Friday, August 20, 2010

ಹೀಗೊಂದು ನ್ಯೂಸ್ ಪೇಪರ್ ಪ್ರಸಂಗ...


ಸಹೋದ್ಯೋಗಿಗಳಾದ ಮಂಜು ಮತ್ತು ಗಿರೀಶ್ ನನ್ನ ಮತ್ತು ಪರಸ್ಪರ ಒಳ್ಳೆಯ ಸ್ನೇಹಿತರು. ಅವರಿಬ್ಬರೂ ನೆರೆಹೊರೆಯವರಾಗಿರುವುದು ಅವರ ನಡುವಿನ ಬಾಂಧವ್ಯ ಇನ್ನೂ ಹೆಚ್ಚಲು ಸಹಾಯಕವಾಗಿದೆಯೆನ್ನಬಹುದು.

ಇಬ್ಬರೂ ಸೇರಿದರೆ ತಾವು ಮತ್ತು ತಮ್ಮ ಬಾಡಿಗೆ ಮನೆಯ ಜೀವನದ ಬಗ್ಗೆಯೇ ಸಂಭಾಷಣೆ ನಡೆಯುತ್ತೆ. ನಾವೆಲ್ಲರೂ ಸೇರಿ ಕಾಫೀ ಟೈಮ್ ನಲ್ಲಿ ಕುಳಿತು ಹರಟೆ ಹೊಡೆಯುವಾಗಲೂ ಅವರ ಸುದ್ದಿಯದೇ ಮೇಲುಗೈ. "ನಮ್ಮ ಓನರ್ ಹಾಗೆ ಅಂದ", "ಹೀಗೆ ತಕರಾರು ಮಾಡಿದ", ಮುಂತಾದ ಓನರ್ ಬಗೆಗಿನ ಸಾಮಾನ್ಯ ಕಂಪ್ಲೇಂಟ್ ನಿಂದ ಹಿಡಿದು ಅಕ್ಕಪಕ್ಕದವರೊಂದಿಗಿನ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯದ ಬಗ್ಗೆಯೇ ಮಾತುಕತೆ. ಇಬ್ಬರೂ ಅಕ್ಕಪಕ್ಕದವರಾಗಿರುವುದರಿಂದ ಅಲ್ಲಿ ತಮ್ಮಿಬ್ಬರ ಮಧ್ಯದ ಭಿನ್ನಾಭಿಪ್ರಾಯದ ಬಗೆಗೂ ಮಾತುಕತೆ, ನಮ್ಮ ಸಲಹೆ ಕೇಳುವುದು ಮುಂತಾದವು ನಡೆದೇ ಇರುತ್ತವೆ.


ನೆರೆಹೊರೆಯರೂ ಮತ್ತು ಸಹೋದ್ಯೋಗಿಗಳೂ ಆದ ಕಾರಣ ಅವರಿಬ್ಬರೂ ಯಾವಾಗಲೂ ಒಟ್ಟಿಗೆ ಇದ್ದು, ತಮ್ಮಿಬ್ಬರ ಮನೆಗೂ ಸಾಮಾನ್ಯವಾಗಿ ಅವಶ್ಯವಿರುವ ಕೆಲಸವನ್ನು ಅವರು ಒಟ್ಟಿಗೇ ಮಾಡುವದು. ನ್ಯೂಸ್ ಪೇಪರ್ ತರಿಸೋದಿರಲಿ, ಇಬ್ಬರ ಮನೆಯ ಗ್ಯಾಸ್ ಕನೆಕ್ಶನ್ ಪಡೆಯಲಿರಲಿ, ತಮ್ಮ ಮನೆಗಳ ಚಿಕ್ಕ-ಪುಟ್ಟ ಆಲ್ಟರೇಶನ್ ಗಾಗಿ ಮನೆಯ ಓನರ್ ಜೊತೆಗೆ ಜಗಳವಾಡುವುದಿರಲಿ, ಇಂಥ ಎಲ್ಲ ಕೆಲಸಗಳನ್ನು ಅವರು ಒಟ್ಟಿಗೆ ಮಾಡುವದು. ತುಂಬಾ ಹಾಸ್ಯಪ್ರವೃತ್ತಿಯ ಮಂಜು ಇಂಥ ಕೆಲಸ ಕಾರ್ಯದಲ್ಲಿ ಗಿರೀಶನ ಕಾಲೆಳೆಯುವುದು, ಗೋಳು ಹೊಯ್ದುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಾಗಿ ಅಂತ ಕೆಲಸ ಮಾಡಿದಾಗಲೆಲ್ಲ ಅದೊಂದು ಸ್ವಾರಸ್ಯಕರ ಚರ್ಚೆಗೆ ನಾಂದಿಯಾಗಿದ್ದೂ ಉಂಟು.


ಮೊನ್ನೆ ಹೀಗೆಯೇ ಆಯ್ತು. ಇಬ್ಬರೂ ಒಬ್ಬನೇ ಪೇಪರ್ ಏಜೆಂಟ್ ಹತ್ತಿರ ನ್ಯೂಸ್ ಪೇಪರ್ ಹಾಕಿಸಿಕೊಳ್ಳುತ್ತಾರೆ. ಮನೆಗಳು ತೀರಾ ಅಕ್ಕಪಕ್ಕಾದವುಗಳಾಗಿರುವುದರಿಂದ, ಪೇಪರ್ ಹಾಕುವ ಹುಡುಗ ಎರಡೂ ಪೇಪರ್ ಗಳನ್ನು ಒಟ್ಟಿಗೆ ಇಬ್ಬರಲ್ಲಿ ಒಬ್ಬರ ಮನೆಯ ಮುಂದೆ ಎಸೆದು ಹೋಗುವುದು ವಾಡಿಕೆ. ಹೀಗಾಗಿ, ವಾಡಿಕೆಯಂತೆ ಪೇಪರ್ ನವ ಮೊನ್ನೆ ಇಬ್ಬರ ಪೇಪರ್ ನ್ನೂ ಒಟ್ಟಿಗೇ ಎಸೆದು ಹೋಗಿದ್ದಾನೆ. ಮಂಜುರ ಕಸಿನ್ ತಮ್ಮ ಪೇಪರ್ ನ ಎತ್ಕೊಂಡು ಗಿರೀಶ್ ರ ಪೇಪರ್ ನ ಅಲ್ಲೇ ಬಿಟ್ಟು ಒಳಗೆ ಹೋಗಿ ತಮ್ಮ ಕೋಣೆಯಲ್ಲಿ ಪೇಪರ್ ಓದುತ್ತ ಕುಳಿತಿದ್ದಾರೆ. ನಂತರ ಹೊರಗೆ ಬಂದ ಗಿರೀಶ್, ಮನೆಯ ಮುಂದೆ ಒಂದೇ ಪೇಪರ್ ಇರುವುದನ್ನು ನೋಡಿ, ಮಂಜು ತಮ್ಮ ಪೇಪರ್ ನ ಒಳಗೆ ತೆಗೆದುಕೊಂಡು ಹೋಗಿರಬಹುದು, ಇದು ನನ್ನದೇ ಇರಬೇಕು ಅಂತ ಪೇಪರ್ ನ ಅರ್ಧಂಬರ್ಧ ಓದಿ, ಅಲ್ಲೇ ಇಟ್ಟು, ವಾಕಿಂಗ್ ಗೋ ಇನ್ನೇನಕ್ಕೋ ಹೊರಗಡೆ ಹೋಗಿದ್ದಾರೆ. ಮಂಜುಗೆ ತಮ್ಮ ಪಾಲಿನ ಪೇಪರನ್ನು ತಮ್ಮ ಕಸಿನ್ ಎತ್ಕೊಂಡು ಒಳಗೆ ಓದುತ್ತ ಕುಳಿತಿರುವುದು ಗೊತ್ತಿಲ್ಲ. ಮಂಜು ಹೊರಗೆ ಬಂದು ನೋಡ್ತಾರೆ, ಕೇವಲ ಒಂದೇ ಪೇಪರ್ ಇದೆ. ಅರೇ! ಇನ್ನೊಂದು ಪೇಪರ್ ಎಲ್ಲಿ ಅಂತ ಯೋಚಿಸಿ, ಗಿರೀಶ್ ತಮ್ಮ ಪಾಲಿನ ಪೇಪರ್ ಎತ್ತಿಕೊಂಡಿರಬಹುದು, ಇದು ನನ್ನದೇ ಅಂದ್ಕೊಂಡು ಆ ಪೇಪರ್ ಅನ್ನೂ ತಾವೇ ಎತ್ಕೊಂಡು ಒಳಗೆ ಆರಾಮವಾಗಿ ಓದುತ್ತಾ ಕುಳಿತಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ವಾಕ್ ಮುಗಿಸಿ ವಾಪಸ್ ಬಂದ ಗಿರೀಶ್ ಮನೆಯ ಮುಂದಿನ ಪೇಪರ್ ಎತ್ಕೊಳೋಕೆ ನೋಡ್ತಾರೆ, ಅಲ್ಲಿ ಪೇಪರ್ ಇಲ್ವೇ ಇಲ್ಲ!. ಅರೆ, ಈಗ ತಾನೆ ಓದಿ ಇಟ್ಟು ಹೋಗಿದ್ದ ಪೇಪರ್ ಎಲ್ಲಿ ಹೋಯ್ತು ಅಂತ, ಒಳಗೆ ಹೆಂಡತಿಯನ್ನು ಕೇಳಿದ್ರೆ ನಾನು ತಂದಿಲ್ಲ ಅಂದ್ರಂತೆ. ಹಿಂದಿನ ದಿನ, ಪೇಪರ್ ಹಾಕುವ ಏಜೆಂಟ್ ತಿಂಗಳ ವಂತಿಗೆ ಹಣ ಸಂಗ್ರಹಿಸಲು ಬರುವದಿತ್ತು; ಆದರೆ ಯಾವುದೋ ಕಾರಣಕ್ಕೆ ಬಂದಿರಲಿಲ್ಲ. ಅದಕ್ಕೆ ಗಿರೀಶ್ ಗೆ, ಈ ಪೇಪರ್ ನವನು ವಂತಿಗೆ ಹಣ ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ಎತ್ಕೊಂಡು ಹೋಗಿದ್ದಾನೆ ಅಂತ ಅನುಮಾನ ಶುರುವಾಗಿದೆ!. ತಕ್ಷಣ ಜೇಬಿನಿಂದ ಮೊಬೈಲ್ ತೆಗೆದು ಪೇಪರ್ ಏಜೆಂಟ್ ಗೆ ಫೋನಾಯಿಸಿ "ಏನ್ರೀ ದುಡ್ಡು ಕೊಟ್ಟಿಲ್ಲ ಅಂತ ಹಾಕಿದ್ದ ಪೇಪರ್ ನ ವಾಪಸ್ ತಗೊಂಡು ಹೋಗೋದೆ?" ಅಂತ ಚೆನ್ನಾಗಿ ದಬಾಯಿಸಿದ್ದಾರೆ. ಪಾಪ ಏಜೆಂಟ್, ಫುಲ್ಲ್ ಕನ್ಫ್ಯೂಸ್! "ಇಲ್ಲ ಸರ್, ನಾನು ಪೇಪರ್ ವಾಪಸ್ ತಂದಿಲ್ಲ, ಆದ್ರೆ ನೀವು ದುಡ್ಡು ಕೊಟ್ಟಿಲ್ಲ ಅಂತ ನನಗೇ ನೆನಪಿರಲಿಲ್ಲ, ಇವಾಗ ಬರ್ಲಾ ಸಾರ್, ದುಡ್ಡು ಕೊಡ್ತೀರಾ?" ಅಂತ ಕೇಳಿದ್ದಾನೆ. ಪೇಪರ್ ವಾಪಸ್ ತಗೊಂಡು ಹೋಗಿದ್ದಲ್ದೇ, ದುಡ್ಡು ಕೊಡ್ತೀರಾ ಅಂತ ಬೇರೆ ಕೇಳ್ತಿದಾನಲ್ಲ ಅಂತ ಗಿರೀಶ್ ಮತ್ತಷ್ಟು ಗರಂ ಆಗಿ ಅವ್ನ ಜೊತೆ ವಾದ ಮಾಡಿದ್ದಾರೆ. ಇಷ್ಟೆಲ್ಲಾ ಗಲಾಟೆ ಕೇಳಿ ಗಾಭರಿಯಾಗಿ ಹೊರಗೆ ಓಡಿ ಬಂದ ಮಂಜು ಮತ್ತವರ ಕಸಿನ್, ಏನಾಯ್ತು ಅಂತ ಕೇಳಿ, ಇಲ್ಲ ಮಾರಾಯ್ರೆ ಬೈ ಮಿಸ್ಟೇಕ್ ನಾವೇ ಎರಡೂ ಪೇಪರ್ ಎತ್ತ್ಕೊಂಡಿದ್ದು ಅಂತ ಹೇಳಿದ್ರಂತೆ. ಈಗ ಗಿರೀಶ್ ಸಿಟ್ಟು ಮಂಜು ಮೇಲೆ ವರ್ಗಾವಣೆಯಾಗಿದೆ. "ಏನ್ರೀ? ನಂ ಪೇಪರ್ ನ ನೀವು ತೆಗೆದಿರಿಸಿ ಆಟ ಆಡಿಸ್ತೀರಾ? ನಿಮ್ ಮೇಲೆ ಓನರ್ ಗೆ ಕಂಪ್ಲೇಂಟ್ ಮಾಡ್‌ಬೇಕಾ, ಹೇಗೆ?" ಅಂತ ನಯವಾಗಿ ದಬಾಯ್ಸಿದಾರೆ.

ಯಥಾಪ್ರಕಾರ ಇಂದು ಬೆಳಿಗ್ಗೆ ಕಾಫೀ ಟೈಮ್ ನಲ್ಲಿ, ಮೊನ್ನೆ ಹೀಗಾಯ್ತು ಅಂತ ಇಬ್ಬರೂ ತಮ್ಮ ತಮ್ಮ ವರ್ಷನ್ ನ ವಿವರಿಸುತ್ತಿದ್ದರೆ, ನಮಗೆಲ್ಲ ಒಳ್ಳೇ ನಗು :)

ಪ್ರೀತಿಯಿಂದ,

10 comments:

  1. ಚೆನ್ನಾಗಿದೆ ಸರ್

    ಕೆಲವೊಮ್ಮೆ ಗೊತ್ತಿಲ್ದೆ ಹೀಗೆ ಆಗಿಬಿಡುತ್ತೆ

    ಗೊತ್ತಾದಾಗ ನಮಗೆ ನಗು ಬರುತ್ತೆ

    ReplyDelete
  2. ಸ್ವಾರಸ್ಯಕರವಾಗಿದೆ ಪ್ರಸ೦ಗ.... ನಗು ಮೂಡಿತು ಓದಿ :)

    ReplyDelete
  3. ಉಮೇಶ,
    ಚೆನ್ನಾಗಿದೆ ಹೊಡೆದಾಟ!ದುಡುಕು ಬುದ್ಧಿಯ ಇಂತಹ ತಪ್ಪುಗಳನ್ನು ನಾನೂ ಮಾಡಿದ್ದೇನೆ. ನಿಮ್ಮ ಲೇಖನ ಓದಿ, ಹಳೆಯ ನೆನಪುಗಳು ಉಕ್ಕಿದವು.

    ReplyDelete
  4. ಬರಹ ಚೆನ್ನಾಗಿದೆ.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.

    ReplyDelete
  5. @ಸಾಗರದಾಚೆಯ ಇಂಚರ (ಗುರು) ಸರ್,
    ಹೌದು, ಕಮ್ಯೂನಿಕೇಶನ್ ಗ್ಯಾಪ್ ನಿಂದ ಹೀಗಾಗುತ್ತೆ.. ಅದೊಂದು ತಮಾಷೆ ಪ್ರಸಂಗ ಆದ್ರೆ ಪರ್ವಾಗಿಲ್ಲ.. ಇಲ್ದಿದ್ರೆ ಎಷ್ಟೊಂದು ಅನಾಹುತ ಅಲ್ವಾ?
    ಧನ್ಯವಾದಗಳು.

    @ಸುಧೇಶ್ ಶೆಟ್ಟಿ,
    ನನ್ನ ಬ್ಲಾಗಿಗೆ ಸುಸ್ವಾಗತ. ಪ್ರಸಂಗವನ್ನು ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.

    @ಸುನಾಥ ಅಂಕಲ್,
    ಲೇಖನವನ್ನು ಓದಿ, ಹಳೆಯ ನೆನಪು ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.

    @ಉಷಾ,
    ನನ್ನ ಬ್ಲಾಗಿಗೆ ನಿಮ್ಮ ಮೊದಲ ಭೇಟಿ, ಆದರದ ಸ್ವಾಗತ. ಬರಹವನ್ನು ಮೆಚ್ಚಿದ್ದಕ್ಕೆ ಕೃತಜ್ಞತೆಗಳು. ಆಗಾಗ ಬರ್ತಾ ಇರಿ.

    @ವಿಜಯ್,
    ಬ್ಲಾಗಿಗೆ ಆದರದ ಸ್ವಾಗತ. ನನ್ನ ಬ್ಲಾಗನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.

    ReplyDelete
  6. ಚಿಕ್ಕ ಪುಟ್ಟ ಘಟನೆಗಳನ್ನೂ ಸುಂದರವಾಗಿ ನಿರೂಪಿಸಿ,

    ಉತ್ತಮ ಲೇಖನಗಳನ್ನಾಗಿಸಬಹುದು ಎಂಬುದನ್ನು

    ತೋರಿಸಿಕೊಟ್ಟಿದ್ದೀರಿ.

    ಲವಲವಿಕೆಯಿಂದಕೂಡಿದ ಬರೆಹ ಚೆನ್ನಾಗಿದೆ.

    ReplyDelete
  7. @ಮನಮುಕ್ತಾ,
    ನನ್ನ ಬ್ಲಾಗಿಗೆ ಆದರದ ಸ್ವಾಗತ.. ಬರಹ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು... ಮತ್ತೆ ಬನ್ನಿ :)

    @ವೆಂಕಟಕೃಷ್ಣ ಸರ್,
    ನನ್ನ ಬ್ಲಾಗಿಗೆ ನಿಮ್ಮದೂ ಸಹ ಮೊದಲ ಭೇಟಿ, ಸುಸ್ವಾಗತ...:) ಲೇಖನದ ಒಳಾರ್ಥವನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸಿ ಬೆನ್ನು ತಟ್ಟಿದ್ದಕ್ಕೆ ಕೃತಜ್ಞತೆಗಳು.. ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

    ಪ್ರೀತಿಯಿಂದ,
    -ಉಮೇಶ್ :)

    ReplyDelete
  8. ಸರ್,

    ಗೊತ್ತಿಲ್ಲದೇ ಹೋದಾಗ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ನಿಮ್ಮ ಈ ಪ್ರಸಂಗವೇ ಉದಾಹರಣೆ...ಇಂಥ ಸಣ್ಣ ಪ್ರಸಂಗಗಳನ್ನು ಬರೆಯಿರಿ..ಚೆನ್ನಾಗಿರುತ್ತದೆ..

    ReplyDelete