Wednesday, November 17, 2010

ನಗು...ಎಂದಿದೆ...ಮಂಜಿನ...ಬಿಂದು... :)

.
ಅದು 25 ನೇ ಫೆಬ್ರುವರೀ 2008, ಸೋಮವಾರದ ಮುಂಜಾನೆ.

ನನ್ನ ಅಮೇರಿಕ ಭೇಟಿಯ ಮೊದಲ 'ಕೆಲಸದ' ದಿನ. ಎರಡು ದಿನ ಮುಂಚೇನೇ, ಅಂದರೆ ಶುಕ್ರವಾರ ಸಾಯಂಕಾಲವೇ ಅಲ್ಲಿಗೆ ಹೋಗಿದ್ದೆ... ಅಲ್ಲಿದ್ದ ಸ್ನೇಹಿತರೊಂದಿಗೆ ಗ್ರೋಸರೀ ಶಾಪಿಂಗ್ ಮುಗಿಸಿ, ಹತ್ತಿರದ ಮಿಶನ್ ಪೀಕ್ ಗಿರಿಸರಣಿಯ ತುತ್ತತುದಿಯವರೆಗೆ ಟ್ರೆಕಿಂಗ್ ಹೋಗಿಬಂದು, ಸುಂದರವಾದ ವಾರಾಂತ್ಯವನ್ನು ಕಳೆದು, ಅಂದು ಬೆಳಿಗ್ಗೆ ನನ್ನ ಮೊದಲ 'ಕೆಲಸದ' ದಿನದಂದು ಆಫೀಸ್ ಗೆ ಹೋಗಲು ತಯಾರಿ ನಡೆಸಿದ್ದೆ. ಅಮೇರಿಕದ San Joe ನಗರದ Extended Stay America ಹೊಟೆಲ್ ಮುಂಭಾಗದಲ್ಲಿ ನನ್ನನ್ನು ಕರೆದೊಯ್ಯಲು ಬರಲಿದ್ದ ಕ್ಯಾಬ್ ಗೋಸ್ಕರ ಕಾಯುತ್ತಾ ನಿಂತಿದ್ದೆ. ತಂಪಾದ ಆಹ್ಲಾದಕರ ವಾತಾವರಣ, ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಭೂರಮೆಯನ್ನು ನೋಡುತ್ತ ನಿಂತಿದ್ದ ನನ್ನ ಮೈ, ತಣ್ಣನೆ ಕುಳಿರ್ಗಾಳಿಗೆ ಸಣ್ಣಗೆ ನಡುಗುತ್ತಿತ್ತು.

ಆಗ ಅಲ್ಲಿಗೆ ಬಂದ ಹಸನ್ಮುಖಿ ಅಮೇರಿಕ ಪ್ರಜೆಯೊಬ್ಬ ನನ್ನನ್ನು ನೋಡಿ ಒಂದು ಬೆಚ್ಚಗೆಯ ಮುಗುಳ್ನಗೆಯೊಂದಿಗೆ "ಗುಡ್ ಮಾರ್ನಿಂಗ್" ಅಂದ!.. ನಂಗೆ ಇದು ಅನಿರೀಕ್ಷಿತವಾಗಿತ್ತು; ಕೆಲ ಕ್ಷಣ ಮಾತು ಹೊರಡಲಿಲ್ಲ.. ಏಕೆಂದರೆ ನಾವಿಬ್ಬರೂ ಒಬ್ಬರಿಗೊಬ್ಬರು ಅಪರಿಚಿತರು. ಆದರೂ ಸಹ ಆತ ಅಷ್ಟೊಂದು ಆತ್ಮೀಯತೆಯಿಂದ ವಿಶ್ ಮಾಡಿದಾಗ ಸುಮ್ಮನಿರಲಾಗಲಿಲ್ಲ; ಪ್ರತಿಯಾಗಿ ನಾನೂ "ಗುಡ್ ಮಾರ್ನಿಂಗ್" ಹೇಳಿದೆ.. ಆತ ಮತ್ತೆ ಅದೇ ಹಸನ್ಮುಖದೊಂದಿಗೆ "ಲವ್ಲೀ ವೆದರ್" ಅನ್ನುತ್ತ ನನ್ನ ಪ್ರತಿಕ್ರಿಯೆಗೂ ಕಾಯದೇ "ಹ್ಯಾವ್ ಅ ನೈಸ್ ಡೇ!" ಅಂತ ಹೇಳಿ ತನಗೋಸ್ಕರ ಬಂದ ಕಾರಿನಲ್ಲಿ ಹೊರಟೇ ಬಿಟ್ಟ... ನನ್ನ ಕ್ಷೀಣ "ಥ್ಯಾಂಕ್ ಯೂ ಅಂಡ್ ವಿಶ್ ಯೂ ಆಲ್ಸೋ ದ ಸೇಮ್" ಎಂಬ ಪ್ರತಿಕ್ರಿಯೆ ಅವನ ಕಿವಿಗೆ ಬಿತ್ತೋ ಇಲ್ಲ್ವೋ ನಾ ಕಾಣೆ!

ಅಂದು ಇಡೀ ದಿನ ನಾನು ಅದರ ಬಗ್ಗೆಯೇ ಯೋಚಿಸುತ್ತಿದ್ದೆ... ನಮ್ಮ ದೇಶದಲ್ಲಿ ತೀರಾ ಪರಿಚಯಸ್ತರು ಸಹ ಕೆಲವು ಸಲ ನೋಡಿಯೂ ನೋಡದವರಂತೆ ಹೋಗುತ್ತಿರುತ್ತಾರೆ. ನಾವಾಗಿ ಮಾತನಾಡಿಸಿದರೂ ಏನೋ ಕಾಟಾಚಾರಕ್ಕೆ ಎಂಬಂತೆ, ಇಲ್ಲವೇ ತಮ್ಮ ಕೆಲಸ ಇದ್ದರೆ ಸ್ವಲ್ಪ ಚೆನ್ನಾಗಿ ಮಾತಾಡಿ ಹೊರಡುತ್ತಾರೆ.. ಅಪರಿಚಿತರು ಮಾತನಾಡಿಸಿದರೆ ಅವರನ್ನು ಅನುಮಾನದಿಂದಲೇ ನೋಡುತ್ತಾರೆ.. ಅಂಥ ವಾತಾವರಣದಲ್ಲಿ ಬೆಳೆದಿದ್ದರಿಂದಲೋ ಏನೋ ನನಗೂ ಸಹ ಆ ವ್ಯಕ್ತಿ ಮೊದಲು ವಿಶ್ ಮಾಡಿದಾಗ ಸ್ವಲ್ಪ ದಿಗಿಲು, ಆಶ್ಚರ್ಯವಾಗಿದ್ದು. ಆದರೆ ಅವನ ಆ gesture ಇತ್ತಲ್ಲ, ಅದು ನಾನು ಇಡೀ ದಿನ ಉಲ್ಲಸಿತವಾಗಿರಲು ಸಹಾಯ ಮಾಡಿತೆನ್ನಬಹುದು... ಅವನೊಬ್ಬನೇ ಅಲ್ಲ, ಅಂದು ನಾನು Nortel Networks ನ Santa Clara ಆಫೀಸ್ ಗೆ ಹೋದಾಗ ನಾನು ಭೇಟಿ ಮಾಡಿದ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಮುಗುಳ್ನಗುತ್ತಾ ಮಾತನಾಡಿಸಿ, "Have a nice stay in US!" ಅಂತ ವಿಶ್ ಮಾಡಿದ್ರು.. ನನ್ನ ಜೀವನದಲ್ಲಿ ತುಂಬಾ ಖುಷಿ ಪಟ್ಟ ದಿನಗಳಲ್ಲಿ ಅದೂ ಒಂದು ಅನ್ನಬಹುದು.

ಹೌದೂ...!!?? ನಮ್ಮಲ್ಲಿ ಯಾಕೆ ಆ ತರದ ಹಸನ್ಮುಖಿಗಳು ತುಂಬಾ ವಿರಳ? ಯಾಕೆ ನಾವು ಒಬ್ಬರಿಗೆ ಒಂದು ಒಳ್ಳೆಯ ಮಾತನಾಡಲು ಅಷ್ಟೊಂದು ಮೀನಮೇಷ ಎಣಿಸುತ್ತೇವೆ?.. ನಮ್ಮ ಬಾಯಲ್ಲಿನ ಮುತ್ತುಗಳು ಎಲ್ಲಿ ಉದುರಿ ಹೋಗುತ್ತವೆಯೋ ಅನ್ನೋ ತರ? ಕೆಲವರ ಮುಂದಂತೂ ಮುಖ ಪೂರ್ತಿ ಗಂಟು ಹಾಕಿಕೊಂಡೇ ಮಾತನಾಡುತ್ತೇವೆ... ಇನ್ನು ಕೆಲವರ ಮೇಲೆ ವಿನಾಕಾರಣ ಸಿಡುಕುತ್ತೇವೆ.. ರೇಗುತ್ತೇವೆ.. ಕೆಲವರೊಂದಿಗೆ ನಗುತ್ತಾ ಮಾತನಾಡಿದರೂ ಅದರಲ್ಲಿ ಬಹುಪಾಲು ಕೃತ್ರಿಮ ನಗು ಅಡಗಿರುತ್ತದೆ... ಯಾಕೆ ಹೀಗೆ?... ನಮ್ಮ ತಪ್ಪಾ?... ನಾವು ಬೆಳೆದ ಪರಿಸರದ ತಪ್ಪಾ?...ಅಥವಾ ಇದಕ್ಕೆ ಬೇರೆ ಏನಾದ್ರೂ ಕಾರಣವಾ?... ಇದನ್ನು ಸರಿಪಡಿಸಲಾಗುವುದೇ ಇಲ್ಲವೇ?... ನಮ್ಮ ಮುಂದಿನ ಪೀಳಿಗೆಯೂ ಹೀಗೆಯೇ ಇರುತ್ತಾ?... ಇರಬೇಕಾ?... ಒಂದೂ ಗೊತ್ತಾಗ್ತಿಲ್ಲ...

ನಾವು ಯಾರನ್ನೋ ಮುಗುಳ್ನಗುತ್ತ ಮಾತನಾಡಿಸಿದರೆ ಅವರ ದಿನ ಚೆನ್ನಾಗಿರುತ್ತೆ ಅಂತಲ್ಲ; ಆದ್ರೆ ನಮ್ಮ ಆ ಒಂದು ಮುಗುಳ್ನಗು ಮತ್ತು ಮಾತುಗಳು ಅವರ ಮನಸ್ಸಿನ ಮೇಲೊಂದು ಧನಾತ್ಮಕ ಪ್ರಭಾವ ಬೀರಿ, ಅವರ ಮನೋಸ್ಥೈರ್ಯವನ್ನು ಹೆಚ್ಚಿಸಬಲ್ಲದು ಅನ್ನುವುದು ಸುಳ್ಳಲ್ಲ.

ನಾಳೆ ಬೆಳಿಗ್ಗೆ ನಿಮಗಿಷ್ಟಬಂದವರೊಬ್ಬರನ್ನು ಒಂದು ಮುಗುಳ್ನಗೆಯೊಂದಿಗೆ ಮಾತನಾಡುಸುತ್ತೀರಿ ತಾನೇ :) ?

ಮುಗುಳ್ನಗೆಯೊಂದಿಗೆ,

7 comments:

 1. ನಿಜಾ, ಇಲ್ಲಿ ಆಸ್ಟ್ರೇಲಿಯಾದಲ್ಲಿ ಕೂಡಾ ಜನಾ ಮುಗುಳ್ನಗೋದು, ಗುಡ್ ಮಾರ್ನಿಂಗ್ ಅಥವಾ ಆ ವೇಳೆಗೆ ಸರಿಯಾಗಿ ವಿಶ್ ಮಾಡೋದು ಸಹಜಾ... ನನಗಂತೂ ತುಂಬಾ ಇಸ್ಟಾ, ನಾ ಅದನ್ನೇ ರುಡಿ ಯಾಗಿಸಿಕೊಂಡಿದ್ದೇನೆ ಇಲ್ಲಿಂದಾ ಮರಳಿ ಭಾರತಕ್ಕೆ ಹೋದಾಗ, ನಾ ಮುಗಳ್ನಗೊದನ್ನ ನೋಡಿ, ಭಾರತೀಯರಿಗೆ ಮುಜುಗುರಾ... ನಾವು ಸ್ವಲ್ಪ ಹಾಗೆ ಅಂತಾ ತೋರಸ್ಕೊತಾರೆ ;)

  ReplyDelete
 2. ನನಗೂ ಹೀಗೆ ಎಲ್ಲರನ್ನ ವಿಶ್ ಮಾಡೋ ಆಸೆ... ಆದ್ರೆ ಒಂದೆರಡ್ experience ಆದ ಮೇಲೆ ಸ್ವಲ್ಪ conscious ಈಗ.. ನಂಗೆ ಪುಟ್ಟ ಮಕ್ಕಳನ್ನ ಮಾತಾಡಿಸೋಕೆ ಇಷ್ಟ..ಆದ್ರೆ ಕೆಲವೊಮ್ಮೆ parents reaction ನೋಡಿ ಮುಜುಗರ ಪಟ್ಕೊಂದಿರೋದು ಇದೆ... :)

  ReplyDelete
 3. ಪಾಶ್ಚಾತ್ಯರ ಒಳ್ಳೆಯ ನಡುವಳಿಕೆಗಳಿಂದ ನಾವು ಕಲಿತುಕೊಳ್ಳೋದು ತುಂಬಾ ಇದೆ, ಅಲ್ಲವೆ?

  ReplyDelete
 4. Umesh....

  US jeevanadha bagge baritha iri... have a nice stay in US :)

  ReplyDelete