Thursday, October 15, 2009

ಹೊಣೆಗಾರಿಕೆ

ಮೊನ್ನೆ ಹೀಗೇ ನನ್ನ ಪರ್ಸನಲ್ ಮೇಲ್ ಬಾಕ್ಸ್ ನಲ್ಲಿ ಏನೋ ಹುಡುಕುತ್ತಿದ್ದಾಗ ನನಗೆ ಸ್ನೇಹಿತರೊಬ್ಬರು ತುಂಬಾ ಹಿಂದೆ ಕಳಿಸಿದ್ದ ಈ-ಮೇಲ್ ಒಂದು ಕಣ್ಣಿಗೆ ಬಿತ್ತು. ಪರಮಹಂಸ ಶ್ರೀ ನಿತ್ಯಾನಂದ ಎಂಬ ಮಹನೀಯರೊಬ್ಬರು ಬರೆದ ಒಂದು ಚಿಕ್ಕ ಲೇಖನ ಅದರಲ್ಲಿತ್ತು. ಅದು ಜುಲೈ 13, 2006 ರ ಎಕನಾಮಿಕ್ ಟೈಮ್ಸ್ ನ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿತ್ತಂತೆ. ಒಬ್ಬ ವ್ಯಕ್ತಿ ಜೀವನದ ಯಾವುದೇ ರಂಗದಲ್ಲಿ ಬೆಳೆಯಲು ಮೂಲಭೂತವಾದ ಮತ್ತು ಅತಿ ಅಗತ್ಯವಾದ ಅಂಶಗಳಲ್ಲಿ ನಾವು ಮಾಡುವ ಪ್ರತಿ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನಾವೇ ಹೊರುವುದು ಎಷ್ಟು ಮುಖ್ಯ ಎಂದು ಅದರಲ್ಲಿ ಅವರು ತುಂಬಾ ಚೆನ್ನಾಗಿ ವಿವರಿಸಿದ್ದರು. ಅದರಲ್ಲಿನ ಕೆಲವು ಅಣಿಮುತ್ತುಗಳು, ಇಲ್ಲಿ ನಿಮ್ಮೆಲ್ಲರಿಗಾಗಿ:

1) Responsibility is consciousness.

2) When you work with no feelings of responsibility, you will work and feel like a slave. When you work with responsibility, your capacity will expand and you will flower and radiate energy.

3) When you take up responsibility for the entire cosmos, you will expand and look like a leader!

ಹೌದಲ್ವಾ! ದಿನ ನಿತ್ಯ ನಾವು ಎಷ್ಟೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಮನೆಯಲ್ಲಾಗಲಿ, ಕೆಲಸದ ಮೇಲಿರಲಿ, ನಮ್ಮನ್ನು ನಂಬಿ ನಮ್ಮ ಮೇಲೆ ಒಂದಿಲ್ಲೊಂದು ಕೆಲಸವನ್ನು ವಹಿಸಿರುತ್ತಾರೆ. ಆ ಕೆಲಸವನ್ನು ನಾವು ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ; ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕೆಲಸ ಮುಗಿಸಿ ಕೈ ತೊಳೆದುಕೊಳ್ಳಲಾಗುವುದಿಲ್ಲ. ನಂತರದ ಎಲ್ಲ ಪರಿಣಾಮಗಳಿಗೂ ನಾವೇ ಹೊಣೆಗಾರರಾಗಿರಬೇಕಾಗುತ್ತದೆ. ಈ ಹೊಣೆಗಾರಿಕೆಯನ್ನೇ ನಾವು ಅಕೌಂಟಬಿಲಿಟೀ, ಉತ್ತರದಾಯಿತ್ವ ಅನ್ನೋದು. ಶ್ರೀ ನಿತ್ಯಾನಂದರು ಹೇಳಿದಂತೆ, ಜವಾಬ್ದಾರಿ ಇಲ್ಲದೇ ಕೆಲಸ ಮಾಡಿದರೆ ನಾವು ಗುಲಾಮರಂತಾಗುತ್ತೇವೆ. ಅದೇ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಉಳಿದವರಿಗೆ ಮಾದರಿಯಾಗುವ ನಾಯಕರಾಗುತ್ತೇವೆ.


ಜೀವನದಲ್ಲಿ ಬೆಳೆಯಬೇಕೆಂದರೆ ಸ್ವಲ್ಪ ಮಟ್ಟಿಗಿನ ಕ್ಯಾಲ್ಕ್ಯುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ. ನಮ್ಮ ಸ್ವಯಂ ಶಕ್ತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದರೆ ಮಾತ್ರ ಆ ತರಹದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ. ಆದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದೇ, ಯಾವುದೇ ಕೆಲಸದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಳ್ಳದೇ ಕೆಲಸ ಮಾಡುವುದು ಗುಲಾಮಗಿರಿಯಲ್ಲದೇ ಬೇರೇನಲ್ಲ. ನಾವು ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅದನ್ನು ಸಮರ್ಪಕವಾಗಿ ಮಾಡಿ ಮುಗಿಸಿದಾಗ ಅದರಿಂದ ಒಳ್ಳೆಯದೇ ಆಗಬಹುದು, ಅಥವಾ ಕೆಟ್ಟದ್ದೂ ಆಗಬಹುದು. ಒಳ್ಳೆಯದಾದ್ರೆ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಲು ಸ್ಪೂರ್ತಿ ಸಿಗುತ್ತದೆ ಮತ್ತು ನಮ್ಮ ಆತ್ಮ ವಿಶ್ವಾಸ (ಸೆಲ್ಫ್ ಕಾನ್ಫಿಡೆನ್ಸ್) ಹೆಚ್ಚುತ್ತದೆ. ಒಂದು ವೇಳೆ ಕೆಲಸದ ಪರಿಣಾಮ ಅನಿರೀಕ್ಷಿತವಾಗಿ ಕೆಟ್ಟದ್ದಾದರೆ ನಾವು ಒಂದು ಹೊಸ ಪಾಠ ಕಲಿತಂತಾಗುತ್ತದೆ. ಮುಂದಿನ ಸಲ ಯಾವುದೇ ಕೆಲಸ ಮಾಡುವಾಗ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ. ಹೊಣೆಗಾರಿಕೆಯೇ ಇಲ್ಲದೇ ಕೆಲಸ ಮಾಡಿದಾಗ 'ಕೆಲಸ ಮಾಡಿ ಪ್ರತಿಫಲ ಪಡೆದೆ' ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲಾಗುವುದಿಲ್ಲ. ಕಡೇತನಕ ಬೇರೆಯವರು ಹೇಳುವ ಕೆಲಸವನ್ನೇ ಮಾಡುತ್ತಾ "ನೀ ಹೇಳಿದೆ, ಅದಕ್ಕೆ ನಾ ಮಾಡಿದೆ" ಎಂಬ ಉಡಾಫೆ ಪ್ರವೃತ್ತಿ ಮೈಗೂಡುತ್ತದೆ.

ಜವಾಬ್ದಾರಿ ಬಂದಾಗ ನಿಭಾಯಿಸುವುದು ಬೇರೆ, ನಾವೇ ಜವಾಬ್ದಾರಿ ಹೊರಲು ಮುಂದಾಗುವುದು ಬೇರೆ. ಜೀವನದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ. ಜವಾಬ್ದಾರಿ ಹೊರಲು ಸಿದ್ಧನಿರದವನು ಅದು ತಾನಾಗೇ ಬಂದಾಗಲೂ ಒಂದಿಲ್ಲೊಂದು ಕಾರಣ ಹೇಳಿ ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸ್ತಾನೆ. ಹಾಗಾದಾಗ, ಆ ವ್ಯಕ್ತಿಯ ಜೀವನ ನಿಂತ ನೀರಾಗುತ್ತದೆ. ಹಳೆಯ ಸೋಲನ್ನೆಲ್ಲ ಮರೆತು, ಸಾಧ್ಯವಾದರೆ ಅವುಗಳಿಂದ ಸ್ವಲ್ಪ ಪಾಠವನ್ನೂ ಕಲಿತು, ಮೈಗೊಡವಿ ಎದ್ದು ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧನಾಗುವವನಿಗೆ ಒಂದಿಲ್ಲೊಂದು ಅವಕಾಶ ಹುಡುಕಿಕೊಂಡು ಬರುತ್ತದೆ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತುಂಬಾ ಅಗತ್ಯ ಕೂಡ.

ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ - ನಾವು ಮಾಡುವ ಕೆಲಸದ ಸಂಪೂರ್ಣ ಜವಾಬ್ದಾರಿ ಹೊರಲು ಸಿದ್ಧರಾದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಹೊಣೆಗಾರಿಕೆಯಿಂದ ಮಾಡುವ ಒಂದು ಪುಟ್ಟ ಕೆಲಸವು ನೀಡುವ ತೃಪ್ತಿ, ಆತ್ಮ ಸಂತೋಷವನ್ನು ಹೊಣೆಗಾರಿಕೆಯಿಲ್ಲದೇ ಮಾಡುವ ಎಷ್ಟೇ ದೊಡ್ಡ ಮತ್ತು ಎಷ್ಟೇ ದುಡ್ಡು ತಂದು ಕೊಡುವ ಯಾವ ಗುಲಾಮಗಿರಿ ಕೆಲಸವೂ ಕೊಡಲ್ಲ, ಅಲ್ವಾ?

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


ತಮಗೆ ಮತ್ತು ತಮ್ಮ ಕುಟುಂಬವರ್ಗದವರೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಗಳ ಹಬ್ಬ ನಮ್ಮೆಲ್ಲರ ಬಾಳಿನಲ್ಲಿ ಇಂತಹ ಅನಂತ ದಿವ್ಯಜ್ಞಾನದ ಜ್ಯೋತಿಗಳನ್ನು ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.

8 comments:

  1. ಉಮೇಶ್ ಸರ್,

    ಜವಾಬ್ದಾರಿಯನ್ನು ತೆಗೆದುಕೊಂಡಾಗ ನಮ್ಮ ಶಕ್ತಿ ಹೇಗೆ ಹೆಚ್ಚಾಗುತ್ತದೆ ಅನ್ನುವುದನ್ನು ಪರಮಹಂಸ ಶ್ರೀ ನಿತ್ಯಾನಂದ ಸ್ವಾಮೀಜಿಯವರು ಹೇಳಿದ ಮಾತನ್ನು ನೀವು ಚೆನ್ನಾಗಿ ಅವಲೋಕಿಸಿದ್ದೀರಿ...
    ಧನ್ಯವಾದಗಳು.

    ReplyDelete
  2. ಉಮೇಶ್,
    ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದಿರಿ,
    ಉತ್ತಮ ಬರಹ
    ದೀಪಾವಳಿಯ ಶುಭಾಶಯಗಳು

    ReplyDelete
  3. ಉಮೇಶ್,
    ಜವಾಬ್ದಾರಿ ಮನುಷ್ಯನಿಗೆ ಪ್ರತಿಫಲ ಖಂಡಿತ....
    ಪರಮಹಂಸ ಶ್ರೀ ನಿತ್ಯಾನಂದ ಸ್ವಾಮೀಜಿಯವರ ಮಾತನ್ನು ನೀವು ನೆನಪಿಸಿದ್ದೀರಿ...
    ಧನ್ಯವಾದಗಳು.

    ReplyDelete
  4. ಉಮೇಶ,
    ನಿತ್ಯಾನಂದ ಸ್ವಾಮಿಗಳು ತೋರಿಸಿದ ಸತ್ಯವನ್ನು, ನಿಮ್ಮ ಈ-ಮೇಲಿನಿಂದ ಹೆಕ್ಕಿ ತೆಗೆದು
    ನಮಗೂ ತೋರಿಸಿದ್ದೀರಿ. ಆ ಸತ್ಯಕ್ಕೆ ಸುಂದರವಾದ ವ್ಯಾಖ್ಯಾನ ನೀಡಿದ್ದೀರಿ.
    ನಿಮಗೆ ಧನ್ಯವಾದಗಳು.

    ReplyDelete
  5. ಒಳ್ಳೆ ಮಾತು.
    ಇದೇ ಮಾತನ್ನ ಸ್ವಾಮಿ ವಿವೇಕಾನಂದರು ಇನ್ನೊದು ರೀತಿಲಿ ಹೇಳಿದ್ದು ಓದಿದ್ದೆ. ಆದ್ರೆ ಆ ವಾಕ್ಯ ಜ್ಞಾಪ್ಕಾ ಬರ್ಲಿಲ್ಲಾ.
    ಒಂದೇ ತಾತ್ಪರ್ಯ ಬಾರೋ ಹಾಗೆ, ಹಲವು ಜ್ಞಾನಿಗಳು ಹಲವು ರೀತಿ ಹೇಳಿದ್ದಾರೆ.

    ಓದಿದವ್ರೆ ಮತ್ತೆ ಮತ್ತೆ ಓದ್ತಾರೆ ಅಥವ ಓದಿದರೂ ಜೀವನದಲ್ಲಿ ಅಳವಡಿಸ್ಕೊಲ್ಲೋಕ್ಕೆ ಕಷ್ಟ ಪಡ್ತಾರೆ. ಕೆಲ್ವಬ್ರು ಓದಿಲ್ದೆ ಇದ್ರೂ ಶ್ರಮ ಪಟ್ಟು ಜೀವನ ಸಾಗಿಸ್ತಾರೆ. ಇನ್ನೂ ಕೆಲ್ವಬ್ರು ಗೊತ್ತಿದ್ದೂ ಗೊತ್ತಿಲ್ದೆ ಇರೋ ಹಾಗೆ ಇದ್ಬಿಡ್ತಾರೆ. ಹಾಗೆ ಇನ್ನೂ ಸ್ವಲ್ಪ ಜನಗಳ ಪೂರ್ವಾಗ್ರಹ ಏನು ಅಂದ್ರೆ ಇಂತಹ ವಿಷ್ಯ ಮಾತಾಡೋದು ಕೆವ್ಲಾ ಸಂತರೋ, ಮಠಅಧಿಪತಿಗಳೋ , ಪೂಜಾರಿಗಳೋ ಆಗಿರ್ತಾರೆ ಅಂತ.

    ನಿಮ್ಮ ಬರಹಕ್ಕೆ ಅಭಿನಂದನೆಗಳು.

    ಉದ್ದನೆಯ ಪ್ರತಿಕ್ರಿಯೆ ಕ್ಷಮೆ ಇರ್ಲಿ.

    ReplyDelete
  6. ಉಮೇಶ ಒಳ್ಳೆಯ ಬರಹ ಅರಿವು ಇದು ಮುಖ್ಯ ಶರೀಫಜ್ಜ ಅಂದಾನಲ್ಲ "ನಿಂದ ನೀ ತಿಳದರ ನಿನಗಿಲ್ಲೋ ದೂರ"

    ReplyDelete
  7. ಉಮೇಶ್...

    ಬಹಳ ಚೆನ್ನಾಗಿ ಬರೆದಿದ್ದೀರಿ....

    "ಜವಾಬ್ದಾರಿ ಶಕ್ತಿಯನ್ನು ಕೊಡುತ್ತದೆ"

    ಬಹಳ ಇಷ್ಟವಾಯಿತು...

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
  8. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete