Wednesday, August 5, 2009

ಸಾರೀ ಪುಟ್ಟೀ, ನೆಕ್ಸ್ಟ್ ಟೈಮ್ ಮಿಸ್ ಮಾಡ್ಕೋಳಲ್ಲ...

'


ಇವತ್ತು ರಕ್ಷಾಬಂಧನ; ನನ್ನ ತಂಗಿ ನಾವು ಮೂರು ಜನ ಅಣ್ಣಂದಿರಿಗೆ ರಾಖಿ ಕಟ್ಟಲು ಊರಲ್ಲಿ ನಮ್ಮ ಮನೆ, ಅಂದ್ರೆ ತನ್ನ ತವರು ಮನೆಗೆ ಬಂದಿರ್ತಾಳೆ. ಆದರೆ ನಾನೊಬ್ಬ ನತದೃಷ್ಟ ಅಣ್ಣ ಮಾತ್ರ ಇಲ್ಲಿ ಬೆಂಗಳೂರೆಂಬ ಕರ್ಮಭೂಮಿಯಲ್ಲಿ ಕೆಲಸದ ಬಂಧಿಯಾಗಿ ಕುಳಿತಿದ್ದೇನೆ. "ಅಣ್ಣಾ ಪ್ಲೀಸ್, ಅವತ್ತೊಂದಿನ ಊರಿಗೆ ಬಂದ್ ಹೋಗೋ, ನಿಂಗೂ ರಾಖಿ ಕಟ್ಟತೇನೀ..." ಅಂತ ತಂಗಿ ಒಂದು ವಾರ ಮುಂಚೇನೇ ಕರೆದಿದ್ರೂ, ಹೋಗಬೇಕೆನ್ನೋ ಮಹದಾಸೆ ನಂಗೂ ಇದ್ರೂ ಹೋಗಲಾಗದ ಅಸಹಾಯಕತೆ ನನ್ನದು. ಊರಲ್ಲಿರುವ ನನ್ನಿಬ್ಬರು ಸಹೋದರರೇ ಅದೃಷ್ಟವಂತರು ಅನ್ಸುತ್ತೆ. ಇರುವ ಒಬ್ಬಳು ತಂಗಿ ಕೈಯಿಂದ ರಾಖಿ ಕಟ್ಟಿಸಿಕೊಂಡು, ತಂಗಿಯ ಶುಭಾಶೀರ್ವಾದ ಪಡೆಯುವ ಅವಕಾಶಾನ ನಾನೊಬ್ಬ ಮಾತ್ರ ಮಿಸ್ ಮಾಡ್ಕೋತಿದೀನಿ. ಆದರೆ ತಂಗಿ ಕೋರಿಯರ್ ನಲ್ಲಿ ಕಳಿಸಿದ ರಾಖಿಯನ್ನೇ ಕಣ್ಣಿಗೊತ್ತಿಕೊಂಡು ನಾನೇ ಸ್ವತಃ ಕಟ್ಟಿಕೊಂಡು ಅಷ್ಟಕ್ಕೇ ತೃಪ್ತಿಪಟ್ಟುಕೊಂಡು ಕುಳಿತಿದ್ದೇನೆ. ಸಾರೀ ತಂಗ್ಯವ್ವ, ನಾನು ಈ ವರ್ಷ ನಿನ್ನ ಕೈಯ್ಯಾರೇ ರಾಖಿಯಂತೂ ಕಟ್ಟಿಸ್ಕೊಳ್ಳೋಕಾಗ್ತಿಲ್ಲ. ಆದರೆ ನಿನ್ನ ಶುಭಾಶೀರ್ವಾದ, ಹಾರೈಕೆಗಳು ನನ್ನೊಂದಿಗೆ ಸದಾ ಇರ್ತವೆ ಅಂತ ಭಾವಿಸ್ತೀನಿ.

ಹುಟ್ಟಿದ ಊರು ಬಿಟ್ಟು ಬೆಂಗಳೂರಿನಲ್ಲಿ ಇದ್ದು ಕಳೆದುಕೊಳ್ಳುತ್ತಿರುವ ಸೌಭಾಗ್ಯಗಳಲ್ಲಿ ಇದೂ ಒಂದು. ಊರಲ್ಲಿದ್ದಾಗ ಕಳೆದ ರಕ್ಷಾಬಂಧನದ ದಿನಗಳ ಮೆಲುಕೇ ಈ ದಿನ ನನ್ನ ಸಂಗಾತಿ. ಚಿಕ್ಕವಳಿದ್ದಾಗ ತಂಗಿ, "ನನಗ ಅಂಗಡಿಗೆ ಹೋಗಿ ರಾಖಿ ತರಾಕ ಗೊತ್ತಾಗುದಿಲ್ಲ, ನೀವsss ತಂದು ಕೊಟ್ರ ರಾಖಿ ಕಟ್ಟತೇನಪಾ" ಅಂತ ಮುಗ್ಧವಾಗಿ ಹೇಳಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸ್ತಿದ್ಲು. "ನಾವsss ರಾಖಿ ತಂದು ಕೊಟ್ಟು ಕಟ್ಟಸ್ಕೊಂಡು ನಿನಗ ಗಿಫ್ಟ್ ಕೊಡಬೇಕೇನವಾ, ಹೋಗೋಗ್.." ಅಂತ ನಾವು ಅಣ್ಣಂದಿರು ಅವಳಿಗೆ ಗೋಳು ಹುಯ್ಕೋತಿದ್ವಿ. ರಾಖಿ ಮತ್ತು ಪೇಢಾ ತಂದುಕೊಟ್ಟು, ನಾವು ಮೂರೂ ಜನ ಅಣ್ಣಂದಿರು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟುಕೊಂಡು ತಂಗಿ ಕೈಯಲ್ಲಿ ರಾಖಿ ಕಟ್ಟೀಸ್ಕೊಳ್ಳೋಕೆ ಸಾಲಾಗಿ ಮಣೆ ಹಾಕಿಕೊಂಡು ಕೂಡ್ತಿದ್ವಿ. ತಂಗಿ ಬಂದು ನಮ್ಮೆಲ್ಲರ ಹಣೆಗೆ ವಿಭೂತಿ ಪಟ್ಟಿ ಬಳಿದು, ಆರತಿ ತಟ್ಟೆಯಲ್ಲಿನ ಜ್ಯೋತಿಯ ಬಿಸಿಗೆ ವೀಳ್ಯದೆಲೆ ಕಾಯಿಸಿ, ನಮ್ಮ ಹಣೆಗೆ ವೀಳ್ಯದೆಲೆಯ ಕಪ್ಪು-ಕಾಡಿಗೆ ಬೊಟ್ಟು ಹಚ್ಚಿ, ತನ್ನ ಮುದ್ದಾದ ಪುಟ್ಟ-ಪುಟ್ಟ ಕೈಗಳಿಂದ ನಮ್ಮೆಲ್ಲರಿಗೂ ರಾಖಿ ಕಟ್ಟಿ, ಬಾಯಲ್ಲಿ ಪೇಢಾ ಹಾಕಿ, ಸರತಿಯಂತೆ ನಮಗೆ ಆರತಿ ಬೆಳಗುತ್ತಿದ್ದಳು. ಅಪ್ಪ ನಮಗೆ ಮೊದಲೇ ಕೊಟ್ಟಿರುತ್ತಿದ್ದ ಪುಡಿಗಾಸಿನ ಜೊತೆಗೆ ನಾವು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿರುತ್ತಿದ್ದ ಬಿಡಿಗಾಸನ್ನೂ ಸೇರಿಸಿ ಆರತಿ ತಟ್ಟೆಯಲ್ಲಿ ಹಾಕಿ ನಾವೆಲ್ಲ ತಂಗಿಯ ಶುಭಾಶೀರ್ವಾದ ಪಡೀತಿದ್ವಿ. ನಂತರ ತಂಗಿ ಕಟ್ಟಿದ್ದ ರಾಖಿಯನ್ನು ಹೆಮ್ಮೆಯಿಂದ ಪದೇ ಪದೇ ನೋಡಿಕೊಳ್ಳುತ್ತ ಶಾಲೆಯ ಕಡೆ ಹೆಜ್ಜೆ ಹಾಕ್ತಿದ್ವಿ. ನಾವು ಹೋಗುತ್ತಿದ್ದ ಶಾಲೆ ಬರೀ ಗಂಡು ಮಕ್ಕಳ ಶಾಲೆಯಾದ್ದುದರಿಂದ ಶಾಲೆಯಲ್ಲಿ ರಾಖಿ ಕಟ್ಟಲು ಬರುವ ಹುಡುಗಿಯರ ಕಾಟವಾಗಲಿ, ನಾವು ಅವರಿಂದ ತಪ್ಪಿಸಿಕೊಂಡು ಓಡುವ ಪ್ರಸಂಗವಾಗಲಿ ನಮಗೆ ಬರುತ್ತಿರಲಿಲ್ಲ ಬಿಡಿ :) ಸ್ಕೂಲಲ್ಲಿ ಓರಗೆಯ ಗೆಳೆಯರಿಗೆ ನಮ್ಮ ಕೈಯಲ್ಲಿನ ರಾಖಿ ತೋರಿಸಿ "ನಮ್ ತಂಗಿ ಕಟ್ಟಿದ ರಾಖಿ ನೋಡ್ರಲೇ, ಎಷ್ಟ್ ಛಂದ್ ಐತೀ" ಅಂತ ಜಂಭ ಕೊಚ್ಚಿಕೋತಿದ್ವಿ. ರಕ್ಷಾಬಂಧನ ಮುಗಿದು ಮೂರ್ನಾಲ್ಕು ದಿನಗಳು ಕಳೆದು, ರಾಖಿಯಲ್ಲಿನ ಚಿತ್ತಾರದ ಪಕಳೆಗಳು ಒಂದೊಂದಾಗಿ ಕಳಚಿ ಬಿದ್ದು, ಕಡೆಗೆ ದಾರವೊಂದೇ ಉಳಿಯುವವರೆಗೆ ರಾಖಿ ಬಿಚ್ಚುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ನಮಗೆಲ್ಲ ನಮ್ಮ ತಂಗಿಯ ಮೇಲೆ ಮತ್ತು ಅವಳು ಕಟ್ಟಿದ ರಾಖಿಯ ಮೇಲೆ.

ಫೂಲೋಂಕಾ ತಾರೋಂಕಾ ಸಬ್ಕಾ ಕೆಹ್ನಾ ಹೈ,
ಏಕ್ ಹಜಾರೋಂ ಮೇಂ ಮೇರಿ ಬೆಹ್ನಾ ಹೈ,
ಸಾರೀ ಉಮರ್ ಹಮೇ ಸಂಗ್ ರೆಹ್ನಾ ಹೈ...


ಮುಂದೆ ಸ್ಕೂಲು ಮುಗಿದು ಕಾಲೇಜು ಓದಲು ಹುಬ್ಬಳ್ಳಿಯಲ್ಲಿ ಇದ್ದಾಗಲೂ ತಪ್ಪದೇ ಪ್ರತಿ ವರ್ಷ ರಕ್ಷಾಬಂಧನದ ದಿನ ಊರಿಗೆ ಹೋಗಿ ಬರ್ತಿದ್ದೆ. ಮದುವೆಯಾದ ಮೇಲೆ ತಂಗಿಯೂ ಪ್ರತಿ ವರ್ಷ ತಪ್ಪದೇ ರಕ್ಷಾಬಂಧನದ ದಿನ ಊರಿಗೆ ಬರ್ತಾಳೆ. ಉನ್ನತ ವ್ಯಾಸಂಗಕ್ಕಾಗಿ ನಾನು ಬೆಂಗಳೂರಿಗೆ ಬಂದ ಮೇಲೆಯೇ ರಕ್ಷಾಬಂಧನದ ದಿನ ಊರಲ್ಲಿರಲಾಗದ ಹತಭಾಗ್ಯ ನನ್ನದಾಗಲು ಶುರುವಾಯಿತು. ಕೆಲವು ಸಲ ಊರಿಗೆ ಹೋಗಲು ಸಾಧ್ಯವಾಗಿದ್ದರೂ, ಈ ಶುಭದಿನವನ್ನು ಮಿಸ್ ಮಾಡ್ಕೊಂಡಿದ್ದೇ ಹೆಚ್ಚು ಸಲ.

ನನ್ನ ಮುದ್ದು ತಂಗ್ಯವ್ವ, ನಂಗೊತ್ತು, ಇವತ್ತು ಊರಲ್ಲಿ ಉಳಿದ ಇನ್ನಿಬ್ಬರು ಅಣ್ಣಂದಿರಿಗೆ ರಾಖಿ ಕಟ್ಟುವಾಗ ನೀ ನನ್ನನ್ನು ಖಂಡಿತ ಮಿಸ್ ಮಾಡ್ಕೊಂಡಿರ್ತೀಯಾ ಅಂತ. ಸಾರೀ ಪುಟ್ಟೀ, ಬೇಜಾರ್ ಮಾಡ್ಕೊಬೇಡ; ಇದೊಂದು ಸರ್ತಿ ಕ್ಷಮಿಸಿಬಿಡು. ನೀ ಕಳಿಸಿದ ರಾಖಿ ಇವತ್ತು ಬೆಳಿಗ್ಗೇನೇ ನನ್ನ ಕೈ ಸೇರಿದೆ. ನಿನ್ನ ಹೆಸರು ಹೇಳಿಕೊಂಡು ಅದನ್ನ ನನ್ನ ಕೈಗೆ ನಾನೇ ಕಟ್ಕೊಂಡಿದೀನಿ. ಇದೊಂದು ಸರ್ತಿ ನೀನು ಅಲ್ಲಿಂದಲೇ ನಂಗೆ ಶುಭಾಶೀರ್ವಾದ ಮಾಡಿ, "ನಿಂಗೆ ಒಳ್ಳೆಯದಾಗಲಿ ಅಣ್ಣ" ಅಂತ ಹಾರೈಸಿಬಿಡು. ಮುಂದಿನ ಸಲ ನಿನ್ನ ಕೈಯಾರೆ ರಾಖಿ ಕಟ್ಟಿಸ್ಕೊಳ್ಳೋಕೆ ತಪ್ಪದೇ ಊರಿಗೆ ಬರ್ತೀನಿ, ಮಿಸ್ ಮಾಡ್ಕೋಳಲ್ಲ, ಪ್ರಾಮೀಸ್! :)
'

ಚಿತ್ರಕೃಪೆ: ಅಂತರ್ಜಾಲ'

10 comments:

  1. ಬಹಳ ದಿನಗಳ ನಂತರ ಬಂದ ನಿಮ್ಮ ಪೋಸ್ಟ್ ಸರಿಯಾದ ಟೈಮ್ ಗೆ ಹಾಕಿದ್ದೀರ. ನೀವು ಈ ಸಮಯದಲ್ಲಿ ತಂಗಿಯ ರಾಖಿ ಮಿಸ್ ಮಾಡ್‌ಕೊಳ್ತಾ ಇರೋದು ನಿಜವಾಗ್ಲೂ ಬೇಜಾರಿನ ಸಂಗತಿನೇ...ಆದ್ರೆ ನಿಮ್ಮ ಈ ಪತ್ರ ಓದಿದ್ರೆ ಖಂಡಿತ ನಿಮ್ಮ ತಂಗಿ ಅರ್ಥ ಮಾಡ್ಕೊಳ್ತಾರೆ ಬಿಡಿ.
    ಏನಾದ್ರೂ ಪಡೆಯೋಕ್ಕೆ ಮತ್ತೇನನ್ನೋ ಕಳ್ಕೊಳ್ಳೋದು ಜೀವನದ ರೀತಿಯಲ್ವೇ... ನಿಮ್ಮ ಮತ್ತು 'ಪುಟ್ಟಿಯ' ಬಾಂಧವ್ಯದ ಸವಿ ಹೀಗೆ ಯಾವಾಗಲೂ ಇರಲೆಂಬ ಹಾರೈಕೆ ಈ ದಿನದಂದು!

    ReplyDelete
  2. ಆ ತಂಗಿಗೆ ನಮ್ಮ ಕಡೆಯಿಂದನೂ ರಾಖಿ ಹಬ್ಬದ ಶುಭಾಶಯಗಳು. ಹಾಗೆಯೇ ನಿಮಗೂ ಹಬ್ಬದ ಶುಭಾಶಯಗಳು

    ReplyDelete
  3. ಉಮೇಶ್...

    ನನ್ನಕ್ಕ, ಮತ್ತು ದೆಹಲಿಯಲ್ಲಿರುವ ನನ್ನ ತಂಗಿ ನೆನಪು ಮಾಡಿ ಬಿಟ್ರಿ...
    ಹೃದಯಕ್ಕೆ ತಟ್ಟುವಂಥಹ ಬರಹ....
    ಎಷ್ಟೋ ಜನ ನನ್ನನ್ನು ಪ್ರಕಾಶಣ್ಣ ಅಂತಾರೆ..
    ಈ ಸಾರಿ ರಾಖಿ ಹಬ್ಬಕ್ಕೆ ಒಂದೇ ಒಂದು ರಾಖಿ ಇಲ್ಲ...

    ಸೊಗಸಾದ ಲೇಖನಕ್ಕೆ ಅಭಿನಂದನೆಗಳು...

    ಬರಿತಾ ಇರ್ರಿ...

    ReplyDelete
  4. ನನ್ನ ಚಿಕ್ಕಂದಿನ ದಿನಗಳನ್ನು ನೆನಪಿಸಿದ್ರಿ!! ನಮ್ಮವರಿಂದ ಬಲು ದೂರವಿರುವ ನಮ್ಮಂತವರೆಲ್ಲಾ ಈ ಹಬ್ಬಗಳನ್ನು ಆಚರಿಸೋದು ಹೀಗೇನೇ..ಪೋಸ್ಟ್/ಫೋನ್/ಈಮೈಲ್ ಗಳ ಮೂಲಕ. ನನ್ನ್ ಅಣ್ಣ ಮತ್ತು ತಮ್ಮ ಇಬ್ಬರೂ ಒಂದೊಂದು ದೇಶದಲ್ಲಿದ್ದಾರೆ..
    ನಿಮ್ಮೀ ಪೋಸ್ಟ್ ಓದಿದ್ರೆ ಖಂಡಿತ ನಿಮ್ಮ ಪುಟ್ಟಿತಂಗಿಯ ಬೇಸರವೆಲ್ಲಾ ಹಾರಿಹೋಗುತ್ತೆ ಬಿಡಿ. ನಿಮ್ಮಗಳ ಪ್ರೀತಿ-ಬಾಂಧವ್ಯ ಹೀಗೆ ಸದಾ ಇರಲೆಂದು ಹಾರೈಸುವೆ!!

    ReplyDelete
  5. ಉಮೇಶ ನಿಮ್ಮ ತಂಗಿಯಬಗ್ಗೆ ಸಹಾನುಭೂತಿ ಇದೆ ಎನ್ನಲೋ ಅಥವಾ ಈ "ಬೆಂಗಾಡೆಂಬ ಬೆಂಗಳೂರಿನಲ್ಲಿ" ಸಿಕ್ಕಿ ಬಿದ್ದಿರುವ ನಿಮ್ಮ
    ಬಗ್ಗೆ ಅನುಕಂಪ ತೋರಲೋ ಗೊತ್ತಿಲ್ಲದಾಗೇದ.... ಈ ಸಲ ನಾ ನನ್ನ ಇನ್ನೊಬ್ಬ ಅಕ್ಕನ ಹತ್ರ ರಾಖಿ ಕಟ್ಟಿಸಿಕೊಂಡೆ ಅದೂ ಹುಬ್ಬಳ್ಳ್ಯಾಗ...! ಬೆಂಗಳೂರಿನಲ್ಲಿನ ಅಕ್ಕ ಕರೆದಿದ್ದಾಳೆ ಸಂಜೀಮುಂದ ಹೋಗಬೇಕು
    ಯಾಕ್ರೀ ಸಾಹೇಬರ ನನ್ನ ಬ್ಲಾಗ್ ಗೆ ಬರದ ಎಷ್ಟು ದಿನಾ ಆದ್ವು...?

    ReplyDelete
  6. ಬರಹ ಸೊಗಸಾಗಿದೆ.ನನಗೋಬ್ಬಳು ತಂಗಿ ಇರಬೇಕಿತ್ತು ಅನಿಸೋದು ಸಹಜ. ಈ ಸಂಬಂಧ ಹೀಗೇ ಹಸಿರಾಗಿರಲಿ. ಮತ್ತೆ ಬರೆಯಿರಿ...

    ReplyDelete
  7. ನನಗೂ ರಾಖಿ ಸಿಕ್ಕಿಲ್ಲ ಸರ್, ತಂಗಿ ಊರಲ್ಲಿ ನಾನಿಲ್ಲಿ. ರಕ್ಷಾಭಂದನ ಅಂತ ಒಂದು ಮೆಸೇಜು ಬಂದಿತ್ತು, ಹಬ್ಬಗಳ ಆಚರಣೆ ಮೊದಲಿನ ಹಾಗೆ ಉಳಿದಿಲ್ಲ.

    ReplyDelete
  8. ಉಮೇಶ,
    ನಿಮ್ಮ ಲೇಖನ ಭಾಳ sentimental ಅದ. ಮತ್ತ ನನಗ sentimental ಲೇಖನ ಭಾಳ ಇಷ್ಟ ಆಗ್ತಾವ. ನಡನಡುವೆ ಬರುವ film songs ಅಂತೂ ಊಟದಾಗ ಉಪ್ಪಿನ ಕಾಯಿ ಇದ್ಧಾಂಗ ಅವ.
    ಮುಂದಿನ ವರ್ಷಕ್ಕರ, ನಿಮಗ ತಂಗಿ ಕಡಿಯಿಂದ ರಾಖಿಯನ್ನ ಪ್ರತ್ಯಕ್ಷವಾಗಿ ಕಟ್ಟಿಸಿಕೊಳ್ಳೊ ಭಾಗ್ಯ ಸಿಗಲಿ ಅಂತ ಹಾರೈಸ್ತೀನಿ.
    -ಕಾಕಾ

    ReplyDelete
  9. ಉಮೇಶ್ ಸರ್,

    ನಿಮ್ಮ ಲೇಖನವನ್ನು ಅಂದು ಸಂಜೆ ಓದಿಯೇ ಕೇರಳಕ್ಕೆ ಹೊರಟಿದ್ದು. ಆತುರದಲ್ಲಿ ಕಾಮೆಂಟಿಸಲಾಗಿರಲಿಲ್ಲ. ನಿಮ್ಮ ಈ ಲೇಖನ ನನ್ನ ಇಲ್ಲದ ತಂಗಿಯನ್ನು ನೆನಪಿಸಿ ಮನಸ್ಸನ್ನು ಕಲಕಿಬಿಡ್ತು. ತಂಗಿ ಪ್ರೀತಿ ಅಂದ್ರೆ ಅದಕ್ಕೆ ಪದಗಳಲ್ಲಿ ವರ್ಣಿಸಲಿಕ್ಕೆ ಆಗೋಲ್ಲ ಅಲ್ವಾ?

    ನಿಮಗೆ ರಾಕಿ ಹಬ್ಬದ ಶುಭಾಶಯಗಳು.

    ReplyDelete
  10. @ಸುಮನ ಮೇಡಮ್,
    ನೀವು ಹೇಳೋದು ಸರಿ; ಏನಾದ್ರೂ ಪಡೆಯೋಕೆ ಮತ್ತೇನಾದ್ರೂ ಕಳ್ಕೊಳ್ಳಲೇ ಬೇಕು.. ನಿಮ್ಮ ಹಾರೈಕೆಗಳಿಗೆ ಅನಂತ ವಂದನೆಗಳು.

    @ಗುರು ಸರ್,
    ಶುಭಾಶಯಗಳಿಗೆ ವಂದನೆಗಳು ಮತ್ತು ತಮಗೂ ಸಹ ಪ್ರತಿ-ಶುಭಾಶಯಗಳು.

    @ಪ್ರಕಾಶ್ ಸರ್,
    ಕೆಲವರಿಗೆ ಕೆಲವು ಸಲ ಎಲ್ಲ ಇದ್ದೂ ಏನೂ ಇಲ್ಲದಂತಾಗುವುದು ಜೀವನದ ವಿಪರ್ಯಾಸವಲ್ಲವೇ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ತುಂಬಾ ಧನ್ಯವಾದಗಳು.

    @ರೂಪಶ್ರೀ ಅವರೇ,
    ಹೌದು, ಮುಖತಃ ಭೇಟಿ ಅಸಾಧ್ಯವಾದಾಗ ಈ ಪೋಸ್ಟ್/ಫೋನ್/ಈ-ಮೈಲ್ ಗಳೇ ನಮ್ಮ ಹಬ್ಬಗಳನ್ನು ಆಚರಿಸಿಕೊಳ್ಳೋಕೆ ಸಹಾಯ ಮಾಡುತ್ತವೆ. ನಿಮ್ಮ ನಲ್ಮೆಯ ಹಾರೈಕೆಗಳಿಗೆ ಅನಂತ ವಂದನೆಗಳು.

    @ಉಮೇಶ್ ದೇಸಾಯಿ ಸರ್,
    ಆಹಾ! ಪುಣ್ಯವಂತರು ಅಂದ್ರ ನೀವು ನೋಡ್ರೀ ಸರ್ರ. .. ಹುಬ್ಬಳ್ಯಾಗ ಮತ್ತ ಬೆಂಗಳೂರಿನ್ಯಾಗ ಎರಡೂ ಕಡೆ ರಾಖಿ ಭಾಗ್ಯ ನಿಮಗ. ಭಾಳ ಛಲೋ ಆತು ಬಿಡ್ರಿ. ಸ್ವಲ್ಪ ಕೆಲಸದ ಒತ್ತಡದಾಗ ಯಾರ ಬ್ಲಾಗಿಗೂ ಭೇಟಿ ಕೊಟ್ಟು ಪ್ರತಿಕ್ರಿಯಿಸಾಕ ಆಗಿರ್‍ಲಿಲ್ಲ ನೋಡ್ರೀ. ಆದಷ್ಟು ಲಗೂನ ಬರ್ತೇನಿ ಬಿಡ್ರಿ. ಲೇಖನ ಮೆಚ್ಚಿ ನಿಮ್ಮ ಅನಿಸಿಕಿ ತಿಳಿಸಿದ್ದಕ ಭಾಳ ಥ್ಯಾಂಕ್ಸ್ ರೀ.

    @ಏಕಾಂತರವರೆ,
    ಹೌದು, ರಾಖಿ ಹಬ್ಬದ ದಿನ ಅಕ್ಕ-ತಂಗಿಯರ ಕೊರತೆ ಕಾಡೋದು ಸಹಜ. ಮುಂದಿನ ರಕ್ಷಾಬಂಧನ ವೇಳೆಗೆ ನಿಮಗೂ ರಾಖಿ ಕಟ್ಟುವ ಸಹೋದರಿಯೊಬ್ಬಳು ಸಿಗಲಿ ಎಂದು ಹಾರೈಸ್ತೀನಿ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಮತ್ತೆ ಬರೀತೀನಿ, ನೀವೂ ಮತ್ತೆ, ಮತ್ತೆ ಬರ್ತಾ ಇರಿ. :)

    @ಪ್ರಭುರಾಜ್ ಸರ್,
    ಜೀವನದ ವೇಗಕ್ಕೆ ತಕ್ಕಂತೆ ಓಡುವಾಗ ಇಂತಹ ಕೆಲವು ಶುಭಸಂದರ್ಭಗಳನ್ನು ಮಿಸ್ ಮಾಡ್ಕೊಳ್ಳೋದು ಸಹಜ ಅನ್ಸುತ್ತೆ. ಮುಂದಿನ ಸಲವಾದರೂ ನಿಮಗೆ ರಾಖಿ ಭಾಗ್ಯ ಸಿಗಲಿ ಎಂದು ಹಾರೈಸ್ತೀನಿ. ಪ್ರತಿಕ್ರಿಯೆಗೆ ವಂದನೆಗಳು.

    @ಸುನಾಥ ಕಾಕಾ,
    ನೀವು ನನ್ನ ಬ್ಲಾಗಿಗೆ ಬಂದು ನಿಮ್ಮ ಅನಿಸಿಕಿ ತಿಳಿಸಿದ್ದು ನಂಗ ಭಾಳ ಖುಷಿ ಆತು ನೋಡ್ರೀ. ನಿಮ್ಮಂತಾ ಹಿರಿಯರ ಆಶೀರ್ವಾದ ನಮ್ಮಂತವ್ರ ಮ್ಯಾಲ ಯಾವಾಗ್ಲೂ ಇರ್ಲಿ. ನಿಮ್ ಹಾರೈಕೆಗಳಿಗೆ ತುಂಬಾ ಧನ್ಯವಾದಾ ರೀ. ಆಗಾಗ ಬರ್ಕೋಂತ ಇರ್ರೀ ಅಂಕಲ್ ..

    @ಶಿವು ಸರ್
    ಹೌದು ... ಈ ಅಕ್ಕ, ತಂಗಿ ಪ್ರೀತಿ ಅನ್ನೋದು ಮನುಷ್ಯರಿಗೆ ಮಾತ್ರ ಸಿಕ್ಕಿರೋ ಅತ್ಯಮೂಲ್ಯ ಬಾಂಧವ್ಯ ಭಾಗ್ಯ. ಅದು ವರ್ಣಿಸಲಸದಳ. ತಮಗೂ ಸಹ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಪ್ರತಿಕ್ರಿಯೆಗೆ ಅನಂತ ವಂದನೆಗಳು.

    ತಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಲಿ.

    ಪ್ರೀತಿಯಿಂದ,
    ಉಮೇಶ್

    ReplyDelete