ ಶ್ರುತಿ ಮಾಡಿದ ವೀಣೆಯಿದೆ . ನಿಮಗೆ ಸರಸ್ವತಿಯಂತಹ ಅದನ್ನು ನುಡಿಸುವ ಹುಡುಗಿ ಸಿಗಲೆಂದು ಹಾರೈಸುವೆನು.
ReplyDeleteಅಲ್ಲಲ್ಲಿ ನಡುವೆ ಕವನಗಳೊಂದಿಗೆ ಲೇಖನ ಖಳೆಗಟ್ಟಿದೆ... ನಿಮ್ಮೊಳಗಿನ ನಿಮ್ಮವಳ ಹೊರತಂದಿದ್ದೀರಿ... "ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ" ಈ ಸಾಲು ಬಹಳೇ ಹಿಡಿಸಿತು, ಯಾವುದಾದರೂ ಮಾಯಾಜಿಂಕೆ ಕಂಡಿತ್ತಾ! :)
ReplyDeleteಸೂಪರ್ ಸಾರ್.... ರವಿ ಬೆಳಗೆರೆ ನೆನಪಾದರು ನಿಮ್ಮ ಪ್ರೇಮ ಪತ್ರ ಓದಿ... ಮುಂದುವರೆಸಿ.....
ReplyDeleteತುಂಬಾ ದಿನಗಳಿಂದ ಕೆಲಸದ ಒತ್ತಡದ ನಡುವೆ ನಿಮ್ಮ ಬ್ಲಾಗ್ ಗೆ ಭೇಟಿ ತಡವಾಯಿತು... ಬೇಸರಿಸದಿರಿ...
ReplyDelete@ಮಲ್ಲಿಕಾರ್ಜುನ ಸರ್,
ReplyDeleteನನ್ನ ಪತ್ರವನ್ನು ಶ್ರುತಿ ಮಾಡಿದ ವೀಣೆಗೆ ಹೋಲಿಸಿದ್ದೀರಿ; ನಿಜಕ್ಕೂ ಈ ಪತ್ರ-ಲೇಖನ ಅಷ್ಟೊಂದು ದೊಡ್ಡ ಹೋಲಿಕೆಗೆ ಅರ್ಹವಾ, ಗೊತ್ತಿಲ್ಲ. ಆದರೆ ನಿಮ್ಮ ಸುಂದರ ಪ್ರತಿಕ್ರಿಯೆ ಮಾತ್ರ ನನ್ನನ್ನು ಆಕಾಶದಲ್ಲಿ ತೇಲಾಡೋ ಹಾಗೆ ಮಾಡಿದೆ :). ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು ತಮ್ಮ ತುಂಬು ಹೃದಯದ ಹಾರೈಕೆಗೆ ಅನಂತಾನಂತ ವಂದನೆಗಳು.
@ಪ್ರಭುರಾಜ್,
ಹ್ಹೆ ಹ್ಹೆ.. ಇಲ್ಲ ಸರ್, ಯಾವ ಮಾಯಾಜಿಂಕೆನೂ ಕಂಡಿಲ್ಲ.. ಎಲ್ಲಾ ಸುಮ್ನೇ ನನ್ನ ಕಲ್ಪನಾಲಹರಿಯಿಂದ ಬಂದದ್ದು ಅಷ್ಟೇ. ಪತ್ರವನ್ನು ಮೆಚ್ಚಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
@ರವಿಕಾಂತ ಗೋರೆಯವರೆ,
ಛೇ ಇಲ್ಲ ಸಾರ್, ಖಂಡಿತ ಬೇಸರವಿಲ್ಲ. ಏಕೆಂದರೆ, ನೀವು ಈ ಮುಂಚೇನೇ ಒಂದ್ಸಲ ಈ ಪತ್ರ-ಲೇಖನಕ್ಕೆ ನಿಮ್ಮ ಅನಿಸಿಕೆ ಬರೆದು ತಿಳಿಸಿದ್ದೀರಿ ಮತ್ತು ಅದಕ್ಕೆ ನಾನು ಉತ್ತರ ಸಹ ಕೊಟ್ಟಿದ್ದೆ; ನೀವೇ ಮರೆತುಬಿಟ್ಟಿರಿ ಅನ್ಸುತ್ತೆ. ಎನೀವೇ, ಮತ್ತೊಂದು ಸಲ ಬಂದು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು :)
ತುಂಬಾ ಚೆನ್ನಾಗಿದೆ. ಹಾಡುಗಳು ತುಂಬಾ ಚೆನ್ನಾಗಿವೆ. ನಿಮ್ಮ ಡ್ರೀಮ್ ಗರ್ಲ್ ನಿಮಗೆ ಸಿಗಲಿ ಎಂದು ಆಶಿಸುತ್ತೇನೆ.
ReplyDelete@ಗೋಪಾಲ್ ಸರ್,
ReplyDeleteನನ್ನ ಬ್ಲಾಗಿಗೆ ಭೇಟಿ ಕೊಟ್ಟು ಲೇಖನವನ್ನು ಮೆಚ್ಚಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಮತ್ತು ನಿಮ್ಮ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಆಗಾಗ ಬರ್ತಾ ಇರಿ.
Umeshavre,
ReplyDeletethanx for visiting my blog and commenting. Nimma e-post odi nanna post nanage nenapaayitu. Nimmashtu sogasaagi bareyalaagolla... nanna kannada tumba kettadaagide. aadru, bhaashe abhimaana tumba ide, yaar enandru parvaagilla antha namma aadu bhaasheli tappu tappu maadi barediruve. nimma protsahakke tumbaa thanx.
nimma bhaashe, vichaara ellavu tumba chennagide.
@ಬಿಳಿಮುಗಿಲು,
ReplyDeleteನಾ ನೋಡಿರುವಂತೆ ನಿಮ್ಮ ಕನ್ನಡ ಅಷ್ಟು ಕೆಟ್ಟದಾಗೇನಿಲ್ಲ.. ಕೆಲವು ಕನ್ನಡ ಕಾಗುಣಿತದ ತಪ್ಪುಗಳನ್ನು ಹೊರತುಪಡಿಸಿದರೆ ನೀವೂ ಚೆನ್ನಾಗಿಯೇ ಬರೀತೀರ.. ಭಾಷೆಗಿಂತ ಭಾವನೆಗಳ ಅಭಿವ್ಯಕ್ತಿ ಮುಖ್ಯ. ಸುಮ್ನೇ ಬರೀತಾ ಹೋಗಿ. ಭಾಷೆ ತಾನೇ ತಾನಾಗಿ ಸುಧಾರಿಸುತ್ತೆ.
ನನ್ನ ಭಾಷೆ ಮತ್ತು ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
- ಉಮೇಶ್
huh man.. tumba chennagide,,, munduvareshi
ReplyDelete