Tuesday, August 25, 2009

ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಬಿಡಬೇಕೆನಿಸುತ್ತಿದೆಯಾ?

ಕೆಲವು ಸಲ ಹಾಗನ್ನಿಸುವುದು ಸಹಜ.

ಮತ್ತೊಬ್ಬರು ನಮ್ಮ ಸಹನೆ ಪರೀಕ್ಷಿಸುವ ಮಟ್ಟಿಗೆ ನಮ್ಮ ಮೇಲೆ ಕೆಸರೆರಚಾಟ ಮಾಡುವದು, ನಮ್ಮ ಚಾರಿತ್ರ್ಯವಧೆಗೆ ಕೈ ಹಾಕುವುದು, ತೀರಾ ಅಪರಿಚಿತರೂ ಸಹ ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು,... ಆಗೆಲ್ಲ, "ಛೇ! ಇಂಥವರೆಲ್ಲ ಇರುವ ಪರಿಸರದ ಸಹವಾಸವೇ ಬೇಡಪ್ಪಾ" ಅಂತಾ ಮೇಲೆದ್ದುಬಿಡಲು ಸಿದ್ಧರಾಗುತ್ತೇವೆ. ಆದರೆ, ಎಲ್ಲಿ ಹೋದರೂ ಅಂಥ ಜನರಿಂದ ತಪ್ಪಿಸಿಕೊಳ್ಳೋಕಾಗಲ್ಲ. ಜೀವನದಲ್ಲಿ ಸುಖ-ದುಖಃ, ಸಿಹಿ-ಕಹಿ, ಬೆಳಕು-ಕತ್ತಲು ಮುಂತಾದವುಗಳೆಲ್ಲ ಎಷ್ಟರಮಟ್ಟಿಗಿನ ಸಾರ್ವಕಾಲಿಕ ಸತ್ಯಗಳೋ, ಜಗತ್ತಿನಲ್ಲಿ ಒಳ್ಳೆಯವರು-ಕೆಟ್ಟವರು ಎರಡೂ ಥರದ ಜನ ಇರ್ತಾರೆ ಅನ್ನೋದೂ ಸಹ ಅಷ್ಟೇ ಸಾರ್ವಕಾಲಿಕ ಸತ್ಯ. ಇಲ್ಲಿರುವ ಕೆಟ್ಟ ಜನರಿಂದ ತಪ್ಪಿಸಿಕೊಂಡು ಬೇರೆ ಕಡೆ ಹೋದರೆ ಅಲ್ಲಿ ಇನ್ನೊಂದು ಥರದ ಕೆಟ್ಟ ಜನ ಸಿಗ್ತಾರೆ. ಕೆಟ್ಟದು ಇದ್ದಲ್ಲಿಯೇ ಒಳ್ಳೆಯತನದ ಅನುಭೂತಿ ಆಗಲು ಸಾಧ್ಯ, ಅಲ್ಲವೇ? ಎಲ್ಲ ಕಡೆ ಕೆಟ್ಟ ಜನ ಇದ್ದಾರೆ ಅಂತ ಜಗತ್ತನ್ನೇ ತೊರೆದು ಹೋಗುವುದು ಸಾಧ್ಯವೇ?

ಇಷ್ಟೆಲ್ಲಾ ಹೇಳಬೇಕೆಂದು ಅನಿಸಿದ್ದು, ತೀರ ಇತ್ತೀಚೆಗೆ ಬ್ಲಾಗುಲೋಕದಲ್ಲಿ ಆಗುತ್ತಿರುವ ಕೆಲವು ಕೆಟ್ಟ ಬೆಳವಣಿಗೆಗಳಿಂದ ಬೇಸತ್ತು ಕೆಲವು ಜನ ಬ್ಲಾಗುಲೋಕದ ಮಹನೀಯರು ಮತ್ತು ಪ್ರತಿಭಾವಂತ ಸಹೃದಯೀ ಬ್ಲಾಗುಮಿತ್ರರು ಬ್ಲಾಗಿಂಗ್ ಮಾಡುವುದನ್ನೇ ನಿಲ್ಲಿಸುತ್ತಿರುವದನ್ನು ಕಂಡಾಗ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಬ್ಲಾಗುಲೋಕದಲ್ಲೂ ಸಹ ವೈಯಕ್ತಿಕ ದ್ವೇಷ ಸಾಧಿಸುವವರು, ಮತ್ತೊಬ್ಬರಿಗೆ ವಿನಾಃಕಾರಣ ತೊಂದರೆ ಕೊಟ್ಟು ಸಂತಸಪಡುವ ಸ್ಯಾಡಿಸ್ಟ್ ಗಳು, ಮತ್ತೊಬ್ಬರ ಏಳ್ಗೆ ಸಹಿಸಲಾಗದೆ ಕಾಲೆಳೆಯುವ ಮತ್ಸರವಾದಿಗಳು ಸಾಕಷ್ಟು ಜನ ಇದ್ದಾರೆ. ಅದರಲ್ಲೂ ಅಂತರ್ಜಾಲದಲ್ಲಿ ಇರುವ ಕೆಲವು ನ್ಯೂನತೆಗಳಿಂದಾಗಿ ಅಂಥವರನ್ನು ದೂರವಿರಿಸುವುದು ತುಂಬಾ ಕಷ್ಟದ ಕೆಲಸ. ಅಂಥವರನ್ನು ಗುರುತಿಸಿ, ಶಿಕ್ಷಿಸುವುದು ಇನ್ನೂ ಕಷ್ಟದ ಕೆಲಸ.

ಹೇಳಿ-ಕೇಳಿ ಅಂತರ್ಜಾಲ ಎಂಬುದು ಎಲ್ಲರಿಗೂ, ಹೆಚ್ಚು ಕಡಿಮೆ ಎಲ್ಲ ರೀತಿಯಿಂದಲೂ ಮುಕ್ತವಾಗಿರುವ ಸ್ಥಾನ. ಅಲ್ಲಿ ನಿರ್ಬಂಧನೆಗಳನ್ನು ಹಾಕುವುದು ಮತ್ತು ಅವುಗಳ ಪಾಲನೆಯಾಗುತ್ತಿದೆಯೇ ಎಂದು ಹದ್ದಿನಕಣ್ಣು ಇಟ್ಟು ಕಾಯುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಉಳಿದೆಲ್ಲ ಕಡೆಗಿಂತ ಇಲ್ಲಿ ವಿಶೇಷವಾಗಿ ಸಾಕ್ಷರ-ದುರ್ಜನರ ಕಾಟ ಸ್ವಲ್ಪ ಜಾಸ್ತೀನೇ ಅನ್ನಬಹುದು. ಹಾಗಂತ ಬ್ಲಾಗಿನಲ್ಲಿ ಬರೆಯುವುದನ್ನೇ ನಿಲ್ಲಿಸಿದರೆ ಹೇಗೆ? "ರೋಡ್ ರೇಜ್ ಜಾಸ್ತಿ, ಅದ್ಕೋಸ್ಕರ ಇನ್ಮುಂದೆ ನಾನು ರಸ್ತೆಯಲ್ಲಿ ಗಾಡಿ ಓಡಿಸಲ್ಲ" ಅನ್ನೋಕಾಗುತ್ತಾ? ಮನೆ ಸುತ್ತ ನಾಯಿಗಳ ಕಾಟ ಜಾಸ್ತಿ ಅಂತ ಮನೆಗೆ ಹೋಗದೇ ಇರೋಕಾಗುತ್ತಾ? ಯಾವುದೋ ಒಂದು ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೋಲ್ಲ, ಅಲ್ವಾ? ಹೀಗೆ, ಕೆಟ್ಟ ಜನ ಬ್ಲಾಗುಲೋಕದಲ್ಲಿ ಜಾಸ್ತಿ ಅಂತ ಬ್ಲಾಗಿನಲ್ಲಿ ಬರೆಯುವುದನ್ನೇ ಬಿಟ್ಟು ಪಲಾಯನವಾದಿಗಳಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನನಗಂತೂ ಗೊತ್ತಾಗುತ್ತಿಲ್ಲ.

ಬ್ಲಾಗಲ್ಲಿ ಬರೆಯೋದು ಬಿಟ್ಟು, ಪುಸ್ತಕದಲ್ಲಿ ಬರೀತೀರಾ? ಪತ್ರಿಕೆಯಲ್ಲಿ ಬರೀತೀರಾ? ಅಲ್ಲಿ ಕಾಲೆಳೆಯುವವರು, ಅವಹೇಳನ ಮಾಡುವವರು, ಅನಾವಶ್ಯಕ ತೊಂದರೆ ಕೊಡುವವರು ಇಲ್ಲವೇ? ಹೀಗೆ ಬರೆಯುವುದನ್ನೇ ನಿಲ್ಲಿಸುವ ಬದಲು, ಸಾಧ್ಯವಾದಷ್ಟು ಗಟ್ಟಿಯಾಗಿ ನಮ್ಮ ಸುತ್ತ ನಾವೇ ಒಂದು ರಕ್ಷಣಾ ಗೋಡೆ ನಿರ್ಮಿಸಿಕೊಂಡು ಬರೆಯುವುದು ಒಳಿತಲ್ಲವೇ? ನಾನು ಬ್ಲಾಗು ಲೋಕಕ್ಕೆ ಕಾಲಿಟ್ಟಿದ್ದು ಸಹ ಕೆಲವು ಬ್ಲಾಗುಗಳ ಬರಹಗಳಿಂದ ಮತ್ತು ಅವುಗಳಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿಯೇ. ನಾವು ಬರೆಯುವುದು ಕೇವಲ ನಮ್ಮ ಆತ್ಮಸಂತೋಷಕ್ಕಾಗಿ ಮಾತ್ರ ಎಂದು ನಮ್ಮಷ್ಟಕ್ಕೆ ನಾವು ಹೇಳಿಕೊಂಡರೂ, ನಮ್ಮ ಬರಹ ಅದನ್ನು ಓದುವ ಎಷ್ಟೋ ಜನರ ಮೇಲೆ ಗಾಢ ಪರಿಣಾಮ ಬೀರಿ ಅವರಲ್ಲೂ ಬರೆಯುವ ಉತ್ಸಾಹವನ್ನು ತಂದು, ಅವರ ಜೀವನದಲ್ಲೂ ಒಂದು ಚಿಕ್ಕ ಬದಲಾವಣೆಯನ್ನು ಉಂಟು ಮಾಡಬಲ್ಲುದು ಅನ್ನೋದನ್ನ ನಾವು ಮರೆಯಬಾರದು, ಅಲ್ಲವೇ?

ದಿನದಿಂದ ದಿನಕ್ಕೆ ಬ್ಲಾಗ್ ಸ್ಪಾಟ್, ವರ್ಡ್ ಪ್ರೆಸ್ ನಂತಹ ಬ್ಲಾಗ್ ಹೋಸ್ಟ್ ಗಳು ಬ್ಲಾಗಿನಲ್ಲಿ ಹೆಚ್ಚು ಹೆಚ್ಚು ಪ್ರೈವಸೀ ಅಳವಡಿಸುವ ಕೆಲಸ ಮಾಡುತ್ತಿವೆ. ಅವುಗಳನ್ನು ಉಪಯೋಗಿಸಿಕೊಳ್ಳೋಣ. ಉದಾಹರಣೆಗೆ, ಅನಾಮಧೇಯ (ಅನಾನಿಮಸ್) ಕಮೆಂಟುಗಳನ್ನು ಬರೆಯುವುದನ್ನು ನಿರ್ಬಂಧಿಸುವುದು. ಈ ಸೌಲಭ್ಯವಂತೂ ತುಂಬಾ ಹಿಂದಿನಿಂದ ಇದೆ. ಸದ್ಯಕ್ಕೆ ಬ್ಲಾಗುಲೋಕದ ಬಗ್ಗೆ ಇರುವ ಅತಿದೊಡ್ಡ ದೂರು ಅಂದ್ರೆ ಈ ಅನಾಮಧೇಯ ಕಮೆಂಟುಗಳದ್ದು. ನಾನು ನೋಡಿರುವಂತೆ, ಬೇಜವಾಬ್ದಾರಿಯ ಕಮೆಂಟುಗಳನ್ನು ಬರೆಯುವವರು ತುಂಬಾ ಸೋಂಬೇರಿಗಳಾಗಿರುತ್ತಾರೆ. ಅವರಿಗೆ ಒಂದು ಬ್ಲಾಗರ್ ಅಕೌಂಟ್ ಓಪನ್ ಮಾಡಿ ಅದರಿಂದ ಕಮೆಂಟ್ ಮಾಡುವುದೂ ಸಹ ಕಷ್ಟದ ಕೆಲಸ. ಅದಕ್ಕೇ ಅವರು ಅನಾಮಧೇಯ ಕಮೆಂಟುಗಳನ್ನು ಬರೆಯುವುದು. ಅನಾಮಧೇಯ ಕಮೆಂಟುಗಳನ್ನು ನಿರ್ಬಂಧಿಸುವುದರಿಂದ ಅಂಥವರನ್ನು ಸ್ವಲ್ಪಮಟ್ಟಿಗೆ ದೂರ ಇಡಬಹುದು. ಒಂದು ವೇಳೆ ಅವರೊಂದು ಅಕೌಂಟ್ ಓಪನ್ ಮಾಡಿ ಅದರಿಂದ ನಿಂದನಾತ್ಮಕ ಕಮೆಂಟುಗಳನ್ನು ಹಾಕಿದರೆ ಅಂಥವರ ಅಕೌಂಟನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಬಹುದು. ಕಮೆಂಟುಗಳನ್ನು ಮಾಡರೇಟ್ ಮಾಡಿದ ಮೇಲೆ ಬ್ಲಾಗಿನಲ್ಲಿ ಗೋಚರಿಸಲು (ಪಬ್ಲಿಶ್ ಮಾಡಲು) ಬಿಡುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ನಿಂದನಾತ್ಮಕ ಕಮೆಂಟುಗಳನ್ನು ಕನಿಷ್ಟ ಪಕ್ಷ ಮೊದಲ ಹಂತದಲ್ಲೇ ಚಿವುಟಿ ಹಾಕಿದಂತಾಗುತ್ತದೆ.
ಅದೃಷ್ಟವಶಾತ್ ನನ್ನ ಬ್ಲಾಗಿನಲ್ಲಿ ಇದುವರೆಗೂ ಯಾರೂ ಕೆಟ್ಟದಾಗಿ ಕಮೆಂಟ್ ಮಾಡಿಲ್ಲ. ಅದ್ಕೋಸ್ಕರ ನಾನು ನನ್ನ ಬ್ಲಾಗಿನಲ್ಲಿ ಬರುವ ಕಮೆಂಟುಗಳನ್ನು ಮಾಡರೇಟ್ ಮಾಡುವ ಗೋಜಿಗೆ ಹೋಗಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ಮುಂದೆ ಕಮೆಂಟ್ಸ್ ಮಾಡರೇಟ್ ಮಾಡಿಯೇ ಪಬ್ಲಿಶ್ ಮಾಡ್ತೀನಿ.

ನಿಮ್ಮ ಬ್ಲಾಗಿನಲ್ಲೇನಾದರೂ ನಿಂದನಾತ್ಮಕ ಕಮೆಂಟುಗಳ ಹಾವಳಿಯಿದ್ದರೆ ಈ ಮೊದಲು ಹೇಳಿದ ಎರಡೂ ವಿಧಾನಗಳನ್ನು ಅನುಸರಿಸಿ ನೋಡಿ. ಕೀಳು ಅಭಿರುಚಿಯ ಕಮೆಂಟುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗೆ ನಿಯಂತ್ರಿಸುವುದಂತೂ ಖಂಡಿತಾ ಸಾಧ್ಯ. ಅನವಶ್ಯಕ, ನಿಂದನಾತ್ಮಕ ಕಮೆಂಟುಗಳು ಹುಟ್ಟದಂತೆ ನೋಡಿಕೊಳ್ಳುವುದು ಸ್ವಲ್ಪಮಟ್ಟಿಗೆ ಬ್ಲಾಗಿಗರ ಕೈಯಲ್ಲೇ ಇದೆ. ಯಾವುದೇ ವಿಷಯದ ಬಗ್ಗೆ ಬ್ಲಾಗಿನಲ್ಲಿ ಬರೆಯುವ ಮುಂಚೆ, ನಮ್ಮ ಬರಹ ಯಾರ ಮನಸ್ಸಿಗಾದರೂ ನೋವು ಉಂಟು ಮಾಡಬಲ್ಲುದೇ ಎಂದು ಒಂದ್ಸಲ ಆಲೋಚಿಸುವುದೊಳಿತು. ಮತ್ತೊಬ್ಬರ ಭಾವನೆಗಳನ್ನು ಕೆರಳಿಸುವ, ಮತ್ತೊಬ್ಬರನ್ನು ಅವಹೇಳನ ಮಾಡಿ ನಗಿಸುವ ಬರಹಗಳನ್ನು ಬರೆಯುವುದೂ ತಪ್ಪಲ್ಲವೇ? ಬ್ಲಾಗಿನಲ್ಲಿ ವೈಯಕ್ತಿಕ ವಿಚಾರಗಳನ್ನು ಸಾಧ್ಯವಾದಷ್ಟು ಕಡಿಮೆ ಹಂಚಿಕೊಳ್ಳಿ. ಇದರಿಂದ ಮತ್ತೊಬ್ಬರು ಅನಾವಶ್ಯಕವಾಗಿ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಕಮೆಂಟ್ ಮಾಡುವುದನ್ನು ತಡೆಯಬಹುದು. ಹೀಗೆ ಕೆಲವು ನಮ್ಮದೇ ಆದ ಮತ್ತು ಕೆಲವು ಬ್ಲಾಗಿಂಗ್ ಸೈಟುಗಳು ನೀಡುವ ಅಸ್ತ್ರಗಳನ್ನು ಬಳಸಿಕೊಂಡು ಸಾಧ್ಯವಾದ ಮಟ್ಟಿಗೆ ಬ್ಲಾಗುಲೋಕದಲ್ಲಿನ ದುಷ್ಟರ ನಿಯಂತ್ರಣ ಮಾಡಬಹುದು ಅಂತ ನನ್ನ ಅನಿಸಿಕೆ.

ಅದೆಲ್ಲ ಬಿಟ್ಟು, "ನನ್ನ ಬರಹದ ಬಗ್ಗೆ ಯಾರೋ ಅನಾಮಧೇಯರು ನಿಂದನಾತ್ಮಕವಾಗಿ ಕಮೆಂಟು ಬರೆದಿದ್ದಾರೆ" ಅಂತ ಬರೆಯುವುದನ್ನೇ ನಿಲ್ಲಿಸುವುದು ನಮ್ಮ ಸ್ವಂತಿಕೆಗೆ ಮತ್ತು ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ, ಅಲ್ಲವೇ?

ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ಸ್ವಾಗತ.

ಚಿತ್ರಕೃಪೆ: ಅಂತರ್ಜಾಲ

ನನಗೇ ಗೊತ್ತಿರಲಿಲ್ಲ! ಈ ಲೇಖನವನ್ನು "ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ" ಎಂಬ ತಲೆಬರಹದಡಿಯಲ್ಲಿ ಮೇ ಫ್ಲವರ್ ಮೀಡೀಯ ಹೌಸ್ ನವರು 'ಅವಧಿ' ಬ್ಲಾಗಿನ 'ಬ್ಲಾಗ್ ಮಂಡಲ' ಎಂಬ ವಿಭಾಗದಲ್ಲಿ ಪರಿಚಯಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ, ನನ್ನ ಈ ಲೇಖನಕ್ಕೆ ಸ್ಪೂರ್ತಿಯಾಗಿದ್ದೇ 'ಅವಧಿ' ಬ್ಲಾಗಿನ 'ಜೋಗಿ'ಗೆ ಬುದ್ದಿ ಹೇಳಿ ಎಂಬ ಲೇಖನ. ಜೋಗಿ (ಗಿರೀಶ್ ರಾವ್) ರವರ ಬರಹಗಳನ್ನು ತುಂಬಾ ಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬ. ಅವರು ಬ್ಲಾಗು ಮುಚ್ಚಿದ ಸಂಗತಿ ನನಗೆ ನೋವಿನ ವಿಷಯವಾಗಿ ಕಾಡಿದ್ದು ನಿಜ. ಈ ಅನವಶ್ಯಕ, ನಿಂದನಾತ್ಮಕ ಕಮೆಂಟುಗಳ ಹಾವಳಿ ನಿಯಂತ್ರಿಸಲು ಬ್ಲಾಗು ಮುಚ್ಚುವ ಬದಲು ಬೇರೆ ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಹುಟ್ಟಿದ್ದೇ ಈ ಲೇಖನ. ಲೇಖನವನ್ನು ವಿಸ್ತ್ರತ ಓದುಗ ಬಳಗಕ್ಕೆ ಪರಿಚಯಿಸಿದ 'ಅವಧಿ' ಗೆ ಕೃತಜ್ಞತೆಗಳು. 'ಅವಧಿ' ಬ್ಲಾಗಿನಲ್ಲಿ ಈ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

12 comments:

  1. ಉಮೇಶ್, ವಿಮರ್ಶಾತ್ಮಕ ಮತ್ತು ಚಿಂತನೆಗೆ (ಚಿಂತೆಗೆ ಅಲ್ಲ!!) ಯೋಗ್ಯ ಲೇಖನ. ನಿಮ್ಮ ಮಾತು ನಿಜ ಬೀಳುವ ಭಯದಿಂದ ನಡೆವುದು ಬಿಟ್ಟರೆ ಮಗು ನಡೆಯುವುದು ಹೇಗೆ...?? ಎಲ್ಲ ಕ್ಷೇತ್ರದಲ್ಲೂ ಇದ್ದಾರೆ ಇಂತಹ ಮತಿಗೇಡಿಗಳು. ಇವರ ಆಹಾರವೇ ಪರನಿಂದನೆ, ಹಾಗಾಗಿ ಇವರನ್ನು ಪರಿಗಣಿಸದೇ ಇರದಿರುವುದೇ ಇದಕ್ಕೆ ಮದ್ದು. ನಿಮ್ಮ ಬ್ಲಾಗಿಗೆ ನನ್ನ ಮೊದಲ ಪ್ರತಿಕ್ರಿಯೆಯೇ?? ನಮ್ಮ ಗೂಡಿಗೂ ಬನ್ನಿ ಒಮ್ಮೆ...

    ReplyDelete
  2. ಆತ್ಮೀಯ ಉಮೇಶ್
    ಕೆಲವರಿಗೆ ಕೆಲವು ಕಾಯಿಲೆಗಳು ಅದರಲ್ಲಿ ಇದು ಒಂದು ಕಾಯಿಲೆ ಅಂತ ತಿಳುದುಕೊಂಡು ಸುಮ್ಮನಿರಬೇಕು. ಒಬ್ಬ ಒಂದು ನಿಂದನೆ ಬರೆದರೆ ಅದರಿಂದ ನಾವು ವಿಚಲಿತರಾಗಬಾರದು ಅದು ಅವನ ಕಾಯಿಲೆ ನೀವು ಕೆಳಿಲ್ಲವ ಕೆಲವು ಕಾಯಿಲೆಗಳಿಗೆ ಔಶದ ವಿಲ್ಲ ಎಂಬುದು
    ಧನ್ಯವಾದಗಳು .

    ReplyDelete
  3. ಉಮೇಶ,
    ನಮ್ಮಲ್ಲಿಯ ಕೆಲವು ಬ್ಲಾಗಿಗರು ತೀರಾ ಅವಹೇಳನಾತ್ಮಕ commentಗಳಿಂದಾಗಿ ತಮ್ಮ ಬ್ಲಾಗುಗಳನ್ನೇ ಮುಚ್ಚುವ ವಿಚಾರ ಮಾಡಿದ್ದಾಗಿ ನಾನೂ ಓದಿದ್ದೇನೆ. ನನ್ನ ಬ್ಲಾಗಿನಲ್ಲಿಯ ಕೆಲವು ಲೇಖನಗಳಿಗೂ ಸಹ ಹೊಲಸು ಪ್ರತಿಕ್ರಿಯೆಗಳು ಬಂದಿದ್ದವು. But all this is part of (blog)life! ಗಟ್ಟಿಯಾಗಿ ನಿಂತುಕೊಂಡು ಎದುರಿಸಲೇ ಬೇಕಾಗುತ್ತದೆ. ಇನ್ನು ನೀವು ಸೂಚಿಸಿದಂತೆ ತಡೆಗೋಡೆಯನ್ನು ಹಾಕಿಕೊಳ್ಳುವದು ಅತ್ಯುತ್ತಮ ಮಾರ್ಗ.

    ReplyDelete
  4. ಉಮೇಶ್,
    ಮತಿಗೇಡಿಗಳು ಎಲ್ಲಾ ಕಡೆ ಇರುತ್ತಾರೆ....
    ನಾಯಿ ಬೊಗಳಿತು ಅಂತ ದೇವಲೋಕ ಹಾಳಾಗೊಲ್ಲ....
    ಬ್ಲಾಗ್ ಲೋಕದಲ್ಲೂ ಈ ತರಹ ಜನ ಇರ್ತಾರೆ ಅಂತ ಗೊತ್ತಿರಲಿಲ್ಲ...
    ಎಚ್ಚರಿಸಿದ್ದಕ್ಕೆ ಧನ್ಯವಾದಗಳು...

    ReplyDelete
  5. ಉಮೇಶ ಅದೊಂದು ಗಾದಿಮಾತು ಆನೆ ಹೋದ್ರ ನಾಯಿ ಬೊಗಳ್ತಂತ ಆದ್ರ ನಾಯಿ ಉಪದ್ರವ ಹೆಚ್ಚಾದ್ರ ಏನು
    ಮಾಡೋದು ಇವೆಲ್ಲ ಇದ್ದಿದ್ದ ಯಾರೋ ಬಯ್ದ್ರು ಅಂತ ಬರೆಯುವುದು ನಿಲ್ಲಿಸೋದು ಸರಿ ಅಲ್ಲ ಇದು ನನ್ನ
    ಅಂಬೋಣ

    ReplyDelete
  6. nimma maatinali satyavide umesh olitu kedakugala naduvina horat nirantara adanna naavu maadalebekada anivaaryate.....omme nanna blog nodi
    sahayaatri.blogspot.com

    ReplyDelete
  7. ಉಮೇಶ್ ಅವರೆ,
    ಅವಧಿಯಲ್ಲೂ ನಿಮ್ಮೀ ಲೇಖನ ಪ್ರಕಟವಾಗಿದೆ.ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ತುಂಬಾ ಚೆನ್ನಾಗಿ ಬರೆದಿದ್ದೀರ. ನಿಮ್ಮ suggestions ಕೂಡ
    ಸರಿಯಾಗಿದೆ.ಒಟ್ಟಾರೆ ಬರೆಯೋದ್ ಮಾತ್ರ ಬಿಡಬಾರದು.

    ReplyDelete
  8. ಉಮೇಶ್....
    ಸಕಾಲಿಕ ಲೇಖನ...

    ಯಾರೋ ಹೇಳುತ್ತಾರೆಂದು ಬರೆಯುವದನ್ನು ನಿಲ್ಲಿಸಬಾರದು...
    ಪ್ರತಿಯೊಬ್ಬರಿಗೂ ಅವರದೇ ಓದುಗರಿದ್ದಾರೆ...
    ಅವರಿಗೆಲ್ಲ ನಿರಾಸೆಯಾಗಬಾರದಲ್ಲ...

    ಉತ್ತಮ ವಿಶ್ಲೇಷಣೆಗೆ ಅಭಿನಂದನೆಗಳು...

    ReplyDelete
  9. @ಜಲನಯನ,

    ಹೌದು, ಅಂಥವರ ಆಹಾರವೇ ಪರನಿಂದನೆ. ಆದರೆ, ಅದರಿಂದ ತಮಗೇ ಹೆಚ್ಚು ನಷ್ಟ ಎಂಬುದನ್ನು ಅಂಥವರು ಅರಿತುಕೊಳ್ಳಬೇಕು. ನಮ್ಮ ಬ್ಲಾಗ್ ಸ್ನೇಹಿತರು ಅವರಿಂದ ಧೃತಿಗೆಡದೇ ಬರೆಯುವುದನ್ನು ಮುಂದುವರೆಸಬೇಕು. ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

    @ಇಸ್ಮಾಯಿಲ್ ರವರೆ,
    ನೀವು ಹೇಳುವುದು ನಿಜ. ಕೆಲವು ಖಾಯಿಲೆಗಳಿಗೆ ಮದ್ದಿಲ್ಲ. ಪರನಿಂದಕರು ತಮ್ಮ ವಿಚಾರಗಳಿಂದ ತಮ್ಮನ್ನು ತಾವು ಹಾಳುಮಾಡಿಕೊಳ್ಳುವ ಮುಂಚೆ ಎಚ್ಚೆತ್ತುಕೊಳ್ಳಲಿ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

    @ಸುನಾಥ ಅಂಕಲ್,
    ಬ್ಲಾಗ್ ಲೋಕದಲ್ಲಿ ನೀವು ನನಗಿಂತ ಹಿರಿಯರು. ಕೀಳು ಅಭಿರುಚಿಯ ಕಮೆಂಟುಗಳನ್ನು ಬರೆಯುವವರನ್ನು ನನಗಿಂತ ಹೆಚ್ಚು ನೀವು ನೊಡಿರ್ತೀರಿ. ನಿಮ್ಮ ಬ್ಲಾಗಲ್ಲಿ ಅಂತಹ ಪ್ರತಿಕ್ರಿಯೆಗಳು ಬಂದರೂ ನೀವು ಬರೆಯುವುದನ್ನು ಮುಂದುವರೆಸಿರುವುದು ಇತರರಿಗೆ ಮಾದರಿಯಾಗಲಿ. ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಕ್ಕೆ ವಂದನೆಗಳು.

    @ಸವಿಗನಸು,
    ಹೌದು ಸರ್, ಬ್ಲಾಗ್ ಲೋಕದಲ್ಲೂ ಇಂಥವರು ಇರ್ತಾರೆ ಅಂತ ನನಗೂ ಇತ್ತೀಚೆಗೆ ಗೊತ್ತಾಗಿದ್ದು. ಅವರಿಗೆ ಹೆದರಿಕೊಂಡು ಕೆಲವು ಸ್ನೇಹಿತರು ಬ್ಲಾಗಿಂಗ್ ಬಿಡುತ್ತಿರುವುದು ವಿಷಾದಕರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    @ಉಮೇಶ್ ದೇಸಾಯಿ,
    ನಿಮ್ಮ ಅಂಬೋಣವೇ ನನ್ನ ಅಂಬೋಣ :) ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ವಂದನೆಗಳು.

    @ ಈಶಕುಮಾರ್,
    ಹೌದು, ಈ ಒಳಿತು ಕೆಡುಕಿನ ಮಧ್ಯದ ಹೋರಾಟ ನಿರಂತರ. ಕಡೆಗೆ ಒಳಿತಿಗೇ ಜಯವಾಗಲಿ ಅಂತ ಎಲ್ಲರೂ ಬಯಸುವುದು. ನೀವು ನನ್ನ ಬಾಗಿಗೆ ಭೇಟಿ ಕೊಟ್ಟು ನಿಮ್ಮ ಅನಿಸಿಕೆ ತಿಳಿಸಿದ್ದು ತುಂಬಾ ಸಂತೋಷ. ಆಗಾಗ ಬರ್ತಾ ಇರಿ.

    @ಮಲ್ಲಿಕಾರ್ಜುನ್ ಸರ್,
    ಹೌದು, ಅವಧಿಯಲ್ಲಿ ನನ್ನ ಲೇಖನ ಪ್ರಕಟವಾಗಿದ್ದು ನನಗೇ ಗೊತ್ತಿರಲಿಲ್ಲ. ಲೈವ್ ಟ್ರಾಫಿಕ್ ಗಮನಿಸಿದಾಗ ನನ್ನ ಬ್ಲಾಗಿಗೆ ಅವಧಿ ಬ್ಲಾಗಿನಿಂದ ಬಂದವರ ಸಂಖ್ಯೆ ಹೆಚ್ಚಾಗಿತ್ತು. ಆಗ ನಾನು ಅವಧಿ ಬ್ಲಾಗಿಗೆ ಹೋಗಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಒಳ್ಳೆಯ ವಿಷಯಗಳು ಇರುವುದೇ ಎಲ್ಲರೊಂದಿಗೆ ಹಂಚಿಕೊಳ್ಳಲೆಂದು, ಅಲ್ಲವೇ. ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

    @ ಸಿಮೆಂಟು ಮರಳಿನ ಮಧ್ಯೆ (ಪ್ರಕಾಶ್ ಹೆಗಡೆ) ಸರ್,
    ಸದಭಿರುಚಿಯ, ರಚನಾತ್ಮಕ ಕಮೆಂಟುಗಳು ಬ್ಲಾಗು ಲೋಕದ ಬೆಳವಣಿಗೆಗೆ ಪೂರಕ. ಆದರೆ ಕೀಳು ಅಭಿರುಚಿಯ ಋಣಾತ್ಮಕ ಕಮೆಂಟುಗಳನ್ನು ಎಲ್ಲರೂ ವಿರೋಧಿಸಬೇಕು. ಲೇಖನದ ಬಗ್ಗೆ ಮತ್ತದರಲ್ಲಿನ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

    ಕೀಳು ಅಭಿರುಚಿಯ ಕಮೆಂಟುಗಳಿಗೆ ಹೆದರಿ ಬರೆಯುವುದನ್ನೇ ನಿಲ್ಲಿಸಬೇಡಿ ಎಂದು ಹೇಳುವಲ್ಲಿ ನನ್ನೂಂದಿಗೆ ಧ್ವನಿಗೂಡಿಸಿದ ಎಲ್ಲರಿಗೂ ಅನಂತ ವಂದನೆಗಳು.

    - ಉಮೇಶ್

    ReplyDelete
  10. ಆತ್ಮೀಯ ಉಮೇಶರೇ.

    ನೀವು ಬರ್ದಿರೋದು ಅಕ್ಷರಶಃ ಸತ್ಯ. ಪೂರಕವಾಗಿ ಬರೋ ಪ್ರತಿಕ್ರಿಯೆಗಳು ಮುಂದಿನ ಬರಹದ ಉತ್ಸಾಹ ತುಂಬ್ತಾವೆ..ಅದೇ ನಿಂದನಾತ್ಮಕ ಪ್ರತಿಕ್ರಿಯೆಗಳು ನೋವು ತರ್ತಾವೆ...

    ಯಾವ್ದೇ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಈ ವಸ್ತು ಪ್ರಪಂಚದಿಂದ ತನ್ನನ್ನ ತಾನು ಎಷ್ಟೇ ಅಂತರ ಇಟ್ಕೊಂಡರೂ, ತನ್ನನ್ನ ಯಾರಾದ್ರೂ ವ್ಯಯಕ್ತಿಕವಾಗಿ ನಿಂದಿಸಿದರೆ ಮನಸ್ಸು ಗಾಬರಿ ಆಗೋದು ತಪ್ಪಿಸಲಿಕ್ಕೆ ಆಗೊಲ್ವೇನೋ!!!

    ReplyDelete
  11. ಉಮೇಶರವರೆ, ಚೆನ್ನಾಗಿ ಬರಿತೀರ.
    ಕೆಲವೋಮ್ಮೆ ಕಾಲಹರಣಕ್ಕೆ೦ತ ಬ್ಲಾಗ್ ಜಗತ್ತೀಗೆ ಬರುವವನು ನಾನು. ನನ್ನ ಅನಿಸಿಕೆಯನ್ನು ಕಮೆ೦ಟ್ನಲ್ಲಿ ಹಾಕಿ ಮು೦ದಕ್ಕೆ ಹೋಗೋದು ಇದೆ. ನೀವು ಹೇಳಿದ೦ತೆ
    " ಸಹನೆ ಪರೀಕ್ಷಿಸುವ ...... ಕೆಸರೆರಚಾಟ ಮಾಡುವ.... ಚಾರಿತ್ರ್ಯವಧೆಗೆ ಕೈ ಹಾಕುವ, ... ಒಂದು ನಿರ್ದಿಷ್ಟ ಉದ್ದೇಶವಿಲ್ಲದೇ ನಮ್ಮ ಅವನಿಂದನೆ ಮಾಡುವುದು..." ಇತ್ಯಾದಿ....ಇಷ್ಟೊ೦ದು ಕೀಳು ಮಟ್ಟದವು ಇದೆಯಾ೦ತ ನಿಜವಾಗಿಯೂ ಆಶ್ಚರ್ಯ, ಅಚ್ಚರಿ ಮೂಡಿಸಿತು್.

    internet ಅನ್ನೋದು ಒ೦ದು ಸಮುದ್ರ/ಸಾಗರ. ಇಲ್ಲಿ ಈಜಲು ಗ೦ಡೆದೆ ಬೇಕು. ಪ್ರತಿಯೋಬ್ಬರಿಗೂ ಅವರದೇ ಆದ ಜ್ನಾನ, ಅಜ್ಜ್ನಾನ ಇರುತ್ತೆ. ಋಣಾತ್ಮಕ ಕಮೆ೦ಟ್ ಗಳಿಗೆ ಹೆದರುವುದು ದಡ್ಡತನ. ಸ೦ಪೂರ್ಣ ಜ್ನಾನ ಇಲ್ಲದೆ ತಾವು ಬರೆದದ್ದೆ ಬರಹ ಅನ್ನೋ ಬುದ್ದಿ ಜೀವಿಗಳು ಬಹಳಷ್ಟಿದ್ದಾರೆ.

    ಮೋನ್ನೆ ತಾನೆ ನನಗಾದ ಅನುಭವ: ಬ್ಲಾಗಿಯೋಬ್ಬರು ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಅತೀವ emotion ತೋರಿಸುತ್ತಾ, ಎಲ್ಲಾರು ಬರೆ ಬ್ಲಾಗ್ನಲ್ಲಿ ತಮ್ಮ ಸ೦ತಾಪ ಬರಿತಿದ್ದಾರೆ ಹೊರತು ಸಹಾಯ ಹಸ್ತ ಕೊಡುತ್ತಿಲ್ಲಾ ಅ೦ದ್ರು. ಪ್ರತಿಯೋಬ್ಬ ಬ್ಲಾಗರ್ ರು.೧೦೦ ಹಣ ಕೂಡಿಸಿ ಪರಿಹಾರ ಕಾರ್ಯದಲ್ಲಿ ತೊಡಗಿಸೋಣ ಅ೦ತೆಲ್ಲಾ ದೊಡ್ಡ ರಾಜಕೀಯದವರ೦ತೆ ಭಾಷಣಾನು ಬರೆದ್ರು..moderatorಗೆ ಅದರ ಯಜಮಾನಿಕೆಯನ್ನು ವಹಿಸುವ ಪುಕ್ಕಟೆ ಸಲಹೆ ನೀಡಿದ್ರು... ತಮಾಷೆ ಇರೋದು ಇಲ್ಲೇ ನೋಡಿ. ಈ ಬ್ಲಾಗ್ನಲ್ಲಿರೋರೆಲ್ಲರು ಜಗತ್ತಿನ ಒ೦ದೋ೦ದು ಮೂಲೆಲಿ. ಯಾರು ಯೇನು ಅ೦ತಾ ಯಾರಿಗೂ ಗೊತ್ತಿಲ್ಲ. community siteನಲ್ಲೇ ತು೦ಬಾ ಜನ ಮುಖವಾಡ ಹಾಕಿರ್ತಾರೆ. ಹಣದ ವಿಷಯದಲ್ಲಿ ಯಾರನ್ನು ನ೦ಬುವ ಸ್ಥಿತಿಯಲ್ಲಿ ಯಾರು ಇರಲ್ಲ. ಕ೦ಡ ಕ೦ಡವರೆಲ್ಲಾ ಪರಿಹಾರ ನಿಧಿ ಅ೦ತ ಬ೦ದ್ರೆ, ಧನ ಸಹಾಯ ಮಾಡುವಷ್ಟು ದಡ್ಡ ಶ್ರೀಮ೦ತರು ಮಾತ್ರ internet ಉಪಯೋಗಿಸ್ತಾರೆಯೆ? ಅಥ್ವಾ ನಾವು ಮಾಡಿದ ಸಹಾಯವನ್ನು ಬ್ಲಾಗ್ನಲ್ಲಿ ಹಾಕಿ ಡ೦ಗುರ ಸಾರ್ಬೇಕಾಗಿತ್ತಾ?

    ಇವ್ರ ಉತ್ಸಾಹಕ್ಕೆ ತಣ್ಣೀರೆರಚಿದ ಮೊದಲಿಗರಲ್ಲಿ ನಾನು ಕೊಡ ಒಬ್ಬ. ಯಾರು ಯಾರಿಗೂ ಹಣ ನೀಡಬೇಡಿ, ಕೊಡಲಿಚ್ಚಿಸಿದರೆ ಸರ್ಕಾರದ ಪರಿಹಾರ ನಿದಿಗೆ ಇಲ್ಲಾ ನ೦ಬುಗೆಯ NGOಗೆ ಕೊಡಿ ಅ೦ದೆ.


    ಬುದ್ದಿಜೀವಿಗಳೆಲ್ಲಾ ಬಯ್ದು ಬುದ್ದಿ ಹೇಳುತ್ತಿರುವಾಗ ಆ ಲಿ೦ಕ್ ಅಲ್ಲಿ೦ದ ಕಣ್ಮರೆಯಾಯ್ತು ಬಿಡಿ. ಬರೆಯುವ ಮೊದಲು ಸ್ವಲ್ಪ common sense ಇದ್ದಿದ್ರೆ ಇ೦ಥ ಮುಖಬ೦ಗ ಅವರಿಗಾಗ್ತಿತ್ತಾ?

    ಕೆಲವೋ೦ದು ಬರಹಗಾರರೆ ಹೀಗೆ. ತಾವು ಬರೆದದ್ದು ಇಡಿ ಪ್ರಪ೦ಚಕ್ಕೆ ಕಾಣ್ತಿದೆ ಅನ್ನೋ ಪ್ರಜ್ಣೆ ಇರೊಲ್ಲಾ. ಕೆಲವರಿಗೆ ತಮ್ಮ ಬುದ್ದಿವ೦ತಿಕೆ ತೋರ್ಸೊ ಚಪಲ, ಇನ್ನೂ ಕೆಲವರಿಗೆ ತಮ್ಮ identity, popularity ತೋರಿಸುವ ತವಕ, EGO ಇರುವ ಬರಹಗಾರರು ತಾವು ಬರೆದದ್ದೆ ಬರಹ ಅನ್ನೋ ಅಹ೦. ತಪ್ಪು ತೋರಿಸಿದ್ರೆ, ಚೇಳು ಕಚ್ಚಿದವರ೦ತೆ ಎಗ್ರಾಡ್ತಾರೆ. ಕೆಲವರು ತಮ್ಮ ಅನಿಸಿಕೆಯನ್ನು justify ಮಾಡೋ ತಾಕತ್ತು ಇರಲ್ಲ.

    ಕಾಲೆಳಿಯಲು comment ಮಾಡುವವರು ತು೦ಬಾ extremeಗೆ ಹೋಗಬಹುದು . ಆದ್ರೆ ಬರೇ ನೆಗೆಟಿವ್ comment ಬರೆದು ಪ್ರಯೋಜನ ಪಡೆಯುವವರು ಯಾರಿರಬಹುದು?
    ಒ೦ದೋ ವೈಯುಕ್ತಿಕ ಹೊಟ್ಟೆಕಿಚ್ಚಿರಬೇಕು, ಇಲ್ಲಾ professional ವೈರತ್ವವಿರಬೇಕು... ಇಲ್ಲ್ಲಾ೦ದ್ರೆ... saadist ಇರಬೇಕು.

    ಅವ್ರು ಯಾರೆ ಆಗಿರಲಿ, ನೀವು ಈಜುತ್ತಿರುವುದು ಸಮುದ್ರ ಅ೦ದ್ನಲ್ಲ, ಇಡಿ ಪ್ರಪ೦ಚವನ್ನ ಎದುರು ಹಾಕೋ೦ಡು, ಹೇಡಿಯ೦ತೆ ಓಡಿದ್ರೆ ಹೇಗೆ. ನಿಮ್ಮ ಬರವಣಿಗೆ justify ಮಾಡುವ ತಾಕತ್ತಿಲ್ಲಾ೦ದ್ರೆ ಪತ್ರಿಕೆನೋ, ದೂರದರ್ಶನಕ್ಕೋ ಬಕೆಟ್ ಹಿಡಿರಿ. ಆಗ ನೀವು ಬರ್ದಿದ್ದೇ ಬರಹ. ಇದೆಲ್ಲ ಬಿಟ್ಟು ತಮ್ಮ ಬ್ಲಾಗನ್ನ moderate ಮಾಡ್ತಾ ಇದ್ರೆ, ನಿಮ್ಮ ಸ್ವಾರ್ಥವೇ filter ಆಗಿರುತ್ತೆ. ಇ೦ದಿನ ಪತ್ರಿಕೋದ್ಯಮ ಹಾಗು TV ಚಾನಲ್ಗಳು ಇದೇ ಕಾರಣಕ್ಕೆ ಯಕ್ಕುಟ್ ಹೋಗಿರೋದು..... ಇವತ್ತು fake id create ಮಾಡೋದು ಮಕ್ಕಳಾಟ. ತಮ್ಮ ಬರಹಕ್ಕೆ ತಾವೇ ಬೆನ್ನು ತಟ್ಟಿಕೋಳ್ಳೊ idea ಎಷ್ಟೊ ಮ೦ದಿಗೆ ಬ೦ದಿರ್ಬೇಕಲ್ಲ!!

    ದೋಡ್ಡೋರು ಹೇಳ್ದ೦ಗೆ, ನಿ೦ದಿಸೋರು ಸಿಕ್ರೆ ಪಕ್ಕದಲ್ಲಿ ಇಟ್ಕೋಳ್ಳಿ. ನೀವು perfect ಆಗ್ತೀರ. ಯಾಕೆ೦ದ್ರೆ ಮೊದಲು ಯಾರು perfect ಆಗಿರಲ್ಲ.

    more you think about the subject, more perfect is your writing.
    Think from others perspective, more stronger your views.
    Do research on your subject, you can justify your views.

    ಸದಭಿರುಚಿಯ, ಸೃಜನಾತ್ಮಕ, ಚಿಂತನಾರ್ಹ ಕಮೆಂಟುಗಳಿಗೆ ನಮ್ದೂ ಸ್ವಾಗತವಿದೆ...

    ReplyDelete
  12. @ಲೋದ್ಯಾಶಿ ಅವರೇ,
    ನಿಜ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ವೈಯಕ್ತಿಕ ನಿಂದನೆಗೆ ಹೆದರುವುದು ಸಹಜ. ಏಕೆಂದರೆ ವೈಯಕ್ತಿಕ ನಿಂದನೆ, ನಿಜವೋ ಸುಳ್ಳು ಅದು ಬೇರೆ, ಆದರೆ ಅದು ಒಬ್ಬ ಮನುಷ್ಯನ ಜೀವನವನ್ನೇ ಹಾಳು ಮಾಡಬಲ್ಲುದು. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

    @Rajesh
    ನನ್ನ ಬ್ಲಾಗಿಗೆ ಸ್ವಾಗತ. ನೀವು ಕೇಳುವ ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆಯಲ್ಲೇ ಉತ್ತರವಿದೆ. ಋಣಾತ್ಮಕ ಪ್ರತಿಕ್ರಿಯೆ ರಚನಾತ್ಮಕವಾಗಿದ್ದರೆ ಅದು ಪೂರಕವೇ. ಆದರೆ ನೀವೇ ಹೇಳಿದಂತೆ ಬರೀ ನೆಗೇಟಿವ್ ಕಾಮೆಂಟ್ ಬರೆಯುವ ಸಾಡಿಸ್ಟ್ ಗಳೂ ಇರ್ತಾರೆ. ಅವರಿಂದ ಪೂರ್ತಿ ಸಮಾಜಕ್ಕೆ ಒಂದಿಲ್ಲೊಂದು ರೀತಿಯ ಕೆಡುಕು ಕಟ್ಟಿಟ್ಟ ಬುತ್ತಿ.

    ಇನ್ನೂ Moderation ವಿಷಯ. ಎಲ್ಲರೂ ಮನೆಯ ಒಳಗೇಕೆ ವಾಸಿಸುತ್ತಾರೆ ಹೇಳಿ? ಜೊತೆಗೆ ಅದಕ್ಕೊಂದು ಕಾಂಪೌಂಡ್ ಗೋಡೆಯನ್ನೂ ಕಟ್ಟಿಕೊಂಡಿರ್ತಾರೆ. ಏಕೆ? ದುಷ್ಟ ಶಕ್ತಿಗಳಿಂದ ಸಾಧ್ಯವಾದಷ್ಟು ರಕ್ಷಣೆ ಪಡೆಯಲೋಸುಗ, ಅಲ್ಲವೇ? ಅದೇ ರೀತಿ, ಬ್ಲಾಗ್ ಅನ್ನುವುದು ನಮ್ಮ ಸ್ವಂತ ಸ್ಥಳ. ಅಲ್ಲಿ ನಮಗಿಷ್ಟವಾದದ್ದನ್ನು ಬರೆದು ನಮಗಿಷ್ಟವಾದ್ರೆ ಎಲ್ಲರಿಗೂ ತೋರ್ಪಡಿಸುತ್ತೇವೆ, ಇಲ್ಲ ಆಯ್ದ ಕೆಲವರಿಗೆ ಮಾತ್ರ ಓದಲು ಬಿಡುತ್ತೇವೆ. ನಾನು ಬರೆದದ್ದನ್ನು ಎಲ್ಲರ ವಿಮರ್ಶೆಗೆ ಒಳಪಡಿಸಲೇಬೇಕು ಅನ್ನೋ ನಿಯಮವೇನೂ ಇಲ್ಲ, ಅಲ್ವಾ? ಪ್ರತಿಯೊಂದು ವಿಷಯವನ್ನು ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಾರೆ. ನನಗೆ ಸರಿ ಕಂಡದ್ದು ನಿಮಗೆ ಸರಿ ಕಾಣದೆ ಇರಬಹುದು. ಅದೇ ರೀತಿ, ನಿಮಗೆ ಸರಿ ಕಂಡದ್ದು ನನಗೆ ಸರಿ ಕಾಣದೆ ಇರಬಹುದು. ನಾವು ಬರೆಯುವುದು ನಮ್ಮ ಆತ್ಮಸಂತೋಷಕ್ಕಾಗಿ. ಅದರಿಂದ ಯಾರೋ ನಾಲ್ಕು ಜನಕ್ಕೆ ಒಳ್ಳೆಯದಾಗುತ್ತೆ ಅಂತಾದ್ರೇ ಆಗಲಿ. ಆದರೆ ಎಲ್ಲರನ್ನೂ ತೃಪ್ರಿ ಪಡಿಸುವ ದರ್ದು ಏನಿಲ್ಲ. ಅದು ಸಾಧ್ಯವೂ ಇಲ್ಲ. ನಮಗಷ್ಟೇ ಅಲ್ಲ, ನಮ್ಮಂತಾ ಬೇರೆಯವರ ಮನಸ್ಸನ್ನೂ ಕೆಡಿಸುವ ಅನಿಸಿಕೆಗಳನ್ನು ಫಿಲ್ಟರ್ ಮಾಡುವುದರಲ್ಲಿ ತಪ್ಪೇನಿದೆ? ಬರೆಯುವವರು ತಮ್ಮ ಬರವಣಿಗೆಯನ್ನು ಸಮರ್ಥಿಸಿಕೊಳುವುದು ಎಷ್ಟು ಮುಖ್ಯವೋ, ಪ್ರತಿಕ್ರಿಯೆ ಬರೆಯುವವರು ಕನಿಷ್ಟ ಪಕ್ಷ ತಮ್ಮ ಮುಖವಾಡ ಕಳಚುವುದೂ, ಮತ್ತು ತಮ್ಮ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅರ್ಥವಿಲ್ಲದ ಸಾಡಿಸ್ಟ್ ಕಾಮೆಂಟ್ ಬರೆಯುವವರನ್ನು ದೂರವಿಡುವುದು ಅಷ್ಟೇ ಅಗತ್ಯ.ಇದಕ್ಕೆ ತಮ್ಮದೂ ಸಹಮತವಿದೆ ಅಂದ್ಕೊಂಡಿದೀನಿ. ಹಂದಿಗಳನ್ನು ತಂದು ಪಕ್ಕಕ್ಕೆ ಇಟ್ಟುಕೊಳ್ಳೋಣ, ಆದರೆ ಕಾರಣವಿಲ್ಲದೇ ಬೊಗಳುವ, ಕಚ್ಚಲು ಬರುವ ಹುಚ್ಚು ನಾಯಿಗಳನ್ನು ಏನು ಮಾಡೋಣ ಹೇಳಿ.

    ReplyDelete