ಕೆಲವು ಸಲ ಹಾಗನ್ನಿಸುವುದು ಸಹಜ.
ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?
ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.
ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?
ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ. ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.
ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.
ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?
ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.
ಚಿತ್ರಕೃಪೆ: ಅಂತರ್ಜಾಲ
ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.