Monday, August 9, 2010

ಫಿಸಿಕ್ಸ್ ಮೇಷ್ಟ್ರೂ.. ಸ್ನೇಹಿತನೂ.. ಮತ್ತು ನಕಲಿ ಸಹಿಯೂ..

.
ಅದು ೨೦೦೧ ರ ಜುಲೈ - ಆಗಸ್ಟ್ ಸಮಯ ಇರಬೇಕು. ಆಗ ನಾನು ನನ್ನ ಬೀ. ಈ. ಎರಡನೇ ಸೆಮೆಸ್ಟರ್ ನಲ್ಲಿದ್ದೆ. ಎರಡನೆ ಸೆಮೆಸ್ಟರ್ ಗೆ ಫಿಸಿಕ್ಸ್ ಮತ್ತು ಮೆಕ್ಯಾನಿಕಲ್ ವರ್ಕ್‌ಶಾಪ್ ಇದ್ವು. ಫಿಸಿಕ್ಸ್ ಲ್ಯಾಬ್ ನಲ್ಲಿ ಒಂದು ಅಲಿಖಿತ ನಿಯಮ ಇತ್ತು. ಲ್ಯಾಬ್ ನಲ್ಲಿ ಪ್ರತಿ ವಾರದ ಪ್ರ್ಯಾಕ್ಟಿಕಲ್ ಕ್ಲಾಸ್ ನಂತರ ಎಲ್ಲರೂ ತಮ್ಮ ಅಬ್ಸರ್ವೇಶನ್ ಬುಕ್ ಅನ್ನು ಲ್ಯಾಬ್ ಫ್ಯಾಕಲ್ಟೀ ಗೆ ತೋರಿಸಿ ಅಂದಿನ ಎಕ್ಸ್‌ಪೆರಿಮೆಂಟ್ ನ ರೆಕಾರ್ಡ್ಸ್ ತೋರಿಸಿ ಅವರ ಸಹಿ ಪಡೆಯಬೇಕಿತ್ತು. ಕೆಲವು ಮೈಗಳ್ಳ ಹುಡುಗರು (ಕೆಲವು ಹುಡುಗಿಯರೂ ಸಹ!) ಲ್ಯಾಬ್ ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡದೇ ಸುಮ್ನೇ ಟೈಮ್ ಪಾಸ್ ಮಾಡಿ, ಬೇರೆಯವರ ರೀಡಿಂಗ್ಸ್ ಕಾಪೀ ಮಾಡಿ ತೋರಿಸುತ್ತಿದ್ದುದರಿಂದ ನಮ್ಮ ಫಿಸಿಕ್ಸ್ ಮೇಷ್ಟ್ರು ಈ ನಿಯಮವನ್ನು ಜಾರಿಗೆ ತಂದಿದ್ದರು. ನಂತರ ನಾವು ಅಬ್ಸರ್ವೇಶನ್ ಬುಕ್ ನಲ್ಲಿನ ರೀಡಿಂಗ್ ಮತ್ತು ಫಲಿತಾಂಶಗಳನ್ನು ಜರ್ನಲ್ ನಲ್ಲಿ ಬರೆದು ಮೇಷ್ಟರಿಗೆ ತೋರಿಸಬೇಕಿತ್ತು. ಸೆಮೆಸ್ಟರ್ ನ ಕೊನೆಯಲ್ಲಿ ಜರ್ನಲ್ ಗೆ ಅಂತ 5% ಇಂಟರ್ನಲ್ ಮಾರ್ಕ್ಸ್ ಇರ್ತಿದ್ವು ಮತ್ತು ಆ ಇಂಟರ್ನಲ್ ಮಾರ್ಕ್ಸ್ ಫೈನಲ್ ರಿಸಲ್ಟ್ ನಲ್ಲಿ ಕನ್ಸಿಡರ್ ಆಗ್ತಿದ್ವು. ಅಬ್ಸರ್ವೇಶನ್ ಬುಕ್ ನಲ್ಲಿ ಸಹಿ ಪಡೆದ ಎಕ್ಸ್‌ಪೆರಿಮೆಂಟ್ ಗಳಿಗೆ ಮಾತ್ರ ಜರ್ನಲ್ ನಲ್ಲಿ ಸಹಿ ಮಾಡುತ್ತಿದ್ದರು ಮತ್ತು ಎಲ್ಲ ಎಕ್ಸ್‌ಪೆರಿಮೆಂಟ್ ಗಳನ್ನು ದಾಖಲಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಸಂಪೂರ್ಣ ಮಾರ್ಕ್ಸ್ ಲಭಿಸುತ್ತಿತ್ತು.
.

.
ಇಂಟರ್ನಲ್ ಮಾರ್ಕ್ಸ್ ಗಿಟ್ಟಿಸಲೋಸುಗ ಕೆಲವು ಹುಡುಗರು ಅಬ್ಸರ್ವೇಶನ್ ಬುಕ್ ನಲ್ಲಿ ಮೇಷ್ಟ್ರ ಸಹಿಯನ್ನು ನಕಲು ಮಾಡುತ್ತಿದ್ದುದುಂಟು. ಹೀಗೆ ನಕಲು ಮಾಡುತ್ತಿದ್ದುದು ಮೇಷ್ಟರಿಗೂ ಗೊತ್ತಿದ್ದ ಕಾರಣ ಅವರು ಸಹ ಅಬ್ಸರ್ವೇಶನ್ ಬುಕ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಮಾರ್ಕ್ಸ್ ಕೊಡುತ್ತಿದ್ದರು.
.
ಸರಿ, ಸೆಮೆಸ್ಟರ್ ಕೊನೆಯ ಸಮಯ ಬಂದೇ ಬಿಟ್ಟಿತು. ಪ್ರಿಲಿಮಿನರೀ ಪ್ರ್ಯಾಕ್ಟಿಕಲ್ ಎಗ್ಸ್ಯಾಮ್ಸ್ ಬಂತು. ಆ ಸಮಯದಲ್ಲೇ ಇಂಟರ್ನಲ್ ಮಾರ್ಕ್ಸ್ ಅವಾರ್ಡ್ ಮಾಡುತ್ತಿದ್ದರು. ನನ್ನ ಸೀರಿಯಲ್ ನಂಬರಿಗೆ ಮುಂಚೆ ನನ್ನ ಕ್ಲಾಸ್‌ಮೇಟ್ ಒಬ್ಬನ ನಂಬರ್ ಇತ್ತು. ಪ್ರಿಲಿಮಿನರೀ ಎಗ್ಸ್ಯಾಮ್ ದಿನ ಮೇಷ್ಟರು ನಮ್ಮನ್ನೆಲ್ಲಾ ಲ್ಯಾಬ್ ನಲ್ಲಿ ನಮ್ಮ ನಮ್ಮ ಸೀರಿಯಲ್ ನಂಬರ್ ಪ್ರಕಾರ ಕ್ಯೂ ನಲ್ಲಿ ಬರಲು ಹೇಳಿ ಒಬ್ಬೊಬ್ಬರದೇ ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪರಿಶೀಲಿಸಿ ಮಾರ್ಕ್ಸ್ ಕೊಟ್ಟು ಕಳುಹಿಸಲು ಶುರು ಮಾಡಿದರು. ನನಗಿಂತ ಮುಂಚೆ ನನ್ನ ಸ್ನೇಹಿತನ ನಂಬರ್ ಇದ್ದುದರಿಂದ ಅವನು ನನಗಿಂತ ಮುಂಚೆ ಮೇಷ್ಟ್ರ ಬಳಿಗೆ ಹೋದ. ನಾನು ಸರದಿಯಲ್ಲಿ ಅವನ ಹಿಂದೆಯೇ ನಿಂತಿದ್ದೆ. ಮೇಷ್ಟರು ಅವನ ಅಬ್ಸರ್ವೇಶನ್ ಬುಕ್ ನ ಪ್ರತಿ ಪೇಜ್ ಅನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ, ಒಂದೊಂದೇ ಪುಟವನ್ನು ತಿರುವಿ ಹಾಕುತ್ತಾ, ಮಧ್ಯೆ ಒಂದು ಪೇಜ್ ನಲ್ಲಿ ತುಂಬಾ ಹೊತ್ತು ಮುಳುಗಿ ಹೋದರು. ಆಮೇಲೆ ಕತ್ತೆತ್ತಿ, ನನ್ನ ಸ್ನೇಹಿತನನ್ನು ದುರುಗುಟ್ಟಿ ನೋಡುತ್ತಾ "ಏನೋ ಫೋರ್ಜರಿ ಮಾಡ್ತೀಯಾ? ಎಷ್ಟು ಧೈರ್ಯ ನಿನಗೇ? ಈ ಪೇಜ್ ನಲ್ಲಿರೋ ಸಹಿ ನನ್ನದಲ್ಲ!" ಅಂತ ಗದರಿ, ಅದರ ಮುಂದಿನ ಪೇಜ್ ತಿರುಗಿಸಿ ಅಲ್ಲಿದ್ದ ಸಹಿಯನ್ನು ತೋರಿಸುತ್ತಾ "ಇದು ನನ್ನ ಸಹಿ, ಹಿಂದಿನ ಪೇಜ್ ನಲ್ಲಿರೋದು ನೀನು ಮಾಡಿದ ನಕಲು ಸಹಿ!" ಅಂತ ಗದರಿ, ಒಂದು ಮಾರ್ಕ್ ಕಡಿಮೆ ಕೊಟ್ಟು ಕಳುಹಿಸಿದರು. ನನ್ನ ಸ್ನೇಹಿತ ತನ್ನ ಎಕ್ಸ್‌ಪೆರಿಮೆಂಟ್ ಮುಗಿಸಿ, ಜರ್ನಲ್ ಮತ್ತು ಅಬ್ಸರ್ವೇಶನ್ ಬುಕ್ ಪಡೆದು ಹೊರಗೆ ಹೋದ.
.
ನಂತರ ನನ್ನ ಸರದಿ. ನಾನು ಕಾಲೇಜಿನಲ್ಲಿ ತುಂಬಾ ಒಬೀಡಿಯೆಂಟ್ ಸ್ಟೂಡೆಂಟ್ (!) ಆಗಿದ್ದರಿಂದ ನನಗೆ ಜರ್ನಲ್ ಗೆ ಫುಲ್ಲ್ ಮಾರ್ಕ್ಸ್ ಸಿಕ್ಕ್ವು. ನಾನು ಸಹ ನನ್ನ ಪ್ರ್ಯಾಕ್ಟಿಕಲ್ ಪ್ರಿಲಿಮಿನರೀ ಎಗ್ಸ್ಯಾಮ್ ಮುಗಿಸಿ ಹೊರಗೆ ಬಂದೆ. ನನ್ನ ಸ್ನೇಹಿತ ನಕಲು ಸಹಿ ಮಾಡಿದ್ದು ಅದಕ್ಕೆ ಮುಂಚೆ ನನಗೂ ಸಹ ಗೊತ್ತಿರಲಿಲ್ಲವಾದ್ದರಿಂದ ಅವನನ್ನೇ ಕೇಳಿ ವಿಷಯ ತಿಳಿದು ಕೊಳ್ಳುವ ಕುತೂಹಲದಿಂದ ಅವನನ್ನೇ ಹುಡುಕಿಕೊಂಡು ಹೊರಟೆ. ಅಲ್ಲಿ ಗಿಡದ ಕೆಳಗೆ ನನಗೋಸ್ಕರ ಕಾಯುತ್ತಾ ಕುಳಿತಿದ್ದ ನನ್ನ ಸ್ನೇಹಿತನೆಡೆಗೆ ಹೋಗಿ ನಯವಾಗಿ ಗದರುತ್ತ ಕೇಳಿದೆ "ಯಾಕೋ ಆ ತರ ಮಾಡಿದೆ.. ಮೇಷ್ಟರ ಸಹಿಯನ್ನೇ ನಕಲು ಮಾಡುವ ಧೈರ್ಯ ಹೇಗೋ ಬಂತು ನಿಂಗೆ? ಈಗ ನೋಡು ಒಂದು ಮಾರ್ಕ್ಸ್ ಕಡಿಮೆ ಬಂತಲ್ಲ ನಿಂಗೆ.." ಅಂತ ಗದರಿದೆ.
ಅದಕ್ಕವನು ನಗುತ್ತಾ ಏನು ಹೇಳಿದ ಗೊತ್ತಾ?

.

"ಲೋ, ಮಾರ್ಕ್ಸ್ ಕಥೆ ಬಿಟ್ಟ್ಹಾಕು; ತಮಾಷೆ ಏನು ಗೊತ್ತಾ!? ಮೇಷ್ಟ್ರು ಮೊದಲು 'ಈ ಸಹಿ ನನ್ನದಲ್ಲ' ಅಂದ್ರಲ್ಲ.. ಅದು ಅವರದೇ ಸಹಿ!.... ಅವರು ನಂತರದ ಪೇಜ್ ತೋರಿಸಿ 'ಇದು ನನ್ನ ಸಹಿ' ಅಂದ್ರಲ್ಲ.. ಅದು ನಾನು ಮಾಡಿದ ನಕಲು ಸಹಿ!!"

.

ನನಗೆ ನಗು ತಡೆಯಲಾರದೇ ಬಿದ್ದು ಬಿದ್ದು ನಕ್ಕಿದ್ದೆ.. ಈಗಲೂ ಗೆಳೆಯರೆಲ್ಲ ಸೇರಿದಾಗ ಆ ಘಟನೆಯನ್ನು ನೆನೆಸಿಕೊಂಡು ನಗುತ್ತಿರುತ್ತೇವೆ.

6 comments:

  1. ಅಲ್ರೀ ಉಮೇಶ,
    ಹತ್ತು ತಿಂಗಳ ತನಕಾ ನಮ್ಮನ್ನ ಕಾಯಿಸಿ ಬಿಟ್ರಿ! ಇರಲಿ, ಒಂದು ಛಲೋ ವಿನೋದಿ ಪ್ರಕರಣ ಹೇಳಿದಿರಿ. ಅಭಿನಂದನೆಗಳು. ಇನ್ನು ಈ ಥರಾ ವಿಳಂಬ ಮಾಡಬ್ಯಾಡರಿ.

    ReplyDelete
  2. ಉಮೇಶ್ ಸರ್ welcome back ..
    ತುಂಬಾ ದಿನಗಳ ನಂತರ ಬ್ಲಾಗ್ ಅಪ್ಡೇಟ್ ಮಾಡಿದ್ರಿ ...
    ಹಹಾ ಹಹಾ ಹಹಾ ಮೇಷ್ಟ್ರಿಗೆ ಗೊತಗದೆ ಇರೋ ಹಾಗೆ ಸಹಿ ಹಾಕಿದ್ರಾ ! ಒಳ್ಳೆ ತಮಾಷೆಯಗಿದೆ..

    ReplyDelete
  3. ಉಮೇಶ್ ಸರ್
    ಚೆನ್ನಾಗಿದೇರಿ

    ಬರಿತ ಇರಿ

    ReplyDelete
  4. @ಸುನಾಥ ಅಂಕಲ್,
    ನಮಸ್ತೆ. ತಮ್ಮನ್ನೆಲ್ಲ ತುಂಬಾ ದಿನ (ತಿಂಗಳು!) ಕಾಯಿಸಿದ್ದಕ್ಕೆ ಮೊದಲು ಕ್ಷಮೆ ಕೋರುತ್ತೇನೆ. ಕೆಲಸದ ಒತ್ತಡದ ಮಧ್ಯೆ ಬರೆಯಲು ಸಮಯ ಸಿಕ್ಕಿರಲಿಲ್ಲ. ನಿಮ್ಮ ಪ್ರೀತ್ಯಾಭಿಮಾನಕ್ಕೆ ನಾನು ಚಿರಋಣಿ. ಇಲ್ಲ, ಇನ್ನು ಮುಂದೆ ಈ ಥರ ವಿಳಂಬ ಮಾಡಲ್ಲ.. ಆಗಾಗ ಬ್ಲಾಗ್ ಅಪ್‌ಡೇಟ್ ಮಾಡ್ತಾ ಇರ್ತೀನಿ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ.

    @ರಂಜೀತಾ ಮೇಡಮ್,
    ಹೇಗಿದ್ದೀರಾ? ಅನಿವಾರ್ಯ ಕಾರಣಗಳಿಂದಾಗಿ ಸ್ವಲ್ಪ ಕಾಲ ಬ್ಲಾಗ್ ಲೋಕದಿಂದ ಕಣ್ಮರೆಯಾಗಬೇಕಾಯ್ತು. ಪ್ರತಿಕ್ರಿಯೆಗೆ ವಂದನೆಗಳು.

    @ಸಾಗರದಾಚೆಯ ಇಂಚರ (ಗುರು) ಸರ್,
    ಖಂಡಿತ ಬರೆಯುತ್ತೇನೆ. ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    @ಶಿವಪ್ರಕಾಶ್,
    ಪ್ರತಿಕ್ರಿಯೆಗೆ ವಂದನೆಗಳು.

    ReplyDelete